ನವದೆಹಲಿ: ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಗೆ ಸೇರಲು ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು. ಮಹಿಳೆಯರು ಕೂಡ ಎನ್ಡಿಎ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರ ತನ್ನ ಪೂರ್ವಗ್ರಹ ಮನಸ್ಥಿತಿಯಿಂದ ಹೊರ ಬರಬೇಕೆಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ಮುಂಬರುವ ಸೆಪ್ಟೆಂಬರ್ 5ರಂದು ಎನ್ಡಿಎ ಪರೀಕ್ಷೆಗಳು ನಡೆಯಲಿದೆ. ಈ ವರ್ಷದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇಲ್ಲಿಯವರೆಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ಯುವತಿಯರಿಗೆ ಅವಕಾಶವಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮಾನತೆಯ ದೃಷ್ಟಿಯಿಂದ ಈ ಆದೇಶ ಬಹಳ ಮಹತ್ವದ್ದಾಗಿದೆ. ಪರೀಕ್ಷೆಯ ನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಅಂತಿಮ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿನ ವಿಚಾರಣೆಯ ನಂತರ ಅಂತಿಮವಾಗಿ ತಿಳಿದು ಬರಲಿದೆ.
ಇದನ್ನು ಓದಿ: ಮಹಿಳಾ ಲೋಕದೃಷ್ಟಿಯನ್ನು ಒಟ್ಟು ಸಮಾಜದ ಲೋಕದೃಷ್ಟಿಯಾಗಿಸಬೇಕು
ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಭಾರತೀಯ ಸೇನೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು, ಇದು ಸೇನೆಯ ಲಿಂಗ ತಾರತಮ್ಯವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಕಟುವಾಗಿ ಆಕ್ಷೇಪವ್ಯಕ್ತಪಡಿಸಿದೆ.
ರಕ್ಷಣಾ ಅಕಾಡೆಮಿಯ ಪರೀಕ್ಷೆ ಬರೆಯಲು ತಮಗೆ ಅವಕಾಶ ನೀಡಲು ಸರ್ಕಾರವನ್ನು ಮಹಿಳೆಯರು ಒತ್ತಾಯಿಸಿದ್ದರು. ಆದರೆ, ಇವುಗಳ ಬಗ್ಗೆ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಯುವತಿಯರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಮಹಿಳೆಯರಿಗೂ ರಕ್ಷಣಾ ಅಕಾಡೆಮಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಧ್ಯಂತರ ಆದೇಶ ನೀಡಿದೆ.
ಈ ಪ್ರಕರಣದ ವಿಚಾರಣೆ ವೇಳೆ ಭಾರತೀಯ ಸೇನೆಯು ಮಹಿಳೆಯರನ್ನು ಎನ್ಡಿಎ ಪರೀಕ್ಷೆ ಬರೆಯಲು ಅನುಮತಿ ನೀಡದಿರುವುದು ನೀತಿ ನಿರ್ಧಾರ ಎಂದು ಹೇಳಿತ್ತು. ಇದಕ್ಕೆ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್ ಇದು ಲಿಂಗ ತಾರತಮ್ಯದ ನಿರ್ಧಾರ. ಸಮಾನತೆಯ ದೃಷ್ಟಿಯಿಂದ ಮಹಿಳೆಯರಿಗೂ ರಕ್ಷಣಾ ಅಕಾಡೆಮಿ ಸೇರಲು ಅವಕಾಶ ನೀಡಬೇಕು. ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ ಎಂದು ಅಸಮಾಧಾನ ಹೊರಹಾಕಿದೆ.
ಇದನ್ನು ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಿ.ವಿ. ನಾಗರತ್ನ ಹೆಸರು ಶಿಫಾರಸು
ಈ ಹಿಂದೆ ಸುಪ್ರೀಂ ಕೋರ್ಟ್ ಖಾಯಂ ಸೇವಾ ಆಯೋಗದಲ್ಲಿ ಮಹಿಳೆಯರನ್ನು ಸೇರಿಸುವ ಬಗ್ಗೆ ಮಹತ್ವದ ತೀರ್ಪು ನೀಡಿತ್ತು. ಈಗ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರು ಪರೀಕ್ಷೆ ಬರೆಯಬಹುದು ಎಂಬ ಆದೇಶ ನೀಡುವ ಮೂಲಕ ಮತ್ತೊಂದು ಮಹತ್ವದ ಸಂದೇಶವನ್ನು ನ್ಯಾಯಾಲಯ ನೀಡಿದೆ. ಸೆಪ್ಟೆಂಬರ 5ರಂದು ನಡೆಯುವ ಎನ್ಡಿಎ ಪರೀಕ್ಷೆಯಿಂದಲೇ ಈ ಆದೇಶ ಜಾರಿಗೊಳ್ಳಲಿದೆ.