ಬೆಂಗಳೂರು: ‘‘ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳೋ ಹಾಗಿಲ್ಲ. ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವೂ ಹಾಗಾದ್ರೆ ಅದನ್ನು ನೋಡಬೇಕಾ? ಸರ್ಕಾರ ಸಿನಿಮಾ ತೋರಿಸೋದಕ್ಕೆ ಇದೆಯಾ? ಸಭಾಪತಿ ನಿಷ್ಪಕ್ಷಪಾತಿ ಆಗಿರಬೇಕು. ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ?’’ ಎಂದು ಹರಿಪ್ರಸಾದ್ ಖಾರವಾಗಿ ನುಡಿದಿದ್ದಾರೆ.
ವಿಧಾನಸಭೆ ಸಚಿವಾಲಯದ ಘೋಷಣೆ ಬೆನ್ನಲ್ಲೆ, ಇಂದು ವಿಧಾನ ಪರಿಷತ್ ನಲ್ಲಿ ಇದೇ ಘೋಷಣೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಮಾಡಿರುವ ಬಗ್ಗೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಯಿತು.
ರಾಜ್ಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರವೇ ಉತ್ಸಾಹ ತೋರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಿಗೆ ರಹಿತ ಚಿತ್ರವೆಂದು ಘೋಷಿಸಿದರೆ, ಈ ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚಿತ್ರವನ್ನು ವೀಕ್ಷಿಸಲು ಸಚಿವರು ಹಾಗೂ ಶಾಸಕರಿಗೆ ವ್ಯವಸ್ಥೆ ಮಾಡಿರುವುದಾಗಿ ಘೋಷಿಸಿದ್ದಾರೆ.
ಸಿನಿಮಾ ವೀಕ್ಷಣೆಗೆ ಶಾಸಕರನ್ನು ಹಾಗೂ ಸಚಿವರನ್ನು ಆಹ್ವಾನಿಸಿ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸಿನಿಮಾ ವೀಕ್ಷಣೆಗೆ ಪ್ರಕಟಣೆ ಹೊರಡಿಸಿದ ನಂತರ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆ ವಿಚಾರ ವಾಪಸ್ಸು ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಗುಜರಾತ್ ಹತ್ಯಾಕಾಂಡದ ಕುರಿತು ‘ಫರ್ಜಾನಾ’ ಮತ್ತು ವಾರಣಾಸಿ ದಲಿತ ಮಹಿಳೆಯ ಅತ್ಯಾಚಾರದ ಕುರಿತು ‘ವಾಟರ್’ ಎಂಬ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದು ಹೇಳಿದ್ದಾರೆ.
ರಾಜ್ಯ ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಪ್ರಶ್ನಿಸಿದ ಅವರು, ಸದನದಲ್ಲಿ ಮಾಡಿದ ಘೋಷಣೆ ವಾಪಸ್ಸು ಪಡೆಯಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದ್ದು, ಪರಿಷತ್ ಬಾವಿಗಿಳಿದು ಪ್ರತಿಭಟಿಸಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಲೀಂ ಅಹ್ಮದ್ ಕೂಡ ಮಾತನಾಡಿ, ‘‘ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸುವುದಕ್ಕೆ ಹೊರಟಿದ್ದೀರಾ? ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕಾ?’’ ಎಂದು ಪ್ರಶ್ನಿಸಿದ್ದಾರೆ. ‘‘ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ದವರು ನೋಡಿ’’ ಎಂದು ಸೋಮಶೇಖರ್ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ವಾದ-ವಿವಾದಗಳು ನಡೆದವು.
ಕಲಾಪ ಮತ್ತೆ ಹತ್ತು ನಿಮಿಷ ವಿರಾಮದ ನಂತರ ನಂತರ ಮತ್ತೆ ಅಧಿವೇಶನ ಆರಂಭವಾದ ಕೂಡಲೇ, ಮತ್ತೆ ಬಿ ಕೆ ಹರಿಪ್ರಸಾದ್, ಕಾಶ್ಮೀರದ ಪಂಡಿತರ ಕೊಲೆಗಳಿಗೆ ಸಂಬಂಧಿಸಿದ ಆರ್ ಟಿ ಐ ಪ್ರತಿಯನ್ನು ಓದಿದರು. ಆರ್ ಟಿ ಐನಲ್ಲಿ ಶ್ರೀನಗರದ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. 1990ರ ನಂತರ ಕಾಶ್ಮೀರಿ ಪಂಡಿತರ ಕೊಲೆಗಳ ಸಂಖ್ಯೆ 89, ಅದೇ ಅವಧಿಯಲ್ಲಿ ದಲಿತರು ಹಾಗೂ ಬೇರೆ ಸಮುದಾಯಕ್ಕೆ ಸೇರಿದ ಒಟ್ಟು 1635 ಜನರನ್ನ ಕೊಲೆ ಮಾಡಲಾಗಿದೆ. ಇದು ಆರ್ ಟಿ ಐನಲ್ಲಿ ಬಹಿರಂಗವಾಗಿದೆ. ಸದನಕ್ಕೆ ಈ ಪ್ರತಿ ನೀಡಿದ್ದೇನೆ ಎಂದರು. ನಂತರ ಸಿನಿಮಾ ಕುರಿತು ಮತ್ತೆ ಚರ್ಚಿಸಬೇಡಿ ಎಂದು ಸಭಾಪತಿ ಹೊರಟ್ಟಿ ಪ್ರಶ್ನೋತ್ತರ ಕಲಾಪಗಳಿಗೆ ಅವಕಾಶ ನೀಡಿದರು.