ಹಿಂದಿನ ಬಿಜೆಪಿ ಸರ್ಕಾರ ರೈತರ ವಿರೋಧದ ನಡುವೆಯು ಎಪಿಎಂಸಿ ತಿದ್ದಪಡಿ ಕಾನೂನನ್ನು ಜಾರಿ ಮಾಡಿತ್ತು
ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಮಸೂದೆಯನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದೆ. ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆ – 2023’ ಎಂದು ಸರ್ಕಾರ ಇದನ್ನು ಕರೆದಿದ್ದು, ವಿಧೇಯಕವನ್ನು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಂಡಿಸಿದರು.
ಬಿಜೆಪಿ ಜಾರಿಗೆ ತಂದಿದ್ದ ತಿದ್ದುಪಡಿ ಮಸೂದೆಯು ಮುಕ್ತ ಮಾರುಕಟ್ಟೆಗೆ ಸ್ವಾತಂತ್ರ್ಯ ನೀಡಿದ್ದು, ಎಪಿಎಂಸಿಗಳ ನಿಯಂತ್ರಣವನ್ನು ಕಡಿಮೆಗೊಳಿಸಿತ್ತು ಎಂದು ಆರೋಪಿಸಿ ರೈತರು ಭಾರಿ ಪ್ರತಿಭಟನೆ ನಡೆಸಿದ್ದರು.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿಗಳು, ಎಪಿಎಂಸಿ ಯಾರ್ಡ್‌ಗಳ ಹೊರಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಅಥವಾ ಅವರ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಸಹಾಯ ಮಾಡಲಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಮಂಡಿಸಿದ ಮಸೂದೆ ಹೇಳಿದೆ.
ಇದನ್ನೂ ಓದಿ: ಗಗನಕ್ಕೇರಿದ ತರಕಾರಿ ಬೆಲೆ: ರೈತನ ಹೊಲದಲ್ಲಿ ₹2 ಲಕ್ಷ ಮೌಲ್ಯದ ಟೊಮೆಟೊ ಕಳ್ಳತನ
ಎಪಿಎಂಸಿ ಯಾರ್ಡ್‌ಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರು ನಿಯಂತ್ರಣದ ಮೇಲ್ವಿಚಾರಣೆಯ ಕೊರತೆಯಿಂದಾಗಿ ವ್ಯಾಪಾರಿಗಳ ಶೋಷಣೆಗೆ ಗುರಿಯಾಗುತ್ತಿದ್ದಾರೆ, ಜೊತೆಗೆ ಎಪಿಎಂಸಿ ಯಾರ್ಡ್‌ಗಳಲ್ಲಿ ವಹಿವಾಟು ನಡೆಯದಿರುವುದು ವಿವಿಧ ತೆರಿಗೆ ಮೂಲಗಳಿಂದ ಸರ್ಕಾರದ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ರಾಜ್ಯ ಸರ್ಕಾರ ಮಂಡಿಸಿದ ಮಸೂದೆ ಹೇಳಿದೆ.
ವಿಧೇಯಕವು ಎಪಿಎಂಸಿಗಳಲ್ಲಿ ಏಕೀಕೃತ ಮಾರುಕಟ್ಟೆ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಮಾಡಲು ಅವಕಾಶ ನೀಡುತ್ತಿದ್ದು, ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಮತ್ತು ನ್ಯಾಯಯುತ ಬೆಲೆಯನ್ನು ಪಡೆಯಲಿದ್ದಾರೆ ಎಂದು ಸರ್ಕಾರ ಒತ್ತಿ ಹೇಳಿದೆ.
ಎಪಿಎಂಸಿ ತಿದ್ದುಪಡಿಯು 2020 ರಲ್ಲಿ ಮೋದಿ ಸರ್ಕಾರವು ಪರಿಚಯಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳಲ್ಲಿ ಒಂದಾಗಿದೆ. ಇದರ ವಿರುದ್ಧ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಸುಮಾರು ಒಂದು ವರ್ಷಗಳ ಕಾಲ ನಡೆದ ಭಾರಿ ಪ್ರತಿಭಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಕಾನೂನುಗಳನ್ನು ಹಿಂಪಡೆದಿದ್ದರು.
ಇದನ್ನೂ ಓದಿ: ಗ್ರೇಟರ್ ನೋಯ್ಡಾ ರೈತರ ಭೂ ಹೋರಾಟಕ್ಕೆ ಮಹತ್ವಪೂರ್ಣ ಯಶಸ್ಸು
ರಾಜ್ಯದ ರೈತರ ಪ್ರತಿಭಟನೆಯನ್ನು ಗಣನೆಗೆ ತೆಗೆದುಕೊಳ್ಳದೆ 2019 ರಿಂದ 2023 ರವರೆಗೆ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಅದೇ ತಿದ್ದುಪಡಿಯನ್ನು ಜಾರಿಗೆ ತಂದಿತ್ತು.