ಯುವ ವಕೀಲನ ಮೇಲೆ ದೌರ್ಜನ್ಯ ಆರೋಪ: ಪಿಎಸ್‌ಐ ಸುತೇಶ್ ಅಮಾನತು

ಮಂಗಳೂರು: ಯುವ ವಕೀಲ ಕುಲದೀಪ್‌ ಶೆಟ್ಟಿ ಅವರ ಮೇಲೆ ಪುಂಜಾಲಕಟ್ಟೆ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಸುತೇಶ್‌  ದೌರ್ಜನ್ಯ ಎಸಗಿದ್ದು, ರಾಜ್ಯದ್ಯಂತ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪಿಎಸ್‌ಐ ಸುತೇಶ್‌ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ ಐ ಸುತೇಶ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಂಬಂಧಿಸಿ ಪಿಎಸ್‌ಐ ಸುತೇಶ್ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯದ ಡಿಐಜಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಡಿಸೆಂಬರ್‌ 03ರಂದು ಜಾಗದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿದ ಪೂಂಜಾಲಕಟ್ಟೆ ಪೊಲೀಸರು ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು) ಸೇರಿದಂತೆ ಹಲವು ವಕೀಲರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದವು.

ವ್ಯಕ್ತಿಯನ್ನು ಬಂಧನ ಮಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ಕ್ರಮಗಳನ್ನು ಉಲ್ಲಂಘಿಸಲಾಗಿದೆ. ಅದರಲ್ಲೂ ಯುವ ವಕೀಲ ಕುಲದೀಪ್‌ ಶೆಟ್ಟಿ ಮೇಲೆ  ಪಿಎಸ್‌ಐ ಸುತೇಶ್‌ ಕೈಗೊಂಡ ಕ್ರಮ ಉಗ್ರರೂಪವಾಗಿತ್ತು. ಇದೊಂದು ಪೊಲೀಸ್‌ ದೌರ್ಜನ್ಯ ಎಂದು ವಕೀಲರು ಖಂಡಿಸಿದ್ದರು.

ಪಿಎಸ್‌ಐ ಸುತೇಶ್‌ ದೌರ್ಜನ್ಯದ ವಿರುದ್ಧದ ತೀವ್ರಗೊಂಡ ಒತ್ತಡದಿಂದಾಗಿ ಇತ್ತೀಚಿಗೆ ಸುತೇಶ್‌ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಲು ಡಿವೈಎಸ್‌ಪಿ ಅವರನ್ನು ನೇಮಿಸಲಾಗಿತ್ತು.

ಇಷ್ಟಕ್ಕೆ ಸಮಾಧಾನವಾಗದ ವಕೀಲರ ಸಂಘಗಳು ‘ಸುತೇಶ್‌ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಸಲ್ಲಿಸಿದ್ದರು.

ಸಾಮಾನ್ಯ ಪ್ರಕರಣವಾಗಿದ್ದರೂ ಪೊಲೀಸರು ರಾತೋರಾತ್ರಿ ಮನೆಗೆ ನುಗ್ಗಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘಗಳು ಬಂಟ್ವಾಳ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿತ್ತು. ಸೋಮವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದರು. ಶನಿವಾರ ಬಂಟ್ವಾಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿದ್ದ ಸಂದರ್ಭದಲ್ಲಿ ವಕೀಲರ ಸಂಘ ಮನವಿ ಸಲ್ಲಿಸಿ ಪಿಎಸ್‌ಐ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.

ಇದೀಗ  ಪಿಎಸ್‌ಐ ಸುತೇಶ್‌ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *