ಕೋಲಾರ : ಪರಿಶಿಷ್ಟ ಜಾತಿ ಹಾಗೂ ಪಂಗಡ ನಿಗಮಗಳ ವತಿಯಿಂದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಸಹಾಯಧನ ಮತ್ತಿತರ ಸೌಲಭ್ಯಗಳನ್ನು ಅರ್ಹತೆಗೆ ಅನುಗುಣವಾಗಿ ನೀಡುವಂತೆ ಒತ್ತಾಯಿಸಿ ಹಾಗೂ ದಲಿತರ ಮೇಲಿನ ಹಲ್ಲೆ, ದೌರ್ಜನ್ಯದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸುವಂತೆ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಇಂದು ತಹಶಿಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಲಿತರು ದೇವಾಲಯಕ್ಕೆ ಪ್ರವೇಶ ಮಾಡಿದರೆಂದು, ದಲಿತರ ಜಮೀನು ವಿಚಾರದಲ್ಲಿ ಅಮಾನವೀಯವಾಗಿ ಹಲ್ಲೆಯ ಪ್ರಕರಣಗಳು ನಡೆಯುತ್ತಾ ಇದ್ದರೂ ದೂರುನ್ನು ಸ್ವೀಕರಿಸಿ ದೂರು ದಾಖಲಿಸಿಕೊಳ್ಳಲು ಮತ್ತು ಆರೋಪಿಗಳನ್ನು ಬಂಧಿಸಲು ಪೋಲಿಸ್ ಇಲಾಖೆ ಹಿಂದೇಟು ಹಾಕುತ್ತಿದೆ.
ದಲಿತರ ಮೇಲೆ ಹಲ್ಲೆ, ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿದ್ದು ಸರ್ಕಾರ ಇದನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಸರ್ಕಾರ ದಲಿತರ ವಿಶೇಷ ಸಭೆ ಕರೆದು ಅಧಿವೇಶನದಲ್ಲಿ ಚರ್ಚೆ ಮಾಡಿ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ಬಡವರಿಗೂ ಗಂಗಾ ಕಲ್ಯಾಣ ಯೋಜನೆ, ಭೂಒಡೆತನ ಸ್ವಾಧೀನ, ಸ್ವಯಂ ಉದ್ಯೋಗ ಈ ರೀತಿ ಯೋಜನೆಗಳು ದಲಿತರ ಅಭಿವೃದ್ಧಿಗಾಗಿ ಇದ್ದು ಅರ್ಹ ಫಲಾನುಭವಿಗಳಿಗೆ ನಿಗಮ ಮಂಡಳಿಗಳ ಮೂಲಕ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.
ಹೋರಾಟದ ಮೂಲಕ ದೌರ್ಜನ್ಯ ಹಿಮ್ಮೆಟ್ಟಿಸಬೇಕು, ನಿಗಮ ಮಂಡಳಿಗಳ ಮೂಲಕ ದಲಿತರ ಅಭಿವೃದ್ಧಿಗಾಗಿ ಇರುವ ಸೌಲಭ್ಯಗಳನ್ನು ಹೋರಾಟದ ಮೂಲಕ ಪಡೆಯಬೇಕು ದೇಶದ ಅಭಿವೃದ್ಧಿಗಿಂತ ಮುಖ್ಯವಾಗಿ ಧಾರ್ಮಿಕತೆ ಹೆಸರಿನಲ್ಲಿ ಕೋಮುವಾದವನ್ನು ಪ್ರಬಲವಾಗಿ ಬೆಳೆಸಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ದೌರ್ಜನ್ಯ ತಡೆ ಕಾಯ್ದೆ ಬಲಗೊಳಿಸಬೇಕು ದೌರ್ಜನ್ಯ ಒಳಗಾದವರಿಗೆ ತಕ್ಷಣವೇ ಪರಿಹಾರವನ್ನು ನೀಡಬೇಕು ಜಿಲ್ಲಾ ಕೇಂದ್ರಗಳಲ್ಲಿ ತ್ವರಿತ ನ್ಯಾಯಾಲಯ ಸ್ಥಾಪನೆಯಾಗಬೇಕು ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಮತ್ತು ಸದಾಶಿವ ಆಯೋಗದ ವರದಿಗಳನ್ನು ಬಹಿರಂಗಪಡಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯ ವಿ.ಅಂಬರೀಷ್ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯ ವಿ.ಅಂಬರೀಷ್, ಜಿಲ್ಲಾ ಮುಖಂಡರಾದ ಎಂ.ವಿಜಯಕೃಷ್ಣ, ಸುಶೀಲಾ, ಎಂ. ಭೀಮರಾಜ್, ಎಸ್ ನಾರಾಯಣಸ್ವಾಮಿ, ಕೆ.ವಿ ಮಂಜುನಾಥ್, ಎಂ. ಅಮರನಾಥ್, ಟಿ.ಸುಬ್ರಮಣಿ ಭಾಗವಹಿಸಿದರು.