ಬಾಳೆಹೊನ್ನೂರು: ಈ ವರ್ಷ ಯಾವುದೇ ವಿದ್ಯಾರ್ಥಿಗಳು ದಾಖಲಾಗದ ಕಾರಣ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಮುಚ್ಚುವ ಹಂತ ತಲುಪಿದೆ.ಬಾಳೆಹೊನ್ನೂರು
1966ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ 7 ಕೊಠಡಿಗಳು, ಒಂದು ಸುಸಜ್ಜಿತ ರಂಗಮಂದಿರ ಇದೆ. ನೂರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ, ವಿವಿಧಡೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಪ್ರಯತ್ನದಿಂದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಐದು ಕಂಪ್ಯೂಟರ್, ಯುಪಿಎಸ್ ಅಳವಡಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಸುತ್ತಲಿನ ವಿದ್ಯಾರ್ಥಿಗಳು ಇಲ್ಲಿನ ಶಾಲೆಗೆ ದಾಖಲಾಗುತ್ತಿಲ್ಲ.
ಶಾಲೆ ಉಳಿಸುವ ಸಲುವಾಗಿ ಸುತ್ತಲಿನ ಗಂಟೆನಾಯ್ಕ, ನೇತ್ರಕೊಂಡ, ಗುಂಡಿಖಾನ್ ಮುಂತಾದ ಕಡೆಗೆ ಶಿಕ್ಷಕರು ತೆರಳಿ ದಾಖಲಾತಿ ಅಭಿಯಾನ, ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ 6ನೇ ತರಗತಿಗೆ ಒಬ್ಬ ವಿದ್ಯಾರ್ಥಿನಿ ದಾಖಲಾಗಿದ್ದರು. ಆದರೆ, ಇದೀಗ ಆ ವಿದ್ಯಾರ್ಥಿನಿಯ ಪೋಷಕರೂ ಕೂಡ ಆಕೆಯನ್ನು ಬೇರೆ ಶಾಲೆಗೆ ಸೇರ್ಪಡೆಗೊಳಿಸಲು ಮುಂದಾಗಿದ್ದು ವರ್ಗಾವಣೆ ಪತ್ರಕ್ಕೆ ಕೋರಿಕೆ ಸಲ್ಲಿಸಿದ್ದಾರೆ.
ಇದನ್ನು ಓದಿ : ಕಳಪೆ ಪೂರಕ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ
‘ಜುಲೈ 15ರವರೆಗೆ ವಿದ್ಯಾರ್ಥಿಗಳನ್ನು ಶಾಲೆಗೆ ಹೊಸದಾಗಿ ದಾಖಲು ಮಾಡಿಕೊಳ್ಳಲು ಅವಕಾಶವಿದೆ. ಈ ಶಾಲೆಯ ಒಬ್ಬರು ಶಿಕ್ಷಕರನ್ನು ಬೇರೆಡೆಗೆ ನಿಯೋಜಿಸಲು ಚಿಂತಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗದಿದ್ದಲ್ಲಿ ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ .ಜ್ಯೋತಿ ತಿಳಿಸಿದರು.
ಇದನ್ನು ನೋಡಿ : ಅಕಾಡೆಮಿಗಳ ಮೇಲೆ ರಾಜಕಾರಣದ ಕರಿ ನೆರಳು! Janashakthi Media