ಪೋಕ್ಸೊ ಪ್ರಕರಣ: ಬಿ.ಎಸ್.ಯಡಿಯೂರಪ್ಪಗೆ ಡಿಸೆಂಬರ್‌ 2ಕ್ಕೆ ಕೋರ್ಟ್‌ಗೆ ಹಾಜರಾಗಲು ಸಮನ್ಸ್ ಜಾರಿ

ಬೆಂಗಳೂರು: ಇಲ್ಲಿನ ವಿಶೇಷ ಸೆಷನ್ಸ್‌ ನ್ಯಾಯಾಲಯವು, ನೆರವು ಕೇಳಿ ಮನೆಗೆ ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ದಾಖಲಾಗಿರುವ ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಗೆ ಸಮನ್ಸ್‌ ಜಾರಿಗೊಳಿಸಿ, ಡಿಸೆಂಬರ್ 2ಕ್ಕೆ ಕೋರ್ಟ್‌ಗೆ ಹಾಜರಾಗಲು ಆದೇಶಿಸಿದೆ.

ಪ್ರಕರಣದ ಆರೋಪಿಗಳಾದ ಬಿ.ಎಸ್‌.ಯಡಿಯೂರಪ್ಪ, ವೈ.ಎಂ.ಅರುಣ, ಎಂ.ರುದ್ರೇಶ ಹಾಗೂ ಜಿ.ಮರಿಸ್ವಾಮಿ ಅವರಿಗೆ ಸಮನ್ಸ್‌ ಜಾರಿಗೊಳಿಸಿ ಡಿಸೆಂಬರ್ 2ಕ್ಕೆ ಕೋರ್ಟ್‌ಗೆ ಖುದ್ದು ಸಲಾಗಿದೆ.

ಈ ಸಂಬಂಧ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಅಶೋಕ್‌ ಎನ್.ನಾಯಕ್‌ ಮಂಗಳವಾರ ಪ್ರಸ್ತುತಪಡಿಸಿದ ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಕೋರ್ಟ್‌–Iರ ನ್ಯಾಯಾಧೀಶೆ ಸುಜಾತಾ ಅವರು 30 ದಿನಗಳ ಒಳಗಾಗಿ ಸಾಕ್ಷಿ ವಿಚಾರಣೆ ಆಗಬೇಕು ಎಂಬ ಕಾರಣಕ್ಕೆ ಸಮನ್ಸ್‌ ಜಾರಿಗೆ ಆದೇಶಿಸಿದರು.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿಕೆ ನಿರ್ಭಂದ: ಮಧ್ಯಂತರ ಆದೇಶ ಎಲ್ಲರಿಗೂ ಅನ್ವಯ- ಹೈಕೋರ್ಟ್

ಹೈಕೋರ್ಟ್‌ ಆದೇಶ

‘ಪೋಕ್ಸೊ ಅಪರಾಧಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಕೋರ್ಟ್‌–I ಹೊರಡಿಸಿರುವ ಸಮನ್ಸ್‌ ಜಾರಿ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಯಡಿಯೂರಪ್ಪ, ವೈ.ಎಂ.ಅರುಣ, ಎಂ.ರುದ್ರೇಶ ಹಾಗೂ ಜಿ.ಮರಿಸ್ವಾಮಿ ಸಲ್ಲಿಸಿದ್ದ ಎರಡು ಪ್ರತ್ಯೇಕ ರಿಟ್‌ ಅರ್ಜಿಗಳನ್ನು ಪುರಸ್ಕರಿಸಲು ಹೈಕೋರ್ಟ್‌ ಇತ್ತೀಚೆಗಷ್ಟೇ ನಿರಾಕರಿಸಿತ್ತು.

‘ಯಡಿಯೂರಪ್ಪ ಅವರ ಹಾಜರಿ ಅಗತ್ಯವಿಲ್ಲ ಎಂದಾದರೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು. ವಿನಾಯತಿ ಕೋರಿದರೆ ಮನವಿಯನ್ನು ಪುರಸ್ಕರಿಸಬೇಕು. ಈ ನ್ಯಾಯಪೀಠ ಮತ್ತು ಸಕ್ಷಮ ನ್ಯಾಯಾಲಯದ ಆದೇಶಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಭಾವಕ್ಕೆ ಒಳಗಾಗದೇ ತನ್ನ ಮುಂದಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣವನ್ನು ನಿರ್ಧರಿಸಬೇಕು’ ಎಂದು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಏನಿದು ಪ್ರಕರಣ?

‘ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ನನಗೆ ನ್ಯಾಯ ಕೊಡಿಸಿ’ ಎಂದು ಬೇಡಿ ಆರ್‌ಎಂವಿ ಎರಡನೇ ಹಂತದಲ್ಲಿನ ಡಾಲರ್ಸ್‌ ಕಾಲೊನಿಯಲ್ಲಿರುವ ಯಡಿಯೂರಪ್ಪ ಅವರ ‘ಧವಳಗಿರಿ’ ನಿವಾಸಕ್ಕೆ ಮಹಿಳೆಯೊಬ್ಬರು (ಈಗ ಬದುಕಿಲ್ಲ) ಬಂದಿದ್ದರು.

‘ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು, ನನ್ನ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದಾಗಿ ತಿಳಿಸಿ ಆಕೆಯನ್ನು ತಮ್ಮ ಕೋಣೆಯೊಳಗೆ ಕರೆದುಕೊಂಡು ಹೋಗಿ ಕಾಮಪೀಡಿತ ದುರ್ವರ್ತನೆ ತೋರಿದ್ದಾರೆ. 2024ರ ಫೆಬ್ರುವರಿ 2ರಂದು ಬೆಳಿಗ್ಗೆ 11ರಿಂದ 11.30ರ ನಡುವೆ ಈ ಘಟನೆ ನಡೆದಿದೆ’ ಎಂದು ಆರೋಪಿಸಿ ಬಾಲಕಿಯ ತಾಯಿ ಸದಾಶಿವನಗರದ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದನ್ನು ಆಧರಿಸಿ, ಪೊಲೀಸರು ‘ಕಾನೂನಿನ ಚೌಕಟ್ಟಿನಲ್ಲಿ ಇದು ಅಪರಾಧ ಎನಿಸಿದೆ’ ಎಂದು ಭಾರತೀಯ ದಂಡ ಸಂಹಿತೆ–1860ರ ಕಲಂ 354 ಎ, 204, 214 ಹಾಗೂ 37 ಮತ್ತು ಪೋಕ್ಸೊ-2012ರ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಕಲಂ 8ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ವಿಚಾರಣಾ ನ್ಯಾಯಾಲಯಕ್ಕೆ ರವಾನಿಸಿದ್ದರು.

ಇದರ ಅನುಸಾರ ‘ಅಪರಾಧ ಜರುಗಿರುವುದರಿಂದ ಪೊಲೀಸರು ಕ್ರಮ ಜರುಗಿಸಬಹುದಾಗಿದೆ’ ಎಂದು ಪರಿಗಣಿಸಿದ್ದ ವಿಶೇಷ ನ್ಯಾಯಾಲಯ, 2025ರ ಫೆಬ್ರುವರಿ 28ರಂದು ಯಡಿಯೂರಪ್ಪ ಮತ್ತು ಇತರರಿಗೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿತ್ತು. ಆರೋಪಿಗಳು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್‌ ವಿಚಾರಣೆ ಮುಂದುವರಿಕೆಗೆ ಅನುವು ಮಾಡಿಕೊಟ್ಟಿತ್ತು.

ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಕಲಂ 8 ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 354ಎ, 204, 214 ಮತ್ತು 37ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದೆ.

ಇದನ್ನೂ ನೋಡಿ: ಸಂಪತ್ತಿಗೆ ಸವಾಲ್ ನಾಟಕ ‘ಸಿನಿಮಾ’ ಆಗಿದ್ದು ಹೇಗೆ?Janashakthi Media

Donate Janashakthi Media

Leave a Reply

Your email address will not be published. Required fields are marked *