ಬೆಂಗಳೂರು : ಪೌರಕಾರ್ಮಿಕರ ಕಪಾಳಕ್ಕೆ ಹೊಡೆದು ಹಲ್ಲೆ, ಜಾತಿ ನಿಂದನೆ

ಬೆಂಗಳೂರು: ಮಹಿಳಾ ಪೌರಕಾರ್ಮಿಕರ  ಕಪಾಳಕ್ಕ ಹೊಡೆದು, ಜಾತಿ ನಿಂದನೆ ಮಾಡಿದ ಘಟನೆಯನ್ನು ಖಂಡಿಸಿ ಸೆ18 ರಂದು ಬಿಬಿಎಂಪಿ ಕಚೇರಿ ಮುಂದೆ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪ್ರತಿಭಟನೆ ನಡೆಸಿತು.

ಮಹಿಳಾ ಪೌಕಾರ್ಮಿಕರು “2024ರ ಸೆಪ್ಟೆಂಬರ್ 11ರಂದು 72ನೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಮಹಿಳಾ ಪೌರಕಾರ್ಮಿಕರ ಮೇಲೆ ಸ್ಥಳೀಯರು ಭೀಕರವಾಗಿ ಹಲ್ಲೆ ಮಾಡಿ, ಸ್ಥಳೀಯ ನಿವಾಸಿಯಾದ ಚಂದ್ರು ಮತ್ತು ಅವರ ತಾಯಿ ಜಾತಿ ನಿಂದನೆ ಮಾಡಿ ಥಳಿಸಿದ್ದಾರೆ” ಎಂದು ದೂರು ದಾಖಲಿಸಿದ್ದಾರೆ.

ಆರೋಪಿಗಳು ಜಾತಿ ಹೆಸರಿಡಿದು ಹಿಡಿದು ನಿಂದಿಸಿದ್ದೂ ಅಲ್ಲದೆ, ದೈಹಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಘಟನೆಯನ್ನು ಫೋನಿನಲ್ಲಿ ರೆಕಾರ್ಡ್ ಮಾಡುತ್ತಿದ್ದ ಮತ್ತೊಬ್ಬಾಕೆ ಪೌರಕಾರ್ಮಿಕರ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಫೋನನ್ನು ಒಡೆದುಹಾಕಿದ್ದಾರೆ. ಇತರೆ ಪೌರಕಾರ್ಮಿಕರನ್ನೂ ಅವರು ತಳಿಸಿದ್ದು ಅವರಿಗೂ ಗಾಯಗಳಾಗಿವೆ ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 6000 ರಸ್ತೆ ಗುಂಡಿಗಳನ್ನು ಹಗಲು, ರಾತ್ರಿ ಶ್ರಮವಹಿಸಿ ಮುಚ್ಚಿದ ಬಿಬಿಎಂಪಿ

ಈ ಬಗ್ಗೆ ಪೌರಕಾರ್ಮಿಕರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರೂ ಸಹ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ; ಸ್ಥಳೀಯರ ಹಿಂಸಾಚಾರ ಹಾಗೂ ಘಟನೆ ಕುರಿತ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಪೌರಕಾರ್ಮಿಕರ ಸಂಘವು ಇಂದು ಪ್ರತಿಭಟನೆ ನಡೆಸಿದರು.

“ಪೌರಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಈ ಘಟನೆಯು ಎತ್ತಿತೋರಿಸುತ್ತದೆ. ಅವರ ಜಾತಿ, ಲಿಂಗ ಮತ್ತು ವರ್ಗದ ಮೇರೆಗೆ ಅವರುಗಳು ದಿನನಿತ್ಯ ಮುಪ್ಪಟ್ಟು ಶೋಷಣೆಯನ್ನು ಅನುಭವಿಸುತ್ತಾರೆ. ಸಾರ್ವಜನಿಕ ಅರೋಗ್ಯ ಸೇವೆಯಲ್ಲಿ ಅವರು ಅಗತ್ಯ ಸೇವೆ ಒದಗಿಸುತ್ತಿದ್ದರೂ ಸಹ, ತಾರತಮ್ಯ ಮತ್ತು ಹಿಂಸೆ ಇವರಿಗೆ ಮೀರಿದ್ದಲ್ಲ. ಇದನ್ನು ತುರ್ತಾಗಿ ಸರಿಪಡಿಸುವ ಅವಕ್ಷ್ಯಕತೆ ಇದೆ” ಎಂದು ಆಗ್ರಹಿಸಿದ್ದರು.

ಘಟನೆಯಲ್ಲಿ ನೊಂದ ಪೌರಕಾರ್ಮಿಕರಾದ ಲಕ್ಷ್ಮಿ ಅವರು ಮಾತನಾಡಿ, “ಈ ಘಟಬೆಯು ನಮ್ಮ ಘನತೆಗೆ ಕುಂದುಂಟಾಗಿದೆ, ಅಧಿಕಾರಿಗಳು ಯಾವುದೇ ರೀತಿಯ ಜವಾಬ್ದಾರಿ ವಹಿಸಿರುವುದಿಲ್ಲ” ಎಂದು ಬೇಸರ ಹೊರಹಾಕಿದರು. “ಸಾರ್ವಜನಿಕವಾಗಿ ನನ್ನ ಘನತೆಗೆ ಧಕ್ಕೆಯನ್ನುಂಟು ಮಾಡಲಾಗಿದೆ. ಹೀಗಿದ್ದರೂ ಸಹ ಅಧಿಕಾರಿಗಳು ಯಾವುದೇ ರೀತಿ ಕ್ರಮ ಜರುಗಿಸದ ಕಾರಣ ನಮ್ಮಂತಹ ಕಾರ್ಮಿಕರ ಕುರಿತು ಅಧಿಕಾರಿಗಳಿಗಿರುವ ನಿರ್ಲಕ್ಷ್ಯವನ್ನು ಮತ್ತೆ ತೋರಿಸುತ್ತಿದ್ದಾರೆ” ಎಂದು ಹೇಳಿದರು.

ಇದೇ ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಪೌರಕಾರ್ಮಿಕರಾದ ಮುನಿರತ್ನ ಅವರು, “ನಮಗೆ ನ್ಯಾಯ ದೊರಕಬಾರದೇ? ನಾವು ದಲಿತ ಸಮುದಾಯದವರು ಮತ್ತು ಬಡ ಜನರು ಎಂದು ನಿರ್ಲಕ್ಷ್ಯ ತೋರಲಾಗುತ್ತಿದೆಯೇ? ನಮಗೂ ಸಮಾನವಾದ ನ್ಯಾಯ ದೊರಕಬೇಕು” ಎಂದರು.

“ಇದೊಂದೇ ಘಟನೆಯಲ್ಲ. ನಾವು ದಿನನಿತ್ಯ ಅಸ್ಪೃಶ್ಯತೆಯನ್ನು ಅನುಭವಿಸುತ್ತೇವೆ. ಮನೆಗಳ ಗೇಟ್ ಗಳನ್ನು ನಾವು ಮುಟ್ಟಬಾರದು, ನಾವು ಕುಡಿಯಲು ನೀರು ಕೇಳಿದಾಗ ಬಾತ್ರೂಮ್ ಚೊಂಬಿನಲ್ಲಿ ನೀರು ಕೊಡುತ್ತಾರೆ. ಈ ರೀತಿಯಲ್ಲಿ ನಾವು ತಾರತಮ್ಯ ಅನುಭವಿಸುತ್ತೇವೆ” ಎಂದು ಪೌರಕಾರ್ಮಿಕರಾದ ರಂಗಮ್ಮ ಹೇಳಿದರು.

“ಈ ಘಟನೆಯು ಬಿಬಿಎಂಪಿಯಲ್ಲಿರುವ ಆಳವಾದ ಮತ್ತು ವ್ಯವಸ್ಥಿತವಾದ ಸಮಸ್ಯೆಯನ್ನು ಎತ್ತಿತೋರಿಸುತ್ತದೆ. ದಲಿತ ಪೌರಕಾರ್ಮಿಕರ, ಅದರಲ್ಲೂ ಮಹಿಳಾ ಕಾರ್ಮಿಕರ, ಶೋಷಣೆಯುಕ್ತ ಕೆಲಸದ ವಾತಾವರಣ ಯಾವ ರೀತಿಯಲ್ಲಿ ಪ್ರತಿಪಾದಿಸಲಾಗುತ್ತಿದೆ ಮತ್ತು ಹೇಗೆ ಇದ್ದಕ್ಕಿದ್ದಂತೆ ಕೆಲಸದಿಂದ ವಜಾಗೊಳಿಸುವ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ ಎಂದು ತೋರಿಸುತ್ತದೆ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು ಈ ಕೂಡಲೇ ಎಲ್ಲ ಪೌರಕಾರ್ಮಿಕರಿಗೆ ನ್ಯಾಯಯುತ ಮತ್ತು ಘನತೆಯುಕ್ತ ಕೆಲಸದ ವಾತಾವರಣವನ್ನು ರೂಪಿಸಬೇಕು” ಎಂದು ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಅಪ್ಪಣ್ಣ ಹೇಳಿದರು.

ಪೌರಕಾರ್ಮಿಕರ ಆಗ್ರಹಗಳೇನು?

ಬ್ಯಾಡರಹಳ್ಳಿ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ತಡಮಾಡದೆ ಬಂಧಿಸಬೇಕು. ಅನ್ಯಾಯವಾಗಿ ಹಲ್ಲೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಪೌರಕಾರ್ಮಿಕರಿಗೆ ತಲಾ ₹10 ಲಕ್ಷ ಪರಿಹಾರ ದೊರಕಿಸಿಕೊಡಬೇಕು. ಪೌರಕಾರ್ಮಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವುದಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು ಎಂದು ಪೌರಕಾರ್ಮಿಕರ ಸಂಘ ಆಗ್ರಹಿಸಿದೆ.

“ಸಾರ್ವಜನಿಕರಿಂದ ಇಂತಹ ಹಿಂಸಾತ್ಮಕ ದಾಳಿಗಳು ಮತ್ತು ಕಿರುಕುಳದಿಂದ ಪೌರ ಕಾರ್ಮಿಕರನ್ನು ರಕ್ಷಿಸುವುದು ಬಿಬಿಎಪಿಯ ಆದ್ಯ ಕರ್ತವ್ಯವಾಗಬೇಕು. ಈ ಘಟನೆಯ ಬಗ್ಗೆ ಚರ್ಚಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ರೂಪಿಸಲು ನಮ್ಮ ಸಂಘಟನೆಯೊಂದಿಗೆ ತುರ್ತು ಸಭೆ ಕರೆಯಬೇಕು. ಬಿಬಿಎಂಪಿ, ಸರ್ಕಾರ ಈ ಘಟನೆಯ ಗಂಭೀರತೆಯನ್ನು ಪರಿಗಣಿಸಬೇಕು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ಅತ್ಯಗತ್ಯ ಭಾಗವಾಗಿರುವ ಪೌರಕಾರ್ಮಿಕರನ್ನು ರಕ್ಷಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು” ಎಂದು ಸಂಘವು ಒತ್ತಾಯಿಸಿದೆ.

ಇದನ್ನೂ ನೋಡಿ: ಬೆಂಗಳೂರು : ಪೌರಕಾರ್ಮಿಕರ ಕಪಾಳಕ್ಕೆ ಹೊಡೆದು ಹಲ್ಲೆ, ಜಾತಿ ನಿಂದನೆ Janashakthi Media

Donate Janashakthi Media

Leave a Reply

Your email address will not be published. Required fields are marked *