ಬೆಂಗಳೂರು, ಫೆ.13– ವಿಧಾನಪರಿಷತ್‍ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಮತ್ತೆ ಆಯ್ಕೆ ಮಾಡಬೇಕೆಂದು ಹಾಲಿ ಸದಸ್ಯ ವಿಶ್ವನಾಥ್ ಪಟ್ಟು ಹಿಡಿದಿದ್ದಾರೆ ಎಂದು ಬಿಜೆಪಿಯಲ್ಲಿ ಗುಸು ಗುಸು ಕೇಳಿ ಬರುತ್ತಿದೆ. ಅದಕ್ಕೆ ಪುಷ್ಠಿ ಎಂಬಂತೆ ಬಜೆಟ್ ಸಿದ್ದತೆಗೂ ಮುನ್ನ ವಿಶ್ವನಾಥ್ ಜೊತೆ ಸಿಎಂ ಸುದೀರ್ಘ ಚರ್ಚೆ ನಡೆಸಿರುವುದು ಅನೇಕ ಅನುಮಾಗಳನ್ನು ಸೃಷ್ಟಿಸಿದೆ.
ಸದ್ಯ ವಿಧಾನಪರಿಷತ್‍ಗೆ ನಾಮನಿರ್ದೇಶನಗೊಂಡಿರುವ ಅವರು, ಸಚಿವ ಸ್ಥಾನ ಸೇರಿದಂತೆ ಯಾವುದೇ ಸ್ಥಾನವನ್ನು ಅಲಂಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು, ಹೀಗಾಗಿ ಉಪ ಸಭಾಪತಿಯಾಗಿದ್ದ ಧರ್ಮೇಗೌಡರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನನ್ನನ್ನೇ ಪರಿಷತ್‍ಗೆ ಆಯ್ಕೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ವಿಶ್ವನಾಥ್ ಒತ್ತಡ ಹಾಕಿದ್ದಾರೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಸಿಎಂ ಮೇಲೆ ವಿಶ್ವನಾಥ್ ಹಾಗೂ ಸಮುದಾಯದ ಕೆಲವು ಪ್ರಭಾವಿ ಮುಖಂಡರು ವಿಧಾನಪರಿಷತ್‍ಗೆ ಪರಿಗಣಿಸ ಬೇಕೆಂದು ಆಗ್ರಹ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಬಾರಿ ವಿಶ್ವನಾಥ್ ಅವರನ್ನು ಸಾಹಿತಿಗಳ ಕೋಟಾದಲ್ಲಿ ವಿಧಾನಪರಿಷತ್‍ಗೆ ನಾಮಕರಣ ಮಾಡಲಾಗಿತ್ತು. ಜನರಿಂದ ಆಯ್ಕೆ ಯಾಗಿ ಸಚಿವ ಸ್ಥಾನ ಸೇರಿದಂತೆ ಲಾಭದಾಯಕ ಹುದ್ದೆ ಪಡೆಯಲು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ನ್ಯಾಯಾಲಯ ತೀರ್ಪು ಕೊಟ್ಟಿದೆ. ನಾಮನಿರ್ದೇಶಿತ ಸದಸ್ಯರಾಗಿ ಮುಂದುವರೆದರೆ ವಿಶ್ವನಾಥ್ ಯಾವುದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಧರ್ಮೇಗೌಡ ಅವರಿಂದ ತೆರವಾಗಿರುವ ಸ್ಥಾನಕ್ಕೆ ನನ್ನ ಆಯ್ಕೆ ಮಾಡಿದರೆ ಮುಂದೊಂದು ದಿನ ಸಚಿವ ಸ್ಥಾನ ಪಡೆಯಲು ದಾರಿ ಸುಗಮವಾಗುತ್ತದೆ ಎಂಬುದು ವಿಶ್ವನಾಥ್ ಅವರ ಲೆಕ್ಕಾಚಾರ. ಏಪ್ರಿಲ್ ತಿಂಗಳ ನಂತರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಅಷ್ಟೊರಳಗೆ ಪರಿಷತ್‍ಗೆ ಆಯ್ಕೆಯಾದರೆ ಸಚಿವ ಸ್ಥಾನ ಗಿಟ್ಟಿಸಬಹುದೆಂಬುದು ಅವರ ಆಲೋಚನೆಯಾಗಿದೆ. ಹೀಗಾಗಿ ಸಿಎಂ ಮೇಲೆ ಎಡಬಿಡದೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ಇದಕ್ಕೆ ಒಪ್ಪುವುದೇ? ಯಡಿಯೂರಪ್ಪ ವಿಶ್ವನಾಥ್ ರ ಒತ್ತಡಕ್ಕೆ ಸೊಪ್ಪು ಹಾಕುತ್ತಾರಾ ಎಂಬುದು ಯಕ್ಷಪ್ರಶ್ನೆಯಾಗಿದೆ ?