ನ್ಯೂಯಾರ್ಕ್‌ಗೆ ಮೊದಲ ಮುಸ್ಲಿಂ ಮೇಯರ್
ನ್ಯೂಯಾರ್ಕ್: ನ್ಯೂಯಾರ್ಕ್ ಸಿಟಿ ಮೇಯರ್ ಚುನಾವಣೆಯು ನವೆಂಬರ್ 04 ರಂದು ನಡೆದಿದ್ದೂ, ಚುನಾವಣೆಯಲ್ಲಿ 34 ವರ್ಷದ ಆಫ್ರಿಕಾ ಮತ್ತು ಭಾರತೀಯ ಮೂಲದ ಮುಸ್ಲಿಂ ಧರ್ಮದ ಝೋಹ್ರಾನ್ ಮಮದಾನಿ ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
34 ವರ್ಷದ ಮಮ್ದಾನಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಹಾಗೂ ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರ ಎದುರು ಜಯ ಗಳಿಸಿದ್ದಾರೆ.
ಈ ಜಯದೊಂದಿಗೆ ಅವರು, ನ್ಯೂಯಾರ್ಕ್ ನಗರದ ಮೇಯರ್ ಆಗಿ ಚುನಾಯಿತರಾದ ಮೊದಲ ಮುಸ್ಲಿಂ ಎನಿಸಿದ್ದಾರೆ. ಹಾಗೆಯೇ, ನಗರದ ಮೇಯರ್ ಆದ ದಕ್ಷಿಣ ಏಷ್ಯಾ ಮೂಲದ ಮೊದಲಿಗ ಎಂಬ ಶ್ರೇಯಕ್ಕೂ ಭಾಜನರಾಗಿದ್ದಾರೆ.
ಒಂದು ಶತಮಾನಕ್ಕೂ ಹೆಚ್ಚಿನ ಸಮಯದಿಂದ ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದವರಲ್ಲೇ ಅತ್ಯಂತ ಕಿರಿಯ ವ್ಯಕ್ತಿ ಎನಿಸಿರುವ ಮಮ್ದಾನಿ, ಜನವರಿ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಲಾಂ ಬಾಂಬೆ ಹಾಗೂ ಮನ್ಸೂನ್ ವೆಡ್ಡಿಂಗ್ ಸಿನೆಮಾಗಳ ಖ್ಯಾತಿಯ ಇವರ ತಾಯಿ ಮೀರಾ ನಾಯರ್ ಭಾರತ ಮೂಲದವರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ. ನ್ಯೂಯಾರ್ಕ್ ಸಿಟಿಯ 85 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 59% ಕ್ರಿಶ್ಚಿಯನ್ನರು, ಕೇವಲ 9% ಮುಸ್ಲಿಮರು ಮತ್ತು ಶೇ. 2 ರಷ್ಟು ಹಿಂದುಗಳಿದ್ದಾರೆ. ಕ್ರಿಶ್ಚಿಯನರೇ ಮೆಜಾರಿಟಿ ಇರುವ ನಗರದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಚುನಾವಣೆಯನ್ನು ಗೆಲ್ಲುವುದು ಸುಲಭದ ವಿಷಯವಲ್ಲ.
ಇದನ್ನೂ ಓದಿ: ಕೆಮ್ಮಿನ ಸಿರಪ್ ದುರಂತ: ಪ್ರಮುಖ ಆರೋಪಿಯ ಪತ್ನಿ ಬಂಧನ
ಹಾಗಾದರೆ ಮಾಮ್ದಾನಿಗೆಲುವಿಗೆ ಕಾರಣಗಳೇನು?
ಪ್ರಮುಖ ಕಾರಣ ಯುವ ಜನತೆ ಮಮದಾನಿ ಬೆಂಬಲಕ್ಕೆ ನಿಂತಿದ್ದು. ಗಗನಕ್ಕೆ ಏರುತ್ತಿರುವ ಕಾಸ್ಟ್ ಆಫ್ ಲಿವಿಂಗ್, ಹಣದುಬ್ಬರ, ಕೈಗೆ ನಿಟುಕದ ಬಾಡಿಗೆ ಹಾಗೂ ಪ್ರಯಾಣ ದರ ಹೀಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಮಾಮ್ದಾನಿ ತುಂಬಾ ಉತ್ತಮವಾಗಿ ಸ್ಪಂದಿಸಿದರು.
ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಈ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಾಮ್ದಾನಿ ಓರ್ವ ಮುಸ್ಲಿಂ , ಕಮ್ಯುನಿಸ್ಟ್ ಹುಚ್ಚ, ಸಮಾಜವಾದಿ ಹಾಗೂ ಲೆಫ್ಟಿಸ್ಟ್ ಅಂತೆಲ್ಲ ಬಹಳಷ್ಟು ಅಪಪ್ರಚಾರ ಮಾಡಿದರು. ಒಂದು ವೇಳೆ ಈತ ಗೆದ್ದರೆ, ನ್ಯೂಯಾರ್ಕ್ ಸಿಟಿಗೆ ಫೆಡರಲ್ ಫಂಡಿಂಗ್ ಕಟ್ ಮಾಡುವುದಾಗಿ ಬೆದರಿಕೆ ಹಾಕಿದರು. ಇದರ ಜೊತೆಗೆ ಪಕ್ಷೇತರ ಅಭ್ಯರ್ಥಿ ಅಂಡ್ರು ಕೊಮೋ ಪರ ಭರ್ಜರಿ ಪ್ರಚಾರ ನಡೆಸಿದರು.
ಮಾಮ್ದಾನಿ ಗೆಲುವಿಗೆ ಕಾರಣ ನ್ಯೂಯಾರ್ಕ್ ಜನತೆ ಟ್ರಂಪ್ ಆಡಳಿತದಿಂದ ನಿರಾಸೆಗೊಂಡಿದ್ದಾರೆ. ಫೆಡರಲ್ ಗವರ್ನಮೆಂಟ್ ಶಟ್ ಡೌನ್ ಆಗಿದ್ದು, ಲಕ್ಷಾಂತರ ಸರ್ಕಾರಿ ನೌಕರರು ಸಂಬಳ ಇಲ್ಲದೇ ಪರದಾಡುತ್ತಿದ್ದಾರೆ. ಟ್ರಂಪ್ ಅವರ ಅನಿರೀಕ್ಷಿತ ಟಾರಿಫ್ ನೀತಿಯಿಂದಾಗಿ ದಿನಬಳಕೆ ವಸ್ತುಗಳ ಬೆಲೆಗಳು ತುಂಬಾ ಹೆಚ್ಚಾಗಿವೆ. ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಜೊತೆಗೆ ದೊಡ್ಡ ಸಿಟಿಗಳಲ್ಲಿ ಅಕ್ರಮ ವಲಸೆಗಾರರನ್ನು ಬಂಧಿಸುತ್ತಿರುವುದು ಎಲ್ಲೆಡೆ ಭಯ ಭೀತಿಯ ವಾತಾವರಣ ಮೂಡಿಸಿತ್ತು. ಹಾಗಾಗಿ ಟ್ರಂಪ್ ಇವರ ಬಗ್ಗೆ ಅಪಪ್ರಚಾರ ಮಾಡಿದ್ದು ಇಲ್ಲಿ ಕೆಲಸ ಮಾಡಿಲ್ಲ ಎಂಬುದು ಇವರ ಗೆಲುವಿನೊಂದಿಗೆ ಗೊತ್ತಾಗಿದೆ.
ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. ನೀವು ನನ್ನನ್ನು ನೋಡುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ ನಿಮಗಾಗಿ ನನ್ನ ನಾಲ್ಕು ಮಾತುಗಳಿವೆ ಗಮನವಿಟ್ಟು ಕೇಳಿ ‘ಟರ್ನ್ ದಿ ವಾಲ್ಯೂಮ್ ಅಪ್’ ಎಂದು ಹೇಳಿದ್ದಾರೆ. ಭವಿಷ್ಯ ನಮ್ಮ ಕೈಲಿದೆ ಎಂದರು. ಮಮ್ದಾನಿ ತಮ್ಮ ಭಾಷಣವನ್ನು ಬಾಲಿವುಡ್ ಚಿತ್ರ ಧೂಮ್ ನ ಶೀರ್ಷಿಕೆ ಗೀತೆ ಧೂಮ್ ಮಚಾಲೆಯೊಂದಿಗೆ ಮುಗಿಸಿದರು.
ತಮ್ಮ ಭಾಷಣವನ್ನು ಕೇಳಲು ಅವರು ಅಮೆರಿಕ ಅಧ್ಯಕ್ಷರನ್ನು ಕೇಳಿಕೊಂಡರು. ಜನಸಮೂಹ ಮಮ್ದಾನಿಗಾಗಿ ಹುರಿದುಂಬಿಸುತ್ತಿದ್ದಂತೆ, ಅವರು ಅಮೆರಿಕ ಅಧ್ಯಕ್ಷರನ್ನು ಸವಾಲು ಹಾಕಿದರು ಮತ್ತು ನ್ಯೂಯಾರ್ಕ್ ನಿವಾಸಿಗಳು ಅವರ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು.
ಇದನ್ನೂ ನೋಡಿ: ಧರ್ಮಸ್ಥಳ | ಕೊಂದವರು ಯಾರು? ನ್ಯಾಯಕ್ಕಾಗಿ ಮಹಿಳೆಯರ ಆಗ್ರಹ Janashakthi Media
