ಬಿ.ಪೀರ್ ಬಾಷ
ಇಗೋ…
ನನ್ನ ನಾಡಿನ ಬೀದಿಬೀದಿಗಳಲ್ಲಿ
ದುಶ್ಯಾಸನರ ದಂಡು.
ಕುರುಕ್ಷೇತ್ರದ ಫಲಿತ ನಿರ್ಧರಿಸಲಿದ್ದಾಳೆ
ದ್ರೌಪದಿ.
ಅಂಗವಸ್ತ್ರಕ್ಕೆ ಇಟ್ಟ ಕೈಯದು ಯಾರದು?
ಕಾಣುತ್ತಿರುವುದಷ್ಟೇ ದುರುಳ ದುಶ್ ಶಾಸನದ
ತೋಳು ಭುಜ ಪರಾಕ್ರಮ
ಬೆನ್ನಿಗೆ ನಿಂತವನು ದುರ್ ಯೋಧ ನ
ಕಾಣದ ಬೆರಳುಗಳ ಕರಸೇವೆ
ಜಾರಿಯಲ್ಲಿದೆ ಈಗ ಅಂಗನೆಯ
ಮುಡಿಯ ಮೇಲೆ.
ಭೀಷ್ಮ ದ್ರೋಣರ ಬಾಯಿಗೆ
ರಾಜನಿಷ್ಠೆಯ ಹೊಲಿಗೆ.
ಮಹಾಭಾರತವೀಗ ನವನವೀನ.
ಗಂಡಂದಿರೆಂದರೆ ಗಂಡಸರೇ ಅಲ್ಲವೇ
ಎಲ್ಲ ಕಾಲಕ್ಕೂ
ಇತ್ತ ಪಣಕ್ಕಿಡಲು, ಅತ್ತ
ಮುಡಿ ಹಿಡಿದೆಳೆಯಲು.
ಕದನದ ಯೋಜನೆ ಚಿತ್ರಸಿ
ದರ್ಮ ಸಂಸ್ಥಾಪನಾರ್ಥಾಯ…
ಮರೆಯಿಂದ ಸೀರೆ ಕರುಣಿಸುವ
ದಿವ್ಯ ಕರುಣೆ
ಯ ಹಂಗಿನಿಂದ ಹೊರ ಬಂದಾಳೆಯೇ
ಕಲಿ ಕಾಲ ದ್ರುಪದೆ?
ಮುಡಿಯ ಹಿಡಿದ
ಗಂಡೆದೆಯ ನಡುಕವ ಮರೆಮಾಚ ಬಲ್ಲದೇ
ವಜ್ರ ಕವಚ, ತಡೆದೀತೇ
ಎದೆಗುಂಡಿಗೆ ಬಿರಿದು ಸಿಡಿವ ನೆತ್ತರ?
ದೊರೆಯ ಅಕ್ಷೋಹಿಣಿ ಬಲದೆದುರು
ನಿಂತಿದ್ದಾಳೆ “ಅಬಲೆ”.
ತಡೆ, ತಾಯೇ…ನೆತ್ತರಭ್ಯಂಜನದ ಶಪಥ
-ವದು ಗತದ ಕಥನಕ್ಕಷ್ಟೇ ಸಾಕು
ಇಗೋ..ಬೊಗಸೆಗೆತ್ತಿಕೋ ಜಂ ಜಂನ ಜಲ.
ತೊಳೆದು ಬಿಡು ಪಾಪಿಯ ಪಾಪವ
ಯದಾ ಯದಾಹಿ ಧರ್ಮಸ್ಯ…
ಸಂಭವಾಮಿ ಯುಗೇ ಯುಗೇ.