- ವೈಎಸ್ ವಿ ದತ್ತಾ, ಎಚ್. ನಾಗೇಶ್ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬಲ ವರ್ಧನೆ
- ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂಖ್ಯೆ ಇದೆ, ಇದು ಆರಂಭ ಅಷ್ಟೇ ಎಂದ ಡಿಕೆಶಿ
ಬೆಂಗಳೂರು: ಜೆಡಿಎಸ್ ಮಾಜಿ ಶಾಸಕ ವೈಎಸ್‌ವಿ ದತ್ತಾ ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್, ಮೈಸೂರು ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ರವರು ಶನಿವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಾ, ನಾಗೇಶ್ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು, ಪಕ್ಷದ ಬಾವುಟ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಪ್ರಬಲ ನಾಯಕರು ಪಕ್ಷ ಸೇರ್ಪಡೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸತೊಡಗಿದರು. ಆದ್ದರಿಂದ ನೂಕು ನುಗ್ಗಲು ಶುರುವಾಗಿತ್ತು
ನಂತರ ಮಾತನಾಡಿದ ಡಿಕೆ ಶಿವಕುಮಾರ್, ಮಕರ ಸಂಕ್ರಮಣದ ಪವಿತ್ರ ದಿನದಂದು ಇಬ್ಬರು ನಾಯಕರಾದ ವೈಎಸ್‌ವಿ ದತ್ತಾ, ಮಾಜಿ ಸಚಿವರು ಹಾಲಿ ಶಾಸಕರು ಆದ ಎಚ್. ನಾಗೇಶ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇದು ಆರಂಭ ಅಷ್ಟೇ ಇನ್ನು ಮುಂದೆ ವಾರಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್‌ಗೆ ಯಾವ ಸಿದ್ದಾಂತ ಇಲ್ಲ. ಬಿಜೆಪಿ ಗೆದ್ದರೆ ಬಿಜೆಪಿ ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಜೊತೆಗೆ ಹೋಗಲು ಸಿದ್ದರಿದ್ದಾರೆ. ಅವರ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿಗೆ ಕೋಮುವಾದ ಸಿದ್ದಾಂತ. ಕಾಂಗ್ರೆಸ್ ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಪಕ್ಷ ಎಂದರು.
ಪ್ರಜಾಪ್ರಭುತ್ವ ಸಂವಿಧಾನದಕ್ಕೆ ಹೊಡೆತ ಬಿದ್ದಿದೆ. ವೈಎಸ್ ವಿ ದತ್ತಾ ಕಾಂಗ್ರೆಸ್ ಗೆ ಬರುವುದರಿಂದ ಕಡೂರು ಮಾತ್ರ ಅಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಜಾಸ್ತಿ ಆಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಮಾತ್ರ ದಲಿತರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಲು ಸಾಧ್ಯ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ವೈಎಸ್‌ವಿ ದತ್ತಾ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು ದಶಕಗಳಿಂದ ನಾನು ಒಂದೇ ಪಕ್ಷದಲ್ಲಿದ್ದೆ. ಆದ್ರೆ ಈಗ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಇದು ನಮ್ಮ ರಾಷ್ಟ್ರದ ತುರ್ತು ಅಗತ್ಯವಾಗಿದೆ ಎಂದರು. ಸಂವಿಧಾನ ಹಾಗೂ ಸೌಹಾರ್ದತೆಯನ್ನ ಬುಡಮೇಲು ಮಾಡುವ ಪ್ರಯತ್ನಗಳು ನಡೆದಿವೆ. ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ ಅನ್ನೋ ಕಾರಣಕ್ಕೆ ಯಾವುದೇ ಶರತ್ತುಗಳಿಲ್ಲದೆ ಪಕ್ಷ ಸೇರುತ್ತಿದ್ದೇನೆ. ನಾನು ಮೊದಲಿನಿಂದಲೂ ಎಡಪಂಥೀಯ. ಹೀಗಾಗಿ ನನಗೆ ಅತ್ಯಂತ ಹತ್ತಿರ ಎನಿಸಿದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಕ್ಷೇತ್ರದಲ್ಲೂ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದ್ದೇನೆ. ನಾನು ಕಾರ್ಯಕರ್ತನಾಗಿ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಶಾಸಕ ಎಚ್. ನಾಗೇಶ್ ಮಾತನಾಡಿ, ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದ ನಾನು ಅನಿವಾರ್ಯ ಕಾರಣದಿಂದ ಬಿಜೆಪಿಗೆ ಬೆಂಬಲ ಕೊಟ್ಟಿದ್ದೆ. ರಾಜ್ಯದಲ್ಲಿ ಎಸ್ ಸಿ, ಎಸ್ ಟಿ ಹಾಗೂ ಅಲ್ಪಸಂಖ್ಯಾತರು ಆತಂಕದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕೈ ಬಲಪಡಿಸುವುದು ನಮ್ಮ ಕರ್ತವ್ಯ. ಎಲ್ಲೇ ಟಿಕೆಟ್ ಕೊಟ್ಟರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.