ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮುಗಿದು ಎರಡು ದಿನಗಳಾಗುತ್ತ ಬಂದಿದ್ದು, ಪಟಾಕಿಯಿಂದ ಸಂಭವಿಸಿದ ಅವಘಡಗಳ ಸುದ್ದಿ ಚರ್ಚಾಸ್ಪದ ವಿಚಾರವಾಗಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಟಾಕಿ ಜೊತೆ ಹುಡುಗಾಟವಾಡಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಡುಗಾಟ
ಈ ಘಟನೆಯು ಅಕ್ಟೋಬರ್ 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಶಬರೀಶ್ (32) ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಪೊಲೀಸರು ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಆರು ಮಂದಿ ಯುವಕರು ಪಟಾಕಿ ಹಚ್ಚಿ, ಡಬ್ಬದಿಂದ ಮುಚ್ಚಿ, ಅದರ ಮೇಲೆ ಕೂರುತ್ತೀಯಾ ಅಂತ ಸವಾಲು ಹಾಕಿದ್ದಾರೆ. ಅದರಂತೆ ಡಬ್ಬದೊಳಗೆ ಪಟಾಕಿ ಇರಿಸಿ ಅದರ ಮೇಲೆ ಶಬರೀಶ್ನನ್ನು ಕೂರಿಸಿದ್ದಾರೆ. ]
ಇದನ್ನೂ ಓದಿ: ಬೆಳಗಾವಿ : ಕಿರುಕುಳಕ್ಕೆ ಬೇಸತ್ತು ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿ
ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.#Deepavali2024 #Firecrackers #bengaluru pic.twitter.com/pm1AuDCJlP
— Harshith Achrappady (@HAchrappady) November 4, 2024
ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದು, ಪಟಾಕಿ ಸಿಡಿದು ಶಬರೀಷ್ನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ತೀವ್ರ ಗಾಯವಾಗಿದ್ದು, ಆತ ಮೇಲಕ್ಕೆ ಏಳಲಾರದೆ ನರಳಾಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪಟಾಕಿ ಡಬ್ಬದ ಮೇಲೆ ಕುಳಿತರೆ ಆಟೋ ಕೊಡಿಸುವುದಾಗಿ ಆಮಿಷ ಒಡ್ಡಿದ ಕಾರಣ ಯುವಕ ಶಬರೀಷ್ ಈ ರೀತಿ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ನೋಡಿ: ಮರಕುಂಬಿ ಪ್ರಕರಣ : ಗ್ರೌಂಡ್ ರಿಪೋರ್ಟ್ – ” ಉಳುಮೆಗೆ ಭೂಮಿ ಕೇಳಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದರು”