ಲಕ್ನೋ: ದೇವಾಲಯದ ಆಶ್ರಮವೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಗೋಮತಿ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ 52 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನನಂತೆ, ಈ ಘಟನೆಯು ಅಕ್ಟೋಬರ್ 4ರಂದು ನಡೆದಿದೆ. ಸಂತ್ರಸ್ತ ಮಹಿಳೆಯು ಈ ಹಿಂದೆ ಮಥುರಾದ ಆಶ್ರಮದಲ್ಲಿದ್ದು, ಬಳಿಕ ಸನ್ಯಾಸಿನಿಯೊಬ್ಬರ ಶಿಫಾರಸ್ಸಿನ ಮೇರೆಗೆ ಲಕ್ನೋದಲ್ಲಿರುವ ಆಶ್ರಮಕ್ಕೆ ಬಂದಿದ್ದರು. ಆಕೆ ಕಳೆದ ತಿಂಗಳು ಲಕ್ನೋ ಆಶ್ರಮಕ್ಕೆ ಸ್ಥಳಾಂತರವಾಗಿದ್ದು, ಬಳಿಕ ಆಕೆಗೆ ಶಿಫಾರಸ್ಸು ಮಾಡಿದ್ದ ಸನ್ಯಾಸಿನಿ ಕಾರಣಾಂತರಗಳಿಂದ ವಾರಣಾಸಿಗೆ ಹೋಗಿದ್ದರು.
ಈ ವೇಳೆ ಆಶ್ರಮದಲ್ಲಿ ಆಕೆ ಒಂಟಿಯಾಗಿದ್ದು, ಇದೇ ಸಮಯದಲ್ಲಿ ಕೆಲ ಕಿಡಿಗೇಡಿ ಆಶ್ರಮವಾಸಿಗಳು ಊಟದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಆಕೆಗೆ ನೀಡಿದ್ದರು. ತನಗೆ ಪ್ರಜ್ಞೆ ಬಂದಾಗ ಸಂಪೂರ್ಣ ಬೆತ್ತಲಾಗಿದ್ದು, ನಿಶ್ಶಕ್ತರಾಗಿದ್ದೇ, ತನ್ನ ಮೇಲೆ ನಾಲ್ವರು ಅತ್ಯಾಚಾರವೆಸಗಿರುವುದು ತಿಳಿದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರಿಗೆ ದೂರು ನೀಡಿದ್ದೇನೆ. ಆದರೆ, ಅವರೇ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಆಶ್ರಮದ ಮುಖ್ಯಸ್ಥರೇ ಬೆದರಿಕೆ ಹಾಕಿರುವುದರಿಂದ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಲಕ್ನೋವಿನಲ್ಲಿ ಕಳೆದ 24 ಗಂಟೆಗಳ ಒಳಗೆ ನಡೆದಿರುವ 2ನೇ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದೆ. ಇದಕ್ಕೂ ಮುನ್ನ 18 ವರ್ಷದ ಯುವತಿಯ ಮೇಲೆ ಆಟೋ ಚಾಲಕ ಮತ್ತು ಆತನ ಸಹಾಯಕರು ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣ ದಾಖಲಾಗಿದೆ.