ತಿರುಪತಿ: ತುಂಬು ಗರ್ಭಿಣಿಯೊಬ್ಬರನ್ನು ಹೆರಿಗೆ ಆಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ ಪ್ರಕರಣವೊಂದು ನಡೆದಿದ್ದು, ಹೆರಿಗೆ ಆಸ್ಪತ್ರೆ ಎದುರಿನ ರಸ್ತೆಯಲ್ಲೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಡೆದಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ ಹೆರಿಗೆ ಆಸ್ಪತ್ರೆ ಇದ್ದು, ಹೆರಿಗೆ ನೋವಿನೊಂದಿಗೆ ಈ ಆಸ್ಪತ್ರೆಗೆ ಗರ್ಭಿಣಿಯೊಬ್ಬರು ಆಗಮಿಸಿದ್ದಾರೆ. ಆದರೆ, ಗರ್ಭಿಣಿ ಮಹಿಳೆಯೊಂದಿಗೆ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿಯವರು ನಿರಾಕರಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಾನವೀಯತೆ ಮರೆತರೂ ಕೆಲ ಅಪರಿಚಿತ ವ್ಯಕ್ತಿಗಳು ಈ ತಾಯಿಯ ನೆರವಿಗೆ ಧಾವಿಸಿದ್ದಾರೆ.
ಗರ್ಭಿಣಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಾರಣ ಆಕೆಯನ್ನು ತಿರುಪತಿಯ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, 100 ಹಾಸಿಗೆಗಳ ತಿರುಪತಿ ಹೆರಿಗೆ ಆಸ್ಪತ್ರೆಯ ಸಿಬ್ಬಂದಿಗಳು ಮಾತ್ರ ಮಹಿಳೆಯ ಜೊತೆಯಿಂದಿಗೆ ಸಂಬಂಧಿಕರು ಯಾರೂ ಇಲ್ಲವೆಂದು ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಲಸಗಾರನಾಗಿದ್ದ ವ್ಯಕ್ತಿಯ ಸಹಾಯದಿಂದ ಮಹಿಳೆಯು ಮಗುವಿಗೆ ಜನ್ಮ ನೀಡಿದ್ದಾಳೆ. ಇತರೆ ಮಹಿಳೆಯರು ಹಾಸಿಗೆಯನ್ನು ಹಿಡಿದು ಗರ್ಭಿಣಿಯನ್ನು ಮರೆ ಮಾಡಿ ಹೆರಿಗೆ ಮಾಡಿಸಲಾಗಿದೆ. ಇದಾದ ನಂತರ ಸಾರ್ವಜನಿಕರು ಗಲಾಟೆ ಮಾಡಿ, ಆಸ್ಪತ್ರೆಯವರಿಗೆ ಛೀಮಾರಿ ಹಾಕಿದ್ದರಿಂದ ಆ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಸಿಬ್ಬಂದಿ, ಆ ಮಹಿಳೆ ನಮ್ಮ ಆಸ್ಪತ್ರೆಯ ವೈದ್ಯರ ಬಳಿ ತೋರಿಸುತ್ತಿರಲಿಲ್ಲ. ಹೀಗಾಗಿ, ಆಕೆಗೆ ಹೆರಿಗೆ ನೋವು ಬಂದಿದೆ ಎಂಬುದು ನಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ತಿರುಪತಿ ಜಿಲ್ಲಾಧಿಕಾರಿ ಕೆ. ವೆಂಕಟರಮನ್ ರೆಡ್ಡಿ ಅವರು, ಈ ಬಗ್ಗೆ ಕಾರಣ ಕೇಳಿ ಜಿಲ್ಲಾ ಆರೋಗ್ಯಾಧಿಕಾರಿಗೆ ಸಮನ್ಸ್ ನೀಡಿದ್ದರು.
ತಿರುಪತಿಯ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀಹರಿ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ. ಅಲ್ಲದೆ, ಗರ್ಭಿಣಿ ಮಹಿಳೆಯೊಂದಿಗೆ ಹತ್ತಿರದ ಸಂಬಂಧಿಕರು ಇಲ್ಲದಿದ್ದರೂ ಸಹ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು, ನಿರಾಕರಿಸುವಂತಿಲ್ಲ ಎಂದು ಶ್ರೀಹರಿ ಹೇಳಿದ್ದಾರೆ.