ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ, ಆದರೆ ಸಮಜಾಯಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಶಿಸ್ತುಸಮಿತಿ ಎರಡನೇ ಬಾರಿಗೆ ಶೋಕಾಸ್ ನೋಟಿಸ್ ನೀಡಿದೆ.
ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶೋಕಾಸ್ ನೋಟಿಸ್ ನೀಡಿದ್ದಾರೆ. ತಮ್ಮ ಭರವಸೆ ತಾವೇ ಮುರಿದು ಮತ್ತೆ ಪದೇ ಪದೇ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ಕೊಡ್ತಿದ್ದ ಯತ್ನಾಳ್‌ಗೆ ಇಂದು ಎರಡನೇ ಶೋಕಾಸ್ ನೋಟಿಸ್ ಕೊಟ್ಟು ಮತ್ತೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಕಳೆದ ಡಿಸೆಂಬರ್‌ನಲ್ಲಿ ಮೊದಲ ಶೋಕಾಸ್ ನೋಟಿಸ್ ಅನ್ನು ನೀಡಿತ್ತು.
ನೋಟಿಸ್‌ನಲ್ಲಿ ಏನಿದೆ?
ಈ ಹಿಂದೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಸಮಜಾಯಿಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ. ಪಕ್ಷ ವಿರೋಧ ಚಟುವಟಿಕೆಗಳನ್ನು ಮುಂದುವರಿಸಿದ್ದೀರಿ. ಹೀಗಾಗಿ ಈ ಬಗ್ಗೆ 72 ಗಂಟೆಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಸೂಚನೆ ನೀಡಿದೆ.
ಇದಕ್ಕೂ ಮುನ್ನ ಕಳೆದ ವರ್ಷದ ಡಿಸೆಂಬರ್ 02ರಂದು ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಮೊದಲ ಶೋಕಾಸ್ ನೋಟಿಸ್ ನೀಡಿತ್ತು. ಆಗ ಯತ್ನಾಳ್ ಬಹಿರಂಗ ಹೇಳಿಕೆ ಕೊಡುವುದಿಲ್ಲ ಎಂದು ಭರವಸೆ ನೀಡಿ, ಶೋಕಾಸ್ ನೋಟಿಸ್‌ಗೆ ಉತ್ತರಿಸಿದ್ದರು.
ಈ ವಿಡಿಯೋ ನೋಡಿ : ರೈತ ನಾಯಕ ವಿಜೂ ಕೃಷ್ಣನ್ ಕೇಂದ್ರ ಬಜೆಟ್‌ಗೆ ಸೊನ್ನೆ ಅಂಕ ಕೊಟ್ಟಿದ್ಯಾಕೆ? Janashakthi Media