ಉಕ್ರೇನ್-ರಷ್ಯಾ ಸಮರ: ರಷ್ಯನ್‌ ಪಡೆಗಳಿಂದ ವಿಶ್ವದ ಅತಿದೊಡ್ಡ ವಿಮಾನ ನಾಶ

ಕೀವ್‌: ‘ವಿಶ್ವದ ಅತಿದೊಡ್ಡ ವಿಮಾನ, ಉಕ್ರೇನ್‌ನ ‘ಆಂಟೊನೊವ್-225’ ಸರಕು ವಿಮಾನವನ್ನು ರಷ್ಯಾದ ಸೇನಾಪಡೆಗಳು ಕೀವ್‌ ಹೊರವಲಯದಲ್ಲಿ ನಾಶ ಮಾಡಿವೆ’ ಎಂದು ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಹೇಳಿದ್ದಾರೆ.

ಎಎನ್-225 ‘ಮ್ರಿಯಾ’ – ಅಂದರೆ, ಉಕ್ರೇನಿಯನ್ ಭಾಷೆಯಲ್ಲಿ ‘ಕನಸು’  ಹೆಸರಿನ ಬೃಹತ್ ಗಾತ್ರದ ವಿಮಾನವನ್ನು  ಉಕ್ರೇನಿಯನ್ ಏರೋನಾಟಿಕ್ಸ್ ಕಂಪನಿ ಆಂಟೊನೊವ್‌ನಿಂದ ತಯಾರಿಸಲ್ಪಟ್ಟಿದೆ. ಇದು ರಷ್ಯಾದ ಶೆಲ್ ದಾಳಿಯಿಂದಾಗಿ ಕೀವ್‌ನ ಹೊರಗಿನ ಹಾಸ್ಟೊಮೆಲ್ ವಿಮಾನ ನಿಲ್ದಾಣದಲ್ಲಿ ಸುಟ್ಟುಹೋಗಿದೆ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಉಕ್ರೊಬೊರಾನ್‌ಪ್ರೊಮ್’ ತಿಳಿಸಿದೆ.

ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿದ್ದು, ‘ರಷ್ಯಾ ನಮ್ಮ ‘ಮ್ರಿಯಾ’ವನ್ನು ನಾಶಪಡಿಸಿರಬಹುದು. ಆದರೆ ಅವರು ಎಂದಿಗೂ ನಮ್ಮ ಬಲವಾದ, ಮುಕ್ತ ಮತ್ತು ಪ್ರಜಾಪ್ರಭುತ್ವವಾದಿ ಯುರೋಪಿಯನ್ ರಾಜ್ಯದ ಕನಸನ್ನು ನಾಶಮಾಡಲು ಸಾಧ್ಯವಿಲ್ಲ. ನಾವು ಮೇಲುಗೈ ಸಾಧಿಸುತ್ತೇವೆ’ ಅವರು ಹೇಳಿದರು.

“ವಿಶ್ವದ ಅತಿ ದೊಡ್ಡ ವಿಮಾನ “ಮ್ರಿಯಾ” (ದ ಡ್ರೀಮ್) ಅನ್ನು ರಷ್ಯಾದ ಆಕ್ರಮಣಕಾರರು ಕೀವ್ ಬಳಿಯ ಏರ್‌ಫೀಲ್ಡ್‌ನಲ್ಲಿ ನಾಶಪಡಿಸಿದರು. ನಾವು ವಿಮಾನವನ್ನು ಮರುನಿರ್ಮಾಣ ಮಾಡುತ್ತೇವೆ. ನಾವು ಬಲವಾದ, ಮುಕ್ತ ಮತ್ತು ಪ್ರಜಾಪ್ರಭುತ್ವದ ಉಕ್ರೇನ್‌ನ ನಮ್ಮ ಕನಸನ್ನು ಈಡೇರಿಸುತ್ತೇವೆ” ಎಂದು ತನ್ನ  ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಉಕ್ರೇನ್‌  ಟ್ವೀಟ್ ಮಾಡಿದೆ.

ರಷ್ಯಾದ ಆಕ್ರಮಣ ಪ್ರಾರಂಭದಿಂದಲೂ ಗೊಸ್ಟೊಮೆಲ್ ವಿಮಾನ ನಿಲ್ದಾಣವು ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾಗಿದೆ.

ಜಗತ್ತಿನಲ್ಲೇ ಅತ್ಯಂತ ವಿಶೇಷ ಎನಿಸಿದ್ದ ಈ ವಿಮಾನವು 84 ಮೀಟರ್ ಉದ್ದ (276 ಅಡಿ) ಇತ್ತು. ಗಂಟೆಗೆ 850 ಕಿಲೋಮೀಟರ್ (528 ಎಂಪಿಎಚ್‌) ವೇಗದಲ್ಲಿ 250 ಟನ್‌ಗಳಷ್ಟು (551,000 ಪೌಂಡ್‌ಗಳು) ಸರಕುಗಳನ್ನು ಸಾಗಿಸಬಲ್ಲ ಶಕ್ತಿ ಹೊಂದಿತ್ತು. ‘ಮ್ರಿಯಾ’ ವಿಮಾನವನ್ನು ರಿಪೇರಿ ಮಾಡಲು 3 ಶತಕೋಟಿ ಡಾಲರ್‌ (₹22,713 ಕೋಟಿ) ವೆಚ್ಚವಾಗಲಿದೆ. ಮತ್ತು ಐದು ವರ್ಷಗಳಷ್ಟು ಸಮಯ ಬೇಕಾಗುತ್ತದೆ ಎಂದು ‘ಉಕ್ರೊಬೊರೊನ್‌ಪ್ರೊಮ್’ ಅಂದಾಜಿಸಿದೆ.

‘ಸೋವಿಯತ್ ಏರೋನಾಟಿಕಲ್’ ಕಾರ್ಯಕ್ರಮದ ಭಾಗವಾಗಿ ಈ ವಿಮಾನವನ್ನು ತಯಾರಿಸಲಾಗಿತ್ತು. 1988 ರಲ್ಲಿ ಇದು ತನ್ನ ಮೊದಲ ಹಾರಾಟ ಕೈಗೊಂಡಿತ್ತು. ಸೋವಿಯತ್ ಒಕ್ಕೂಟದ ಪತನದ ನಂತರ ವಿಮಾನವು ಹಲವು ವರ್ಷಗಳ ಹಾರಾಟವನ್ನೇ ನಡೆಸಿರಲಿಲ್ಲ. 2001 ರಲ್ಲಿ ಕೀವ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ಗೊಸ್ಟೊಮೆಲ್‌ನಲ್ಲಿ ಪರೀಕ್ಷಾ ಹಾರಾಟವನ್ನು ಮಾಡಿತ್ತು.

ಉಕ್ರೇನ್‌ನ ‘ಆಂಟೊನೊವ್ ಏರ್‌ಲೈನ್ಸ್’ ಇದನ್ನು ನಿರ್ವಹಿಸುತ್ತಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ವಿಮಾನಕ್ಕೆ ಹೆಚ್ಚಿನ ಬೇಡಿಕೆಯಿತ್ತು.

Donate Janashakthi Media

Leave a Reply

Your email address will not be published. Required fields are marked *