ನವದೆಹಲಿ: ವರ್ಷದ ಕೊನೆ ಹಾಗೂ ಚಳಿಗಾಲದ ಸಂಸತ್ ಅಧಿವೇಶನವು ನಿಗದಿಪಡಿಸಿರುವ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅವಧಿಗಿಂತ ಮುಂಚಿತವಾಗಿ ಅಧಿವೇಶನ ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ.
ಈ ಬಗ್ಗೆ ಅಧಿಕೃತ ಮೂಲಗಳು ದೃಢಪಡಿಸಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭಾ ಕಾರ್ಯ ಕಲಾಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 7 ರಿಂದ ಆರಂಭವಾಗಿರುವ ಸಂಸತ್ ಅಧಿವೇಶನ, ಡಿಸೆಂಬರ್ 29 ರಂದು ಮುಗಿಯಬೇಕಿತ್ತು.
ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ ಕೆಲವು ಟೀಕೆಗಳು ವಿವಾದವನ್ನು ಎಬ್ಬಿಸಿದ್ದು, ಬಿಜೆಪಿ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಸೋಮವಾರ ರಾಜಸ್ಥಾನದ ಭಾರತ ಐಕ್ಯತಾ ಯಾತ್ರೆಯ ಸಾರ್ವಜನಿಕ ಸಭೆಯೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ, ‘ಮನೆಯಲ್ಲಿರುವ ನಿಮ್ಮ ನಾಯಿಯೂ ದೇಶಕ್ಕಾಗಿ ಸತ್ತಿದೆಯೇ..?” ಎಂದು ಬಿಜೆಪಿಯನ್ನು ಟೀಕಿಸಿದ್ದರು. ಈ ಹೇಳಿಕೆ ಖಂಡಿಸಿರುವ ಬಿಜೆಪಿಯು ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿಯಿತು.