ಬೆಂಗಳೂರು: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ನಾಯಕ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಸೀತಾರಾ ಯೆಚೂರಿ ಎಡಪಕ್ಷಗಳ ಪ್ರಮುಖ ಬೆಳಕಾಗಿದ್ದರು. ಬೇರೆ ಬೇರೆ ರಾಜಕೀಯ ಪಕ್ಷಗಳೊಂದಿಗೂ ಸಂಪರ್ಕ ಸಾಧಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ಪರಿಣಾಮಕಾರಿ ಸಂಸದೀಯ ಪಟುವಾಗಿಯೂ ಗುರುತಿಸಿಕೊಂಡರು ಎಂದು ಸ್ಮರಿಸಿದ್ದಾರೆ.
ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಯುಪಿಎ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರಚನೆಯಲ್ಲಿಯೂ ಅವರದ್ದೇ ಪ್ರಧಾನ ಪಾತ್ರ ಇತ್ತು. ಕಳೆದ ವರ್ಷ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿ, ಶುಭ ಹಾರೈಸಿದ್ದರು. ಈಗಿನ ‘ಇಂಡಿಯಾ’ ಒಕ್ಕೂಟ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಇದೆ. ಸೀತಾರಾಮ್ ಯಚೂರಿ ಅವರ ನಿಧನದಿಂದ ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಯೆಚೂರಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಇಂಡಿಯಾ ಎಂಬ ಪರಿಕಲ್ಪನೆಯ ರಕ್ಷಕರಾಗಿದ್ದ ಅವರು ನಮ್ಮ ದೇಶದ ಕುರಿತು ಆಳವಾದ ಜ್ಞಾನ ಹೊಂದಿದ್ದರು. ಅವರೊಂದಿಗಿನ ಸುದೀರ್ಘ ಚರ್ಚೆಗಳ ನೆನಪುಗಳು ನನ್ನನ್ನು ಕಾಡುತ್ತಿವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ’ ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ ಸಿಂಗ್, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.