ಬೆಂಗಳೂರು ಫೆ 05: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ರಕ್ಷಾ ರಾಮಯ್ಯ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದರೂ ಮೊಹಮದ್ ನಲಪಾಡ್ ಹ್ಯಾರಿಸ್ ಅವರನ್ನು ಕಣದಿಂದ ಅಸಿಂಧುಗೊಳಿಸಲಾಗಿದೆ.
64,203 ಮತಗಳನ್ನು ಪಡೆದಿದ್ದರೂ ಮೊಹಮದ್ ನಲಪಾಡ್ ಅವರ ಗೆಲುವನ್ನು ತಡೆಹಿಡಿಯಲಾಗಿದೆ. ಅವರನ್ನು ಅಸಿಂಧು ಎಂದು ಘೋಷಿಸಿದ್ದು ರಕ್ಷ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. 57,271 ಮತಗಳನ್ನು ಪಡೆದು ರಕ್ಷಾ ರಾಮಯ್ಯ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ಹೆಚ್.ಎಸ್. ಮಂಜುನಾಥ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 7 ಜನರು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಹಂತದಲ್ಲಿ ಮಿಥುನ್ ರೈ ಕಣದಿಂದ ಹಿಂದೆ ಸರಿದಿದ್ದರಿಂದ ಆರು ಜನರು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ಹೆಚ್ಎಸ್ ಮಂಜುನಾಥ್ ಹಾಗೂ ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ರಕ್ಷಾ ರಾಮಯ್ಯ ಪರವಾಗಿ ಪರೋಕ್ಷವಾಗಿ ಸಿದ್ದರಾಮಯ್ಯ ಬಣ ಕೆಲಸ ಮಾಡಿತ್ತು. ಇತ್ತ ಹೆಚ್ಎಸ್ ಮಂಜುನಾಥ್‌ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಣದ ಪರೋಕ್ಷ ಬೆಂಬಲ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಟೀಮ್ ಕೆಲಸ ಮಾಡಿತ್ತು. ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದೀಗ ರಕ್ಷಾ ರಾಮಯ್ಯ ಗೆಲುವಿನೊಂದಿಗೆ ಸಿದ್ದರಾಮಯ್ಯ ಬಣದ ಕೈ ಮೇಲಾಗಿದೆ.