ಬೆಂಗಳೂರು: ನಗರದ ಬಾಣಸವಾಡಿಯ ಸೆಂಟ್ ಫ್ರಾನ್ಸಿಸ್ ಟೆಂಪಲ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಗೆ ಹಿಂದಿನಿಂದ ಮತ್ತೂಂದು ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಲೈಂಗಿಕ ಕಿರುಕುಳ ಎಸಗಿರುವ ಘಟನೆ ನಡೆದಿದೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಅಸ್ಸಾಂ ಮೂಲದ 23 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅಸ್ಸಾಂ ಮೂಲದ ಯುವತಿ ಒಂದೆರಡು ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾರೆ. ಏ.2ರಂದು ಬಾಣಸವಾಡಿಯಲ್ಲಿರುವ ಸ್ನೇಹಿತರನ್ನು ಭೇಟಿಯಾಗಿ ಮುಂಜಾನೆ 4.30ರ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಹೆಣ್ಣೂರು ಮುಖ್ಯ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪದ ಸೆಂಟ್ ಫ್ರಾನ್ಸಿಸ್ ಟೆಂಪಲ್ ಬಳಿ ಹೋಗುವಾಗ, ಹಿಂದಿನಿಂದ ಮತ್ತೂಂದು ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಏಕಾಏಕಿ, ಯುವತಿಯ ತೊಡೆ ಮೇಲೆ ಹೊಡೆದಿದ್ದಾರೆ. ಅದನ್ನು ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅಲ್ಲದೆ, ನಮ್ಮ ಜತೆ ಬರುವಂತೆ ಹೇಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಆದ್ದರಿಂದ ಗಾಬರಿಗೊಂಡ ಯುವತಿ, ವಾಹನ ನಿಲ್ಲಿಸಿ ರಕ್ಷಣೆಗೆ ಕೂಗಿಕೊಂಡಿದ್ದಾರೆ. ಆಗ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ನಂಬರ್ ಪ್ಲೇಟ್ ಇಲ್ಲದ ಬೈಕ್!:
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್‌ಗೆ ನಂಬರ್ ಪ್ಲೇಟ್ ಇಲ್ಲ. ಹೀಗಾಗಿ ಕೃತ್ಯ ಎಸಗಲೆಂದೆ ಬೈಕ್ ಬಳಸಿರುವ ಸಾಧ್ಯತೆಯಿದೆ. ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ವಶಕ್ಕೆ ಪಡೆಯಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ನೋಡಿ: ಎಂಪುರನ್ ಸಿನಿಮಾದ 25 ಸೀನ್ ಗಳ ಕತ್ತರಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನಡೆ, ಹಿಂದುತ್ವದ ಮೇಲುಗೈ? Janashakthi