ರಾಜಸ್ಥಾನದಲ್ಲಿ ಬಿಜೆಪಿ ಪ್ರಾಬಲ್ಯ ಕಳೆದುಕೊಳ್ಳಲಿದೆಯೆ?

–  ವಸಂತರಾಜ ಎನ್.ಕೆ.

ಹೆಚ್ಚು ಕಡಿಮೆ ಎಲ್ಲಾ ಸೀಟುಗಲ್ಲಿ ಬಿಜೆಪಿ ಮತ್ತು ಇಂಡಿಯಾ ಕೂಟದ ಅಭ್ಯರ್ಥಿಗಳ ನಡುವೆ ನೇರ ಬಿರುಸಿನ ಸ್ಪರ್ಧೆಯಿದ್ದು, ಸೀಕರ್ ನಲ್ಲಿ ಸಿಪಿಐ(ಎಂ), ಬಾನ್ಸ್ ವಾರಾ ದಲ್ಲಿ ಬಿ.ಎ.ಪಿ ಸೇರಿದಂತೆ 10 ಸೀಟುಗಳಲ್ಲಿ ಇಂಡಿಯಾ ಕೂಟದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯ ಬಿಜೆಪಿಯ ಕ್ಲೀನ್ ಸ್ವೀಪ್ ಅಸಂಭವ ಮತ್ತು ಅದು ತನ್ನ ಪ್ರಾಬಲ್ಯ ಕಳೆದುಕೊಳ್ಳಲಿದೆ ಎಂಬುದು ಖಚಿತ.

ಹಿಂದಿ ರಾಜ್ಯಗಳಲ್ಲಿ ರಾಜಸ್ಥಾನದಲ್ಲಿ ಮಾತ್ರ (ಮೊದಲೆರಡು ಹಂತಗಳಲ್ಲಿ ಅಂದರೆ ಎಪ್ರಿಲ್ 19 ಮತ್ತು 26ಕ್ಕೆ ) ಚುನಾವಣೆ ಪ್ರಕ್ರಿಯೆ ಮುಗಿದು, ಈಗಾಗಲೇ ಫಲಿತಾಂಶಗಳ ಕುರಿತು ಊಹಾಪೋಹಗಳು, ಅಂದಾಜುಗಳು ಆರಂಭವಾಗಿವೆ. 2019ರ ಚುನಾವಣೆಯಲ್ಲಿ 25ರಲ್ಲಿ ಬಿಜೆಪಿ 24 ಮತ್ತು ಎನ್.ಡಿ.ಎ ಕೂಟದ ಇನ್ನೊಂದು ಪಕ್ಷ ಆರ್.ಎಲ್.ಪಿ 1 ಸೀಟು ಪಡೆದು ಕ್ಲೀನ್ ಸ್ವೀಪ್ ಮಾಡಿತ್ತು. 2014ರಲ್ಲೂ ಲೋಕಸಭಾ ಚುನಾವಣೆಯಲ್ಲಿ ಸಹ ಬಿಜೆಪಿ 25 ಸೀಟು ಪಡೆದು ಕ್ಲೀನ್ ಸ್ವೀಪ್ ಮಾಡಿತ್ತು. ಇತ್ತೀಚೆಗಷ್ಟೇ (ನವೆಂಬರವ 2023) ಅಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದು ಕಾಂಗ್ರೆಸ್ ಸೋತಿದ್ದು ಬಿಜೆಪಿ ಭಾರೀ ಬಹುಮತ ಪಡೆದಿದೆ.ಹಾಗಾದರೆ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕ್ಲೀನ್ ಸ್ವೀಪ್ ಮಾಡುತ್ತಾ ? ಇಲ್ಲ ಅಂತಾರೆ ರಾಜಕೀಯ ವಿಶ್ಲೇಷಕರು ಮತ್ತು ಪ್ರಮುಖ ಪತ್ರಕರ್ತರು. ಯಾಕೆ ಹೀಗಂತಾರೆ ನೋಡೋಣ? ವಸುಂ

ಮತದಾನದಲ್ಲಿ ಕುಸಿತ

ಮೊದಲನೆಯದಾಗಿ ಉತ್ತರ ರಾಜಸ್ಥಾನದ 12 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯಲ್ಲಿ 57.65 % ಮಾತ್ರ ಮತದಾನವಾಗಿತ್ತು. ಎರಡನೆಯ ಹಂತದ ದಕ್ಷಿಣ ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಎರಡನೆಯ ಹಂತದ ಚುನಾವಣೆಯಲ್ಲಿ 65.03 % ಗೆ ಉತ್ತಮಗೊಂಡರೂ, ಕಳೆದ ಬಾರಿಯ ಒಟ್ಟು ಮತದಾನದ ಪ್ರಮಾಣ 66.34 % ಗಿಂತ ಸಾಕಷ್ಟು ಕಡಿಮೆಯಿತ್ತು. ಇದು ವಿಧಾನಸಭಾ ಚುನಾವಣೆಗಳಲ್ಲಿನ 75% ಮತದಾನಕ್ಕಿಂತಂತೂ ಬಹಳ ಕಡಿಮೆಯಿತ್ತು. ಅದರಲ್ಲೂ ಹಲವು ಇತರ ರಾಜ್ಯಗಳಂತೆ ಬಿಜೆಪಿ ಪ್ರಬಲವಾಗಿರುವ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗಿರುವುದು ಕಂಡು ಬಂದಿದೆ. ರಾಜಸ್ಥಾನ ಸೇರಿದಂತೆ ಬಿಜೆಪಿ ರಾಜ್ಯಗಳಲ್ಲಿ ಪ್ರದೇಶಗಳಲ್ಲಿ ಮೊದಲನೆಯ ಹಂತದ ಕಡಿಮೆ ಮತದಾನದ ನಂತರವೇ, ರಾಜಸ್ಥಾನದಲ್ಲೇ ಎರಡನೆಯ ಹಂತದಲ್ಲಿ ಪ್ರಧಾನಿ ಮೋದಿ ನೇರವಾಗಿ ಮುಸ್ಲಿಂ-ವಿರೋಧಿ  ಭಾಷಣ ಆರಂಭಿಸಿದ್ದು ಎಂದೂ ಗಮನಿಸಬೇಕು. ಇದು ಬಿಜೆಪಿಯ ಕಾರ್ಯಕರ್ತರನ್ನು ಉತ್ತೇಜಿಸಲು ಮತ್ತು ಕೋರ್ ಮತದಾರರನ್ನು ಮತಗಟ್ಟೆಗೆ ತರಲು ಎನ್ನಲಾಗಿದೆ.

ಈ ಕಡಿಮೆ ಮತದಾನ ಬಿಜೆಪಿಗೆ ವಿರುದ್ಧ ಹೋಗುತ್ತದೆ ಎಂಬುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ‘ಪನ್ನಾ ಪ್ರಮುಖ್’ (ಮತದಾರರ ಪಟ್ಟಿಯ ಒಂದು ಪುಟಕ್ಕೊಬ್ಬ ಕಾರ್ಯಕರ್ತ) ಮುಂತಾದ ಬೂತ್ ಮಟ್ಟದ ಅಗಾಧ ಸಂಘಟನೆಯ ಇದ್ದರೂ ಬಿಜೆಪಿಗೆ ತಮ್ಮ ಮತದಾರರನ್ನು ಕರೆತರಲು ಸಾಧ್ಯವಾಗಿಲ್ಲ. ಇದಕ್ಕೆ ಬೇರೆ ಬೇರೆ ವಿಶ್ಲೇಷಕರು ಬೇರೆ ಬೇರೆ ಕಾರಣ ಕೊಡುತ್ತಾರೆ.  ‘ಇಸ್ ಬಾರ್ ಚಾರ್ ಸೋ ಪಾರ್’ (ಈ ಬಾರಿ 400 ಸೀಟುಗಳನ್ನು ದಾಟುತ್ತೇವೆ) ಘೋಷಣೆ ನಂಬಿ ಕಾರ್ಯಕರ್ತರು ಮತದಾರರನ್ನು ಕರೆತರುವ ಅಗತ್ಯವಿಲ್ಲ ಅಂತ ರಿಲ್ಯಾಕ್ಸ್ ಮಾಡಿದ್ದಾರೆ ಅಂತ ಒಂದು ಕಾರಣ. ನಿನ್ನೆ ಮೊನ್ನೆ ವರೆಗೆ ‘ಮಹಾಭ್ರಷ್ಟರು’ ಪರಿವಾರವಾದಿಗಳು’ ಎಂದು ಟೀಕಿಸುತ್ತಿದ್ದ ಇತರ ಪಕ್ಷಗಳ ವ್ಯಕ್ತಿಗಳನ್ನು ಬಿಜೆಪಿ ಗೆ ಬೇಕಾಬಿಟ್ಟಿ ಕರೆದು ಟಿಕೆಟ್ ಕೊಟ್ಟಿರುವುದು ಅಥವಾ ಟಿಕೆಟ್ ಪಡೆದ ವ್ಯಕ್ತಿ ಅನರ್ಹ ಎಂಬ ಭಾವನೆ ಈ ‘ಪ್ರಾಮಾಣಿಕ’ ಕಾರ್ಯಕರ್ತರಲ್ಲಿ ಜಿಗುಪ್ಸೆ ಹುಟ್ಟಿಸಿದೆ ಎಂಬುದು ಇನ್ನೊಂದು ಕಾರಣ. ‘ಇಂದಿನ ದುರ್ಭರ ಸನ್ನಿವೇಶದಲ್ಲಿ ನಿಜವಾದ ವಿಷಯಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಉಸಿರೆತ್ತದೆ ಮೋದಿ ಗ್ಯಾರಂಟಿಗಳಾಗಲಿ, ವಿಕಸಿತ ಭಾರತ’ದ ಕನಸುಗಳಾಗಲಿ ಬಿಜೆಪಿ ಅಥವಾ ಸ್ವತಂತ್ರ ಮತದಾರರಲ್ಲಿ ಮತದಾನ ಮಾಡಬೇಕೆಂಬ ಉತ್ಸಾಹ ತುಂಬುತ್ತಿಲ್ಲ. ವಿರೋಧ ಪಕ್ಷಗಳ ಮತದಾರರು ಪ್ರಧಾನವಾಗಿ ಬಿಜೆಪಿಯನ್ನು ಗದ್ದಿಗೆಯಿಂದ ಇಳಿಸಬೇಕೆಂದು ಮತದಾನ ಮಾಡಿದ್ದಾರೆ ಎಂಬುದು ಮೂರನೆಯ ಅಭಿಪ್ರಾಯ. ಈ ಮೂರೂ ಕಾರಣಗಳು ವಿವಿಧ ಕ್ಷೇತ್ರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರಬಹುದು.

ಬಿಜೆಪಿ ಬಣ ಘರ್ಷಣೆ

ಈಗಿನ ಬಿಜೆಪಿ ಲೋಕಸಭಾ ಸದಸ್ಯರ ಬಗ್ಗೆ ಜನತೆಯಲ್ಲಿ ತೀವ್ರ ಅತೃಪ್ತಿ ಆಕ್ರೋಶವಿದೆ ಎಂದು ಹೇಳಲಾಗಿದೆ. ನವೆಂಬರ್ 2023ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಪಡೆದರೂ, ಇದರಲ್ಲಿ ಸ್ಪರ್ಧಿಸಿದ 7 ಲೋಕಸಬಾ ಸದಸ್ಯರಲ್ಲಿ 3 ಸದಸ್ಯರು ಸೋತಿದ್ದರು ಎಂಬುದು ಇದಕ್ಕೆ ಒಂದು ಉದಾಹರಣೆ. ಹಾಗಾಗಿ 25ರಲ್ಲಿ 11 ಪ್ರಸಕ್ತ ಸದಸ್ಯರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ.  ಟಿಕೆಟ್ ಸಿಗದ ನಾಯಕರು ಮತ್ತು ಅವರ ಬೆಂಬಲಿಗರು ಅತೃಪ್ತರಾಗಿದ್ದು ಅವರು ತಟಸ್ಥರಾಗಿದ್ದಾರೆ ಇಲ್ಲವೆ ಬಿಜೆಪಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ವಿಧಾನಸಭಾ ಚುನಾವಣೆಗಳ ಮತ್ತು ಮುಖ್ಯಮಂತ್ರಿಯ ಆಯ್ಕೆಯ ನಂತರ ಭಿನ್ನಮತ ಮತ್ತು  ಬಣಗಳ ನಡುವೆ ಘರ್ಷಣೆ ತಾರಕ್ಕೇರಿದೆ ಎನ್ನಲಾಗಿದೆ. ಅದರಲ್ಲೂ  ಯಾವುದೇ ಬೆಂಬಲವಿಲ್ಲದ ಯಾರೂ ಕೇಳಿರದ ‘ಭಜನ ಲಾಲ್ ಶರ್ಮಾ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಿದ್ದು ಇನ್ನಷ್ಟು ಸಮಸ್ಯೆ ಉಲ್ಬಣಗೊಳಿಸಿದೆ. ಒಂದು ಪ್ರಬಲ ಬಣದ ಮತ್ತು ಸಾಪೇಕ್ಷವಾಗಿ ಹೆಚ್ಚು ಜನಪ್ರಿಯ ನಾಯಕರಾದ ವಸುಂಧರಾ ರಾಜೇ ಸಿಂಧ್ಯ ಅವರ ಬೆಂಬಲಿಗರನ್ನು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳೆರಡೂ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಲಕ್ಷಿಸಿದ್ದು, ಆ ಬಣ ತಟಸ್ಥವಾಗಿದೆ ಎನ್ನಲಾಗಿದೆ. ಸ್ವತಃ ವಸುಂಧರಾ ಅವರೇ ತಮ್ಮ ಮಗನ (ದುಷ್ಯಂತ ಸಿಂಗ್) ಕ್ಷೇತ್ರ ಝಲವಾರ್ ಬಿಟ್ಟರೆ ಬೇರೆ ಎಲ್ಲೂ ಪ್ರಚಾರಕ್ಕೆ ಹೋಗಿಲ್ಲ. ಇವೆಲ್ಲವೂ ಕಾರ್ಯಕರ್ತರ ನಿರುತ್ಸಾಹ, ಜಿಗುಪ್ಸೆಗೂ ಕಾರಣವಾಗಿರಬಹುದು.

ರೈತರ ಆಕ್ರೋಶ

ಇತ್ತೀಚಿನ ಅಭೂತಪೂರ್ವ ರೈತ ಚಳುವಳಿಯ ಕೋಪ ಬಿಜೆಪಿಯ ಕೇಂದ್ರೀಯ ನಾಯಕತ್ವದ ವಿರುದ್ಧ ತಿರುಗಿದೆ. ಚಳುವಳಿಯ ವಿರುದ್ಧ ದಮನಚಕ್ರ, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತರ ಸಾಲದ ಸಮಸ್ಯೆ ಮತ್ತು ಸಾಲಮನ್ನಾದ ಒತ್ತಾಯಗಳ ಸತತ ನಿರ್ಲಕ್ಷ ಬಿಜೆಪಿ ಗೆ ಮುಳುವಾಗಬಹುದು. ಅದರಲ್ಲೂ ಪ್ರಧಾನ ರೈತ ಸಮುದಾಯ ಜಾಟರು ಪ್ರಧಾನವಾಗಿರುವ ಪಂಜಾಬ್, ಹರಿಯಾಣದ ಜತೆಗೆ ಗಡಿ ಹೊಂದಿರುವ ಉತ್ತರ ರಾಜಸ್ಥಾನದಲ್ಲಿ ಇದು ಪ್ರಬಲವಾಗಿದೆ. ಬಿಜೆಪಿಯ ನೀತಿಗಳು, ಇತ್ತೀಚಿನ ಹೇಳಿಕೆಗಳು ಅದು ಹೆಚ್ಚೆಚ್ಚು ರೈತ-ವಿರೋಧಿ, ಕಾರ್ಪೊರೆಟ್-ಪರ ಎಂಬ ಭಾವನೆಯನ್ನು ಗಟ್ಟಿಗೊಳಿಸುತ್ತಿವೆ.

ಮತ್ತು ಅದೇ ರೀತಿ ಬಹುಪಾಲು ಜಾಟ್ ಸಮುದಾಯಕ್ಕೆ ಸೇರಿದ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳದ ವಿರುದ್ಧ ಆಕ್ರೋಶ ಸಹ ಬಿಜೆಪಿಗೆ ಸವಾಲಾಗುವ ಸಾಧ್ಯತೆಯಿದೆ. ಜಾಟ್ ಸಮುದಾಯಕ್ಕೆ ಸೇರಿದ ಹಿಂದಿನ ಬಿಜೆಪಿ ಅಧ್ಯಕ್ಷರನ್ನು ಚುನಾವಣೆಯ ಕೆಲವೇ ತಿಂಗಳುಗಳ ಮೊದಲು ಬದಲಾಯಿಸಿ ಯಾವುದೇ ಪ್ರಮುಖ ಜವಾಬ್ದಾರಿ ಕೊಡದೆ ಮೂಲೆಗುಂಫು ಮಾಡಿದ್ದೂ ಜಾಟ್ ಸಮುದಾಯದ ಆಕ್ರೋಶ ಹೆಚ್ಚಲು ಕಾರಣವಾಗಿದೆ.

‘ಇಸ್ ಬಾರ್ ಚಾರ್ ಸೋ ಪಾರ್’ (ಈ ಬಾರಿ 400 ಸೀಟುಗಳನ್ನು ದಾಟುತ್ತೇವೆ) ಎಂಬ ಬಿಜೆಪಿಯ ಘೋಷಣೆ ದಲಿತ-ಆದಿವಾಸಿ ಜನವಿಭಾಗಗಳಲ್ಲಿ , ಬಿಜೆಪಿ ಸಂವಿಧಾನ ಬದಲಾಯಿಸಿ ಮೀಸಲಾತಿ ಕಿತ್ತು ಹಾಕುತ್ತದೆ ಎಂಬ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿಯ ಸಾಂಪ್ರದಾಯಿಕ ಕಟ್ಟಾ ಬೆಂಬಲಿಗ ರಜಪೂತ ಸಮುದಾಯದಲ್ಲಿ ಸಹ ತೀವ್ರ ಅತೃಪ್ತಿಯಿದೆ ಎನ್ನಲಾಗಿದೆ. ಗುಜರಾತಿನ ನಾಯಕರೊಬ್ಬರು ರಜಪೂತರ ಕುರಿತು ನೀಡಿದ ಉದ್ಧಟದ ಹೇಳಿಕೆ ನೆರೆಯ ರಾಜಸ್ಥಾನದಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ.‌

ಇದನ್ನು ಓದಿ : ದೇಶದೆಲ್ಲೆಡೆ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಬಗ್ಗೆ ವಿಶ್ವಾಸ ಮೂಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಪರಿಣಾಮಕಾರಿ ಇಂಡಿಯಾ ಕೂಟ

ವಿಧಾನಸಭಾ ಚುನಾವಣೆಯಲ್ಲಿ ‘ಅನಿರೀಕ್ಷಿತ’ ಪರಾಭವ ಮತ್ತು ಸೂಕ್ತ ಅಭ್ಯರ್ಥಿಗಳನ್ನು ಹುಡುಕುವಲ್ಲಿ ತೀವ್ರ ಸವಾಲುಗಳು  ಕಾಂಗ್ರೆಸ್ ಗೆ ಆರಂಭಿಕ ಸವಾಲುಗಳನ್ನು ಒಡ್ಡಿದ್ದವು. ಭಿನ್ನಮತ ಮತ್ತು  ಬಣಗಳ ನಡುವೆ ಘರ್ಷಣೆ ಕಾಂಗ್ರೆಸ್ ಹೆ ಹೊಸದೇನಲ್ಲ.  ಆದರೆ ವಿಧಾನಸಭಾ ಚುನಾವಣೆಗಳಲ್ಲಿ ‘ಅನಿರೀಕ್ಷಿತ’ ಪರಾಭವದ ನಂತರ ವಿವಿಧ ಬಣಗಳು, ಅದರಲ್ಲೂ ಮುಖ್ಯವಾಗಿ  ಗೆಹಲೋಟ್, ಪೈಲಟ್ ಬಣಗಳು ಹೆಚ್ಚು ಐಕ್ಯತೆಯಿಂದ ಕೆಲಸ ಮಾಡುತ್ತಿವೆ.

ಕೇಂದ್ರದಲ್ಲಿ ಬಿಜೆಪಿಯ 10 ವರ್ಷಗಳ ಆಡಳಿತದ ವಿರುದ್ಧ ತೀವ್ರ ಅತೃಪ್ತಿಯಿದ್ದೇ ಇದೆ.  ಬಿಜೆಪಿಯ ಕೋಮುವಾದೀಕರಣವನ್ನು ನಿರ್ಲಕ್ಷಿಸಿ ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರ, ಕಾರ್ಪೊರೆಟ್-ಪರ ನೀತಿಗಳ ವಿರುದ್ಧ, ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ  ದೃಢ ಪ್ರಚಾರ ಈ ಅತೃಪ್ತಿಯನ್ನು ಕ್ರೋಢಿಕರಿಸುವಲ್ಲಿ ಯಶಸ್ಸು ಕಾಣುತ್ತಿದೆ.

ಬಹಳ ಮುಖ್ಯ ಅಂಶವೆಂದರೆ ಇಂಡಿಯಾ ಕೂಟ ರಾಜಸ್ಥಾನದಲ್ಲಿ ರಚನೆಗೊಂಡದ್ದು. ಉತ್ತರ ರಾಜಸ್ಥಾನದ ರೈತ ಪ್ರಧಾನ ಕ್ಷೇತ್ರಗಳಲ್ಲಿ ಬಲವಾದ ನೆಲೆ ಹೊಂದಿರುವ ಸಿಪಿಐ(ಎಂ)ಗೆ ಸೀಕರ್, ರಾಜ್ಯದ ಹಲವು ಆದಿವಾಸಿ ಕ್ಷೇತ್ರಗಳಲ್ಲಿ ನೆಲೆ ಹೊಂದಿರುವ ‘ಭಾರತ ಆದಿವಾಸಿ ಪಕ್ಷ’ ಕ್ಕೆ ಬಾನ್ಸ್ ವಾರಾ-ದುಂಗರ್ಪುರ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಕ್ಕೆ ನಗೌರ್ ಕ್ಷೇತ್ರಗಳನ್ನು ತಲಾ ಒಂದು ಸೀಟು ಬಿಟ್ಟುಕೊಟ್ಟಿದ್ದು ಮಹತ್ವದ ಬೆಳವಣಿಗೆ.

ಕೋಷ್ಟಕ-1 ರಾಜಸ್ಥಾನದ ಚುನಾವಣೆಗಳಲ್ಲಿ ಸೀಟು, ಮತಪ್ರಮಾಣ

ರಾಜಸ್ಥಾನದ ಕಳೆದ ತಲಾ 3 ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ವಿವಿಧ ಪಕ್ಷಗಳ ಸೀಟು ಮತ್ತು ಮತಗಳಿಕೆ ಪ್ರಮಾಣ ಕೋಷ್ಟಕ-1ರಲ್ಲಿ ಕೊಟ್ಟಿದೆ. ಇದರಿಂದ ಕಂಡು ಬರುವುದೆಂದರೆ, ರಾಜಸ್ಥಾನದ ಜನತೆ  ಕರ್ನಾಟದಂತೆ ವಿಧಾನಸಭಾ ಚುನಾವಣೆಗಳಲ್ಲಿ ಪ್ರತಿ ಬಾರಿ ಆಳುವ ಪಕ್ಷವನ್ನು ಬದಲಾಯಿಸುತ್ತದೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆಗಿಂತ ಬಹಳ ಭಿನ್ನವಾಗಿ ಮತದಾನ ಮಾಡುತ್ತದೆ. ಸೀಟುಗಳ ದೃಷ್ಟಿಯಿಂದ ರಾಜಸ್ಥಾನದ ದ್ವಿ-ಪಕ್ಷೀಯ ಧ್ರುವೀಕರಣದ ರಾಜ್ಯದಂತೆ ಕಂಡರೂ ಮೂರನೆಯ ಶಕ್ತಿ ನಗಣ್ಯವೇನಲ್ಲ. ಶೇ.15-20 ಮತ ಪಡೆಯುತ್ತದೆ. ಈ ಪಕ್ಷಗಳ ಜತೆ ಇಂಡಿಯಾ ಕೂಟ ರಚಿಸಿಕೊಂಡಿರುವುದರಿಂದ ಕಾಂಗ್ರೆಸ್ ಬಲ ಮತ್ತು ಗೆಲುವಿನ ಸಾಧ್ಯತೆ ಹೆಚ್ಚಿದೆ. ಕಳೆದ 6 ಚುನಾವಣೆಗಳಲ್ಲಿ 4 ಚುನಾವಣೆಗಳಲ್ಲಿ ಬಿಜೆಪಿ ಗಿಂತ ಮತ್ತು ಬಿಜೆಪಿಯೇತರ ಮತಗಳು ಹೆಚ್ಚಿವೆಯೆಂದು ಗಮನಿಸಬೇಕು. ಅಲ್ಲದೆ ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಕೇವಲ ಶೇ 2 ಮತಗಳ ವ್ಯತ್ಯಾಸವಷ್ಟೇಯಿದೆ ಎಂಬುದನ್ನು ಗಮನಿಸಬೇಕು. ವಿಧಾನಸಬಾ ಚುನಾವಣೆಯಲ್ಲಿ ಇಂಡಿಯಾ ಕೂಟವಾಗಿ ಸ್ಪರ್ಧಿಸಿದ್ದರೆ ಬಿಜೆಪಿ ಪರಾಭವಗೊಳ್ಳುತ್ತಿತ್ತು ಎಂಬುದು ಕೋಷ್ಟಕದಿಂದ ಸ್ಪಷ್ಟ.

ರಾಜಸ್ಥಾನದಲ್ಲಿ ಬಿಜೆಪಿ ಪ್ರಾಬಲ್ಯ ಕಳೆದುಕೊಳ್ಳಲಿದೆಯೆ?

ಸ್ಪರ್ಧೆ ಮತ್ತು ಫಲಿತಾಂಶಧ ಊಹಾಪೋಹ

ರಾಜಸ್ಥಾನದ 25 ಸೀಟುಗಳಲ್ಲಿ 266 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 19 ಮಹಿಳೆಯರು ಇದ್ದಾರೆ. ಬಿಜೆಪಿ 5 ಮತ್ತು ಕಾಂಗ್ರೆಸ್ 3 ಮಹಿಳೆಯರಿಗೆ ಟಿಕೆಟ್ ನೀಡಿದೆ. ಪ್ರಸ್ತುತ ಕೇಂದ್ರ ಸಚಿವರಾಗಿದ್ದ  ಭೂಪೇಂದ್ರ ಚೌಧರಿ (ಅಲ್ವರ್), ಗಜೇಂದ್ರ ಸಿಂಗ್ ಶೇಕವತ್ (ಜೋಧಪುರ), ಕೈಲಾಶ್ ಚೌಧರಿ (ಬಾರ್ಮೇರ್),  ಅರ್ಜುನ್ ರಾಮ್ ಮೇಘವಲ್ (ಬಿಕಾನೇರ್) ಮತ್ತು ಸ್ಪೀಕರ್ ಓಮ್ ಬಿರ್ಲಾ (ಕೋಟಾ) ಕಣದಲ್ಲಿರುವ ಬಿಜೆಪಿ ಪ್ರಮುಖರು. ಮಾಜಿ ಕೇಂದ್ರ ಸಚಿವ ಮತ್ತು ವಿಧಾನಸಭಾ ಸ್ಪೀಕರ್ ಸಿ,ಪಿ ಜೋಷಿ (ಭಿಲ್ವಾರಾ), ವೈಭವ್ ಗೆಹಲೊಟ್ (ಜಲೋರ್) ಮತ್ತು ಮಾಜಿ ಕೇಂದ್ರ ಸಚಿವ ಪ್ರತಾಪ್ ಕಚರಿಯಾಸ್ (ಜೈಪುರ) ಮುಂತಾದ ಕಾಂಗ್ರೆಸ್ ಪ್ರಮುಖರು ಕಣದಲ್ಲಿದ್ದಾರೆ. ನಾಲ್ಕು ಬಾರಿಯ ಶಾಸಕ, ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಮತ್ತು ಕಿಸಾನ್ ಸಭಾದ ಹಿರಿಯ ನಾಯಕ ಆಮ್ರಾ ರಾಮ್ (ಸೀಕರ್), ಭಾರತ ಆಧಿವಾಸಿ ಪಕ್ಷದ ರಾಜಕುಮಾರ್ ರೋತ್ (ಬಾನ್ಸ ವಾರಾ) ಕಣದಲ್ಲಿರುವ ಇಂಡಿಯಾ ಕೂಟದ ಪ್ರಮುಖರು. ಹೆಚ್ಚು ಕಡಿಮೆ ಎಲ್ಲಾ ಸೀಟುಗಲ್ಲಿ ಬಿಜೆಪಿ ಮತ್ತು ಇಂಡಿಯಾ ಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೇಯಿದೆ.

ಬಿಜೆಪಿ ಇಂಡಿಯಾ ಕೂಟದ ಬಿರುಸಿನ ಸ್ಪರ್ಧೆ ಎದುರಿಸುತ್ತಿದ್ದು, ಸೀಕರ್ ನಲ್ಲಿ ಸಿಪಿಐ(ಎಂ), ಬಾನ್ಸ್ ವಾರಾ ದಲ್ಲಿ ಬಿ.ಎ.ಪಿ ಸೇರಿದಂತೆ 10 ಸೀಟುಗಳಲ್ಲಿ ಇಂಡಿಯಾ ಕೂಟದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯ ಬಿಜೆಪಿಯ ಕ್ಲೀನ್ ಸ್ವೀಪ್ ಅಸಂಭವ ಮತ್ತು ಅದು ತನ್ನ ಪ್ರಾಬಲ್ಯ ಕಳೆದುಕೊಳ್ಳಲಿದೆ ಎಂಬುದು ಖಚಿತ.

ಇದನ್ನು ನೋಡಿ : ಮಂಗಳ ಸೂತ್ರ ಮತ್ತು ಮತ ರಾಜಕಾರಣ – ಡಾ. ಮೀನಾಕ್ಷಿ ಬಾಳಿ, ಕೆಎಸ್‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *