ದೆಹಲಿಯಲ್ಲಿ ಪ್ರವಾಹ ಭೀತಿ | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ

ಯಮುನಾದಲ್ಲಿ ಪ್ರವಾಹ ಹಿನ್ನಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತುರ್ತು ಸಭೆ ಕರೆದಿದ್ದಾರೆ

ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಳೆ ದೆಹಲಿಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿಯ ನೀರಿನ ಮಟ್ಟವು ಬುಧವಾರ 207 ಮೀಟರ್‌ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹದ ಭೀತಿಯನ್ನು ಉಂಟಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತುರ್ತು ಸಭೆ ಕರೆದಿದ್ದಾರೆ.

ಯಮುನಾ ನದಿಯ ನೀರು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಇಂದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ನದಿಯಲ್ಲಿ ನೀರಿನ ಮಟ್ಟ 205.55 ಮೀಟರ್ ತಲುಪಿದ್ದು, 1978ರ ದಾಖಲೆಯನ್ನು ಮುರಿದಿದೆ. ಅತಿ ಹೆಚ್ಚು ಪ್ರವಾಹ ಮಟ್ಟ ದಾಖಲೆ 207.49 ಮೀಟರ್ ಆಗಿದ್ದು, ಆದರೆ ಇಂದು ಬೆಳಿಗ್ಗೆ 10.45ರ ವೇಳೆಗೆ ಯಮುನಾದ ನೀರಿನ ಮಟ್ಟ 207.37 ಮೀಟರ್‌ಗಳಷ್ಟಿತ್ತು.

ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಪ್ರವಾಹ ಮಾನಿಟರಿಂಗ್ ಪೋರ್ಟಲ್ ಪ್ರಕಾರ, ಹಳೆಯ ರೈಲ್ವೆ ಸೇತುವೆಯಲ್ಲಿನ ನೀರಿನ ಮಟ್ಟವು ಮುಂಜಾನೆ 4 ಗಂಟೆಗೆ 207 ಮೀಟರ್ ಗಡಿಯನ್ನು ದಾಟಿದೆ. 2013ರ ನಂತರ ಮೊದಲ ಬಾರಿಗೆ ನದಿಯ ನೀರು 207.25 ಮೀಟರ್‌ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆಗೆ 20 ಜನರ ಸಾವು, 40ಕ್ಕೂ ಹೆಚ್ಚು ಜಾನುವಾರುಗಳು ಮೃತ

ಯಮುನಾ ನದಿಯ ನೀರು ರಿಂಗ್ ರೋಡ್‌ಗೆ ತಲುಪಿದ್ದು, ಇದನ್ನು ತಡೆಯಲು ಆಡಳಿತ ಮಂಡಳಿಯಿಂದ ಮರಳು ಚೀಲಗಳನ್ನು ಹಾಕಲಾಗುತ್ತಿದೆ. ಜನರನ್ನು ಸ್ಥಳಾಂತರಿಸಲು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.

”ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ. ನದಿ ತೀರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಇತರ ಸಂಸ್ಥೆಗಳೊಂದಿಗೆ ಸಮನ್ವಯವನ್ನು ಸ್ಥಾಪಿಸಲಾಗಿದ್ದು, ಇದರಿಂದಾಗಿ ಜಲಾವೃತಗೊಂಡ ಜನರನ್ನು ಕ್ಷಣವೇ ಸ್ಥಳಾಂತರಿಸಬಹುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಮೇಲಿನ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಮತ್ತು ವಾರಾಂತ್ಯದಲ್ಲಿ ದೆಹಲಿ ಹಾಗೂ ಹತ್ತಿರದ ಪ್ರದೇಶಗಳಲ್ಲಿ ಉಂಟಾದ ಭಾರೀ ಮಳೆಯಿಂದ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯಮುನಾ ನದಿ ಎರಡು ಬಾರಿ ಅಪಾಯದ ರೇಖೆಯನ್ನು ದಾಟಿ, ನೀರಿನ ಮಟ್ಟ 206.38 ಮೀಟರ್‌ಗೆ ತಲುಪಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ 155 ಮಿಮೀ ದಾಖಲೆಯ ಮಳೆ : ಜನಜೀವನ ಅಸ್ತವ್ಯಸ್ಥ

ಹಳೆಯ ರೈಲ್ವೇ ಸೇತುವೆ ಮುಚ್ಚಲಾಗಿದೆ

ಸೋಮವಾರ ರಾತ್ರಿ ನದಿಯ ನೀರು 206 ಮೀಟರ್‌ನಷ್ಟು ಏರಿಕೆಯಾಗಿದ್ದರಿಂದ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಎತ್ತರದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ಮಂಗಳವಾರ ಸಂಜೆ ತಿಳಿಸಿದೆ. ಜಾಗೃತಿ, ಸ್ಥಳಾಂತರಿಸುವಿಕೆ ಮತ್ತು ರಕ್ಷಣಾ ಕಾರ್ಯಕ್ಕಾಗಿ 45 ದೋಣಿಗಳನ್ನು ನಿಯೋಜಿಸಲಾಗಿದೆ ಮತ್ತು ಸ್ಥಳಾಂತರಿಸಲ್ಪಟ್ಟ ಜನರಿಗೆ ಪರಿಹಾರ ಒದಗಿಸಲು ಎನ್‌ಜಿಒಗಳನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ.

“ಹಳೆಯ ರೈಲ್ವೆ ಸೇತುವೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಮತ್ತು ದೀರ್ಘಾವಧಿಯ ಹೆಚ್ಚಿನ ನೀರಿನ ಮಟ್ಟವನ್ನು ತಡೆಯಲು ಓಖ್ಲಾ ಬ್ಯಾರೇಜ್‌ನ ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದೆ” ಎಂದು ಇಲಾಖೆ ತಿಳಿಸಿದೆ.

ದೆಹಲಿ ಸರ್ಕಾರ ಭಾನುವಾರ ಪ್ರವಾಹದ ಎಚ್ಚರಿಕೆ ನೀಡಿದ್ದು, ಮಂಗಳವಾರ ಎರಡನೇ ಎಚ್ಚರಿಕೆ ನೀಡಿದೆ. ದುರ್ಬಲ ಪ್ರದೇಶಗಳಲ್ಲಿ ಜಾಗೃತರಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದೆಹಲಿಯಲ್ಲಿ ಲಘು ಮಳೆಯಾಗುವ ಸಾಧ್ಯತೆ 

ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಮೋಡ ಕವಿದ ವಾತಾವರಣ ಮತ್ತು ಲಘು ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಮಳೆಯಾದರೆ ಯಮುನಾ ನದಿಯ ನೀರಿನ ಮಟ್ಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ, ಇದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ ಮಳೆಯಿಂದಾಗಿ ಕಟ್ಟಡ ಮತ್ತು ಗೋಡೆ ಕುಸಿತದಂತಹ ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶ: ಭೀಕರ ಮಳೆಗೆ ಕಟ್ಟಡ, ಸೇತುವೆ, ವಾಹನ, ಮನೆ ನೀರು ಪಾಲು.

Donate Janashakthi Media

Leave a Reply

Your email address will not be published. Required fields are marked *