ಯಲಬುರ್ಗಾ : ಪಟ್ಟಣದ ಸರ್ಕಾರಿ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿ ಕೊಂಡಿದೆ
ಆಸ್ಪತ್ರೆಯ ಬ್ಲಡ್ ಸಂಗ್ರಹ ವಿಭಾಗದಲ್ಲಿ ಸಾಯಂಕಾಲ 6 ಗಂಟೆಗೆ ತಾಂತ್ರಿಕ ಸಮಸ್ಯೆಯಿಂದ ಈ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಅಪಾಯ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಉರಿಯುತ್ತಿದ್ದಂತೆಯೇ ದಟ್ಟವಾದ ಬೆಂಕಿ ಮತ್ತು ಹೊಗೆ ಆವರಿಸಿಕೊಂಡಿದೆ.
ಕೂಡಲೇ ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್ (ಡಿಪಿ) ಆಫ್ ಮಾಡಿದ್ದಾರೆ. ನಂತರ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನದಿಸುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀಶೈಲ್ ತಳವಾರ, ಪೋಲಿಸ್ ಇಲಾಖೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಕಾಶ್. ಹೆಸ್ಕಾಂ ವಿಭಾಗದ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಓಡೋಡಿ ಬಂದರು..!: ಹೆರಿಗೆ ವಿಭಾಗ ದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಹಾಗೂ ಬಾಣಂತಿಯರು ಆಸ್ಪತ್ರೆಯಲ್ಲಿ ಬೆಂಕಿ ಸಂಭವಿಸಿದ ಸುದ್ದಿ ಕೇಳಿ ಗಾಬರಿಗೊಳಗಾಗಿ ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರಗಡೆ ಓಡೋಡಿ ಬಂದರು . ಆಸ್ಪತ್ರೆಯ ಮುಂಭಾಗದಲ್ಲಿ ಗರ್ಭಿಣಿ, ಬಾಣಂತಿಯರು ಕೆಲ ಹೊತ್ತು ಹೊರಗಡೆ ಬಂದು ವಿಶ್ರಾಂತಿ ಪಡೆದರು. ಬಳಿಕ ಎಲ್ಲಾ ರೋಗಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಅಂತ ತಿಳಿ ಹೇಳಿದಾಗ ಮರಳಿ ಒಳಗಡೆ ವಾರ್ಡ್‌ಗೆ ದಾಖಲಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಯ್ತು