ವಿಶ್ವಬ್ಯಾಂಕ್‌ನಿಂದ ಉಕ್ರೇನ್​ಗೆ 723 ಮಿಲಿಯನ್​ ಡಾಲರ್​ ಆರ್ಥಿಕ ಪ್ಯಾಕೇಜ್​ ಘೋಷಣೆ

ವಾಷಿಂಗ್ಟನ್: ಯುದ್ಧ ಪೀಡಿತ ಉಕ್ರೇನ್​ಗೆ ವಿಶ್ವಬ್ಯಾಂಕ್​ ನೆರವಿಗೆ ಧಾವಿಸಿದ್ದು, 723 ಮಿಲಿಯನ್​ ಡಾಲರ್​ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದೆ. ರಷ್ಯಾ ದಾಳಿಯಿಂದಾಗಿ ಉಕ್ರೇನ್​ಗೆ ಬೆಂಬಲ ರೂಪವಾಗಿ ಪೂರಕ ಬಜೆಟ್​ಗೆ ವಿಶ್ವ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ. ಈ ಬಗ್ಗೆ ವಿಶ್ವಬ್ಯಾಂಕ್​ ಅಂತರ್ಜಾಲದಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.

723 ಮಿಲಿಯನ್​ ಡಾಲರ್​ಗಳ ಆರ್ಥಿಕ ನೆರವಿನಲ್ಲಿ 350 ಮಿಲಿಯನ್‌ ಪೂರಕ ಸಾಲವೂ ಒಳಗೊಂಡಿದೆ. ಈ ನೆರವು ಯುದ್ಧದಲ್ಲಿ ಸಿಲುಕಿರುವ ಉಕ್ರೇನ್​ ಜನರ ಪರಿಹಾರ ಕಲ್ಪಿಸಲು, ಆರೋಗ್ಯ ಕಾರ್ಯಕರ್ತರಿಗೆ ವೇತನ ಬಿಡುಗಡೆ ಮಾಡಲು, ವಯಸ್ಸಾದವರಿಗೆ ಪಿಂಚಣಿ ನೀಡುವುದು ಹಾಗೂ ಸಾಮಾಜಿಕ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ವಿಶ್ವಬ್ಯಾಂಕ್​ ತಿಳಿಸಿದೆ.

ಪಾಲುದಾರ ರಾಷ್ಟ್ರಗಳಾದ ನೆದರ್‌ಲ್ಯಾಂಡ್‌ನಿಂದ 89 ಮಿಲಿಯನ್ ಡಾಲರ್​ ಮತ್ತು ಸ್ವೀಡನ್‌ನಿಂದ 50 ಮಿಲಿಯನ್‌ ಡಾಲರ್​ಗಳ ಖಾತರಿ ಅನುದಾನಕ್ಕೆ ಹೆಚ್ಚಿಸಲಾಗಿದೆ. ಮಲ್ಟಿ-ಡೋನರ್ ಟ್ರಸ್ಟ್ ಫಂಡ್ ಸ್ಥಾಪನೆ ಮಾಡಲಾಗಿದೆ. ಇದರಿಂದ ಯುನೈಟೆಡ್​ ಕಿಂಗ್​ಡಮ್​(ಯುಕೆ), ಡೆನ್ಮಾರ್ಕ್, ಲಾಟ್ವಿಯಾ, ಲಿಥುವೇನಿಯಾ ಮತ್ತು ಐಸ್‌ಲ್ಯಾಂಡ್‌ನಲ್ಲಿ ದಾನಿಗಳಿಂದ 134 ಮಿಲಿಯನ್‌ನ ನೆರವು ಸಿಗಲಿದೆ ಎನ್ನಲಾಗಿದೆ.

ರಷ್ಯಾದ ಆಕ್ರಮಣದಿಂದ ಉಂಟಾದ ಹಿಂಸಾಚಾರ ಹಿನ್ನೆಲೆಯಲ್ಲಿ ಉಕ್ರೇನ್ ಮತ್ತು ಅಲ್ಲಿನ ಜನರನ್ನು ನೆರವಾಗಲು ವಿಶ್ವಬ್ಯಾಂಕ್ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸದ್ಯ ಬಿಕ್ಕಟ್ಟಿನಲ್ಲಿ ಮಾನವ ಮತ್ತು ಆರ್ಥಿಕ ಪರಿಣಾಮಗಳನ್ನು ಪರಿಹರಿಸಲು ವಿಶ್ವಬ್ಯಾಂಕ್​ ತೆಗೆದುಕೊಳ್ಳುತ್ತಿರುವ ಹಲವು ಕ್ರಮಗಳಲ್ಲಿ ಇದು ಮೊದಲನೆಯದಾಗಿದೆ ಎಂದು ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಉಕ್ರೇನ್‌ಗೆ 3 ಬಿಲಿಯನ್ ಡಾಲರ್​ ಪ್ಯಾಕೇಜ್ ಸಹ ಸಿದ್ಧಪಡಿಸಲಾಗುತ್ತಿದೆ. ಉಕ್ರೇನ್​ ನಿರಾಶ್ರಿತರಿಗೆ ನೆರೆಯ ರಾಷ್ಟ್ರಗಳು ನೆರವಿಗೆ ಬರುತ್ತಿವೆ. ಇದುವರೆಗೆ ಉಕ್ರೇನ್​ನಿಂದ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಸೇರಿ 1.7 ಮಿಲಿಯನ್ ಸ್ಥಳಾಂತರವಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ವಿಶ್ವಬ್ಯಾಂಕ್​ ಅಧ್ಯಕ್ಷರು ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *