ಬೆಂಗಳೂರು: ಸಾರ್ವಜನಿಕ ಶಿಕ್ಷಣ ತೀವ್ರತರದಲ್ಲಿ ಕುಸಿಯುತ್ತಿದೆ. ಹಾಗೂ ಸಾರ್ವಜನಿಕ ಶಿಕ್ಷಣ ವಲಯದಲ್ಲಿ ಭ್ರಷ್ಟಾಚಾರ ಕೇಳಿ ಬರುವುದಲ್ಲದೆ, ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಹಾಗೆ ವಿಶ್ವವಿದ್ಯಾಲಯಗಳ ಮೌಲ್ಯಗಳ ಕುಸಿತ್ತಿರುವ ಸಂದರ್ಭ ಎದುರಾಗಿದೆ ಹಾಗಾಗಿ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು, ರಾಜ್ಯ ಸರ್ಕಾರದ ಶಿಕ್ಷಣ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯದ ವಿರುದ್ಧ ಎಸ್.ಎಫ್.ಐ ಕರ್ನಾಟಕ ರಾಜ್ಯ ಸಮಿತಿ ಡಿಸೆಂಬರ್ 12 ರಂದು ಬೆಳಗಾವಿ ಚಳಿಗಾಲದ ಅಧಿವೇಶನ ಚಲೋ ಕೈಗೊಂಡಿದೆ ಎಂದು ಎಸ್.ಎಫ್.ಐ ರಾಜ್ಯ ಅಧ್ಯಕ್ಷ ಶಿವಪ್ಪ ತಿಳಿಸಿದ್ದಾರೆ. ನಿರ್ಲಕ್ಷ್ಯ
ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಹಲವು ಆಯೋಗಗಳನ್ನು ರಚನೆ ಮಾಡಲಾಯಿತು. ಈ ಆಯೋಗಗಳು ಹಲವು ಶಿಫಾರಸ್ಸುಗಳನ್ನು ಮಾಡಿವೆ. ಆಯೋಗಗಳನ್ನು ರಚನೆ ಮಾಡುವ ಸರ್ಕಾರಗಳೇ ಅದರ ಶಿಫಾರಸ್ಸುಗಳನ್ನು ಜಾರಿ ಮಾಡದೇ ತಮಗೆ ಬೇಕಾದ ರೀತಿಯಲ್ಲಿ ಶಿಕ್ಷಣವನ್ನು ರೂಪಿಸಿದ್ದರಿಂದ ಇಂದು ಶಿಕ್ಷಣ ವ್ಯವಸ್ಥೆಯನ್ನು ಅಪಾಯಕ್ಕೆ ತಳ್ಳಲಾಗುತ್ತದೆ. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೇಶದ ಸಾಕ್ಷರತಾ ಪ್ರಮಾಣ ಎನ್.ಎಸ್.ಎ ಪ್ರಕಾರ ಶೇ.79ರಷ್ಟು ದಾಟಲಾಗಿಲ್ಲ. ಆದರೆ ಭಾರತದ ಸಂವಿಧಾನ ಅನುಚ್ಚೇದ 21(ಎ) ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎನ್ನುವುದರ ಪ್ರಕಾರ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ರೂಪಿಸದೆ, ಎಲ್ಲಾ ಸರ್ಕಾರಗಳು ಶಿಕ್ಷಣವನ್ನು ಮಾರಾಟದ ಸರಕಾಗಿಸಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಲೇ ಬಂದಿವೆ. ನಿರ್ಲಕ್ಷ್ಯ
ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕಾಲ ಕ್ರಮೇಣ ಖಾಸಗೀಕರಣ ದಿಂದ ಕಾರ್ಪೊರೇಟ್ ವ್ಯವಸ್ಥೆಯಡೆಗೆ ಹೋಗುತ್ತಿರುವುದು ಆತಂಕದ ಸಂಗತಿ. ದೇಶದ ಪ್ರತಿಯೊಬ್ಬ ಪ್ರಜೆಯಾದ ನಾವು ಖರ್ಚು ಮಾಡುವ 1 ರೂನಲ್ಲಿ ಶೇ.0.28 ಪೈಸೆಯನ್ನು ತೆರಿಗೆ ನೀಡುತ್ತೇವೆ. ಹಾಗೂ ಶೇ.೪ರಷ್ಟು ಹೆಚ್ಚುವರಿಯಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಸೆಸ್ ಪಾವತಿಮಾಡುತ್ತೇವೆ. ಆದರೂ ಸರ್ಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣಕ್ಕೆ 2024-25ನೇ ಸಾಲಿನಲ್ಲಿ ಕೇವಲ ಶೇ.10.8ರಷ್ಟು(37,043 ಕೋಟಿ) ಮಾತ್ರ ನೀಡಿದೆ. ಇಂದಿನ ರಾಜ್ಯ ಸರ್ಕಾರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿಫಲವಾಗಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಿರ್ಲಕ್ಷ್ಯ
ಇದನ್ನೂ ಓದಿ: ತುಮಕೂರು | ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಲ್ಲ – ಮಾಜಿ ಸಚಿವ ಕೆ.ಎನ್.ರಾಜಣ್ಣ
ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲಾ/ಕಾಲೇಜುಗಳಿಗೆ ಸರಿಯಾದ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಶೌಚಾಲಯ ನಿರ್ಮಾಣ, ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕ ವಿತರಣೆಯಾಗುತ್ತಿಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದನ್ನೆಲ್ಲ ಕಡೆಗಣಿಸಿ ಪಂಚಾಯತಿಗೊಂದು ಕೆ.ಪಿ.ಎಸ್ ಶಾಲೆಗಳನ್ನು ತೆರೆಯಲಾಗುತ್ತಿದೆ. ನಿರ್ಲಕ್ಷ್ಯ
5 ಕಿ.ಮೀ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕಡಿಮೆ ದಾಖಲಾತಿ ನೆಪಹೇಳಿ ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಶೇ.62ರಷ್ಟು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಶಾಲಾ ಶುಲ್ಕ, ಡೊನೆಷನ್, ಕೋಚಿಂಗ್ ಹಾಗೂ ವಿಶೇಷ ತರಗತಿಗಳ ಹೆಸರಿನಲ್ಲಿ ಪೋಷಕರ ಬಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಲಾಗುತ್ತಿದೆ. ಇದರ ನಡುವೆ ಸರ್ಕಾರವೇ ಮಧ್ಯವರ್ತಿಯಾಗಿ ಖಾಸಗಿ ಸಂಸ್ಥೆಗಳಿಗೆ ರತ್ನಗಂಬಳಿಯಾಸಿದಂತ್ತಿದೆ. ಆದರೆ ಖಾಸಗೀಕರಣವನ್ನು ನಿಯಂತ್ರಿಸದೆ ಸರ್ಕಾರ ತನ್ನ ಲಾಭಕ್ಕಾಗಿ ಲಾಬಿಗೆ ಮುಂದಾಗಿರುವುದು ಖೇಧಕರ ಸಂಗತಿ ಎಂದಿದ್ದಾರೆ.
ರಾಜ್ಯದ ಸರ್ಕಾರಿ ಪ್ರಾಥಮಿಕ/ಮಾಧ್ಯಮಿಕ ಶಾಲೆಗಳಲ್ಲಿ ಸುಮಾರು 62,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಹಾಗೂ ಪದವಿ ಪೂರ್ವ(ಪಿ.ಯು) ಮತ್ತು ಪದವಿ(ಡಿಗ್ರಿ) ಕಾಲೇಜುಗಳಲ್ಲಿ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕರು/ಪ್ರಾಧ್ಯಾಪಕರ ಹುದ್ದೆಗಳು ಸೇರಿದಂತೆ ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಆದರೂ ಸರ್ಕಾರ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಯಾವುದನ್ನೂ ಭರ್ತಿ ಮಾಡಿಕೊಳ್ಳಲಾಗಿಲ್ಲ. ಆದರೂ ಸರ್ಕಾರ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡದೇ ಇರುವುದರಿಂದ ನಿವೃತ್ತಿ ನೌಕರರಿಗೆ ಪಿಂಚಣಿ ನೀಡಲಾಗದ ಸ್ಥಿತಿಗೆ ಬಂದು ನಿಂತಿವೆ ಎಂದು ದೂರಿದ್ದಾರೆ. ನಿರ್ಲಕ್ಷ್ಯ
ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವರಾಜ್ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ ಅಂಕಪಟ್ಟಿ ಶುಲ್ಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ಲೂಟಿ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಗಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳ ಪ್ರಮಾಣ ಕುಸುಯುತ್ತಿವೆ ಮತ್ತು ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಸರಿಯಾಗಿ ಫೆಲೋಶಿಪ್ ನೀಡಲಾಗುತ್ತಿಲ್ಲ. ನಿರ್ಲಕ್ಷ್ಯ
ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಪ್ರತಿ ವಿದ್ಯಾರ್ಥಿಗೆ ಆಹಾರ ಭತ್ಯೆಯನ್ನು 1750 ರಿಂದ 1850 ರೂ. ನಿಗದಿ ಮಾಡಲಾಗಿದೆ. ಪ್ರಸ್ತುತ ಬೆಲೆ ಏರಿಕೆಯಿಂದ ವಿದ್ಯಾರ್ಥಿಗಳಿಗೆ ಬೇಕಾಗಿರುವ ಪೌಷ್ಠಿಕಾಂಶ ಸಿಗದೇ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಭದ್ರತೆ ಇಲ್ಲದಂತಾಗಿದೆ. ಹಾಗೂ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದರೆ 2.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ನೀಡಲಾಗುತ್ತಿದೆ. 7.5ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯುತ್ತಿಲ್ಲ. ಆದರಿಂದ ಹಾಸ್ಟೆಲ್ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಒದಗಿಸಲು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಹೊಸ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಬೇಕಿದೆ. ನಿರ್ಲಕ್ಷ್ಯ
ರಾಜ್ಯದಲ್ಲಿರುವ ಹಳ್ಳಿಗಳ ವಿದ್ಯಾರ್ಥಿಗಳಿಗೆ ಮೇಡಿಕಲ್, ಕಾನೂನು ಹಾಗೂ ಎಂಜಿನಿಯರಿಂಗ್ ಶಿಕ್ಷಣ ಕೈಗೆಟುಕುತ್ತಿಲ್ಲ. ಇದಕ್ಕಾಗಿ ಹೊರ ರಾಜ್ಯ ಮತ್ತು ವಿದೇಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೇ ಲಾಭವಾಗಿಸಿಕೊಂಡ ಖಾಸಗಿ ವಿದ್ಯಾಸಂಸ್ಥೆಗಳು ಲಕ್ಷ ಗಟ್ಟಲೆ ಡೊನೆಷನ್ ವಸೂಲಿ ಮಾಡಲು ಮುಂದಾಗಿವೆ. ಬಡ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗೂ ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಲಕ್ಷ ಗಟ್ಟಲೆ ಸಾಲ ಮಾಡಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಸ್ಥಿತಿ ಇದ್ದರೂ, ಉದ್ಯೋಗ ಸಿಗದೇ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಯುವಜನರ ರಕ್ಷಣೆಗಾಗಿ ಕಾಯಿದೆ ಜಾರಿಗೆ ತರಬೇಕು ಹಾಗೂ ಉದ್ಯೋಗ ಸೃಷ್ಟಿಸಿ ಭದ್ರತೆಯನ್ನು ನೀಡಲು ಒತ್ತಾಯಿಸಿ ಎಸ್.ಎಫ್.ಐ ಕರ್ನಾಟಕ ರಾಜ್ಯ ಸಮಿತಿ 12ನೇ ಡಿಸೆಬರ್ 2025 ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಬಸವರಾಜ ತಿಳಿಸಿದ್ದಾರೆ.
ಇದನ್ನೂ ನೋಡಿ: ಬೆಂಗಳೂರು ಸುರಂಗ ಮಾರ್ಗ ಶ್ರೀಮಂತರಿಗೆ ಮಾತ್ರ ಪ್ರಯೋಜನವೆಂಬ ವಾದದ ಸುತ್ತ… Janashakthi Media
