ಕೊಪ್ಪಳ : ಕೋವಿಡ್ ಸೋಂಕು ತಗುಲಿ ಸತತ 158 ದಿನ ಚಿಕಿತ್ಸೆ ಪಡೆದು ಮಹಿಳೆಯೊಬ್ಬರು ಗುಣವಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು. ರಾಜ್ಯದಲ್ಲಿಯೇ ಇಷ್ಟು ಅವಧಿ ಚಿಕಿತ್ಸೆ ಪಡೆದು ಗುಣವಾದ ಮೊದಲ ಪ್ರಕರಣ ಇದಾಗಿದ್ದು, ವೈದ್ಯರ ಕಾರ್ಯವನ್ನು ಶ್ಲಾಘಿಸಲಾಗಿದೆ.
ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ನಿವಾಸಿ ಗೀತಾ ಬಾಯಿ (46) ಕಳೆದ ಜುಲೈ ತಿಂಗಳಲ್ಲಿ ಸೋಂಕಿಗೆ ತುತ್ತಾಗಿದ್ದರು.ಈ ಮಹಿಳೆ 108 ದಿನ ಐಸಿಯುನಲ್ಲೇ ಇದ್ದಿರುವುದು ವಿಶೇಷವಾಗಿದೆ ! ಜು. 3ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಶೆ. 96ರಷ್ಟು ಶ್ವಾಸಕೋಶದಲ್ಲಿ ಹಾನಿಯಾಗಿತ್ತು. ಮಹಿಳೆ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ವೈದ್ಯರು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲು ಆರಂಭಿಸಿದ್ದರು. ಪ್ರತಿನಿತ್ಯ 15-20 ಲೀಟರ್ ಆಕ್ಸಿಜನ್ ಬಳಕೆಯಾಗುತ್ತಿತ್ತು. ಕ್ರಮೇಣ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಚೇತರಿಸಿಕೊಂಡಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
108 ದಿನ ವೆಂಟಿಲೇಟರ್ನಲ್ಲಿ, 8 ದಿನ ಎಚ್ಎಫ್ಎನ್ಸಿ ಬೆಡ್ನಲ್ಲಿ ಮತ್ತು 32 ದಿನ ಆಕ್ಸಿಜನ್ ಬೆಡ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೋವಿಡ್ ದೃಢಪಟ್ಟ 7ರಿಂದ 10 ದಿನಗಳ ಒಳಗಾಗಿಯೇ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ. ಆದರೆ, ಈ ಮಹಿಳೆಗೆ 158 ದಿನಗಳ ಕಾಲ ಸುದೀರ್ಘ ಸಮಯ ಕೋವಿಡ್‌ಗಾಗಿ ಚಿಕಿತ್ಸೆ ನೀಡಲಾಯಿತು ಅವರು ಬದುಕಿ ಬಂದಿರುವುದಕ್ಕೆ ಅವರಲ್ಲಿದ್ದ ಧೈರ್ಯವೇ ಕಾರಣ ಎಂದು ಕೊಪ್ಪಳ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ವೇಣುಗೋಪಾಲ ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್ ಸಮಯದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳಿದ್ದವು. ಆದರೆ, ಇನ್ನೇನು ಸತ್ತು ಹೋಗುತ್ತಿದ್ದ ರೋಗಿಗೆ ಸತತ 158 ದಿನ ಚಿಕಿತ್ಸೆ ನೀಡಿ ವೈದ್ಯರು ಬದುಕಿಸಿದ್ದು, ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತಮ ಚಿಕಿತ್ಸೆ, ರೋಗಿ ಧೈರ್ಯ ಇದ್ದರೆ ಕೋವಿಡ್ ಗೆಲ್ಲಬಹುದು ಎಂಬುದಕ್ಕೆ ಈ ಪ್ರಕರಣ ನಿದರ್ಶನ ಎನ್ನಬಹುದು. ಹಾಗಾಗಿ ಸಕಲ ಗೌರವಗಳೊಂದಿಗೆ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ಬೀಳ್ಕೊಟ್ಟರು.