ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದೆ.
ಇಂದು (ಜುಲೈ 5) ಬೆಳಗ್ಗೆ ಜಮೀರ್ ಅವರ ಮನೆ ಮೇಲೆ 40ಕ್ಕೂ ಅಧಿಕ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಬೆಳಗ್ಗೆ ಮೂರ್ನಾಲ್ಕು ಜೀಪ್ ಗಳಲ್ಲಿ ಬಂದಿರೋ ಎಸಿಬಿ ಟೀಂ ದಾಳಿ ನಡೆಸಿದೆ. ಎಸ್ ಪಿ ಯತೀಶ್ ಚಂದ್ರ ಅವರ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಅಸಮತೋಲನ ಆಸ್ತಿ ಗಳಿಕೆ ಹಿನ್ನೆಲೆ ಸರ್ಚ್ ವಾರೆಂಟ್ ಪಡೆದು ಎಸಿಬಿ ತಂಡ ದಾಳಿ ನಡೆಸಿದೆ. ದಾಳಿ ಹಿನ್ನೆಲೆ ಶಾಸಕರ ನಿವಾಸ, ಕಚೇರಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ದಾಳಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿಯೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲೆಲ್ಲಿ ದಾಳಿ
1) ಫ್ರೆಜರ್ ಟೌನ್ನಲ್ಲಿರುವ ಜಮೀರ್ ಆಹಮದ್ ಮನೆ ಮೇಲೆ ದಾಳಿ
2) ಸಿಲ್ವರ್ ಓಕ್ ಅಪಾರ್ಟ್ಮೆಂಟ್ ಮೇಲೆ ದಾಳಿ
3) ಸದಾಶಿವ ನಗರದ ಗೆಸ್ಟ್ ಹೌಸ್ ಮೇಲೆ ದಾಳಿ
4) ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ ದಾಳಿ
5) ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಮೇಲೆ ದಾಳಿ
ಕಳೆದ ಆಗಸ್ಟ್ನಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಜಮೀರ್ ನಿವಾಸ, ಕಚೇರಿ ಮತ್ತು ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದರು.
ಜಮೀರ್ ಮೇಲಿರುವ ಆರೋಪ ಏನು?
ಮುಂಬೈನಲ್ಲಿ ಈಗಾಗಲೇ ಟ್ರಾವೆಲ್ಸ್ ಕಂಪನಿಯ ಮಾಲೀಕತ್ವ ಹೊಂದಿರುವ ಜಮೀರ್ ವಿದೇಶದಲ್ಲೂ ಆಸ್ತಿ ಮಾಡಿದ್ದಾರೆ ಎಂಬ ಆರೋಪ ಇದೆ. ದುಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪವಿದ್ದು, ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಜೊತೆ ಸಂಬಂಧ ಹೊಂದಿದ್ದು ಮನ್ಸೂರ್ ಖಾನ್ ಕಂಪನಿಯ ಮೂಲಕ ಹಣಕಾಸಿನ ವ್ಯವಹಾರ ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಶ್ರೀಲಂಕಾದಲ್ಲಿ ಶಿಷ್ಯರ ಹೆಸರಿನಲ್ಲಿ ಕ್ಯಾಸಿನೋ ನಡೆಸುತ್ತಿದ್ದಾರೆ ಎನ್ನುವ ಆರೋಪವೂ ಇದೆ.