ಇಸ್ರೇಲ್ ಯುದ್ಧವನ್ನು ಇನ್ನಷ್ಟು ವ್ಯಾಪಕಗೊಳಿಸುವುದೇ?

– ವಸಂತರಾಜ ಎನ್.ಕೆ

ಕಳೆದ ವಾರಾಂತ್ಯದಲ್ಲಿ ಇಸ್ರೇಲಿನ ಒಳಗಿನ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು. ಇರಾನ್ ನಡೆಸಿದ ನೂರಾರು ಡ್ರೋನುಗಳ ಮತ್ತು ಕ್ಷಿಪಣಿಗಳ ಅಲೆಯ ಭಾರೀ ದಾಳಿಯ ನಂತರ,  ಇಸ್ರೇಲಿ ಸರ್ಕಾರ ಮತ್ತು ಮಿಲಿಟರಿಯ ಉನ್ನತ ನಾಯಕರು ಇರಾನ್ ಮೇಲೆ ಪ್ರತಿದಾಳಿಯನ್ನು ಪ್ರಾರಂಭಿಸಬೇಕೆ ಅಥವಾ ಬೇಡವೇ ಎಂದು ಚರ್ಚಿಸುತ್ತಿದ್ದಾರೆ.   ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ತೀವ್ರ ಆತಂಕ, ಹರಡಿದೆ, ಪ್ರಶ್ನೆಗಳು ಎದ್ದಿವೆ?. ಇಸ್ರೇಲ್ ಯುದ್ಧವನ್ನು ಇನ್ನಷ್ಟು ವ್ಯಾಪಕಗೊಳಿಸುವುದೇ? ವ್ಯಾಪಕಗೊಳಿಸಿದರೆ  ಅದರ ಪರಿಣಾಮಗಳೇನು?

ಅಂತರರಾಷ್ಟ್ರೀಯ ಮಾಧ್ಯಮಗಳು ಹರಡುತ್ತಿರುವ ಇರಾನ್ ಆಕ್ರಮಣಕಾರಿ ಎಂಬ ಕತೆ ಅಸಂಬದ್ಧ ಮತ್ತು ವಾಸ್ತವಕ್ಕೆ ವಿರುದ್ಧವಾಗಿದೆ. ನಿಜವಾಗಿಯೂ ಇದು ಏಪ್ರಿಲ್ 1 ರಂದು ಸಿರಿಯಾದ ಡಮಾಸ್ಕಸ್ ನಲ್ಲಿರುವ ಇರಾನಿ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಮಾಡಿದ ಬಾಂಬ್ ದಾಳಿಗೆ ಪ್ರತಿದಾಳಿಯಾಗಿತ್ತು. ಎಫ್ರಿಲ್ 1ರ ದಾಳಿ ಇರಾನಿನ ಉನ್ನತ ಮಿಲಿಟರಿ ನಾಯಕರು ಮತ್ತು ಇತರ ಸಿಬ್ಬಂದಿ ಸೇರಿದಂತೆ 12 ಜನರನ್ನು ಹತ್ಯೆ ಮಾಡಿದ ಇಸ್ರೇಲಿನ ಲಜ್ಜೆಗೆಟ್ಟ ಯುದ್ಧದ ಕೃತ್ಯವಾಗಿತ್ತು. ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ, ರಾಯಭಾರ ಕಚೇರಿಯನ್ನು ನಿರ್ವಹಿಸುವ ಆಯಾ ದೇಶದ ಸಾರ್ವಭೌಮ ಪ್ರದೇಶವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಇದು ಇಸ್ರೇಲ್ ಇರಾನ್ ನೆಲದ ಮೇಲೆ ಬಾಂಬ್ ದಾಳಿ ನಡೆಸಿದಂತೆಯೇ.  ಇರಾನ್ ಸ್ವ-ರಕ್ಷಣೆಯ ಭಾಗವಾಗಿ ಅದಕ್ಕೆ  ಪ್ರತಿಕ್ರಿಯಿಸಲು ಎಲ್ಲಾ ಕಾನೂನು ಮತ್ತು ನೈತಿಕ ಹಕ್ಕನ್ನು ಹೊಂದಿತ್ತು ಮತ್ತು ಅದೇ ಪರಿಸ್ಥಿತಿಯಲ್ಲಿ ಯಾವುದೇ ಇತರ ದೇಶಗಳಂತೆ ವರ್ತಿಸಿತು.

ಮುಂದೆ ಏನಾಗುತ್ತದೆ ಎಂದು ಊಹಿಸಲು ಸಹಜವಾಗಿ ಅಸಾಧ್ಯ. ಆದರೆ ಗಾಜಾನಲ್ಲಿ ಇಸ್ರೇಲಿನ ನರಮೇಧವನ್ನು ವಿರೋಧಿಸುವವರು ಮತ್ತು ಶಾಂತಿಪ್ರಿಯರು ಇನ್ನೊಂದು ವಿನಾಶಕಾರಿ ಪ್ರಾದೇಶಿಕ ಯುದ್ಧವು ಭುಗಿಲೆಳುವುದನ್ನು ಬಯಸುವುದಿಲ್ಲ, ಇದಕ್ಕಾಗಿ ಇದರಲ್ಲಿ ಭಾಗವಹಿಸುತ್ತಿರುವ ಮೂರು ಪ್ರಮುಖ ಪಕ್ಷಗಳು ಈ ಬೆಳವಣಿಗೆಯನ್ನು ಹೇಗೆ ನೋಡುತ್ತವೆ ಎಂದು ಅರ್ಥ ಮಾಡಿಕೊಳ್ಳುವುದು ಅಗತ್ಯ.

ಈ ಲೇಖನವನ್ನು ಏಪ್ರಿಲ್ 18 ಸಂಜೆ  ಅಂದರೆ ಇಸ್ರೇಲ್ ಪ್ರತೀಕಾರ ದಾಳಿ ಮಾಡುವ ಮೊದಲು ಬರೆಯಲಾಗಿತ್ತು. ಆ ನಂತರ ಇಸ್ರೇಲ್  ಕೇಂದ್ರ ಭಾಗದಲ್ಲಿರುವ ಇರಾನಿನ ಪಟ್ಟಣ ಅಫ್ಸಾನ್ ಮೇಲೆ ಸೀಮಿತ ದಾಳಿ ನಡೆಸಿದೆ. ದಾಳಿ ಮಾಡಿದ ಕೆಲವು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದ್ದು, ಇದಕ್ಕೆ ಪ್ರತೀಕಾರ ದಾಳಿ ನಡಸುವುದಿಲ್ಲವೆಂದು ಇರಾನ್ ಹೇಳಿದೆ. ಇದಕ್ಕೆ ಮೊದಲು ಇಸ್ರೇಲಿ ಯುದ್ಧ ಸಂಪುಟ ಪ್ರಬಲ  ದಾಳಿ ನಡೆಸಲು ಎರಡು ಬಾರಿ ನಿರ್ಣಯ ಮಾಡಿ ಜಾರಿಯನ್ನು ಮುಂದಕ್ಕೆ ಹಾಕಿತ್ತು ಎನ್ನಲಾಗಿದೆ. ಸಂಪುಟದಲ್ಲೇ ತೀವ್ರ ಭಿನ್ನಾಭಿಪ್ರಾಯ ಮತ್ತು ಯು.ಎಸ್ ಒತ್ತಡ ಸೀಮಿತ ದಾಳಿಯ ನಿರ್ಣಯಕ್ಕೆ ಕಾರಣವೆಂದು ಹೇಳಲಾಗಿದೆ.   ದಾಳಿ ನಡೆದ ಅಫ್ಸಾನ್ ವಿಮಾನ ಪಡೆಗಳ ಕೇಂದ್ರ, ಅಣು ಸ್ಥಾವರ ಮತ್ತು ಶಸ್ತ್ರಾಸ್ತ್ರ ಕೇಂದ್ರಗಳಿಗೆ ಹತ್ತಿರವಿದ್ದು ತಾನು ಇವನ್ನು ಅಗತ್ಯವಿದ್ದರೆ ಮುಟ್ಟಬಲ್ಲೆ ಎಂಬ ಸಂದೇಶವನ್ನು ಇಸ್ರೇಲ್ ರವಾನಿಸಿದೆ. ಈ ಲೇಖನದ ಬಹುಪಾಲು ನಿರೂಪಣೆಯನ್ನು ಈ ಘಟನೆ ಸಮರ್ಥಿಸಿದೆ ಎನ್ನಬಹುದು

ಇಸ್ರೇಲ್

ಗಾಜಾದ ಮೇಲಿನ ದಾಳಿಯ ಯಾವ ಉದ್ದೇಶಗಳನ್ನು – ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಪ್ರತಿರೋಧವನ್ನು ನಾಶಪಡಿಸುವುದು ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಹಿಂದೆ ತರುವುದು – ಸಹ ಸಾಧಿಸಲು ಇಸ್ರೇಲಿಗೆ ಸಾಧ್ಯವಾಗಲಿಲ್ಲ:  ನೆತನ್ಯಾಹು ಅವರ ಮೇಲೆ ಆಂತರಿಕ ಒತ್ತಡವು ಹೆಚ್ಚುತ್ತಿದೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗಾಗಿ ಒಪ್ಪಂದವನ್ನು ಮಾಡಲು ವಿಫಲವಾದ ಸರ್ಕಾರವನ್ನು ಖಂಡಿಸುವ ಸಾಮೂಹಿಕ ಪ್ರದರ್ಶನಗಳು ನಡೆಯುತ್ತಿವೆ. ಪ್ರತಿಪಕ್ಷಗಳು ಹೊಸ ಚುನಾವಣೆಯಲ್ಲಿ ನಿರ್ಣಾಯಕವಾಗಿ ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. . ಯು.ಎಸ್ ನಲ್ಲಿ ಸಹ ಸಾರ್ವಜನಿಕ ಅಭಿಪ್ರಾಯವು ಪ್ಯಾಲೆಸ್ಟೈನ್ ಪರವಾಗಿ ವೇಗವಾಗಿ ಬದಲಾಗುತ್ತಿದ್ದು , ಜೋ ಬಿಡೆನ್ ಗೆ  ಚುನಾವಣಾ ಬಿಕ್ಕಟ್ಟನ್ನು ಉಂಟುಮಾಡುವ ಮೂಲಕ ಯು.ಎಸ್ ಜತೆಗಿನ ಇಸ್ರೇಲಿನ ಪ್ರಮುಖ ಅಂತರರಾಷ್ಟ್ರೀಯ ಮೈತ್ರಿಸಂಬಂಧ ಅಭೂತಪೂರ್ವ ಒತ್ತಡಕ್ಕೊಳಗಾಗಿದೆ.

ಈ ಸಂದರ್ಭಗಳಲ್ಲಿ, ಬಿಕ್ಕಟ್ಟನ್ನು ಉಲ್ಬಣಗೊಳಿಸುವಲ್ಲಿ ನೆತನ್ಯಾಹು ವೈಯಕ್ತಿಕ ಹಿತಾಸಕ್ತಿ ಅಡಗಿದೆ. ಯುದ್ಧವು ಮುಂದುವರೆದಷ್ಟು ಕಾಲ ಆತ  ಪ್ರಧಾನಿಯಾಗಿ ಉಳಿಯುತ್ತಾರೆ. ಇರಾನಿನ ಅಣುಸ್ಥಾವರಗಳ ಮೇಲೆ ದಾಳಿ ಮಾಡುವುದನ್ನೂ ಇಸ್ರೇಲಿ ಮಿಲಿಟರಿ-ರಾಜಕೀಯ ನಾಯಕತ್ವ ಪರಿಶೀಲಿಸುತ್ತಿದೆ ಎಂಬುದು ಅತ್ಯಂತ ಅಪಾಯಕಾರಿ ಉಲ್ಬಣ ಯೋಜನೆಯಾದೀತು. ಯುದ್ಧವು ಕೊನೆಗೊಂಡರೆ, ಚುನಾವಣೆಯು ನಡೆದು ಆತ ಅಧಿಕಾರವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಹಲವಾರು ಕ್ರಿಮಿನಲ್ ಭ್ರಷ್ಟಾಚಾರದ ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ. ಪ್ರಾದೇಶಿಕ ಯುದ್ಧವು ವಿಜಯವನ್ನು ಮರುವ್ಯಾಖ್ಯಾನಿಸಲು ಮತ್ತು ಅವರು ಮುನ್ನಡೆಸುವ ಬಲಪಂಥೀಯ ಮೈತ್ರಿಗೆ ಹೆಚ್ಚಿನ ಸಮಯವನ್ನು ಪಡೆಯಲು ಮತ್ತು ಜನಪ್ರಿಯತೆಯನ್ನು ಮರಳಿ ಪಡೆಯಲು ಅನುವು ಮಾಡಿಕೊಡುತ್ತದೆ.

ಪ್ರಾದೇಶಿಕ ಯುದ್ಧವು ಪ್ರಾರಂಭವಾದರೆ, ಯು.ಎಸ್  ಹೊರಗುಳಿಯುವುದು ತುಂಬಾ ಕಷ್ಟವಾಗುತ್ತದೆ. ಪಶ್ಚಿಮ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸುವ ಯು.ಎಸ್ ಪ್ರಯತ್ನಗಳನ್ನು ವಿರೋಧಿಸುವ ‘ಪ್ರತಿರೋಧದ ಅಕ್ಷ’ ಎಂದು ಕರೆಯಲ್ಪಡುವ ಇರಾನ್ ನೇತೃತ್ವದ ಬಣದೊಂದಿಗೆ ಯು.ಎಸ್ ಸಾಮ್ರಾಜ್ಯಶಾಹಿಯು ದೀರ್ಘಾವಧಿಯ ಯುದ್ಧದಲ್ಲಿ ತೊಡಗಿದೆ. ಇಸ್ರೇಲ್ ಮತ್ತು ಪ್ರತಿರೋಧದ ಅಕ್ಷ’  (ಇದು ಪ್ಯಾಲೇಸ್ಟಿನಿಯನ್ ಪ್ರತಿರೋಧದ ಭಾಗಗಳನ್ನು ಒಳಗೊಂಡಿದೆ), ನಡುವಿನ ಮುಖಾಮುಖಿಯಲ್ಲಿ ಪ್ರತಿರೋಧದ ವಿಜಯವು ಈ ಪ್ರದೇಶದಲ್ಲಿ ತನಗೆ ತುಂಬಾ ವಿನಾಶಕಾರಿಯಾಗಿದೆ ಎಂದು ಬಿಡೆನ್ ಸರಕಾರ ಯುದ್ಧದಲ್ಲಿ ಹೆಚ್ಚು ನೇರವಾಗಿ ಭಾಗಿಯಾಗಲೇಬೇಕಾಗಬಹುದು.

ಆದಾಗ್ಯೂ, ಇಸ್ರೇಲಿ ಪ್ರಭುತ್ವದೊಳಗೆ  ಈ ಕ್ಷಣದಲ್ಲಿ ಉಲ್ಬಣಗೊಳಿಸುವುದರ ವಿರುದ್ಧ ವಾದಿಸುವ ಮತ್ತೊಂದು ವಿಭಾಗವಿದೆ., ಅದರ. ತರ್ಕ ಹೀಗಿದೆ. ಗಾಜಾದಲ್ಲಿ ನರಮೇಧ ಪ್ರಾರಂಭವಾದಾಗಿನಿಂದ ನಮ್ಮ ಮಿತ್ರರಾಷ್ಟ್ರಗಳ ನಡುವೆ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀರಾ ಒಂಟಿಯಾಗಿದ್ದೇವೆ. ಇರಾನಿನ ಆಕ್ರಮಣದ ಬಲಿಪಶುಗಳಾಗಿ ನಟಿಸುವ ಮೂಲಕ ಮತ್ತು ಅದರ ಆಧಾರದ ಮೇಲೆ ಸಹಾಯವನ್ನು ಕೋರುವ ಮೂಲಕ ಜಾಗತಿಕ ಬೆಂಬಲವನ್ನು ಮರಳಿ ಪಡೆಯಲು ಇದು ನಮ್ಮ ಅವಕಾಶವಾಗಿದೆ. ಪ್ರಮುಖ ಪಾಶ್ಚಿಮಾತ್ಯ ಶಕ್ತಿಗಳು ಪ್ರಾದೇಶಿಕ ಯುದ್ಧವನ್ನು ಬಯಸುವುದಿಲ್ಲವಾದ್ದರಿಂದ, ಇರಾನ್ ಮೇಲೆ ಮತ್ತೊಂದು ದಾಳಿ ಪ್ರಾರಂಭಿಸದೆ ಇರಲು ಅವರು ನಮಗೆ ರಿಯಾಯಿತಿಗಳನ್ನು ನೀಡುತ್ತಾರೆ. ಆದ್ದರಿಂದ ಇರಾನಿನ ಮೇಲೆ ಹೊಸ ದಿಗ್ಬಂಧನಗಳು, ಇರಾನಿನ ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ ಅನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುವುದು ಮತ್ತು ಮುಖ್ಯವಾಗಿ ಯು.ಎಸ್ ನಿಂದ 14 ಶತಕೋಟಿ ಡಾಲರುಗಳ ಹೊಸ ಸುತ್ತಿನ ಮಿಲಿಟರಿ ಸಹಾಯದಂತಹ ವಿಷಯಗಳನ್ನು ಖಚಿತಪಡಿಸಿಕೊಳ್ಳೋಣ ಎಂಬುದು ಅವರ ವಾದ.

ಇನ್ನೊಂದು ಪ್ರಮುಖ ಅಂಶವೆಂದರೆ ನೆತನ್ಯಾಹು ಅವರು ಸಂಸತ್ತಿನಲ್ಲಿ ಬಹುಮತಕ್ಕಾಗಿ ಬೆಂಬಲವನ್ನು ಅವಲಂಬಿಸಿರುವ  ಆಳುವ ಕೂಟದ ಎರಡು ಫ್ಯಾಸಿಸ್ಟ್ ಪಕ್ಷಗಳು. ನೆತನ್ಯಾಹು “ಅಂತಿಮ ವಿಜಯದವರೆಗೆ ಯುದ್ಧವನ್ನು ಮುಂದುವರೆಸುವ’ ಧೋರಣೆಯನ್ನು ಮೃದುಗೊಳಿಸಿದರೆ ಅವರು ಾಳುವ  ಕೂಟವನ್ನು ತೊರೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಸಂಭವಿಸಿದಲ್ಲಿ, ನೆತನ್ಯಾಹು ಅವರ ಸರಕಾರ ಬಿದ್ದು ಕ್ಷಿಪ್ರ ಚುನಾವಣೆಗಳು ನಡೆಯುತ್ತವೆ.

ಇಸ್ರೇಲ್ ಯುದ್ಧವನ್ನು ಇನ್ನಷ್ಟು ವ್ಯಾಪಕಗೊಳಿಸುವುದೇ?

ಇರಾನ್

ರಾಷ್ಟ್ರದ ಸಾರ್ವಭೌಮ ಪ್ರದೇಶವನ್ನು ರಕ್ಷಿಸುವುದು, ಹಾಗೆಯೇ ರಾಷ್ಟ್ರದ ನಾಯಕತ್ವವನ್ನು ಹತ್ಯೆಯಿಂದ ರಕ್ಷಿಸುವುದು, ಯಾವುದೇ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ,. ಏಪ್ರಿಲ್ 1 ರಂದು ಇಸ್ರೇಲಿ ಆಕ್ರಮಣವು ಎಷ್ಟು ತೀವ್ರವಾಗಿತ್ತು ಎಂಬುದನ್ನು ಪರಿಗಣಿಸಿ ಇನ್ನೊಂದು ಕೆನ್ನೆಯನ್ನು ತಿರುಗಿಸುವುದು ಇರಾನಿಗೆ ಒಂದು ಆಯ್ಕೆಯಾಗಿರಲಿಲ್ಲ. ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಮತ್ತು ಸಿದ್ಧವಾಗಿದೆ ಎಂಬ ಸಂದೇಶವನ್ನು ಕಳುಹಿಸಬೇಕಾಗಿತ್ತು. ಹಾಗೆ ಮಾಡದಿದ್ದರೆ ಇನ್ನೂ ಹೆಚ್ಚಿನ ಇಸ್ರೇಲಿ ದಾಳಿಗಳಿಗೆ ಆಹ್ವಾನ ಕೊಟ್ಟಂತೆ. ಇದು ಇರಾನಿನ ಒಟ್ಟು ಧೋರಣೆ.

ಅದೇ ಸಮಯದಲ್ಲಿ, ಇಸ್ರೇಲಿ ಸರ್ಕಾರದ ನೆತನ್ಯಾಹು ನಾಯಕತ್ವದ ಒಂದು ಬಣವು ಯುದ್ಧವನ್ನು ಉಲ್ಬಣಗೊಳಿಸಲು ಹಾತೊರೆಯುತ್ತಿರುವುದು ಇರಾನ್ ಸರ್ಕಾರಕ್ಕೆ ಗೊತ್ತಿದೆ. ಇರಾನ್ ಅಜಾಗರೂಕತೆಯಿಂದ ನೆತನ್ಯಾಹುಗೆ ಬೇಕಾದ ನೆಪವನ್ನು ನೀಡಲು ಮತ್ತು ಆ ಪ್ರಕ್ರಿಯೆಯಲ್ಲಿ ತನ್ನ ಜನತೆಯನ್ನು ಸಂಪೂರ್ಣ ಯುದ್ಧದ ವಿನಾಶಕ್ಕೆ ಒಳಪಡಿಸಲು ಬಯಸಲಿಲ್ಲ. ಪ್ರತಿಕ್ರಿಯೆಯ ಮಟ್ಟವನ್ನು ಎಚ್ಚರಿಕೆಯಿಂದ ನಿರ್ಣಯಿಸಬೇಕಾಗಿತ್ತು, ಪ್ರತೀಕಾರದ ಪ್ರತಿಕ್ರಿಯೆಯು  ಇರಾನಿನ ಸಂಕಲ್ಪವನ್ನು ಪ್ರದರ್ಶಿಸಬೇಕು., ಆದರೆ ತಕ್ಷಣವೇ ಪ್ರಾದೇಶಿಕ ಯುದ್ಧವನ್ನು ಹುಟ್ಟುಹಾಕದಂತಿರಬೇಕಿತ್ತು,. ಟ್ರಂಪ್ ಆಡಳಿತವು ಉನ್ನತ ಜನರಲ್ ಖಾಸೆಮ್ ಸೊಲೈಮಾನಿ ಅವರನ್ನು ಹತ್ಯೆ ಮಾಡಿದ ನಂತರ 2020 ರಲ್ಲಿ ಇರಾನ್ ಸರ್ಕಾರವು ಮಾಡಬೇಕಾದ ಕತ್ತಿಯ ಅಲಗಿನ ನಡಿಗೆಗೆ  ಇದು ಹೋಲುತ್ತದೆ.

ಇದನ್ನು ಓದಿ : ಇಸ್ರೇಲ್ “ನರಮೇಧ ತಡೆ ಒಪ್ಪಂದ” ಉಲ್ಲಂಘಿಸಿದೆ : ವಿಶ್ವ ಕೋರ್ಟಿನಲ್ಲಿ ದ. ಆಪ್ರಿಕಾ

ಇರಾನಿನ ಪ್ರತೀಕಾರವು ಇತ್ತೀಚಿನ ವರ್ಷಗಳಲ್ಲಿ ದೇಶವು ಅಭಿವೃದ್ಧಿ ಹೊಂದಲು ಮಾಡಿರುವ ಹೆಚ್ಚಿನ ಪ್ರಯತ್ನಗಳನ್ನು ಮತ್ತು ಸಾಧಿಸಿರುವ  ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು. ವಿಶ್ವ ಇತಿಹಾಸದಲ್ಲಿ ಯಾವುದೇ ಮಿಲಿಟರಿ ಕಾರ್ಯಾಚರಣೆಯು ಇಷ್ಟು ಸಂಖ್ಯೆಯ  ಡ್ರೋನುಗಳನ್ನು ಒಳಗೊಂಡಿಲ್ಲ. ಇರಾನಿನ ಸುಧಾರಿತ ಕ್ಷಿಪಣಿಗಳ ಶಸ್ತ್ರಾಗಾರವು ಒಂದು ಪ್ರಮುಖ ನಿರೋಧಕವಾಗಿದೆ, ಈ ಶಸ್ತ್ರಾಗಾರದ ನೆರವಿನಿಂದ ಇಸ್ರೇಲಿನಲ್ಲಿ ಮಾತ್ರವಲ್ಲದೆ ದೇಶದ ಸುತ್ತಲಿರುವ ಪೆಂಟಗನ್ ನೆಲೆಗಳಿಗೆ ಗುರಿಯಿಟ್ಟು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಇರಾನ್ ಹೊಂದಿದೆ. ಮುಂದೆ ಮಾಡಬಹುದಾದ ಇಸ್ರೇಲಿ ದಾಳಿಯಲ್ಲಿ ಯುಎಸ್ ಸೇರಿಕೊಂಡರೆ ಅದರ ನೆಲೆಗಳು ದಾಳಿಗೆ ಗುರಿಯಾಗಲಿದೆ ಎಂದು ಇರಾನ್ ಹೇಳಿದೆ. ಇರಾನಿನ ಈ ದಾಳಿ ತಾವು ಗಮನಾರ್ಹ ಪ್ರತಿದಾಳಿಯ ಸಾಧ್ಯತೆಯಿಂದ ಮುಕ್ತರು ಎಂಬ  ಇಸ್ರೇಲಿನ ಭ್ರಮೆಯನ್ನು ಒಡೆಯುವ ಪರಿಣಾಮವನ್ನು ಬೀರಿತು, ಪ್ರಪಂಚದ ಇತರ ಭಾಗಗಳಿಂದ ತುರ್ತು ಬೆಂಬಲದ ಅಗತ್ಯವಿರುವ ಪ್ಯಾಲೆಸ್ಟೀನಿಯನ್ನರ  ಉತ್ಸಾಹವನ್ನು ಹೆಚ್ಚಿಸಿತು. ಇದು ಇಸ್ರೇಲ್ ಮತ್ತು ಯುಎಸ್ ನ  ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಅಮೂಲ್ಯವಾದ ಮಾಹಿತಿಯನ್ನು ಬಹಿರಂಗಪಡಿಸಿತು.

ಇರಾನಿನ  ಪ್ರತೀಕಾರದಲ್ಲಿ ಅಸಾಧಾರಣ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದ್ದರೂ, ಅದು ಅನಿರೀಕ್ಷಿತ ದಾಳಿಯಾಗಿರಲಿಲ್ಲ. ರಾಯಭಾರ ಕಚೇರಿಯ ಬಾಂಬ್ ದಾಳಿಯ ಸುಮಾರು ಎರಡು ವಾರಗಳ ನಂತರ ಇದನ್ನು ಪ್ರಾರಂಭಿಸಲಾಯಿತು ಮತ್ತು ಪ್ರತಿದಾಳಿ ಬರುತ್ತಿದೆ ಎಂದು ಪ್ರದೇಶದ ಇತರ ಸರ್ಕಾರಗಳಿಗೆ 72 ಗಂಟೆಗಳ ಸೂಚನೆ ನೀಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಪ್ರತೀಕಾರದ ರಾತ್ರಿ, ಇರಾನ್ ಅವು ಇಸ್ರೇಲಿಗೆ ಆಗಮಿಸುವ ಗಂಟೆಗಳ ಮೊದಲು ಡ್ರೋನುಗಳ ಅಲೆಗಳು ತಮ್ಮ ದಾರಿಯಲ್ಲಿವೆ ಎಂದು ಘೋಷಿಸಿದರು. ಪ್ರಾದೇಶಿಕ ಯುದ್ಧಕ್ಕೆ ಇಸ್ರೇಲಿಗೆ ಯಾವುದೇ ಸಮರ್ಥನೆಯನ್ನು ಒದಗಿಸುವ ದೊಡ್ಡ ಹಾನಿಯನ್ನು ಮಾಡುವುದನ್ನು ತಪ್ಪಿಸುವ ಇರಾನಿನ ಬಯಕೆಯನ್ನು ಇದು ಸೂಚಿಸುತ್ತದೆ ಎಂದು ಅರ್ಥೈಸಬಹುದು.

 

ಯು.ಎಸ್

ಇಡೀ ಜಗತ್ತಿನಾದ್ಯಂತ ವಾಲ್ ಸ್ಟ್ರೀಟ್(ಅಥವಾ ಹಣಕಾಸು ಬಂಡವಾಳದ)  ಮತ್ತು ಪೆಂಟಗನ್ನಿನ ಪ್ರಾಬಲ್ಯವನ್ನು ಖಚಿತಪಡಿಸುವ . ಒಂದು ಮೂಲಭೂತ ಗುರಿಯೊಂದಿಗೆ ಯು.ಎಸ್ ಸರ್ಕಾರವು ಜಾಗತಿಕ ಮಟ್ಟದಲ್ಲಿ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತದೆ.  ಈ ಕಾರಣಕ್ಕಾಗಿ, ಇಸ್ರೇಲ್ ಅನ್ನು ಯು.ಎಸ್ ಸಾಮ್ರಾಜ್ಯ ತನ್ನ ಅಮೂಲ್ಯವಾದ ಸಾಧನವೆಂದು ಪರಿಗಣಿಸಿದೆ. ದಶಕಗಳಲ್ಲಿ, ಇಸ್ರೇಲ್ ತಾನು ಪಶ್ಚಿಮ ಏಷ್ಯಾದಲ್ಲಿ ಯಾವುದೇ ಪ್ರಗತಿಪರ ಅಥವಾ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಯ ಅತ್ಯಂತ ವಿಶ್ವಾಸಾರ್ಹ ಮತ್ತು ಆಕ್ರಮಣಕಾರಿ ಎದುರಾಳಿಯೆಂದು ಸಾಬೀತುಪಡಿಸಿದೆ. ಇಸ್ರೇಲ್ ಈ ಪ್ರದೇಶದ ಹೃದಯಭಾಗದಲ್ಲಿರುವ ಒಂದು ದೊಡ್ಡ ಯು.ಎಸ್ ಮಿಲಿಟರಿ ನೆಲೆಯೇ ಎನ್ನಬಹುದು.

ಹಾಗಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ, ನೇರ ಮುಖಾಮುಖಿಯಲ್ಲಿ, ಇರಾನಿನ ವಿಜಯವನ್ನು ತಪ್ಪಿಸಲು ಯು.ಎಸ್ ಸರ್ಕಾರವು ಏನನ್ನಾದರೂ ಮಾಡಲು ಸಿದ್ಧವಿದೆ. ಇರಾನಿನ 1950ರ ದಶಕದ ರಾಷ್ಟ್ರವಾದಿ ಸರಕಾರದ ಕಾಲದಿಂದಲೂ   ಇರಾನ್ ಸರಕಾರ ಬದಲಾವಣೆಗೆ ಯು.ಎಸ್ ನ ಪ್ರಮುಖ ವ್ಯೂಹಾತ್ಮಕ ಗುರಿಯಾಗಿದೆ. ಇಸ್ರೇಲ್ ಮೇಲಿನ ಇಂತಹ ಸಂಘರ್ಷದಲ್ಲಿ ಇರಾನ್ ಮತ್ತು ಅದರ ‘ಪ್ರತಿರೋಧದ ಅಕ್ಷದ’ ಮಿತ್ರರಾಷ್ಟ್ರಗಳು ಮೇಲುಗೈ ಸಾಧಿಸಿದರೆ, ಅದು ಇಸ್ರೇಲಿ ಸರಕಾರಕ್ಕೆ ಐತಿಹಾಸಿಕ ಸೋಲು ಮಾತ್ರವಲ್ಲದೆ. ಯುಎಸ್ ಸಾಮ್ರಾಜ್ಯಶಾಹಿಗೆ ಚೇತರಿಸಿಕೊಳ್ಳಲು ಸಾಧ್ಯವಾಗದ ಭಾರಿ ಹೊಡೆತವಾಗಿರುತ್ತದೆ.

ಇಸ್ರೇಲ್ ಯುದ್ಧವನ್ನು ಇನ್ನಷ್ಟು ವ್ಯಾಪಕಗೊಳಿಸುವುದೇ?

ಅದೇ ಸಮಯದಲ್ಲಿ, ಪ್ಯಾಲೆಸ್ಟೈನ್ ಜೊತೆಗೆ ಸೌಹಾರ್ದದ ಸಾಮೂಹಿಕ ಚಳುವಳಿಯು ಬಿಡೆನ್ ಆಡಳಿತಕ್ಕೆ ಆಳವಾದ ರಾಜಕೀಯ ಬಿಕ್ಕಟ್ಟನ್ನು ಉಂಟು ಮಾಡಿದೆ. ರಾಷ್ಟ್ರವ್ಯಾಪಿ ನಗರಗಳು ಮತ್ತು ಪಟ್ಟಣಗಳಲ್ಲಿ ವಾರದಿಂದ ವಾರಕ್ಕೆ ಅಗಾಧವಾದ ಬೆಂಬಲದ ಪ್ರಬಲ ಅಭಿವ್ಯಕ್ತಿ, ಡೆಮಾಕ್ರಟಿಕ್ ಪ್ರೈಮರಿಗಳಲ್ಲಿ ‘ನೋಟಾ’ ರೀತಿಯ (ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ)  ಮತ ಹಾಕುವ ಬೃಹತ್ ಚಳುವಳಿ ಮತ್ತು ವ್ಯವಹಾರವನ್ನು ಸ್ಥಗಿತಗೊಳಿಸುವ ನಿರಂತರ ನಾಗರಿಕ ಅಸಹಕಾರ ಕ್ರಮಗಳು ಬಿಡೆನ್ ಮೇಲೆ ಭಾರಿ ಒತ್ತಡವನ್ನು ಹೇರಿವೆ. ಗಾಜಾದಲ್ಲಿ ನರಮೇಧಕ್ಕೆ ಬಿಡೆನ್ ಅವರ ಬೆಂಬಲವು, ಅವರ ಮರು-ಚುನಾವಣೆಯನ್ನು ಸಹ ಬಲಿ ತೆಗೆದುಕೊಳ್ಳಬಹುದು ಎಂದು ಎಲ್ಲರೂ ಗುರುತಿಸುತ್ತಾರೆ. ಈ ಅಲ್ಪಾವಧಿಯ ಚುನಾವಣಾ ಹಿತಾಸಕ್ತಿಗಳು ಯು.ಎಸ್ ಸಾಮ್ರಾಜ್ಯದ ದೀರ್ಘಾವಧಿಯ ಹಿತಾಸಕ್ತಿಗಳೊಂದಿಗೆ ಘರ್ಷಣೆಯಾಗುತ್ತಿವೆ ಮತ್ತು ಅಂತಿಮ ಫಲಿತಾಂಶವು ಸಹಜವಾಗಿ ಅನಿಶ್ಚಿತವಾಗಿದೆ. ಆಂದೋಲನವು ಈ ಒತ್ತಡವನ್ನು ಹೆಚ್ಚಿಸಿದರೆ, ಯುಎಸ್-ಇಸ್ರೇಲಿ ಶಿಬಿರದೊಳಗಿನ ಅಪಶ್ರುತಿಯು ಪ್ಯಾಲೇಸ್ಟಿನಿಯನ್ ಹೋರಾಟಕ್ಕೆ ಅನುಕೂಲಕರವಾದ ರೀತಿಯಲ್ಲಿ ತೀವ್ರಗೊಳ್ಳುತ್ತದೆ.

ಇರಾನಿನ ಪ್ರತಿದಾಳಿಯಲ್ಲಿ ಭಾಗಿಯಾಗಿರುವ ಡಜನುಗಟ್ಟಲೆ ಡ್ರೋನುಗಳು ಮತ್ತು ಕ್ಷಿಪಣಿಗಳನ್ನು ಯು.ಎಸ್ ಮಿಲಿಟರಿ ಹೊಡೆದುರುಳಿಸಿತು ಮತ್ತು ಅದರ ಜೂನಿಯರ್ ಪಾಲುದಾರರಾದ ಬ್ರಿಟನ್ ಮತ್ತು ಫ್ರಾನ್ಸ್ ಸಹ ಕೊಡುಗೆ ನೀಡಿತು. ಈ ಅರ್ಥದಲ್ಲಿ, ಅವರು ತಮ್ಮ ಪ್ರಮುಖ ಶತ್ರುವಾದ ಇರಾನ್ ವಿರುದ್ಧ, ಆ ಪ್ರದೇಶದಲ್ಲಿ ತಮ್ಮ ಪ್ರಮುಖ ಆಸ್ತಿಯಾದ ಇಸ್ರೇಲಿ ವರ್ಣಭೇದ ಆಡಳಿತದ ಸಹಾಯಕ್ಕೆ ಬಂದರು. ಬಿಡೆನ್ ಆಡಳಿತವು ನಂತರ ಇದನ್ನು ಗಮನಾರ್ಹವಾದ ಮಿಲಿಟರಿ ವಿಜಯವೆಂದು ಹೇಳಿಕೊಂಡಿತು, ಹಾಗಾಗಿ ಇಸ್ರೇಲಿನಿಂದ ಯಾವುದೇ “ಪ್ರತೀಕಾರದ ಅಗತ್ಯವಿರುವುದಿಲ್ಲ. ಇಸ್ರೇಲ್ ಅದನ್ನು ಕೈಗೊಂಡರೆ  ಬಿಡೆನ್ ಆಡಳಿತವು ಅಂತಹ ಯಾವುದೇ “ಪ್ರತೀಕಾರದ” ಭಾಗವಾಗುವುದಿಲ್ಲ ಎಂದು ಹೇಳಿದರು.

ಪ್ರಾದೇಶಿಕ ಯುದ್ಧವು ಪಶ್ಚಿಮ ಏಷ್ಯಾದ ಜನರಿಗೆ ಸಂಪೂರ್ಣವಾಗಿ ವಿನಾಶಕಾರಿಯಾಗಿದೆ. ಇಸ್ರೇಲ್ ಅಂತಹ ಯುದ್ಧವನ್ನು ಪ್ರಚೋದಿಸುವಲ್ಲಿ ಯಶಸ್ವಿಯಾದರೆ, ಸಾವು, ಸಂಕಟ ಮತ್ತು ವಿನಾಶವು ಬೃಹತ್ ಪ್ರಮಾಣದಲ್ಲಿರುತ್ತದೆ. ಅಂತಹ ಯುದ್ಧದ ಬೆದರಿಕೆಯನ್ನು ತೆಗೆದುಹಾಕಲು – ಗಾಜಾದಲ್ಲಿ ನರಮೇಧವನ್ನು ಕೊನೆಗೊಳಿಸುವುದು.ಒಂದೇ ಒಂದು ಮಾರ್ಗ.

ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲಿನ ನರಮೇಧದ ಅಮಲು ಮುಂದುವರಿಯುವವರೆಗೆ, ಹೋರಾಟವು ಯಾವುದೇ  ಕ್ಷಣದಲ್ಲಿ ಅನಿಯಂತ್ರಿತವಾಗಿ ಉಲ್ಬಣಗೊಳ್ಳಬಹುದು. ಶಾಂತಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ ಪ್ಯಾಲೇಸ್ಟಿನಿಯನ್ ಜನರೊಂದಿಗೆ ನಿಲ್ಲಬೇಕು, ಇಸ್ರೇಲಿಗೆ ಎಲ್ಲಾ ಯುಎಸ್ ಸಹಾಯವನ್ನು ಕೊನೆಗೊಳಿಸಬೇಕು ಮತ್ತು ಗಾಜಾ ನರಮೇಧ ಅತಿಕ್ರಮಣಗಳನ್ನು ಕೊನೆಗೊಳಿಸಬೇಕು. ಮತ್ತು ಎರಡು-ದೇಶಗಳ ಪರಿಹಾರವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಬೇಕು.

ಇದನ್ನು ನೋಡಿ : ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *