ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಿರುವ 2 ಎಫ್‌ಐಆರ್‌ಗಳಲ್ಲಿ ಏನಿದೆ?

  • ಕುಸ್ತಿ ಸಂಸ್ಥೆ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ
  • ಏಳು ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಅನ್ವಯ 2 ಎಫ್‌ಐಆರ್‌ ದಾಖಲು
  • ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಮೈ ಕೈ ಸವರಿ, ಅನುಚಿತವಾಗಿ ವರ್ತಿಸಿದ್ದಾಗಿ ಆರೋಪ

ನವದೆಹಲಿ : ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು 2 ಎಫ್‌ಐಆರ್‌ ಮತ್ತು 10 ದೂರುಗಳನ್ನ ದಾಖಲಿಸಿದ್ದಾರೆ.

ಕುಸ್ತಿಪಟುಗಳ ದೂರುಗಳ ಅನ್ವಯ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಇದೀಗ ಎಫ್‌ಐಆರ್‌ನಲ್ಲಿ ದೂರುಗಳು ಏನೆಂಬುದು ಬಹಿರಂಗಗೊಂಡಿದೆ. ಎರಡು ಎಫ್‌ಐಆರ್‌ ಪ್ರಕಾರ, ಬ್ರಿಜ್‌ ಭೂಷಣ್‌ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆಯಿಟ್ಟಿದ್ದರು, ಅನುಚಿತವಾಗಿ‌ ದೇಹ ಸ್ಪರ್ಶಿಸುವುದು, ಹುಡುಗಿಯರ ಎದೆ ಮೇಲೆ ಕೈ ಹಾಕುವುದು, ಮೈ-ಕೈ ಮುಟ್ಟುವುದು, ಅವರನ್ನು ಹಿಂಬಾಲಿಸುವುದು ಸೇರಿದಂತೆ 10 ದೂರುಗಳನ್ನು ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 354, 354 (ಎ), 354 (ಡಿ) ಮತ್ತು 34 ಅಡಿಯಲ್ಲಿ ಎರಡು ಎಫ್​ಐಆರ್​ ದಾಖಲಾಗಿದ್ದು, ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ. ಮೊದಲ ಎಫ್​ಐಆರ್​ನಲ್ಲಿ ಆರು ಒಲಿಂಪಿಯನ್​ಗಳ ದೂರನ್ನು ಉಲ್ಲೇಖಿಸಲಾಗಿದೆ. ಎರಡನೇ ಎಫ್​ಐಆರ್​ ಅಪ್ರಾಪ್ತ ಕುಸ್ತಿಪಟುವಿನ ತಂದೆ ಮಾಡಿರುವ ಆರೋಪದ ಮೇಲೆ ದಾಖಲಾಗಿದೆ.

ಇದನ್ನೂ ಓದಿಗೆದ್ದ ಪದಕಗಳನ್ನು ಗಂಗಾನದಿಯಲ್ಲಿ ಬಿಡಲು ತೀರ್ಮಾನಿಸಿದ ಕುಸ್ತಿಪಟುಗಳು

ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ : ಮೊದಲ ಎಫ್‌ಐಆರ್‌ನಲ್ಲಿ 6 ಒಲಿಂಪಿಯನ್‌ಗಳ ಆರೋಪ ಉಲ್ಲೇಖಿಸಿದರೆ, 2ನೇ ಎಫ್‌ಐಆರ್‌ನಲ್ಲಿ ಅಪ್ರಾಪ್ತೆಯರ ಪೋಷಕರ ದೂರುಗಳನ್ನ ದಾಖಲಿಸಲಾಗಿದೆ. ಭೂಷಣ್‌ ತಮ್ಮನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದ, ಭುಜವನ್ನು ಬೇಕಂತಲೇ ಒತ್ತಿ ಹಿಡಿಯುತ್ತಿದ್ದ, ಅನುಚಿತವಾಗಿ ದೇಹವನ್ನ ಸ್ಪರ್ಶಿಸುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಉಸಿರಾಟವನ್ನು ಪರಿಶೀಲಿಸುವುದಾಗಿ ಹೇಳಿ ಮಹಿಳಾ ಕುಸ್ತಿಪಟುಗಳ ಎದೆಯನ್ನು ಅನುಚಿತವಾಗಿ ಸ್ಪರ್ಶಿಸುವುದು, ಅಂಗಾಗಗಳನ್ನು ಮುಟ್ಟುವುದು, ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಗಟ್ಟಿಯಾಗಿ ಹಿಡಿದುಕೊಂಡರು ಭುಜವನ್ನು ಒತ್ತುತ್ತಿದ್ದರು. ಮತ್ತು ಖಾಸಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಲೈಂಗಿಕ ಬಯಕೆಗೆ ಒತ್ತಾಯ ಮಾಡುವುದು ಸೇರಿ ಅನೇಕ ಆರೋಪಗಳು ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಕೇಳಿಬಂದಿವೆ.

ಲೈಂಗಿಕ ದೌರ್ಜನ್ಯ ನಡೆಸಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಹಾಗೂ ಅವರ ಮೇಲೆ ಸೂಕ್ತ ಕಅನೂನು ಕ್ರಮ ಜರುಗಿಸುವಂತೆ  ಕುಸ್ತಿಪಟುಗಳು ಹಾಗೂ ಜನಪರ ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *