ಶಿವಮೊಗ್ಗ: ಬಿಜೆಪಿಯಲ್ಲಿದ್ದ ಸಮಸ್ಯೆಗಳು ತುಂಬಾ ಬೇಗನೇ ಬಗೆಹರಿದಿದೆ. ರಾಜಕೀಯ ಲಾಭ ಪಡೆಯಲು ಮುಂದಾದ ಕಾಂಗ್ರೆಸ್‌ಗೆ ನಿರಾಸೆಯಾಗಿದೆ. ಮುಂಬರುವ ಚುಣಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಸಿಗಲಿದೆ. ಸರಕಾರ ಮತ್ತು ಸಂಘಟನೆ ಪೂರ್ಣಪ್ರಮಾಣದಲ್ಲಿ ಶ್ರಮ ಹಾಕುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಕೆ.ಎಸ್.ಈಶ್ವರಪ್ಪ ʻʻಬಿಜೆಪಿ ಮೂಲದಿಂದ ಬಂದ ಸಾವಿರಾರು ಕಾರ್ಯಕರ್ತರಿದ್ದಾರೆ. ನಾನು ಸಹ ಬಿಜೆಪಿ ಮೂಲದಿಂದ ಬಂದವನು. ಮುಖ್ಯಮಂತ್ರಿ ಸ್ಥಾನಕ್ಕೆ ನನಗಿಂತ ಹಿರಿಯರಿದ್ದಾರೆ. ಪಕ್ಷದ ತೀರ್ಮಾನದಂತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆʼʼ ಎಂದರು.
ನಾನು ಹಿರಿಯ ನಾಯಕ ಜಗದೀಶ ಶೆಟ್ಟರ್ ಅವರಂತೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನನಗೆ ಉಪಮುಖ್ಯಮಂತ್ರಿಯಾಗಲು ನಮ್ಮ ಸಮಾಜ ಸ್ವಾಮೀಜಿಗಳು ಹೇಳುತ್ತಿದ್ದಾರೆ. ಯಾವುದೇ ಹುದ್ದೆ ಕೊಟ್ಟರು ನಾನು ನಿಭಾಯಿಸುತ್ತೇನೆ. ನಾನು ಯಾವುದಕ್ಕೂ ಒತ್ತಡ ಮಾಡುವುದಿಲ್ಲ. ಪಕ್ಷದ ಹಿರಿಯರು ತೆಗದುಕೊಂಡ ನಿರ್ಧಾರಕ್ಕೆ ನಾವು ಬದ್ಧ. ಸಚಿವ ಸ್ಥಾನದ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆಯಾದರೂ ಸರಕಾರವೇ ಬೀಳುತ್ತೆ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ನಾವು ಇನ್ನೇರಡು ವರ್ಷ ಒಳ್ಳೆ ಸರಕಾರ ಕೊಡುತ್ತೇವೆ. ನನಗೆ ಇದೇ ಖಾತೆ ಬೇಕು ಎಂದು ನಾನು ಎಲ್ಲೂ ಹೇಳಿಲ್ಲ. ಇದೇ ಖಾತೆ ಬೇಕೆಂದು ಅಪೇಕ್ಷಿಸಿದವನಲ್ಲ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿಯಲ್ಲಿ ಇದ್ದ ಗೊಂದಲಗಳೆಲ್ಲ ಮೂರೇ ದಿನದಲ್ಲಿ ಪರಿಹಾರವಾಗಿದೆ. ಪರಿಸ್ಥಿತಿ ಲಾಭ ಪಡೆಯಲು ಯತ್ನಿಸಿದ ಕಾಂಗ್ರೆಸ್ಸಿಗೆ ಈಗ ಸಂಕಷ್ಟ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಸಂತೋಷ ಆಗಿದೆ. ಈ ಎಲ್ಲ ಬೆಳವಣಿಗೆಯಿಂದ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೈಕಮಾಂಡ್ ತುಂಬಾ ಸುಲಭವಾಗಿ ಎಲ್ಲ ಸಮಸ್ಯೆಗೆ ಪರಿಹಾರ ನೀಡಿದೆ. ಚುನಾವಣೆ ಬರಲಿ, ಇನ್ನೂ ಮಜಾ ಇದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.