ಬೆಂಗಳೂರು: ‘ಮುಖ್ಯಮಂತ್ರಿ ಆಗಬೇಕಾದರೆ 2,500 ಕೋಟಿ ರೂ. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರೂ. ನೀಡಬೇಕು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ, ಉನ್ನತ ಮಟ್ಟದ ತನಿಖೆ ಆಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು, ಹಾಲಿ ಶಾಸಕರು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ಯತ್ನಾಳ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಇತರೆ ನಾಯಕರ ಜತೆ ಈ ವಿಚಾರದ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಬೇಕಾದ ಸಂಗತಿ ಎಂದು ತಿಳಿಸಿದರು.
ಇದನ್ನು ಓದಿ: ದೆಹಲಿಯಿಂದ ಬಂದವರು ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂದ್ರು: ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ಆಡಳಿತದಲ್ಲಿ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಸೇರಿದಂತೆ ವಿವಿಧ ಇಲಾಖೆ ಹುದ್ದೆಗಳ ನೇಮಕಾತಿಗೆ ಇಂತಿಷ್ಟು ಎಂದು ಹಣ ನಿಗದಿಯಾಗಿದೆ. ಹಿಂದೆ ಬೆಂಗಳೂರು ವಿವಿ ಉಪಕುಲಪತಿ ನೇಮಕ ವಿಚಾರವಾಗಿ ಪ್ರೊಫೆಸರ್ ಅಶೋಕ್ ಕುಮಾರ್ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಸರ್ಕಾರ ಕ್ಲೀನ್ ಚಿಟ್ ನೀಡಿತ್ತು. ಬೇರೆ ಸಮಯದಲ್ಲಿ ಈ ವಿಚಾರ ಮಾತನಾಡುತ್ತೇನೆ ಎಂದರು.
ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದರು.
ಯತ್ನಾಳ್‌ಗೆ ನೋಟಿಸ್ ನೀಡ್ತಿರಾ? ತನಿಖೆ ಮಾಡ್ತೀರಾ?
ಬಿಜೆಪಿ ಪಕ್ಷದವರನ್ನು ಪ್ರಶ್ನಿಸಿದ ಯು.ಟಿ ಖಾದರ್, ಬಿಜೆಪಿ ಶಾಸಕ ಯತ್ನಾಳ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರಿ ಎಂದು ಟ್ವೀಟ್ ಮಾಡಿರುವ ಅವರು, ಶಾಸಕ ಯತ್ನಾಳ್ ಗೆ ನೋಟಿಸ್ ನೀಡ್ತಿರಾ? ಅಥವಾ ತನಿಖೆ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
”ಪಿಎಸ್ ಐ ನೇಮಕಾತಿ ಹಗರಣದ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಿಗೆ ಸರ್ಕಾರವೇ ಮುಂದೆ ನಿಂತು ನೋಟಿಸ್ ನೀಡಿತ್ತು. ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಹರಾಜು ದರವನ್ನ ಪ್ರಕಟಿಸಿದ್ದಾರೆ. ಈಗೇನು ತನಿಖೆ ಮಾಡ್ತೀರಾ? ನೋಟಿಸ್ ನೀಡ್ತಿರಾ? ಜನ ನಿಮ್ಮನ್ನ ಇನ್ನು ಸಹಿಸೋಲ್ಲ” ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.