ಬೆಂಗಳೂರು: ಕಳೆದ ಕೆಲ ದಶಕಗಳಿಂದ ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಳ ಹಾಗೂ ಡಿಜಿಟಲ್ ವೇದಿಕೆಗಳ ಸುಲಭ ಲಭ್ಯತೆಯಿಂದಾಗಿ ಅಶ್ಲೀಲ ವೀಡಿಯೊ ವೀಕ್ಷಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವ್ಯಸನಕ್ಕೆ ವಯಸ್ಕರು ಒಳಗಾಗುತ್ತಿದ್ದಾರೆ ಎನ್ನುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಸಂಶೋಧಕರು ನಡೆಸಿದ ಅಧ್ಯಯನದಿಂದ ಬಹಿರಂಗಗೊಂಡಿದೆ.
‘ಭಾರತೀಯ ವಯಸ್ಕರಲ್ಲಿ ಅಶ್ಲೀಲ ವಿಡಿಯೊ ವೀಕ್ಷಣೆ: ಮಾನಸಿಕ ಸಂಬಂಧಗಳು ಮತ್ತು ಮುನ್ಸೂಚಕಗಳು’ ಶೀರ್ಷಿಕೆಯಡಿ ಸಂಶೋಧನಾ ಪ್ರಬಂಧವನ್ನು ಎಂ. ರಾಜಶೇಖರ್, ಮನೋಜ್ ಕುಮಾರ್ ಶರ್ಮಾ ಮತ್ತು ಸೆಂಥಿಲ್ ಅಮುಧನ್ ಸಿದ್ಧಪಡಿಸಿದ್ದಾರೆ.
ಇದು ಜಿಯೋಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ನಾನಾ ಕಾರಣಗಳಿಂದ ವಯಸ್ಕರಲ್ಲಿ ಖಿನ್ನತೆ, ಆತಂಕ, ಒತ್ತಡಗಳು ಉಂಟಾಗುತ್ತಿದ್ದು, ಅವು ಅಶ್ಲೀಲ ವೀಡಿಯೊ ವೀಕ್ಷಣೆಗೆ ಅವರನ್ನು ಪ್ರಚೋದಿಸುತ್ತಿದೆ. ಅಲ್ಲದೆ ಇದಕ್ಕೆ ಪೂರಕವಾದ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತಿದ್ದು, ಅದಕ್ಕೆ ವಯಸ್ಕರು ಪ್ರೇರೇಪಿತರಾಗುತ್ತಿದ್ದಾರೆ ಎನ್ನುತ್ತಾರೆ ಸಂಶೋಧಕರು.
ಇದನ್ನೂ ಓದಿ: ಪುತ್ತೂರು | 300 ಎಕರೆ ಗೇರು ತೋಟ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿಗಾಹುತಿ
ಕಿರಿಯರೇ ಹೆಚ್ಚು:
ಅನಿಯಂತ್ರಿತ ಅಶ್ಲೀಲ ವೀಡಿಯೊಗಳ ವೀಕ್ಷಣೆಯಿಂದ ಮಾನಸಿಕ ಸಮಸ್ಯೆಗಳು ಎದುರಾಗುವುದು ಈ ಅಧ್ಯಯನದಿಂದ ಸಾಬೀತಾಗಿದೆ. ಈ ವ್ಯಸನಕ್ಕೆ ಕಿರಿಯ ವಯಸ್ಸಿನವರೇ ಹೆಚ್ಚು ಒಳಪಡುವುದ್ದು, ಇದು ಅವರ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಈ ನಿಟ್ಟಿನಲ್ಲಿ ಮನೋಯಾತನೆಗಳ ಜತೆಗೆ ಕಳೆದ ಆರು ತಿಂಗಳ ಅವಧಿಯಲ್ಲಿ ಅಥವಾ ಸದ್ಯ ಅಶ್ಲೀಲ ವೀಡಿಯೊ ವೀಕ್ಷಿಸುತ್ತಿರುವ, 18 ವರ್ಷ ಮೇಲ್ಪಟ್ಟವರನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರಲ್ಲಿ ಶೇ. 50.9 ವಿದ್ಯಾರ್ಥಿಗಳು, ಉದ್ಯೋಗಸ್ಥರು ಶೇ. 36.6, ಸ್ವಯಂ ಉದ್ಯೋಗಿಗಳು ಶೇ. 8 , ಗೃಹಿಣಿಯರು ಶೇ. 1.8 ಹಾಗೂ ಇತರ ಉದ್ಯೋಗದಲ್ಲಿ ತೊಡಗಿಕೊಂಡವರು ಶೇ. 2.7 ಮಂದಿ ಸೇರಿದ್ದಾರೆ.
ಆನ್‌ಲೈನ್ ಮೂಲಕ ಅಧ್ಯಯನ:
12 ವಾರಗಳ (2024ರ ಮಾಚರ್ರ್ನಿಂದ ಜೂನ್‌ವರೆಗೆ)ಈ ಅಧ್ಯಯನಕ್ಕಾಗಿ 236 ಮಂದಿ ಆಸಕ್ತಿ ತೋರಿದ್ದರು. ಆನ್‌ಲೈನ್ ಮೂಲಕ 18ರಿಂದ 46 ವರ್ಷದೊಳಗಿನವರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆ ಪ್ರಾರಂಭವಾಗುವ ಮೊದಲೇ 74 ಮಂದಿ ಈ ಪ್ರಕ್ರಿಯೆಯಿಂದ ಹೊರನಡೆದರು.
45 ಮಂದಿ ಅಪೂರ್ಣ ಮಾಹಿತಿ ಒದಗಿಸಿದ್ದರು. ಐವರು ಅಪ್ರಾಪ್ತ ವಯಸ್ಕರಾದ ಕಾರಣ ಅವರನ್ನು ಸಮೀಕ್ಷೆಯಿಂದ ಹೊರಗಿಡಲಾಗಿತ್ತು. ಅಂತಿಮವಾಗಿ 112 ಜನರನ್ನು ಸಮೀಕ್ಷೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪುರುಷರೇ ಜಾಸ್ತಿ:
ಅಧ್ಯಯನ ಒಳಪಟ್ಟವರ ವಯಸ್ಸು ಸರಾಸರಿ ವಯಸ್ಸು 25 ಆಗಿದ್ದು, ಇವರಲ್ಲಿ ಬಹುತೇಕರು (ಶೇ 81.3 ) ಪುರುಷರಾಗಿದ್ದಾರೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ಸುಮಾರು ಅರ್ಧದಷ್ಟು ಮಂದಿ (ಶೇ. 42) ಪದವೀಧರರಾಗಿದ್ದಾರೆ. ಶೇ. 26.8 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ.
12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಶೇ. 12.5, ಎಂ.ಫಿಲ್ ಮತ್ತು ಪಿಎಚ್.ಡಿ ಪದವೀಧರರು ಶೇ. 8.92 ಮತ್ತು ಇತರೆ ಶೈಕ್ಷಣಿಕ ಅರ್ಹತೆ ಹೊಂದಿರುವವರು ಶೇ. 1.8 ಇದ್ದಾರೆ.
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆಗೆ ಪ್ರತ್ಯೇಕ ಕಾಯ್ದೆಗೆ ಸಿದ್ಧತೆ!?| ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
