ವಿಸ್ಟ್ರಾನ್ : ಕಾರ್ಮಿಕರ ಗುಲಾಮಗಿರಿಯ ಹೊಸ ಮಾಡೆಲ್

ಕೋಲಾರದ ನರಸಾಪುರದಲ್ಲಿ ನಡೆದ ಇತ್ತೀಚಿನ ವಿಸ್ಟಾನ್ ಕಾರ್ಖಾನೆಯಲ್ಲಿನ ಹಿಂಸಾಚಾರದ ಪ್ರಕರಣ ದೊಡ್ಡ ಸುದ್ದಿಯಾಗಿದೆ. ಕಂಪನಿಯೇ ಒಪ್ಪಿಕೊಂಡಂತೆ ಕಾರ್ಮಿಕರಿಗೆ ಖಂಡಿತ ಸಮಸ್ಯೆಗಳಿದ್ದವು ಆದರೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತುಂಬಾ ದಾರಿಗಳಿದ್ದವು. ಈ ರೀತಿಯ ಹಿಂಸೆಯ ಅಗತ್ಯವಿರಲಿಲ್ಲ ಎಂದು ಮಾಧ್ಯಮಗಳು, ಆಡಳಿತ, ಸರಕಾರ ಹೇಳುತ್ತಿವೆ. ಆದರೆ ಕಾರ್ಮಿಕರ ವಾಸ್ತವ ಅನುಭವ ಏನು? ವಿಸ್ಟಾನ್ ಮಾತ್ರವಲ್ಲ ಹಲವು ವಿದೇಶೀ ಕಂಪನಿಗಳ ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನುಗಳ ವ್ಯಾಪಕ ಉಲ್ಲಂಘನೆ ಆಗುತ್ತಿದೆ. ಕಾರ್ಖಾನೆ ಆಡಳಿತದ ದಬ್ಬಾಳಿಕೆಯಿಂದ ಕಾರ್ಮಿಕರ ಸಮಸ್ಯೆಗಳನ್ನು ಕೇಳುವವರಿಲ್ಲ. ಕಾರ್ಮಿಕ ಇಲಾಖೆ ಮಧ್ಯಪ್ರವೇಶ ಮಾಡದೆ ಕಣ್ಣುಮುಚ್ಚಿ ಕೂತಿದೆ. ಕಾರ್ಮಿಕ ಸಂಘಗಳಿಗೆ ಯಾವುದೇ ಅವಕಾಶ ಕೊಡಲಾಗಿಲ್ಲ. ವಿಸ್ಟಾನ್ ಮಾತ್ರವಲ್ಲ ಟೊಯೊಟಾ ಕಿರ್ಲೊಸ್ಕರ್, TRM, ಸ್ಟ್ಯಾನ್ ಝೆನ್  1948 ಕಾರ್ಖಾನೆಗಳ ಕಾಯಿದೆಯ  ಸೆಕ್ಷನ್ 66  ಮುಂತಾದ ಹಲವು ವಿದೇಶೀ ಕಂಪನಿಗಳ ಕಾರ್ಖಾನೆಗಳಲ್ಲಿ ಕಾರ್ಮಿಕರ ಗುಲಾಮಗರಿಯ ಹೊಸ ಮಾಡೆಲ್ ಜಾರಿಗೊಳಿಸಲಾಗಿದೆ. ಈ ಮಾಡೆಲ್ ಕಾರ್ಮಿಕರಲ್ಲಿ ಉಂಟು ಮಾಡಿರುವ ದುರ್ಭರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ವಿಸ್ಟಾನ್ ನಲ್ಲಿ ನಡೆದಂತಹ ಆಕ್ರೋಶದ ಸ್ಫೋಟಗಳು ಯಾವಾಗ ಎಲ್ಲಿ ಬೇಕಾದರೂ ಆಗಬಹುದು. ಆದರೂ ರಾಜ್ಯ ಸರ್ಕಾರ ಏಕಮುಖವಾಗಿ ವ್ಯಾಪಾರ ಸುಲಭೀಕರಣ ಹೆಸರಿನಲ್ಲಿ ಸಂಪೂರ್ಣವಾಗಿ ಬಂಡವಾಳದ ಎದುರು ಅದರ ಪರವಾಗಿ ಮಂಡಿಯೂರಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಕಾರ್ಮಿಕ ಇಲಾಖೆಯ ಮೂಲಕ ಕಾರ್ಮಿಕರ ಪರ ಮಧ್ಯಪ್ರವೇಶ ಮತ್ತು ಕಾರ್ಮಿಕ ಸಂಘಗಳಿಗೆ ಅವಕಾಶ ಕೊಡದಿದ್ದರೆ ಆಗುವ ಆಸ್ಫೋಟಗಳಿಗೆ ಅದೇ ಹೊಣೆ.

– ಎಸ್. ವರಲಕ್ಷ್ಮಿ

ವಿಸ್ಟ್ರಾನ್ ಇಂಡಿಯಾ ಕಂಪನಿಯಲ್ಲಿ ಕಾರ್ಮಿಕರ ಅತೀವ ಶೋಷಣೆ ಕಟ್ಟೆ ಒಡೆದದ್ದೇ ಹಿಂಸೆಗೆ ಪ್ರಮುಖ ಕಾರಣ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಸತತವಾಗಿ ಹೇಳಿವೆ. ಆದರೂ ಕೂಡಾ ಜಿಲ್ಲಾ ಮತ್ತು ರಾಜ್ಯದ ಆಡಳಿತ ಈ ಘಟನೆಯನ್ನು ಕೆಲವರ ತಲೆಗೆ ಕಟ್ಟಿ ಕೈ ತೊಳೆದು ಕೊಳ್ಳಲು ಪ್ರಯತ್ನಿಸಿತು. ವಿಸ್ಟ್ರಾನ್ ಕಂಪನಿಯ ಪ್ರಮುಖರು ತನಿಖೆ ನಡೆಸಿ ಕಂಪನಿಯದೇ ತಪ್ಪು ಎಂದು ಹೇಳಿ ಕಾರ್ಮಿಕರ ಬಳಿ ಕ್ಷಮೆ ಯಾಚಿಸಿದೆ. ಮಾತ್ರವಲ್ಲದೇ ಈ ಕಂಪನಿಯ ಉಪಾಧ್ಯಕ್ಷನನ್ನು ವಜಾಗೊಳಿಸಿದೆ.

ಇಲ್ಲಿ ವಿಸ್ಟ್ರಾನ್ ಮಾತ್ರವಲ್ಲದೆ TRMN (ಟೊಕಾಯ್ ರಿಕಾ ಮಿಂದಾ), ಟೊಯೋಟಾ ಕಿರ್ಲೋಸ್ಕರ್, ಸ್ಟ್ಯಾನ್ ಝೆನ್  ಮತ್ತು ವಂಡರ್ ಲಾ ಕಾರ್ಮಿಕರು ಸತತ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವಾಗ ಪ್ರಾಣ ಹಾನಿಯಾಗುವಂತಹ ಅಪಘಾತಗಳು ನಡೆದಾಗ ಅದನ್ನು ಕೇಳಲು ಹೋಗಿದ್ದೇ ನೆಪವಾಗಿದೆ. STTE  ನಲ್ಲಿ 35 ಜನರನ್ನು ಕೆಲಸದಿಂದ ತೆಗೆಯಲಾಗಿದೆ. TRMN ನಲ್ಲಿ ಮೂರು ವರ್ಷಗಳ ಸತತ ಹೋರಾಟ ನಡೆಸಿದ ಪರಿಣಾಮ 66 ಜನ ಕೆಲಸ ಕಳೆದು ಕೊಂಡಿದ್ದಾರೆ. ಟೊಯೋಟಾ ದಲ್ಲಿ  ವಾರಕ್ಕೆ 30 ನಿಮಿಷ ನೈಸರ್ಗಿಕ ಕರೆಗಳಿಗೆ ಸಮಯ ನಿಗದಿ ಅಂದರೆ ದಿನಕ್ಕೆ 4 ನಿಮಿಷ ಮಾತ್ರ. ಅವರು ಬಿಡುವು ಕೊಡುವ ಸಮಯದಲ್ಲಿ ಮಾತ್ರ ಮೂತ್ರ-ಮಲ ವಿಸರ್ಜನೆ ಹೋಗಬೇಕು, ಆಗ ಬರದಿದ್ದರೆ ಮತ್ತೇ ಹೋಗುವ ಆಗಿಲ್ಲ, ಕಣ್ಣು ಮಿಟುಕಿಸಲು ಸ್ವಾತಂತ್ರವಿಲ್ಲ.

ಇಲ್ಲಿ ಕೆಲವರು ಹೇಳುವ ಹಾಗೆ, ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ತುಂಬಾ ದಾರಿಗಳಿದ್ದವು. ಈ ರೀತಿಯ ಹಿಂಸೆ ಬೇಕಿರಲಿಲ್ಲ. ಖಂಡಿತವಾಗಿಯೂ ಹಿಂಸೆಯ ಅಗತ್ಯವಿರಲಿಲ್ಲ. ಆದರೆ ಕಾರ್ಮಿಕರ ವಾಸ್ತವ ಅನುಭವ ಏನು? ಉದಾಹರಣೆಗೆ ಡಾಬಸ್ ಪೇಟೆಯಲ್ಲಿರುವ TRMN ಕಂಪನಿಯಲ್ಲಿ ಸಂಘ ಮಾಡಿಕೊಂಡ ತಪ್ಪಿಗೆ 3 ವರ್ಷ ಕಾರ್ಮಿಕರು ಹೋರಾಟ ಮಾಡಿದರೂ ಕಂಪನಿ ಸಂಘಟನೆಯನ್ನು ಪರಿಗಣಿಸಲಿಲ್ಲ. ಟೊಯೋಟಾದಲ್ಲಿ ಕಾರ್ಮಿಕ ಹೋರಾಟ ಆರಂಭವಾಗಿ (ಡಿ.25, 2020) ಇಂದಿಗೆ 40 ದಿನವಾದರೂ ಆಡಳಿತ ವರ್ಗ ಅವರ ಬೇಡಿಕೆ ಪರಿಗಣಿಸಲಿಲ್ಲ. ರಾಜ್ಯ ಸರ್ಕಾರವು ಕೂಡಾ ಕಾರ್ಮಿಕರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಮಧ್ಯ ಪ್ರವೇಶ ಮಾಡದೇ 3500 ಕಾರ್ಮಿಕರು ಹೋರಾಟದಲ್ಲಿದ್ದಾರೆ. ಹಾಗೇಯೇ ವಂಡರ್ ಲಾ ಕಾರ್ಮಿಕರು 4-5 ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ, ಹಾಗೆಯೇ ಬೆಳಗಾವಿ ಅರವಿಂದ್ ಗಾರ್ಮೆಟ್ಸ್ ಕಂಪನಿಯಲ್ಲಿ ಕೂಡಾ ಇನ್ನೂ ಹಲವಾರು ಕಡೆ ಇಂತಹ ಪರಿಸ್ಥಿತಿಗಳಿವೆ. ಆದರೆ ಕಾರ್ಮಿಕ ಇಲಾಖೆಯ ಪರಿಣಾಮಕಾರಿ ಮಧ್ಯ ಪ್ರವೇಶದ ಕೊರತೆ ಹಾಗೂ ಕಾರ್ಮಿಕರು ಸಂಘ ಕಟ್ಟಿ ಕೊಳ್ಳುವ ಮೂಲ ಹಕ್ಕನ್ನು ಚಲಾಯಿಸಲು ಸಾಧ್ಯವಾಗದಿರುವುದರಿಂದ ಯಾವ ಸಮಸ್ಯೆಯೂ ಬಗೆಹರಿಯುತ್ತಿಲ್ಲ.

ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಕಥೆ

ಈ ಕಂಪನಿಯಲ್ಲಿ 1343 ಖಾಯಂ ಕಾರ್ಮಿಕರು, ೮೪೮೩ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮೂರು ಪಾಳಿಯಿದ್ದರೂ ಕೂಡಾ ವಾರದ ರಜೆ ಇಲ್ಲ. ಕಡ್ಡಾಯವಾಗಿ ಕೆಲಸದ ಅವಧಿ 12 ಗಂಟೆ, 1 ದಿನ ರಜೆ ಹಾಕಿದರೆ 5 ದಿನ ಸಂಬಳ ಕಟ್.

ಕಾರ್ಮಿಕರು (ಮಹಿಳಾ ಕಾರ್ಮಿಕರು ಸೇರಿದಂತೆ) ಬೆಳೆಗ್ಗೆ 3-30 ಕ್ಕೆ ನಿದ್ದೆಯಿಂದ ಎದ್ದು ದಿನ ನಿತ್ಯದ ಕರ್ಮಗಳನ್ನು ಮುಗಿಸಿ 4-30 ಕ್ಕೆ ನಿಗದಿ ಪಡಿಸಿದ ಸ್ಥಳಕ್ಕೆ ಮನೆಯಿಂದ ಬಂದು ಬಸ್ ಹತ್ತಬೇಕು. 5-30 ರಿಂದ 5-50 ಕಾರ್ಖಾನೆಯೊಳಗೆ ಪ್ರವೇಶಿಸಿ ಪಂಚ್ ಮಾಡಿ 6 ಗಂಟೆಗೆ 1 ನಿಮಿಷ ತಡವಾಗದೆ ಲೈನ್ ನಲ್ಲಿರಬೇಕು. ಬಹಳಷ್ಟು ಸಾರಿ ಸಮಯಕ್ಕೆ ಸರಿಯಾಗಿ ಪಂಚ್ ಮಾಡಿದರೂ ಅದು ಮಿಸ್ ಪಂಚ್ ಆದರೆ ಅದಕ್ಕೆ ಕಾರ್ಮಿಕ ಜವಾಬ್ದಾರಿ! ಪಂಚ್ ಮಶೀನ್ ಸಿಸ್ಟಮ್ ನಲ್ಲಿ ಅಪ್ ಡೇಟ್  ಆಗಿಲ್ಲ ಎನ್ನುತ್ತಾರೆ.

ಇದನ್ನು ಓದಿ : ವಿಸ್ಟ್ರಾನ್ ಘಟನೆ : ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಗತಿಪರ ಸಂಘಟನೆಗಳ ಆಗ್ರಹ

ಪ್ರತಿಯೊಬ್ಬರಿಗೂ ಪ್ರತಿ ನಿತ್ಯ ಉತ್ಪಾದನಾ ಗುರಿ (Production target)  ಕೊಡುತ್ತಾರೆ. 1 ಗಂಟೆಗೆ 400 ರಿಂದ 600 UPH (Unit per hour)) ನ್ನು ಪೂರ್ಣ ಮಾಡಲೇಬೇಕು.

24 ಗಂಟೆ ಮಶೀನ್ Running ನಲ್ಲಿರುವಾಗ ಕೆಲವೊಮ್ಮೆ DP (Dual piston) ಮಶೀನ್ ಕೆಟ್ಟು ಹೋಗುತ್ತದೆ. ಆಗ ಕೆಲಸ ನಿಂತು ಹೋಗುತ್ತದೆ. ಮೊಬೈಲ್‌ಗಳ ಅಸೆಂಬ್ಲಿ ಮಾಡುವಾಗ ಮೆಟೀರಿಯಲ್ ಮುಗಿದ ಕೊಡಲೇ ಕೆಲಸದ ಸ್ಥಳಕ್ಕೆ ಅದರ ಪೂರೈಕೆ ಆಗಿರದಿದ್ದರೆ ಕಾರ್ಮಿಕರೇ ಹೋಗಿ ತಗೆದು ಕೊಂಡುಬರಬೇಕು. ಸ್ಥಳಕ್ಕೆ ಮೆಟೀರಿಯಲ್ ಪೂರೈಸಲು ಬೇರೆಯವರು ಇರುತ್ತಾರೆ. ಅದರ ಕುರಿತು ಪ್ರಶ್ನೆ ಮಾಡಿದರೆ IR (Internal Record)) ನ್ನು Raise  ಮಾಡುತ್ತಾರೆ.

ಇದನ್ನು ಓದಿ : ವಿಸ್ಟ್ರಾನ್ ಕಾರ್ಮಿಕರಿಗೆ ಉಚಿತ ಕಾನೂನು : ಲಾಯರ್ಸ್ ಯೂನಿಯನ್ ನಿರ್ಧಾರ

ಒಂದು ದಿನಕ್ಕೆ 2000 ರಿಂದ 3000 ಮೊಬೈಲ್‌ಗಳು  ಉತ್ಪಾದನೆಯಾಗುತ್ತವೆ. ಕೆಲಸ ಮಾಡುವಾಗ ಕಡ್ಡಾಯವಾಗಿ ಗ್ಲೌಸ್ ಧರಿಸಿರಬೇಕು. ಮೊಬೈಲ್‌ಗೆ ಸಣ್ಣ ಸಣ್ಣ ಬಟನ್ ಹಾಕಬೇಕು. ಬೆಂಡ್ ಆಗಿರುವ ಬಟನನ್ನು ಟೂಲ್ಸ್ ನಲ್ಲಿಯೇ ಸರಿಪಡಿಸಿಬೇಕು. ಆದರೆ ಗ್ಲೌಸ್ ಹಾಕಿಕೊಂಡರೆ ಟೂಲ್ಸ್ ನಲ್ಲಿ ಪ್ರಾಯೋಗಿಕವಾಗಿ ಹೆಚ್ಚು ಸಮಯ ಅಥವಾ ಕಷ್ಟ.  ಬೆಂಡ್ ಆದ ಬಟನ್ ಸರಿಮಾಡಿಕೊಂಡರೂ ಮಾಡದಿದ್ದರೂ IR Raise ಮಾಡ್ತಾರೆ.

ಕೆಲಸ ಮಾಡುವಾಗ (ಇಲೆಕ್ಟ್ರಿಕ್ ಅರ್ಥ್ ಖಾತ್ರಿಪಡಿಸಿ ಶಾಕ್ ಹೊಡೆಯದಂತೆ ತಡೆಯುವ) ರಿಸ್ಟ್ ಬ್ಯಾಂಡ್ ಕೈಗೆ ಹಾಕಿಕೊಳ್ಳಬೇಕು ಎನ್ನುತ್ತಾರೆ. ಆದರೆ ರಿಸ್ಟ್ ಬ್ಯಾಂಡ್ ಕೈಗೆ ಕಾಕಿಕೊಂಡರೆ ಕೆಲಸ ಮಾಡುವಾಗ ಕೈಗಳ ಸ್ವತಂತ್ರ ಚಲನೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಕಾಲಿಗೆ ಹಾಕಿ ಕೊಳ್ಳುತ್ತಾರೆ. ಕೆಲವೂಮ್ಮೆ ವೈರ್ ಹರಿದು ಅದರ ಕಾಪರ್ ನಿಂದ ಅದೆಷ್ಟೋ ಬಾರಿ ಶಾಕ್ ಹೊಡೆಯುವುದು ಸಾಮಾನ್ಯವಾಗಿದೆ.

ಒಂದು ಫ್ಲೋರ್ ನಲ್ಲಿ 3 ಲೈನ್ ಇರುತ್ತೆ ನೀರು ಕುಡಿಯಲು. ಕನಿಷ್ಠ 100 ಹೆಜ್ಜೆ ಹೋಗಿ ಕುಡಿಯಬೇಕು. ಕಾರ್ಮಿಕರು ಹೆಚ್ಚು ನೀರು ಕುಡಿಯಲು ಆಗುತ್ತಿರಲ್ಲಿಲ್ಲ. ಏಕೆಂದರೆ  ಶೌಚಾಲಯಕ್ಕೆ ಹೋಗಬೇಕೆಂದರೆ ಲೈನ್ ಲೀಡರ್ ಮತ್ತು ಸೂಪರ್ ವೈಸರ್ ಇಬ್ಬರ ಬಳಿ ಅನುಮತಿ ಪಡೆಯಬೇಕು. ಬಾಗಿಲ ಬಳಿ ಬಜರ್ ಇಟ್ಟಿರುತ್ತಾರೆ. ಶೌಚಾಲಯಕ್ಕೆ ಹೋಗುವ ಕಾರ್ಮಿಕ ಬಜರ್ ಪ್ರೆಸ್ ಮಾಡಬೇಕು. ಸೂಪರ್ ವೈಸರ್ ಬರುವತನಕ ಕಾಯಬೇಕು.

ಅವನು ಬಂದು ಹೋಗಬಹುದು ಎಂದು ಹೇಳಿದರೆ ಮಾತ್ರ ಹೋಗಬೇಕು. ಶೌಚಾಲಯಗಳಿರುವಲ್ಲಿಗೆ ಕೆಲಸದ ಸ್ಥಳದಿಂದ 200 ಹೆಜ್ಜೆಗಳನ್ನು ಹಾಕಿ ಹೋಗಬೇಕು. ಒಂದು ಬಾರಿ ಒಬ್ಬ ಮಹಿಳಾ ಕಾರ್ಮಿಕಳು ಮುಟ್ಟಾಗಿ ಪ್ಯಾಡ್ ನೆಂದು ಹೋಗಿದೆ, ಬದಲಾಯಿಸಿಕೊಳ್ಳಬೇಕು ಎಂದು ಬಜರ್ ಪ್ರಸ್ ಮಾಡಿದಳು.  ಸೂಪರ್ ವೈಸರ್ ಬಂದು ಈಗ ಆಗಲ್ಲ ಸ್ವಲ್ಪ ಸಮಯ ಬಿಟ್ಟು ಹೋಗಿ  ಎಂದ. ಆದರೆ ಆ ಮಹಿಳಾ ಕಾರ್ಮಿಕಳ ಪರಿಸ್ಥಿತಿ ಬೇರೆ ಇತ್ತು. ಪ್ಯಾಡ್ ನೆಂದು ಹೋಗಿ ಬಟ್ಟೆ ನೆಂದು ಹೋಗುತ್ತದೆ (ಅದು ಅವಳಿಗೆ ಮಾತ್ರ ತಾನೆ ಗೊತ್ತಾಗುವುದು) ಎಂದು ಸೂಪರ್ ವೈಸರ್

ಮಾತು ಮೀರಿ ಶೌಚಾಲಯಕ್ಕೆ ಹೋಗಿ ಬಂದಳು ಆಗ ಮೇಲ್ವೀಚಾರಕ ಹೇಳುತ್ತಾನೆ ಇದು ವಿಸ್ಟ್ರಾನ್ ಕಂಪನಿ ಹೇಳಿದ್ದು ಕೇಳಬೇಕು! ಇಲ್ಲಿ ಪ್ರಶ್ನಿಸಬಾರದು! ಜೋರಾಗಿ ಮಾತಾನಾಡಬಾರದು! ವಿಧೇಯತೆ ಮುಖ ಎಂದು.

ಇದನ್ನು ಓದಿ :ವಿಸ್ಟ್ರಾನ್ ಕಾರ್ಖಾನೆಯ ಕಾರ್ಮಿಕ ಶೋಷಣೆಯ ವಿರುದ್ಧ ಡಿ. 19 ರಂದು ಪ್ರತಿಭಟನಾ ಧರಣಿ

ಒಬ್ಬ ಕಾರ್ಮಿಕ ಬೆಳಗಿನ ಜಾವ 3-30 ಗಂಟೆಗೆ ಎದ್ದರೇ ಮನೆ ಸೇರುತ್ತಾ ಇದ್ದಿದ್ದು ರಾತ್ರಿ 8-00 ಘಂಟೆಗೆ ಅಂದರೆ ಒಟ್ಟು ಹದಿನೈದು ವರೆ ಗಂಟೆಗಳು. ಕೆಲಸದ ಅವಧಿ 12 ಗಂಟೆ. 12 ಗಂಟೆಗಳಲ್ಲಿ 30 ನಿಮಿಷ ಊಟ, 15 ನಿಮಿಷ ತಿಂಡಿ, 10 ನಿಮಿಷ ಟೀ, 1948 ರ ಕಾರ್ಖಾನೆಗಳ ಸೆಕ್ಷನ್ ಕಾಯ್ದೆಯ 51 ರ ಅನ್ವಯ 8 ಗಂಟೆಗಳಿಗಿಂತ ಹೆಚ್ಚುವರಿ ದುಡಿಮೆ ಮಾಡಿಸುವಂತಿಲ್ಲ. ಆದರೂ ಈ ಕಂಪನಿಯಲ್ಲಿ 10 ಸಾವಿರ ಕಾರ್ಮಿಕರಿಗೂ 12 ಘಂಟೆ ಕಡ್ಡಾಯ.

ಹಾಗೇಯೇ ಮಹಿಳಾ ಕಾರ್ಮಿಕರನ್ನು ಹೇಗೆ ದುಡಿಸಬೇಕು. ಎಲ್ಲಿ ದುಡಿಸಬೇಕು ಎಂಬುದರ ಬಗ್ಗೆ 1948 ಕಾರ್ಖಾನೆಗಳ ಕಾಯಿದೆಯ  ಸೆಕ್ಷನ್ 66ರ ಉಲ್ಲ್ಲಂಘನೆಯಾಗಿದೆ. ಅವರನ್ನು ದುಡಿಸಲು ಈ ನಿಯಮಗಳನ್ನು ಅನುಸರಿಸಲಾಗಿಲ್ಲ.

ಮನೆಯಿಂದ ಕಾರ್ಖಾನೆಗೆ ಕರೆದೊಯ್ಯಲು ವಾಹನ ಸೌಲಭ್ಯ, ಸಿಸಿಟಿವಿ ಕ್ಯಾಮರಾದೊಂದಿಗೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಇರಬೇಕು.

ಆರೋಗ್ಯಕರವಾದ ಮತ್ತು ಸ್ವಚ್ಛ ಪರಿಸ್ಥಿತಿ ಕೆಲಸದ ಸ್ಥಳದಲ್ಲಿ ಇರಬೇಕು.

ಒಂದೊಂದು ಬ್ಯಾಚ್ ನಲ್ಲಿ ಗರಿಷ್ಟ 10 ಮಹಿಳಾ ಕಾರ್ಮಿಕರು ಮಾತ್ರ ಇರಬಹುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ  ಮಹಿಳಾ ಕಾರ್ಮಿಕರ ಒಟ್ಟು  ಸಂಖ್ಯೆ ಒಟ್ಟಾರೆ ಸಿಬ್ಬಂದಿಯ 2/3 ರಷ್ಟರ ನಿಗದಿತ ಸಂಖ್ಯೆಯನ್ನು ಮೀರುವಂತಿಲ್ಲ.

ರಾತ್ರಿ ಪಾವಳಿಯಲ್ಲಿ ಕಾರ್ಖಾನೆಯ ಮಾಲೀಕರು  ಕನಿಷ್ಠ ಇಬ್ಬರು ಮಹಿಳಾ ಮೇಲ್ವೀಚಾರಕರನ್ನು ನೇಮಿಸಬೇಕು. ಇವರು ವಿಶೇಷ ಕಲ್ಯಾಣ ಸಹಾಯಕರಾಗಿ ಕಾರ್ಯನಿರ್ವಹಿಸಬೇಕು. ಕಾರ್ಖಾನೆಯ  ಪ್ರವೇಶ ದ್ವಾರ ಮತ್ತು ನಿರ್ಗಮ ದ್ವಾರದಲ್ಲಿ ಸೂಕ್ತ ಮಹಿಳಾ ಭದ್ರತೆಯನ್ನು ಒದಗಿಸಬೇಕು.

ಒಂದು ವೇಳೆ ಊಟ, ವಸತಿ  ಸೌಲಭ್ಯವಿದ್ದರೆ ಅದರ ಮೇಲ್ವಿಚಾರಣೆಯನ್ನು ಮಹಿಳೆಯರಿಗೇ ವಹಿಸಬೇಕು.

ಕಾರ್ಖಾನೆಯ ಒಳಾಂಗಣದಲ್ಲಿ ಮಾತ್ರವೇ ಅಲ್ಲದೇ ಘಟಕದ ಸುತ್ತಮುತ್ತಲೂ ಸಹ ರಹಸ್ಯ ಕ್ಯಾಮರಾಗಳನ್ನು ಅಳವಡಿಸಬೇಕು. ಕನಿಷ್ಠ 45 ದಿನಗಳ ಕ್ಯಾಮರಾ ಚಿತ್ರಣವನ್ನು ಸಂಗ್ರಹಿಸಿಬೇಕು.

ಒಂದು ಪಾಳಿಯಲ್ಲಿ ನೂರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಇದ್ದರೆ ತುರ್ತುಪರಿಸ್ಥಿತಿಯನ್ನು ಎದುರಿಸಲು ಪ್ರತ್ಯೇಕ ವಾಹನವನ್ನು ಸಿದ್ಧವಾಗಿಟ್ಟಿರಬೇಕು. ಗಾಯಗೊಂಡವರಿಗೆ, ಲೈಂಗಿಕ ದೌರ್ಜನ್ಯ ಕಿರುಕುಳಕ್ಕೊಳಗಾದವರಿಗೆ ಈ ವಾಹನ ತಕ್ಷಣದ ಪರಿಹಾರ ಒದಗಿಸಲು ಸಜ್ಜಾಗಿರಬೇಕು.

ಮಹಿಳಾ ಕಾರ್ಮಿಕರನ್ನು ಬೆಳಗಿನ ಪಾಳಿಯಿಂದ ರಾತ್ರಿ ಪಾಳಿಗೆ ವರ್ಗಾಯಿಸಿದರೆ ಅಥವಾ ರಾತ್ರಿಯಿಂದ ಬೆಳಗಿನ ಪಾಳಿಗೆ ವರ್ಗಾಯಿಸಿದರೆ, ಆ ಮಹಿಳೆಯರಿಗೆ ಕನಿಷ್ಠ 12 ಗಂಟೆಗಳ ವಿಶ್ರಾಂತಿ ಸಮಯವನ್ನು ಒದಗಿಸಬೇಕು.

ಸೂಕ್ತ  ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು.

ವಿಶ್ರಾಂತಿ ಕೊಠಡಿಗಳನ್ನು ಸಮರ್ಪಕವಾಗಿ ಒದಗಿಸಬೇಕು. ಮಹಿಳಾ ಕಾರ್ಮಿಕರಿಗೆ ಕೊಠಡಿಗಳನ್ನು ಸಮರ್ಪಕವಾಗಿ ಒದಗಿಸಬೇಕು. ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಕ್ಯಾಂಟೀನ್ ಒದಗಿಸಬೇಕು.

ಮಾತ್ರವಲ್ಲದೇ ಈ ಕಾರ್ಮಿಕರ ದೈನಂದಿನ ಜೀವನದ ಹಾಗೂ ಕುಟುಂಬ ಮತ್ತು ಸಮಾಜದ ಮೇಲಾಗುವ ಪರಿಣಾಮಗಳನ್ನು ಚರ್ಚಿಸಬೇಕಾಗಿದೆ.

ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವಾಗ ಅನುಮತಿ ತೆಗೆದುಕೊಂಡಿದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿ ಅವರಿಗೆ ಯಾವುದೇ ರೀತಿಯ ತರಬೇತಿಯನ್ನು ನೀಡದೆ ನೇರವಾಗಿ ಉತ್ಪಾದನೆಯಲ್ಲಿ ತೊಡಗಿಸಿರುವುದನ್ನು ಕಾರ್ಮಿಕ ಇಲಾಖೆ ಗುರ್ತಿಸಿದೆ. ಮಾತ್ರವಲ್ಲದೆ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗ ಪ್ರಮಾಣಪತ್ರ (appiontment order) ಕೊಡದೇ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ವೇತನ ಸಮಸ್ಯೆ

ಕಾರ್ಮಿಕರನ್ನು ಕೆಲಸಕ್ಕೆ ತೆಗೆದು ಕೊಳ್ಳುವಾಗ ತಿಂಗಳಿಗೆ 21 ಸಾವಿರ ವೇತನ ನಿಗಪಡಿಸಿ, ESI, PF ಕಡಿತವಾಗಿ 16,500  ಕೈಗೆ ಸಿಗುತ್ತದೆ. ಎಂದು ನಂಬಿಸಲಾಗಿದೆ. ಆದರೆ ಆ ಮಹಿಳಾ ಕಾರ್ಮಿಕರಿಗೆ ಬಂದದ್ದು 1 ತಿಂಗಳು 4000, ಮತ್ತೊಂದು ತಿಂಗಳು 12,000 ಮತ್ತೊಂದು ತಿಂಗಳ ಸಂಬಳ ಬರಲೇ ಇಲ್ಲ. ಈ ಸಂಬಳ ಬರುವುದು ಆ ತಿಂಗಳ 15, 20 ನೇ ತಾರೀಖಿನ ನಂತರ ಆ ಸಂಬಳವೂ ಪೂರ್ತಿಯಾಗಿ ಬರುವುದಿಲ್ಲ. ಈ ಸಂಬಳವನ್ನು ತೆಗೆದುಕೊಳ್ಳಬೇಕಾದರೆ ಕಾರ್ಖಾನೆಯಲ್ಲಿ ಸುಮಾರು ಕಳೆದ ಮೂರು ತಿಂಗಳಲ್ಲಿ 7 ರಿಂದ 8 ಬಾರಿ ಲೈನ್ ನಲ್ಲಿ ಕೆಲಸವನ್ನು ನಿಲ್ಲಿಸಿದ ನಂತರ ಮುಖ್ಯ ಆಡಳಿತಾಧಿಕಾರಿಗಳು ಬಂದು ನಿಮ್ಮ ಸಂಬಳವನ್ನು ಹಾಕುತ್ತೇವೆ ಎಂದು ಸಮಜಾಯಿಸಿದ ನಂತರ  ಕೆಲಸ ಪ್ರಾರಂಭ ಮಾಡುತ್ತಿದ್ದರ್ರು. ಕಾರ್ಮಿಕರು ಸಂಘವಿಲ್ಲದಿದ್ದರೂ ತಮ್ಮ ಅಸಹನೆಯನ್ನು ತೋರಿಸುತ್ತಿದ್ದರೂ ಕೂಡಾ ಸಂಬಳಗಳನ್ನು ಸರಿಯಾಗಿ ಪಾವತಿಸುತ್ತಿರಲಿಲ್ಲ. ಸಂಬಳ ಕಡಿಮೆ ಯಾಕೆಂದರೆ ಮಿಸ್ ಪಂಚಿಗ್ ಎನ್ನುತ್ತಿದ್ದರು ಅಷ್ಟೆ. ಇಷ್ಟು ದೊಡ್ಡ ಕಂಪನಿಯಲ್ಲಿ ಪಂಚಿಂಗ್ ಮಿಷನ್ ಸಿಸ್ಟಮ್ ಅಪ್ ಡೇಟ್ ಆಗುತ್ತಿರಲ್ಲಿಲ್ಲ. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನವನ್ನು ಯಾರಿಗೂ ಕೊಟ್ಟಿರಲ್ಲಿಲ್ಲ. ಓವರ್ ಟೈಂ ಹಣ ಕೇಳಿದರೆ ಗುತ್ತಿಗೆದಾರರ ಉತ್ತರ ತಿಂಗಳಿಗೆ ಒಂದು ದಿನ ನೀವು ಉಚಿತವಾಗಿ ರಜೆ ಪಡೆಯಬಹುದು ಎಂದು. ಆ ರಜೆಯನ್ನು ಯಾರಿಗೂ ಕೊಡುತ್ತಿರಲ್ಲಿಲ್ಲ. 1948 ಕನಿಷ್ಠ ವೇತನ ಕಾಯ್ದೆ ಮತ್ತು ಈ ಕಾಯ್ದೆ ಸೆಕ್ಷನ್ 59 ರ ಪ್ರಕಾರ ಹೆಚ್ಚವರಿ ಅವಧಿಗೆ ಹೆಚ್ಚುವರಿ ವೇತನ ನೀಡಬೇಕು.  ಯಾವುದೇ ವ್ಯಕ್ತಿ ತನ್ನ ಶ್ರಮ ಅಥವಾ ಸೇವೆಯನ್ನು ವೇತನ ಪಡೆಯುವ ಉದ್ದೇಶದಿಂದ ಮತ್ತೊಬ್ಬರಿಗೆ ನೀಡಿ, ಕನಿಷ್ಟ ವೇತನಕ್ಕಿಂತಲೂ ಕಡಿಮೆ ದರದಲ್ಲಿ ಮಂಜೂರಿ ಪಡೆದಿದ್ದರೆ, ಅದು ಸಂವಿಧಾನದ  ವಿಧಿ 23 ರ ಅನ್ವಯ ಬಲಾತ್ಕಾರದ ದುಡಿಮೆ ಎನಿಸಿಕೊಳ್ಳ್ಳುತ್ತದೆ.

ಇನ್ನು ಊಟದ ವಿಷಯಕ್ಕೆ ಬಂದರೆ ಕ್ಯಾಂಟೀನ್ ನಲ್ಲಿ ತುಂಬಿರುವ  ಕಸದ ಡಬ್ಬಿಗಳನ್ನು ನೋಡಿದರೆ ಗೊತ್ತಾಗುತ್ತದೆ ಎನ್ನುತ್ತಾರೆ. ಕಾರ್ಮಿಕರಿಗೆ ಮೊದಲು ಬೆಳಗ್ಗೆ ಟೀ ಬಿಸ್ಕೆಟ್ ಕೊಡುತ್ತಿದ್ದರು. ನಂತರ ಬಿಸ್ಕೆಟ್  ನಿಲ್ಲಿಸಿದರು. ಪ್ಲೇಟ್ ಒರೆಸಲು ಟಿಶ್ಯೂ ಪೇಪರ್ ಕೊಡುತ್ತಿದ್ದರು ನಂತರ ಅದನ್ನು ನಿಲ್ಲಿಸಿದರು. 15 ನಿಮಿಷದಲ್ಲಿ  ಟಿಫಿನ್, ಟೀ, 10 ನಿಮಿಷದಲ್ಲಿ ಟೀ ಕುಡಿಯಬೇಕೆಂದರೆ ಸಾವಿರಾರು ಕಾರ್ಮಿಕರು ಸ್ಥಳದಿಂದ ಕ್ಯಾಂಟೀನ್‌ಗೆ  ಹೆಚ್ಚು ದೂರ ನಡೆಯಬೇಕು. ಕ್ಯೂ ನಿಲ್ಲಬೇಕು, ನಿಗದಿತ ಸಮಯಕ್ಕೆ ವಾಪಸ್ಸು ಬರಬೇಕಾದ್ದರಿಂದ ಹಲವಾರು ಕಾರ್ಮಿಕರು ಟೀ ಕುಡಿಯಲು ಹೋಗುತ್ತಲೇ ಇರಲಿಲ್ಲ. ಅಂದರೆ ಬೆಳಿಗ್ಗೆ 3-30 ರಿಂದ ರಾತ್ರಿ 8 ರವರೆಗೆ ಸಮಯಕ್ಕೆ ಮತ್ತು ಅಗತ್ಯಕ್ಕೆ ತಕ್ಕ ನೀರು ಆಹಾರ ಸಿಕ್ಕುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕಿದೆ.

ಬಹುರಾಷ್ಟ್ರೀಯ ಕಂಪನಿಗಳು ವಿದೇಶಿ ಕಂಪನಿಗಳು ಮತ್ತು ದೊಡ್ಡ ಕಾರ್ಖಾನೆಗಳು ಇಂದು ಹಿಂದುಳಿದ ಪ್ರದೇಶಗಳಿಗೆ ಹೋಗುವುದು ಕೇವಲ ಅಲ್ಲಿಯ ಜನರಿಗೆ ಉದ್ಯೋಗ  ಕೊಡವುದು ಒಂದು ಅಂಶವಷ್ಟೇ. ಮುಖ್ಯವಾದ ಅವರ ಗುರಿ ಏನೆಂದರೆ ಕಡಿಮೆ ಬೆಲೆಗೆ ಭೂಮಿ, ಕಡಿಮೆ  ಕೂಲಿಯಿರುವುದು. ಅಂದರೆ ಕಡಿಮೆ ಖರ್ಚಿನಲ್ಲಿ ವಸ್ತುಗಳ ಉತ್ಪಾದನೆ ಮಾಡುವುದು. ಬಂಡವಾಳಗಾರರು ವಸ್ತುವಿನ ಉತ್ಪಾದನೆಗೆ ಬೇಕಾಗುವ ಕಚ್ಛಾ ಸಾiಗ್ರಿಗಳ ಬೆಲೆ ಹೆಚ್ಚಾಗಿರುವುದನ್ನು ಪರಿಗಣಿಸುವುದಿಲ್ಲ. ಬದಲಾಗಿ ಕಾಮಿಕರ ಮೇಲಿನ ವೆಚ್ಚವನ್ನು ಮಾತ್ರ ಹೆಚ್ಚು ಪರಿಗಣಿಸಲಾಗುತ್ತದೆ.

ಅದನ್ನು ಪ್ರಶ್ನಿಸಲು ಹೋದವರನ್ನು ನಿರ್ದಯವಾಗಿ ನಡೆಸಿಕೊಳ್ಳಲಾಗುತ್ತದೆ. ಅದಕ್ಕೆ ಸರಕಾರ ಬಂಡವಾಳಗಾರರ ಜೊತೆ ನಿಲ್ಲುತ್ತದೆಯೇ ಹೊರತು ಓಟು ಹಾಕಿದವರ ಪರ ನಿಲ್ಲುವುದಿಲ್ಲ ಎಂಬುದು ವಿಸ್ರ್ಟನ್ ನಲ್ಲಿ ನಡೆಯುತ್ತಿರುವ ಘಟನೆಗಳಿಂದ ಗೊತ್ತಾಗುತ್ತದೆ. ವಿಸ್ಟ್ರಾನ್ ಕಂಪನಿ ಮಾಲೀಕರು ನಮ್ಮ ಕಂಪನಿಯಿಂದ ತಪ್ಪಾಗಿದೆ, ಕಾರ್ಮಿಕರ ಬಳಿ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದ್ದಾರೆ. ಆದರೂ ಕೂಡಾ ಅಲ್ಲಿಯ ಸಂಸದರು, ರಾಜ್ಯ ಮತ್ತು ಕೇಂದ್ರ ಸರ್ಕಾರ ಹಿಂಸೆ ಮಾಡಿದವರನ್ನು ಬಂಧಿಸುತ್ತೇವೆ, ಬಿಡುವುದಿಲ್ಲ ಎಂದು ಗುಟುರು ಹಾಕುತ್ತಿವೆ. ಕೋಲಾರ ಜಿಲ್ಲೆಯ ನೂರಾರು ಯುವಕ ಯುವತಿಯರನ್ನು ಬಂಧನ ಮಾಡಿ ಜೈಲಿಗೆ ಕಳುಹಿಸುತ್ತಲೇ ಇವೆ.

ವಿಸ್ಟಾನ್ ಮಾತ್ರವಲ್ಲ ಹಲವು ವಿದೇಶೀ ಕಂಪನಿಗಳ ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನುಗಳ ವ್ಯಾಪಕ ಉಲ್ಲಂಘನೆ ಆಗುತ್ತಿದೆ. ಕಾರ್ಖಾನೆ ಆಡಳಿತದ ದಬ್ಬಾಳಿಕೆಯಿಂದ ಕಾರ್ಮಿಕರ ಸಮಸ್ಯೆಗಳನ್ನು ಕೇಳುವವರಿಲ್ಲ. ಕಾರ್ಮಿಕ ಇಲಾಖೆ ಮಧ್ಯಪ್ರವೇಶ ಮಾಡದೆ ಕಣ್ಣುಮುಚ್ಚಿ ಕೂತಿದೆ. ಕಾರ್ಮಿಕ ಸಂಘಗಳಿಗೆ ಯಾವುದೇ ಅವಕಾಶ ಕೊಡಲಾಗಿಲ್ಲ. ವಿಸ್ಟಾನ್ ಮಾತ್ರವಲ್ಲ ಟೊಯೊಟಾ ಕಿರ್ಲೊಸ್ಕರ್, ಖಿಖಒ, ಸ್ಟ್ಯಾನ್ ಝೆನ್  ಮುಂತಾದ ಹಲವು ವಿದೇಶೀ ಕಂಪನಿಗಳ ಕಾರ್ಖಾನೆಗಳಲ್ಲಿ   ಕಾರ್ಮಿಕರ ಗುಲಾಮಗರಿಯ ಹೊಸ ಮಾಡೆಲ್ ಜಾರಿಗೊಳಿಸಲಾಗಿದೆ. ಈ ಮಾಡೆಲ್ ಕಾರ್ಮಿಕರಲ್ಲಿ ಉಂಟು ಮಾಡಿರುವ ದುರ್ಭರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ವಿಸ್ಟಾನ್ ನಲ್ಲಿ ನಡೆದಂತಹ ಆಕ್ರೋಶದ ಸ್ಫೋಟಗಳು ಯಾವಾಗ ಎಲ್ಲಿ ಬೇಕಾದರೂ ಆಗಬಹುದು. ಆದರೂ ರಾಜ್ಯ ಸರ್ಕಾರ ಏಕಮುಖವಾಗಿ ವ್ಯಾಪಾರ ಸುಲಭೀಕರಣ ಹೆಸರಿನಲ್ಲಿ ಸಂಪೂರ್ಣವಾಗಿ ಬಂಡವಾಳದ ಎದುರು ಅದರ ಪರವಾಗಿ ಮಂಡಿಯೂರಿದೆ. ಬಂಡವಾಳದ ಏಕ ಚಲನೆಯಿಂದ ಏನಾದರೂ ಸಾಧ್ಯವೇ? ಶ್ರಮ ಶಕ್ತಿ ಇಲ್ಲದಿದ್ದರೆ ಬಂಡವಾಳ ಕೇವಲ ಕಾಗದ ಮಾತ್ರ ಎಂಬುದರ ವೈಜ್ಞಾನಿಕ ಸತ್ಯವನ್ನು ಈ ಸರಕಾರಗಳು ಅರ್ಥ ಮಾಡಿಕೊಳ್ಳುತ್ತವೆಯೇ? ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಕಾರ್ಮಿಕ ಇಲಾಖೆಯ ಮೂಲಕ ಕಾರ್ಮಿಕರ ಪರ ಮಧ್ಯಪ್ರವೇಶ ಮತ್ತು ಕಾರ್ಮಿಕ ಸಂಘಗಳಿಗೆ ಅವಕಾಶ ಕೊಡದಿದ್ದರೆ ಆಗುವ ಆಸ್ಫೋಟಗಳಿಗೆ ಅದೇ ಹೊಣೆ ಹೊರಬೇಕು.

 

 

 

Donate Janashakthi Media

Leave a Reply

Your email address will not be published. Required fields are marked *