ಬೆಂಗಳೂರು : ಬಿಜೆಪಿಯಲ್ಲಿನ ಬಂಡಾಯಕ್ಕೆ ಎಷ್ಟೇ ಮುಲಾಮು ಹಚ್ಚಿದರೂ ಗಾಯ ಮಾದಂತೆ ಕಾಣುತ್ತಿಲ್ಲ. ಬಿಜೆಪಿಯಲ್ಲಿ ಅತೃಪ್ತಿ ಇನ್ನೂ ಮನೆ ಮಾಡಿದೆ ಎನ್ನುವುದಕ್ಕೆ ಮತ್ತೆ ಎರಡು ಘಟನೆಗಳು ಸಾಕ್ಷಿಯಾಗಿವೆ. ಮುಖ್ಯವಾಗಿ ಸಚಿವ ಸಿಪಿ ಯೋಗೇಶ್ವರ ಸಿಎಂ ವಿರೋಧಿಗಳನ್ನೆ ಭೇಟಿಮಾಡಿ ಸಭೆ ನಡೆಸುತ್ತಿರುವುದು ಅಚ್ಚರಿಯ ಬೆಳವಣಿಗೆ ಆಗಿದೆ.
ಆಡಳಿತಾರೂಢ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಬಂಡಾಯವನ್ನು ಶಮನ ಮಾಡಲು ಪ್ರಯತ್ನಿಸಿದ್ದರು. ರಾಜ್ಯದಲ್ಲಿ ನಾಯಕತ್ವ ಬದಲಾಣೆಯಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು. ಆದರೆ ಅದು ಬೂದಿ ಮುಚ್ಚಿದಕೆಂಡದಂತಿತ್ತು. ಈಗ ಮತ್ತೆ ಕಿಡಿ ಸ್ಪೋಟಗೊಳ್ಳುವ ಸಾಧ್ಯತೆ ಇದೆ.
ಅಶ್ಲೀಲ ವಿಡಿಯೊ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮತ್ತೆ ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯದ ಬಿಜೆಪಿ ನಾಯಕರ ಜೊತೆ ಬಹಳ ದಿನದಿಂದ ಸುದೀರ್ಘ ಚರ್ಚೆ ನಡೆಸುವ ಮೂಲಕ ಜಾರಕಿಹೊಳಿಯವರ ಚರ್ಚೆ ಬಹಿರಂಗಗೊಂಡಿತ್ತು. ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಅವರು ಬೆಂಗಳೂರಿಗೆ ದಿಢೀರ್ ಹಾರಿ ಬಂದದ್ದು ಯಾಕೆ? ಬೆಂಗಳೂರಿನಲ್ಲಿ ಯಾರನ್ನು ಭೇಟಿ ಮಾಡಿದರು? ಯಾರ ಜೊತೆ ಚರ್ಚೆ ನಡೆಸಿದ್ದಾರೆ? ಮತ್ತೆ ದೆಹಲಿಗೆ ಹಾರಿದ್ದು ಯಾಕೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ : ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!
ಇತ್ತ ವಿಜಯಪುರದಲ್ಲಿ ಸಚಿವ ಯೋಗೇಶ್ವರ್ ಅವರು ಸಿಎಂ ಬಿಎಸ್ ವೈ ಹಾಗೂ ವಿಜಯೇಂದ್ರ ವಿರುದ್ಧ ಬಂಡಾಯ ಎದ್ದಿರುವ ಶಾಸಕ ಯತ್ನಾಳ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಜಯಪುರ ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಯತ್ನಾಳ್ ಹಾಗೂ ಯೋಗೇಶ್ವರ ಭೇಟಿ ನಡೆದಿದೆ.
ಈ ಬೆವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಕುರಿತು ತೆರೆಮರೆಯಲ್ಲಿ ನಡೆಯುತ್ತಿದೆಯಾ ಪ್ಲಾನ್? ಸಿಎಂ ವಿರೋಧಿಗಳನ್ನು ಒಂದುಗೂಡಿಸ್ತಿದ್ದಾರಾ ಸಚಿವ ಸಿ ಪಿ ಯೋಗೇಶ್ವರ? ಎಂಬ ಪ್ರಶ್ನೆ ಬಿಜೆಪಿಯನ್ನು ಮತ್ತೆ ಕಾಡತೊಡಗಿದೆ.
ಸಚಿವರ ಆಪ್ತ ಮೂಲಗಳು ಮಾಹಿತಿ ನೀಡಿರುವ ಪ್ರಕಾರ ಈ ನಾಯಕರಿಗೆ ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ರಾಜ್ಯದ ಕೆಲ ನಾಯಕರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ಅವರನ್ನು ಭೇಟಿ ಮಾಡಿರುವ ಯೋಗೇಶ್ವರ್ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳ ವಿರುದ್ಧ ಟೀಕೆ ಮಾಡಿದ್ದ ಪಂಚಮಸಾಲಿ ಮಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಇದ್ದಕ್ಕಿದ್ದಂತೆ ನಡೆದಿದ್ದು, ರಾಜ್ಯ ಬಿಜೆಪಿಯಲ್ಲಿ ತಳಮಳವನ್ನು ಶುರು ಮಾಡಿದೆ.