ಜನವರಿ 18 ರಂದು ಹೋರಾಟ ಪ್ರಾರಂಭಿಸಿದ್ದ ಕುಸ್ತಿಪಟುಗಳು, ಆರು ಬಾರಿ ಬಿಜೆಪಿ ಸಂಸದರಾಗಿರುವ 66 ವರ್ಷದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಆರೋಪಗಳನ್ನು ಮಾಡಿದ್ದಾರೆ
ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಬೀದಿಹೋರಾಟವನ್ನು ಬಿಟ್ಟು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಭಾನುವಾರ ಹೇಳಿದ್ದಾರೆ. ಈ ಬಗ್ಗೆ ಒಂದೇ ರೀತಿಯ ಟ್ವೀಟ್ ಮಾಡಿರುವ ಭಾರತದ ಅಗ್ರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವ ಮೂಲಕ ಸರ್ಕಾರವು ತಮ್ಮ ಭರವಸೆಯನ್ನು ಈಡೇರಿಸಿದೆ ಎಂದು ಹೇಳಿದ್ದಾರೆ.
“ನ್ಯಾಯಕ್ಕಾಗಿ ಹೋರಾಟವು ಮುಂದುವರಿಯುತ್ತದೆ. ಆದರೆ ಅದನ್ನು ಬೀದಿ ಹೋರಾಟದ ಬದಲಿಗೆ ಕಾನೂನು ವ್ಯವಸ್ಥೆಯೊಳಗೆ ಹೋರಾಟ ಮಾಡಲಾಗುವುದು” ಎಂದು ಟ್ವಿಟರ್‌ನಲ್ಲಿ ನೀಡಿರುವ ಅವರ ಹೇಳಿಕೆಯು ಒತ್ತಿಹೇಳಿದೆ. ಸರ್ಕಾರ ನೀಡಲಾಗಿದ್ದ ಭರವಸೆ ಭಾಗವಾಗಿ, ಜುಲೈ 11 ರಂದು ನಿಗದಿತ ಡಬ್ಲ್ಯುಎಫ್‌ಐ ಚುನಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ತನ್ನ ಬದ್ಧತೆಯನ್ನು ಉಳಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎಂದು ಕುಸ್ತಿಪಟುಗಳು ತಿಳಿಸಿದ್ದಾರೆ.
— Sakshee Malikkh (@SakshiMalik) June 25, 2023
ಈ ನಡುವೆ, ಹೇಳಿಕೆಯನ್ನು ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ, ವಿನೇಶ್ ಮತ್ತು ಸಾಕ್ಷಿ ಅವರು ಸಾಮಾಜಿಕ ಮಾಧ್ಯಮದಿಂದ ತಾತ್ಕಾಲಿಕ ವಿರಾಮವನ್ನು ತೆಗೆದುಕೊಳ್ಳುವುದಾಗಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಪದಕ ತಂದ ಕುಸ್ತಿಪಟುಗಳಿಗೆ ಲಾಠಿ ಏಟು ನೀಡಿದ ಮೋದಿ ಸರ್ಕಾರ
ಮೇ 28 ರಂದು ನಡೆಸಿದ್ದ ಪ್ರತಿಭಟನೆ ವೇಳೆ ಜಂತರ್ ಮಂತರ್‌ನಿಂದ ಕುಸ್ತಿಪಟುಗಳು ಬಂಧನಕ್ಕೆ ಒಳಗಾಗಿದ್ದರು. ಇದರ ನಂತರ ಜೂನ್ 15ರ ಒಳಗೆ ಬ್ರಿಜ್ ಭೂಷಣ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದರು. ಹೀಗಾಗಿ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಜೂನ್ 15 ರವರೆಗೆ ಸ್ಥಗಿತಗೊಳಿಸಿದ್ದರು. ಈ ವೇಳೆ ಬ್ರಿಜ್ ಭೂಷಣ್ ಸಿಂಗ್ ಅವರ ಕುಟುಂಬದ ಯಾವುದೇ ಸದಸ್ಯರಿಗೆ WFI ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕುಸ್ತಿಪಟುಗಳು ಬೇಡಿಕೆ ಇಟ್ಟಿದ್ದರು.
ರೈತ ಸಂಘಟನೆಗಳು, ಖಾಪ್ ಪಂಚಾಯತ್‌ಗಳು ಮತ್ತು ವಿವಿಧ ಸಂಘಟನೆಗಳಿಂದ ಭಾರತದಾದ್ಯಂತ ವ್ಯಾಪಕ ಬೆಂಬಲವನ್ನು ಪಡೆದಿದ್ದ ಕುಸ್ತಿಪಟುಗಳನ್ನು ಮೇ 28 ರಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಹಿದ್ದರು. ಅವರು ಜಂತರ್ ಮಂತರ್‌ನಲ್ಲಿ 38 ದಿನಗಳ ಕಾಲ ಧರಣಿ ನಡೆಸಿದ್ದರು.
ಜನವರಿ 18 ರಂದು ಹೋರಾಟ ಪ್ರಾರಂಭಿಸಿದ್ದ ಕುಸ್ತಿಪಟುಗಳು, ಆರು ಬಾರಿ ಬಿಜೆಪಿ ಸಂಸದರಾಗಿರುವ 66 ವರ್ಷದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಆರೋಪಗಳನ್ನು ಮಾಡಿದ್ದಾರೆ.