–ಟಿ.ಟಿ.ಮೋಹನ್
-ಕನ್ನಡಕ್ಕೆ: ಟಿ. ಸುರೇಂದ್ರ ರಾವ್
ಬ್ಯಾಂಕ್ ಒಂದರಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅನ್ನಾ ಸೆಬಾಸ್ಟಿಯನ್ ಕೆಲಸದ ಒತ್ತಡ ತಡೆದುಕೊಳ್ಳಲಾಗದೆ ಇದೇ ವರ್ಷದ ಜುಲೈ ತಿಂಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ಅವರ ತಾಯಿ ಹೇಳುತ್ತಾರೆ :”1947 ರಲ್ಲಿ ಸ್ವಾತಂತ್ರ್ಯ ಬಂತು ಎಂದು ಹೇಳುತ್ತಾರೆ, ಆದರೆ ನಮ್ಮ ಮಕ್ಕಳು ಈಗಲೂ ಗುಲಾಮರಂತೆ ಕೆಲಸ ಮಾಡುತ್ತಾರೆ.” ಎಂದು. ಸ್ಥಳ
ಇಂದಿನ ಭಾರತದ ಕಾರ್ಪೊರೇಟ್ ವಲಯದಲ್ಲಿ ದುಡಿಯುತ್ತಿರುವವರ ‘ಕೆಲಸದ ಸ್ಥಳದ ಸಂಸ್ಕೃತಿ’ಯ ಪರಿಸ್ಥಿತಿಯನ್ನು ಅದು ಕಣ್ಣಿಗೆ ರಾಚುವಂತೆ ಹೇಳುತ್ತದೆ.
ಹತ್ತು ದಿನಗಳಲ್ಲಿ ತನಿಖಾ ವರದಿಯನ್ನು ನೀಡುತ್ತೇವೆ ಎಂದ ಕಾರ್ಮಿಕ ಸಚಿವಾಲಯದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಈ ದುರಂತದ ಬಗ್ಗೆ ಭಾರತದ ಕಾರ್ಪೊರೇಟ್ ವಲಯ ದಿವ್ಯ ಮೌನ ವಹಿಸಿದೆ. ತಮ್ಮ ಸಂಸ್ಥೆಯ ಪರಿಸ್ಥಿತಿ ಇದಕ್ಕಿಂತಲೂ ಕೆಟ್ಟದಾಗಿರುವಾಗ ಯಾವ ಕಾರ್ಪೊರೇಟ್ ಕಂಪನಿ ಈ ಸಾವಿನ ಬಗ್ಗೆ ವ್ಯಾಖ್ಯಾನ ಮಾಡುವ ಧೈರ್ಯ ಮಾಡೀತು? ಸ್ಥಳ
ಅಪಾಯಕಾರಿ ಕೆಲಸದ ಸಂಸ್ಕೃತಿ
ಗಡುವನ್ನು ಪೂರೈಸಲು ದೀರ್ಘ ಕಾಲ ಕೆಲಸ ಮಾಡಬೇಕಾದ ಪ್ರಶ್ನೆ ಮಾತ್ರ ಇದಲ್ಲ. ತಮ್ಮ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಾರೆ, ಗೌರವ ಕೊಡುತ್ತಾರೆ ಮತ್ತು ನ್ಯಾಯೋಚಿತವಾಗಿ ನಡೆಸಿಕೊಳ್ಳುತ್ತಾರೆ ಎಂಬ ಭಾವನೆ ಅವರಿಗೆ ಮೂಡಿದರೆ ಹೆಚ್ಚಿನ ಕಾಲ ಕೆಲಸವನ್ನು ಹೇಗಾದರೂ ಮಾಡಿಯಾರು. ಆದರೆ ಭಾರತದ ಬಹುತೇಕ ಕಾರ್ಪೊರೇಟ್ ಧಣಿಗಳು ಯಾವ ರೀತಿಯಲ್ಲೂ ಅಂಥವರಲ್ಲ. ಭಾರತದ ಖಾಸಗೀ ವಲಯದಲ್ಲಿ ಅಪಾಯಕಾರಿ ಕೆಲಸದ ವಾತಾವರಣ ವ್ಯಾಪಕವಾಗಿದೆ. ಸ್ಥಳ
ಇದನ್ನೂ ಓದಿ: ನಕಲಿ ಸುದ್ದಿ ಹರಡಿದ ಆರೋಪ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು
ಕೆಲಸದ ವಾತಾವರಣ ನೌಕರರಿಗೆ ಅನುಕೂಲಕರವಾಗಿದ್ದರೆ ದೀರ್ಘ ಕಾಲ ಕೆಲಸ ಮಾಡುವುದು ದೈಹಿಕವಾಗಿ ಹಾಗೂ ಮಾನಸಿಕವಾಗಿ ದೊಡ್ಡ ಹೊರೆ ಎನಿಸಲಾರದು. ನಾಲ್ಕು ಜನರ ಅವಶ್ಯಕತೆ ಇರುವ ಕೆಲಸಕ್ಕೆ ಇಬ್ಬರನ್ನು ಮಾತ್ರ ನೇಮಿಸಿಕೊಂಡು ಅವರಿಗೆ ಮೂರು ಜನರ ಸಂಬಳ ಕೊಟ್ಟು ನಾಲ್ಕನೇ ಕೆಲಸಗಾರನ ವೆಚ್ಚವನ್ನು ಉಳಿಸಿಕೊಳ್ಳುವುದು ಕಾರ್ಪೊರೇಟ್ ಕುಳಗಳ ಲೆಕ್ಕಾಚಾರವಾಗಿರುತ್ತದೆ. ನೌಕರರ ಶೋಷಣೆ ಮತ್ತು ಅಮಾನವೀಯ ಕೆಲಸದ ಅವಧಿಯನ್ನು ಸಮರ್ಥಿಸಿಕೊಳ್ಳಲು ಕಾರ್ಪೊರೇಟ್ ಕುಳಗಳು ಮನತಟ್ಟುವ ಪರಿಭಾಷೆಯನ್ನು ಬಳಸುತ್ತಾರೆ. ಕಾರ್ಯಕ್ಷಮತೆಯ ಹೆಸರಿನಲ್ಲಿ ಅನಿಶ್ಚಿತ ಸಂಬಳ ನಿಗದಿ ಮಾಡುತ್ತಾರೆ.
ಅದು ಕಾರ್ಪೊರೇಟ್ ಕಂಪನಿಯ ಶೇರುಗಳ ಮೌಲ್ಯವೃದ್ಧಿಗೆ ಕಾರಣವಾಗುತ್ತದೆ. ಉತ್ತಮ ಕಾರ್ಯಕ್ಷಮತೆ ಮತ್ತು ಕಳಪೆ ಕಾರ್ಯಕ್ಷಮತೆ ಹೆಸರಿನಲ್ಲಿ ನೌಕರರ ಒಗ್ಗಟ್ಟನ್ನು ಮುರಿಯುವ ತಂತ್ರವನ್ನೂ ಕಾರ್ಪೊರೇಟ್ ಕಂಪನಿ ಬಳಸುತ್ತದೆ. ‘ಒತ್ತಡ ನಿರ್ವಹಣೆ’ ಕಾರ್ಯಾಗಾರಗಳನ್ನು ನಡೆಸುತ್ತವೆ. ನೌಕರರಿಗೆ ಏಕೆ ಮತ್ತು ಹೇಗೆ ಒತ್ತಡ ಉಂಟಾಗುತ್ತಿದೆ ಎಂಬುದನ್ನು ಅರಿಯಲು ಅವರು ಮುಂದಾಗುವುದಿಲ್ಲ. ಸ್ಥಳ
ದೀರ್ಘ ಸಮಯ ಮತ್ತು ನೌಕರರ ದೈಹಿಕ ಹಾಗೂ ಮಾನಸಿಕ ಆಯಾಸಗಳು ಅಮೆರಿಕಾ ಕಾರ್ಪೊರೇಟ್ ಸಂಸ್ಕೃತಿಯ ವಿಶಿಷ್ಟ ಲಕ್ಷಣಗಳು, ಆದರೆ ಯೂರೋಪಿನಲ್ಲಿ ಹಾಗಿಲ್ಲ. ಫ್ರಾನ್ಸಿನಲ್ಲಿ ವಾರಕ್ಕೆ 35 ಗಂಟೆಗಳ ಕೆಲಸದ ಅವಧಿ ಇದೆ ಮತ್ತು ಇತರ ಯೂರೋಪಿನ ದೇಶಗಳಲ್ಲಿ ವಾರಕ್ಕೆ 40 ಗಂಟೆಗಳ ಕೆಲಸದ ಅವಧಿ ಇದೆ. ಯೂರೋಪಿನಲ್ಲಿ ಜೀವನ ಮಟ್ಟ ಅಪಹಾಸ್ಯ ಮಾಡುವಷ್ಟು ಇಲ್ಲ. ಸ್ಥಳ
ಅಮೆರಿಕಾದ ಕಾರ್ಪೊರೇಟ್ ಸಂಸ್ಕೃತಿಯನ್ನು ನೇರವಾಗಿ ನಮ್ಮಂಥ ದೇಶಗಳಿಗೆ ಆಮದು ಮಾಡಿಕೊಳ್ಳುವುದು ಅವಾಸ್ತವಿಕವಾಗುತ್ತದೆ. ಅಮೆರಿಕಾದಲ್ಲಿ ತಲಾದಾಯ 85,000 ಡಾಲರುಗಳು, ಅದೇ ಭಾರತದಲ್ಲಿ ಕೇವಲ 2,700 ಡಾಲರುಗಳು. ಅಮೆರಿಕಾದ ನೌಕರರು ಸಮಾಧಾನಕರ ಮಟ್ಟದ ಜೀವನ ನಡೆಸುತ್ತಾರೆ – ವಸತಿ, ಪ್ರಯಾಣ, ಆರೋಗ್ಯ, ಆಹಾರ ಮತ್ತು ವಿರಾಮ ಮುಂತಾದ ಸೌಕರ್ಯಗಳು ಭಾರತೀಯ ನೌಕರರಿಗಿಂತ ಬಹಳ ಮೇಲ್ಮಟ್ಟದಲ್ಲಿವೆ. ಭಾರತೀಯ ನಗರಗಳಲ್ಲಿ ಮನೆಯಿಂದ ಕಛೇರಿ ಮತ್ತೆ ಮನೆಗೆ ಬರುವುದು ದೊಡ್ಡ ಅಗ್ನಿಪರೀಕ್ಷೆಯೇ ಸರಿ. ಅದೇ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವುದು (ಕೋಚಿಂಗ್ ತರಗತಿಗಳಿಗೆ ಸೇರಿಸುವುದು), ಮನೆಯಲ್ಲಿ ವಯಸ್ಸಾದವರನ್ನು ನೋಡಿಕೊಳ್ಳುವುದು, ಹೀಗೆ ಕುಟುಂಬ ನಿರ್ವಹಣೆ ಬಹು ದೊಡ್ಡ ಸರ್ಕಸ್ಸೇ ಸರಿ.
ದೀರ್ಘ ಸಮಯದ ಕೆಲಸ ಒಟ್ಟು ಸಮಸ್ಯೆಗಳ ಒಂದು ಭಾಗವಷ್ಟೆ. ಧಣಿಗಳ ನಡವಳಿಕೆಗಳು ಮತ್ತು ಬಳಸುವ ಭಾಷೆ ಬಹಳ ಸಾರಿ ಒರಟಾಗಿರುತ್ತದೆ ಮತ್ತು ಬೈಗುಳವಾಗಿರುತ್ತದೆ. ಇಂಗ್ಲೆಂಡಿನಲ್ಲಿ ಪ್ರಧಾನಿ ರಿಷಿ ಸುನಕ್ ಅವರ ಆಡಳಿತದಲ್ಲಿ ಅವರ ಉಪಪ್ರಧಾನಿ ಡೊಮಿನಿಕ್ ರಾಬ್ ಅವರು ಹಿಂದೆ ಸಚಿವರಾಗಿದ್ದ ಸಮಯದಲ್ಲಿ ಅಧಿಕಾರಿಗಳೊಂದಿಗೆ ಒರಟಾಗಿ ವರ್ತಿಸಿದ್ದರೆಂಬ ಆರೋಪ ಬಂದಿತ್ತು. ಅದಕ್ಕೊಂದು ತನಿಖೆ ಮಾಡಲಾಗಿ, ಅವರು ‘ಆಕ್ರಮಣಕಾರಿಯಾಗಿದ್ದರು’ ಮತ್ತು ‘ಬೆದರಿಸುತ್ತಿದ್ದರು’ ಆದರೆ ‘ನಿಂದನಾತ್ಮಕವಾಗಿರಲಿಲ್ಲ’ ಎಂಬ ವರದಿ ಬಂದಿತ್ತು. ಆದರೂ ಅವರು ರಾಜೀನಾಮೆ ಕೊಡಬೇಕಾಗಿ ಬಂತು. ಅದು ಲಂಡನ್ನಿನ ಪರಂಪರೆ – ಅನಾಗರಿಕ ವರ್ತನೆಗಾಗಿ ಉಪಪ್ರಧಾನಿಯೊಬ್ಬರು ಪದಚ್ಯುತರಾಗಬೇಕಾಯಿತು!
ಇದನ್ನೂ ಓದಿ: ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ಆರೋಪಿಗಳ ಬಂಧನ
ಇದೇ ಮಾನದಂಡವನ್ನು ಭಾರತೀಯ ಕಾರ್ಪೊರೇಟ್ ಜಗತ್ತಿನ ಕುಳಗಳಿಗೆ ಅನ್ವಯಿಸಿದರೆ ಏನಾಗಬಹುದು ಎಂದು ಕೆಲವರು ಅಚ್ಚರಿಪಡಬಹುದು. ಅಮೆರಿಕಾ ಮತ್ತು ಯೂರೋಪಿನ ದೇಶಗಳಲ್ಲಿ ನೌಕರರು ಕಂಪನಿಯ ವಿರುದ್ದ ಮಾನಸಿಕ ಒತ್ತಡ ಉಂಟುಮಾಡುವುದನ್ನೂ ಒಳಗೊಂಡಂತೆ ಆಕ್ಷೇಪಣೀಯ ನಡವಳಿಕೆಗಾಗಿ ದಾವೆ ಹೂಡಬಹುದು. ಅನೇಕ ವೇಳೆ ನೌಕರರಿಗೆ ಭಾರಿ ಪರಿಹಾರಗಳು ಸಿಕ್ಕಿವೆ. ಆದರೆ ಭಾರತದಲ್ಲಿ ಮಾತ್ರ ಅದಕ್ಕೆ ಅವಕಾಶವಿಲ್ಲ.
ತಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ನೌಕರರು ಭಾವಿಸುತ್ತಾರೆ. ಕಾರ್ಯಕ್ಷಮತೆ ಮೌಲ್ಯಮಾಪನ ವ್ಯವಸ್ಥೆಯು ಅನೇಕ ವೇಳೆ ಸಂದೇಹಾಸ್ಪದವಾಗಿರುತ್ತದೆ ಮತ್ತು ಕಳಪೆ ಕಾರ್ಯಕ್ಷಮತೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅದರಿಂದಾಗಿ ನೌಕರರು ಪರಿತಪಿಸುವ ಸಂದರ್ಭವೇ ಹೆಚ್ಚು. “ಕೆಲಸಕ್ಕೆ ಬಾರದ ಕಳೆಗಳನ್ನು ಕಿತ್ತು ಬಿಸಾಡಬೇಕು” ಎನ್ನುವುದು ಉನ್ನತ ಮಟ್ಟದ ಅಧಿಕಾರಿಗಳ ಧೊರಣೆಯಾಗಿದ್ದು, ಅದು ಮನುಷ್ಯತ್ವಕ್ಕೆ ಗೌರವ ನೀಡದ ದುರಹಂಕಾರವನ್ನು ವ್ಯಕ್ತಪಡಿಸುತ್ತದೆ. ಅನಿಶ್ಚಿತ ಸಂಬಳ ಕೂಡ ಸಾಮಾನ್ಯವಾಗಿ ಉನ್ನತಾಧಿಕಾರಿಗಳ ಕೃಪಾಕಟಾಕ್ಷದ ಮೇಲೆ ಅವಲಂಬಿತವಾಗಿರುತ್ತದೆ. ಯಾರಾದರೂ ತಮಗೆ ಅನ್ಯಾಯವಾಗಿದೆ ಎಂದು ಸೊಲ್ಲೆತ್ತಿದರೆ, ಅಪಾಯಕಾರಿ ಸಂಸ್ಕೃತಿ ಅನಿವಾರ್ಯವಾಗುತ್ತದೆ.
ಹಲವಾರು ಸಾರ್ವಜನಿಕ ಉದ್ದಿಮೆಗಳ ಕೆಲಸದ ಸಂಸ್ಕೃತಿಯು ಉತ್ತಮವಾಗಿದೆ. ನೌಕರರಿಗೆ ಭಾರಿ ಸವಲತ್ತುಗಳು ದೊರೆಯದಿರಬಹುದು, ಆದರೆ ಅವರಿಗೆ ಉದ್ಯೋಗದ ಸುರಕ್ಷತೆ ಇರುತ್ತದೆ. ಉನ್ನತಾಧಿಕಾರಿಗಳ ನಿರಂಕುಷ ದುರ್ವರ್ತನೆಗೆ ನೌಕರರ ಸಂಘಗಳು ತಡೆಯಾಗಿ ನಿಲ್ಲುತ್ತವೆ. ಸಂಬಳ ಸಾರಿಗೆ ಮುಂತಾದ ಸೌಲಭ್ಯಗಳಲ್ಲಿ ಖಾಸಗಿ ವಲಯದಲ್ಲಿ ಎದ್ದುಕಾಣುವಂಥಾ ಅಸಮಾನತೆಯನ್ನು ಸಾರ್ವಜನಿಕ ಉದ್ದಿಮೆಗಳಲ್ಲಿ ಕಾಣಲಾಗದು. ಮೇಲ್ಮಟ್ಟದ ಹಾಗೂ ಹಾಗೂ ಮಧ್ಯಮ ಮಟ್ಟದ ಅಧಿಕಾರಿಗಳು ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ಕುಂದುಕೊರತೆಗಳ ದೂರುಗಳಿವೆ, ಆದರೆ ಅವುಗಳ ಪರಿಹಾರಕ್ಕೆ ಹಾದಿಗಳಿವೆ. ಅಲ್ಲಿ ಅಪಾಯಕಾರಿ ಕೆಲಸದ ಸಂಸ್ಕೃತಿ ಇಲ್ಲ.
ಸಮಸ್ಯೆಗಳ ಪರಿಹಾರಕ್ಕೆ ಇದು ಸಕಾಲ
ಈ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ? ಕಾರ್ಪೊರೇಟ್ ಗಳು ಊಹಿಸಬಹುದಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ; ಆಡಳಿತ ಮಂಡಳಿಗೆ ಹೊಸದೊಂದು ‘ನೀತಿ ಸಂಹಿತೆಯನ್ನು, ‘ಕೆಲಸ-ಬದುಕಿನ ಸಮತೋಲನ’ವನ್ನು ಕಾಪಾಡಲು ಕಾರ್ಯಕ್ರಮಗಳನ್ನು, ನೌಕರರ ಜತೆ ಹೆಚ್ಚು ಸಂಧಾನ ಸಭೆಗಳನ್ನು ಪ್ರಮುಖ ಮೌಲ್ಯಗಳ ಆಧಾರದಲ್ಲಿ ಆಯೋಜಿಸಬಹುದು. ಇವು ಬದಲಾವಣೆಯನ್ನು ತಂದರೆ, ಮೊದಲ ಹಂತದಲ್ಲಿ ನಮಗೆ ಏನೂ ಸಮಸ್ಯೆಯಾಗಲಾರದು.
ಆಸರೆ ಒದಗಿಸಿ ಸರಿಪಡಿಸುವ ಕ್ರಮಗಳನ್ನು ಆರಂಭಿಸುವ ಮೂಲಕ ನಿರ್ದೇಶಕರ ಮಂಡಳಿಯು ಕಂಪನಿಯ ಕೆಲಸದ ಸಂಸ್ಕೃತಿಗೆ ಗಮನ ಹರಿಸಬಹುದು. ಅಯ್ಯೋ, ಆಡಳಿತ ಮಂಡಳಿಗಿಂತ ನಿರ್ದೇಶಕ ಮಂಡಳಿಯು ವಾಸ್ತವದಿಂದ ಹೆಚ್ಚು ಸಂಪರ್ಕ ಕಡಿದುಕೊಳ್ಳುವ ಪ್ರವೃತ್ತಿ ಹೊಂದಿರುತ್ತದೆ. ಅದೂ ಅಲ್ಲದೆ, ಅವರಿಗೆ ಆಡಳಿತ ಮಂಡಳಿಯನ್ನು ಎದುರಿಸುವಲ್ಲಿ ಪ್ರೋತ್ಸಾಹಕದ ಅಥವಾ ಉತ್ತೇಜನದ ಕೊರತೆ ಇದೆ.
ಕಾರ್ಪೊರೇಟ್ ಸಂಸ್ಕೃತಿಯ ಅತ್ಯಂತ ಕೆಟ್ಟ ವಿಪರೀತಗಳನ್ನು ಎದುರಿಸಲು ಕೆಲವು ರೂಪದ ನಿಯಮಗಳನ್ನು ವಿಧಿಸುವುದು ಅನಿವಾರ್ಯವಾಗುತ್ತದೆ. ಈ ನಿಯಮಗಳು ಮಂಡಳಿಗಳಿಗೆ, ಕೆಳ ಮಟ್ಟದ ನೌಕರರೊಂದಿಗೆ ತೊಡಗಿಕೊಳ್ಳುವ ಮತ್ತು ಕೆಳಮಟ್ಟದಲ್ಲಿ ಏನಾಗುತ್ತಿದೆ ಎಂಬ ಪ್ರಜ್ಞೆಯನ್ನು ಮೂಡಿಸುವ ಮೂಲಕ ಕೆಲಸದ ಸಂಸ್ಕೃತಿಯ ಬಗ್ಗೆ ಜವಾಬ್ದಾರಿಯನ್ನು ಹೊರಿಸುತ್ತದೆ. ಭಾಂವ್ರಿ ದೇವಿ ಪ್ರಕರಣವು ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸುವ ಮೂಲಕ ಮಾದರಿ ಬದಲಾವಣೆಗಳನ್ನು ತಂದಿತು. ಹಾಗೆಯೇ, ಸೆಬಾಸ್ಟಿಯನ್ ಅಕಾಲಿಕ ಮರಣವು ಭಾರತದ ಕೆಲಸದ ಸಂಸ್ಕೃತಿಗೆ ಮಹತ್ವದ ಬದಲಾವಣೆಯನ್ನು ತರಬಹುದು.
(ಕೃಪೆ : ದಿ ಹಿಂದೂ, 05.11. 2024 ರ ಸಂಚಿಕೆ)
ಇದನ್ನೂ ನೋಡಿ: ಮೋದಿಯವರೇ ಹತ್ತು ವರ್ಷದಲ್ಲಿ ಎಷ್ಟು ಆಶ್ವಾಸನೆ ಈಡೇರಿಸಿದ್ದಿರಿ ಸ್ಪಷ್ಟಪಡಿಸಿ – ವಿ ಎಸ್ ಉಗ್ರಪ್ಪ Janashakthi Media