ದೆಹಲಿ: ಭಾರತೀಯ ಕುಸ್ತಿಪಟುಗಳ ವಿರುದ್ಧ ದಿಲ್ಲಿ ಪೊಲೀಸರು ದೌರ್ಜನ್ಯವನ್ನು ನಡೆಸುತ್ತಿದ್ದಾರೆ ಎಂಬುದನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಯೂ ಈಗ ಗಮನಕ್ಕೆ ತಗೊಂಡಿದೆ. ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳ ಕುರಿತು ತ್ವರಿತ ತನಿಖೆ ನಡೆಸಬೇಕು ಎಂದು ಅದು ಆಗ್ರಹಿಸಿದೆ.
ಹವ್ಯಾಸಿ ಕುಸ್ತಿಯ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಾದ ‘ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ‘(ಯುಡಬ್ಲ್ಯುಡಬ್ಲ್ಯು) ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸುತ್ತ ಸಿಂಗ್ ವಿರುದ್ಧ ಸರಿಯಾದ ತನಿಖೆಯ ಕೊರತೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಬೆನ್ನಲ್ಲೇ ಐಒಸಿ ಯ ಈ ಹೇಳಿಕೆ ಬಂದಿದೆ.
“ಐಒಸಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಕ್ರೀಡಾಪಟುಗಳನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ ಮತ್ತು ಡಬ್ಲ್ಯುಎಫ್ಐನ ಚುನಾವಣೆಗಳು ಯೋಜಿಸಿದಂತೆ ಮತ್ತು ಅಂತರ್ರಾಷ್ಟ್ರೀಯ ಫೆಡರೇಶನ್ ಆಗಿ ಯುಡಬ್ಲ್ಯೂಡಬ್ಲ್ಯೂ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತಿವೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ” ಎಂದೂ ಐಒಸಿ ತಿಳಿಸಿದೆ.
ಮೇ 30ರಂದು , ಕುಸ್ತಿಪಟುಗಳು ತಮ್ಮ ದೂರುಗಳ ಬಗ್ಗೆ ಸರ್ಕಾರದ ಧೋರಣೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ತಮ್ಮ ಪದಕಗಳನ್ನು – ಒಲಿಂಪಿಕ್ಸ್ ಮತ್ತು ಇತರ ಉನ್ನತ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಗೆದ್ದಿರುವುದನ್ನು- ಗಂಗಾ ನದಿಯಲ್ಲಿ ತೇಲಿ ಬಡಲು ಯೋಜಿಸಿದ್ದರು, ಆದರೆ ರೈತ ಮುಖಂಡ ನರೇಶ್ ಟಿಕಾಯತ್ ಮಧ್ಯಪ್ರವೇಶಿಸಿದ ನಂತರ ಈ ಪ್ರತಿಭನಟೆಯನ್ನು ಅವರು ಮುಂದೂಡಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಮೇ 28ರಂದು ಕುಸ್ತಿಪಟುಗಳ ಮೇಲೆ ದಿಲ್ಲಿ ಪೊಲೀಸರು ಹಲ್ಲೆ ಮಾಡಿ ಬಂಧಿಸಿದರು ಮತ್ತು ಜಂತರ್ ಮಂತರ್‌ನಲ್ಲಿ ಅವರ ಪ್ರತಿಭಟನಾ ಸ್ಥಳವನ್ನು ಕೆಡವಿ ಹಾಕಿದರು. ಜಂತರ್ ಮಂತರ್‌ಗೆ ಹಿಂತಿರುಗಲು ಬಿಡುವುದಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದು, ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಅಂತರಾಷ್ಟ್ರೀಯ ಖಂಡನೆಗಳು ಹರಿದುಬರುತ್ತಿದ್ದರೂ, ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ದಿಲ್ಲಿ ಪೋಲೀಸರ ವರ್ತನೆಯ ಬಗ್ಗೆ ಕೇಂದ್ರ ಸರ್ಕಾರ ಏನನ್ನೂ ಹೇಳಿಲ್ಲ. ಬದಲಾಗಿ, ಲೈಂಗಿಕ ಕಿರುಕುಳದ ಆರೋಪಿ ಸಿಂಗ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದಕ್ಕೆ ಮೊದಲು ಈ ಮೇಲೆ ಹೇಳಿದಂತೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಒಂದು ಹೇಳಿಕೆ ನೀಡಿ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರ ವರ್ತನೆಯನ್ನು ಕುರಿತ ತನಿಖೆಯ ಫಲಿತಾಂಶಗಳ ಕೊರತೆಯ ಬಗ್ಗೆ ತನ್ನ ನಿರಾಶೆಯನ್ನು ವ್ಯಕ್ತಪಡಿಸಿತ್ತು ಮತ್ತು ಅವರ ವಿರುದ್ಧದ ಆರೋಪಗಳ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿತ್ತು ಹಾಗೂ ಭಾರತದ ಕುಸ್ತಿಪಟುಗಳು ಪ್ರತಿಭಟಿಸುತ್ತಿರುವ ಪರಿಸ್ಥಿತಿಯನ್ನು ಬಹಳ ಕಳವಳದಿಂದ ಗಮನಿಸುತ್ತ ಬಂದಿರುವುದಾಗಿ ತಿಳಿಸಿತ್ತು.
ಅವರ ಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆ ವಿಚಾರಿಸಲು ಮತ್ತು ಅವರ ಕಾಳಜಿಗಳ ನ್ಯಾಯಯುತ ಪರಿಹಾರಕ್ಕಾಗಿ ನಮ್ಮ ಬೆಂಬಲವನ್ನು ಮರುದೃಢೀಕರಿಸಲು” ಕುಸ್ತಿಪಟುಗಳೊಂದಿಗೆ ಸಭೆ ನಡೆಸುವುದಾಗಿಯೂ ಯುಡಬ್ಲ್ಯುಡಬ್ಲ್ಯು ಹೇಳಿದೆ.
“ಅಂತಿಮವಾಗಿ, ಭಾರತೀಯ ಒಲಿಂಪಿಕ್ ಸಂಘ ಮತ್ತು ಭಾರತದ ಕುಸ್ತಿ ಒಕ್ಕೂಟದ ತಾತ್ಕಾಲಿಕ ಸಮಿತಿಯಿಂದ ಮುಂದಿನ ಚುನಾಯಿತ ಸಾಮಾನ್ಯ ಸಭೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಯುಡಬ್ಲ್ಯುಡಬ್ಲ್ಯು ವಿನಂತಿಸುತ್ತದೆ. ಈ ಚುನಾಯಿತ ಸಭೆ ನಡೆಸಲು ಆರಂಭದಲ್ಲಿ ನಿಗದಿಪಡಿಸಿದ 45 ದಿನಗಳ ಗಡುವನ್ನು ಗೌರವಿಸಲಾಗುತ್ತದೆ. ಹಾಗೆ ಮಾಡಲು ವಿಫಲವಾದರೆ ಅದು ಭಾರತದ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಲು ಕಾರಣವಾಗಬಹುದು” ಎಂದೂ ಅದು ಹೇಳಿದೆ, ಅಂದರೆ ನಮ್ಮ ಕ್ರೀಡಾಪಟುಗಳು ನಮ್ಮ ದೇಶದ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಹೋಗಬಹುದು. ಈ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ನಡೆಸಬೇಕೆಂದು ಯೋಜಿಸಲಾದ ಏಷ್ಯನ್ ಚಾಂಪಿಯನ್‌ಶಿಪ್ ಅನ್ನು ಮರುಹಂಚಿಕೆ ಮಾಡುವ ಮೂಲಕ ಈಗಾಗಲೇ ಯುಡಬ್ಲ್ಯುಡಬ್ಲ್ಯು ಈ ಪರಿಸ್ಥಿತಿಯಲ್ಲಿ ಒಂದು ಕ್ರಮವನ್ನು ತೆಗೆದುಕೊಂಡಿದೆ ಎಂದು ಕೂಡ ಅದರ ಹೇಳಿಕೆ ನೆನಪಿಸಿದೆ.