ರಾತ್ರಿ ವೇಳೆ ಹಾಸ್ಟೆಲ್‌ ವಿದ್ಯಾರ್ಥಿನಿಯರಿಂದ ಅಪಾಯಕಾರಿ ಕೆಲಸ ಮಾಡಿಸಿದ ವಾರ್ಡನ್: ಎಸ್ಎಫ್ಐ ಆಕ್ರೋಶ

ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿದ ಹಾಸ್ಟೆಲ್ ವಾರ್ಡನ್‌ ಅಮಾನತಿಗೆ ಎಸ್ಎಫ್ಐ ಆಗ್ರಹಿಸಿದೆ

ಹಾವೇರಿ: ನಗರದ ವಾಲ್ಮೀಕಿ ವೃತ್ತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ಸುಮಾರು 15 ವಿದ್ಯಾರ್ಥಿನಿಯರನ್ನು ಹಾಸ್ಟೆಲ್‌ನಲ್ಲಿ ಅಪಾಯಕಾರಿ ಕೆಲಸಗಳನ್ನು ಮಾಡಿಸಿದ ಘಟನೆ ನಡೆದಿದೆ. ಘಟನೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದ್ದು, ರಾತ್ರಿ ವೇಳೆ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಜೀತದಾಳುಗಳಾಗಿ ಅಪಾಯಕಾರಿ ಕೆಲಸಕ್ಕೆ ಹಚ್ಚಿದ ವಾರ್ಡನ್‌ ಅನ್ನು ಅಮಾನತು ಮಾಡುವಂತೆ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಎಫ್‌ಐ, “ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಲೇಂದು ತಮ್ಮ ಮನೆಯಿಂದ ವಸತಿ ನಿಲಯಕ್ಕೆ ಬಂದಿರುತ್ತಾರೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಸತಿಯುತ ಶಿಕ್ಷಣ ನೀಡಬೇಕಾಗಿದ್ದು ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ವಿದ್ಯೆ ಕಲಿಯಲು ಬಂದ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ಸ್ವಚ್ಚತೆ ಕೆಲಸಗಳಿಗೆ ಹಚ್ಚಿರುವುದು ಎಷ್ಟರಮಟ್ಟಿಗೆ ಸರಿ?” ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಸಮರ್ಪಕ ಬಸ್‌ ವ್ಯವಸ್ಥೆಗೆ ಆಗ್ರಹಿಸಿ ಎಸ್‌ಎಫ್‌ಐ ಬೃಹತ್‌ ಪ್ರತಿಭಟನೆ

“ಸರ್ಕಾರವು ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಮೂಲಭೂತ ಸೌಕರ್ಯಗಳನ್ನು ನೀಡಿದ್ದು, ಜೊತೆಗೆ ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು, ಹಾಸ್ಟೆಲ್ ಉಸ್ತುವಾರಿ ನೋಡಿಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಿರುತ್ತೆದೆ. ವಸತಿ ನಿಲಯವನ್ನು ನಿಭಾಯಿಸಲು ಸರ್ಕಾರ ವೇತನ ಕೊಟ್ಟು ಮೇಲ್ವಿಚಾರಕರನ್ನು ನೇಮಿಸುರುತ್ತದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡಿದರೂ ಕೂಡ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ಕೆಲಸಗಳಿಗೆ ಬಳಸಿಕೊಂಡಿದ್ದು ಯಾಕೆ” ಎಂದು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್. ಪ್ರಶ್ನೆ ಮಾಡಿದ್ದಾರೆ.

“ಘಟನೆಗೆ ಹಾಸ್ಟೆಲ್ ಆಡಳಿತ ಶ್ರಮದಾನ ಎಂದು ಉಢಾಫೆ ಉತ್ತರ ನೀಡುತ್ತಿದೆ. ಇದು ಸರಿಯಲ್ಲ, ಶ್ರಮ ದಾನ ಮಾಡಿಸುವುದಕ್ಕೆ ಸಮಯದ ಹೊತ್ತುಗೊತ್ತು ಬೇಡವೇ? ಈ ರೀತಿಯಾಗಿ ವಿದ್ಯಾರ್ಥಿನಿಯರನ್ನು ದುರ್ಬಳಕೆ ಮಾಡಿಕೊಳ್ಳವುದು, ಅಪಾಯಕಾರಿ ಕೆಲಸಗಳನ್ನು ಮಾಡಿಸುವುದು ಕಾನೂನು ಬಾಹಿರ. ರಾತ್ರಿಹೊತ್ತು ಕೆಲಸ ಮಾಡಿಸುವ ಸಂದರ್ಭದಲ್ಲಿ ಅನಾಹುತವಾದರೆ ಯಾರು ಹೊಣೆ?” ಎಂದು ಎಸ್‌ಎಫ್‌ಐ ಕೇಳಿದೆ.

“ಹಾಸ್ಟೆಲ್ ಪ್ರವೇಶ ದಾಖಲಾತಿ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಸತಿ ನಿಲಯದ ವಿರುದ್ಧ ಧ್ವನಿ ಎತ್ತಬಾರದು ಎಂಬ ಹೇಳಿಕೆ ಸೇರಿದಂತೆ ಅನೇಕ ನಿಯಮಗಳನ್ನು ಹಾಕಿ ಕಾನೂನು ಬಾಹಿರ ಬಾಂಡ್ ಬರೆಸಿಕೊಳ್ಳುತ್ತಾರೆ. ಹಾಸ್ಟೆಲ್ ನಲ್ಲಿ ಜೀತದಾಳುಗಳನ್ನಾಗಿ ದುಡಿಸಿಕೊಳ್ಳಲು ಹೆತ್ತವರು ನಿಮಗೆ ಬಾಂಡ್ ಬರೆದುಕೊಡಬೇಕಾ? ಕಾಂಪೌಂಡ್ ಒಳಗೆ ಇರಬೇಕಾದ ವಿದ್ಯಾರ್ಥಿನಿಯರನ್ನು ದುರ್ಬಳಕೆ ಮಾಡಿಕೊಂಡ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗೀಸಿ ವಾರ್ಡನ್ ಅಮಾನತು ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಹೋರಾಟ ಮಾಡಲಾಗುವುದು” ಎಂದು ಎಸ್ಎಫ್ಐ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಸಾರ ಆರೋಪ; ಎಸ್‌ಎಫ್‌ಐ ಕಾರ್ಯಕರ್ತರಿಂದ ಖಾಸಗಿ ವಾಹಿನಿ ಮುತ್ತಿಗೆ

Donate Janashakthi Media

Leave a Reply

Your email address will not be published. Required fields are marked *