-ವಿಜಯ ಪ್ರಶಾದ್ (ಲೇಖನ ಮತ್ತು ಚಿತ್ರಗಳು ಕೃಪೆ : ಟ್ರೈ ಕಾಂಟಿನೆಂಟಲ್ ರಿಸರ್ಚ್)
-ಅನುವಾದ : ವಸಂತರಾಜ ಎನ್.ಕೆ
ಭಾರತದ ಮೋದಿ, ತುರ್ಕಿಯ ಎರ್ಡೊಗನ್, ಯು.ಎಸ್ ನ ಟ್ರಂಪ್ ಚುನಾಯಿತರಾದ ಮೇಲೆ ನಿರಂಕುಶ ಪ್ರಭುಗಳಂತೆ ಆಳಿದರೂ, ತಮ್ಮ ಆಶ್ವಾಸನೆಗಳನ್ನು ಪೂರೈಸದಿದ್ದರೂ ಜನರ ಮೆಚ್ಚುಗೆ ಗಳಿಸುತ್ತಾರೆ, ಮತ್ತೆ ಮತ್ತೆ ಚುನಾಯಿತರಾಗುತ್ತಾರೆ. ಏಕೆ ? ಜಗತ್ತಿನಲ್ಲಿ ಎಡಪಂಥೀಯ, ನಡುಪಂಥೀಯ, ಎಡ-ನಡುಪಂಥೀಯ ಪಕ್ಷಗಳು ಹೆಚ್ಚು ಹೆಚ್ಚಾಗಿ ಚುನಾವಣೆಗಳಲ್ಲಿ ಸೋಲುತ್ತಿದ್ದು ಜಾಗತಿಕ ರಾಜಕಾರಣ ಬಲಪಂಥದತ್ತ, ಅದರಲ್ಲೂ ಉಗ್ರ ಬಲಪಂಥದತ್ತ ಹೊರಳುತ್ತಿದೆ. ಇದು ಒಂದು ಜಾಗತಿಕ ವಿದ್ಯಮಾನ ಎನ್ನಲಾಗಿದೆ. ಯು.ಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುವುದು ಕೆಲವು ವಾರಗಳ ಹಿಂದಿನ ವರೆಗೆ ಹೆಚ್ಚು ಕಡಿಮೆ ಖಚಿತವಾಗಿದ್ದಾಗ ಇದರ ಬಗ್ಗೆ ಚರ್ಚೆ ಆರಂಭವಾಯಿತು. ಬೈಡನ್ ಬದಲು ಕಮಲಾ ಹ್ಯಾರಿಸ್ ಸ್ಪರ್ಧೆಯ ನಂತರ ಪರಿಸ್ಥಿತಿ ಸ್ವಲ್ಪ ಬದಲಾದರೂ ಈ ವಿದ್ಯಮಾನದ ವಿಶ್ಲೇಷಣೆ ಮುಂದುವರೆದಿದೆ. ಈ ವಿದ್ಯಮಾನದ ಕುರಿತು “ಟ್ರೈಕಾಂಟಿನೆಂಟಲ್ ರಿಸರ್ಚ್” ನ ವಿಜಯ ಪ್ರಶಾದ್ ತಮ್ಮ ವಿಶ್ಲೇಷಣೆಯನ್ನು “ವಿಶೇಷ ರೀತಿಯ ಉಗ್ರ ಬಲಪಂಥದ ಕುರಿತು ಹತ್ತು ಪ್ರಮೇಯಗಳು” ಎಂಬ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಅವರು ತಮ್ಮ ವಿಶ್ಲೇಷಣೆಯನ್ನು “ಸಂವಾದಕ್ಕೆ ಆಹ್ವಾನ ಕೊಡುವಒಂದು ತಾತ್ಕಾಲಿಕ ಹೇಳಿಕೆಯಷ್ಟೇ” ಎಂದಿದ್ದಾರೆ. ಟ್ರಂಪ್
2016 ರಿಂದ ಯು.ಎಸ್ ಅಧ್ಯಕ್ಷ ಹುದ್ದೆಗೆ ಡೊನಾಲ್ಡ್ ಟ್ರಂಪ್ ಗಂಭೀರ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬುದರ ಕುರಿತು ವ್ಯಾಪಕವಾದ ದಿಗ್ಭ್ರಮೆ ಕಂಡು ಬಂದಿದೆ. ಈ ‘ಟ್ರಂಪ್ ವಿದ್ಯಮಾನ’ ಪ್ರತ್ಯೇಕವಾದ ವಿಶಿಷ್ಠವಾದ ವಿದ್ಯಮಾನವೇನಲ್ಲ. ವಿಕ್ಟರ್ ಓರ್ಬನ್ (2010 ರಿಂದ ಹಂಗೇರಿಯ ಪ್ರಧಾನ ಮಂತ್ರಿ), ರೆಸೆಪ್ ತಯ್ಯಿಪ್ ಎರ್ಡೋಗನ್ (2014 ರಿಂದ ಟರ್ಕಿಯ ಅಧ್ಯಕ್ಷರು), ಮತ್ತು ನರೇಂದ್ರ ಮೋದಿ (2014 ರಿಂದ ಭಾರತದ ಪ್ರಧಾನ ಮಂತ್ರಿ) ಅವರಂತಹ ಇತರ ಪ್ರಬಲ ವ್ಯಕ್ತಿಗಳಂತೆ ಅದೇ ಕಾಲಮಾನದಲ್ಲಿ ಟ್ರಂಪ್ ಸಹ ಅಧಿಕಾರಕ್ಕೆ ಏರಿದರು. ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದು ಉದಾರವಾದಿ ಸಂಸ್ಥೆಗಳನ್ನು ಬಳಸಿಕೊಂಡೇ ತಮ್ಮ ಆಡಳಿತವನ್ನು ಭದ್ರಪಡಿಸಿಕೊಂಡ ಇಂತಹ ನಾಯಕರನ್ನು ಚುನಾವಣೆಯ ಮೂಲಕ ಶಾಶ್ವತವಾಗಿ ತೆಗೆದುಹಾಕುವುದು ಅಸಾಧ್ಯವೆಂದು ತೋರುತ್ತದೆ. ಟ್ರಂಪ್
ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ : ಕಾಂತೇಶ್ ಸ್ಪರ್ಧೆ ಮಾಡಲ್ಲ: ಕೆ.ಎಸ್.ಈಶ್ವರಪ್ಪ
ಉದಾರವಾದಿ ಪ್ರಜಾಸತ್ತಾತ್ಮಕ ಪ್ರಭುತ್ವಗಳಲ್ಲಿ ಬಲಪಂಥದತ್ತ ಹೊರಳುವುದು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ, ಅದರ ಸಂವಿಧಾನಗಳು ಬಹು-ಪಕ್ಷದ ಚುನಾವಣೆಗಳಿಗೆ ಒತ್ತು ನೀಡುತ್ತವೆ ಮತ್ತು ಏಕಪಕ್ಷೀಯ ಆಡಳಿತವನ್ನು ಕ್ರಮೇಣ ಸ್ಥಾಪಿಸಲು ಅನುವು ಮಾಡಿಕೊಡುತ್ತವೆ. 18 ನೇ ಮತ್ತು 19 ನೇ ಶತಮಾನಗಳಲ್ಲಿ ಯುರೋಪಿಯನ್ ಮತ್ತು ಯುಎಸ್ ವಸಾಹತುಶಾಹಿ ಶಕ್ತಿಗಳಿಂದ ಹೊರಹೊಮ್ಮಿದ ಉದಾರ ಪ್ರಜಾಪ್ರಭುತ್ವದ ಪರಿಕಲ್ಪನೆಯು ಹೆಚ್ಚು ವಿವಾದಿತ ಪರಿಕಲ್ಪನೆಯಾಗಿದೆ. ಆಂತರಿಕ ಬಹುತ್ವ ಮತ್ತು ಸಹಿಷ್ಣುತೆ, ಕಾನೂನುಬದ್ಧ ಆಳ್ವಿಕೆ ಮತ್ತು ರಾಜಕೀಯ ಅಧಿಕಾರಗಳ ಪ್ರತ್ಯೇಕತೆಯ ಹಕ್ಕು – ಇವುಗಳ ಕುರಿತು ಕೊಚ್ಚುವ ಅದರ ಹೇಳಿಕೆಗಳು, ಅದರ ವಸಾಹತುಶಾಹಿ ವಿಜಯಗಳು ಮತ್ತು ತನ್ನದೇ ಆದ ಸಮಾಜಗಳ ಮೇಲೆ ವರ್ಗ ಅಧಿಕಾರವನ್ನುಕಾಪಾಡಿಕೊಳ್ಳಲು ಪ್ರಭುತ್ವವನ್ನು ಬಳಸುವುದರ ಕಾಲಮಾನದಲ್ಲಿ ಬಂದವು. ವಿಶ್ವ ಮಿಲಿಟರಿ ವೆಚ್ಚದ ಲ್ಲಿ ನಾಟೋ ದೇಶಗಳ ಪಾಲು 74.3% ರಷ್ಟಿದೆ ಎಂಬ ಅಂಶದೊಂದಿಗೆ ಇಂದು ಉದಾರವಾದವನ್ನು ಸುಲಭವಾಗಿ ಸಮನ್ವಯಗೊಳಿಸಲಾಗುವುದಿಲ್ಲ. ಟ್ರಂಪ್
ಉದಾರವಾದ ಮತ್ತು ಬಲಪಂಥೀಯರ ನಡುವಿನ ನಿಕಟ ಆಲಿಂಗನ
ಬಹು-ಪಕ್ಷೀಯ ಚುನಾವಣೆಗಳಿಗೆ ಒತ್ತು ನೀಡುವ ಸಂವಿಧಾನಗಳನ್ನು ಹೊಂದಿರುವ ದೇಶಗಳಲ್ಲಿ, ಏಕಪಕ್ಷೀಯ ಆಡಳಿತವು ಕ್ರಮೇಣವಾಗಿ ಪರಿಣಾಮಕಾರಿಯಾಗಿ ಸ್ಥಾಪಿತವಾಗುವುದು ಹೆಚ್ಚಾಗಿ ಕಂಡಿವೆ. ಈ ಏಕಪಕ್ಷೀಯ ಆಡಳಿತವನ್ನು ಕೆಲವೊಮ್ಮೆ ಎರಡು ಅಥವಾ ಮೂರು ಪಕ್ಷಗಳ ಅಸ್ತಿತ್ವದಿಂದ ಮರೆಮಾಚಲಾಗುತ್ತದೆ. ಈ ಪಕ್ಷಗಳ ನಡುವಿನ ವ್ಯತ್ಯಾಸವು ಹೆಚ್ಚು ಕಡಿಮೆ ನಗಣ್ಯವಾಗಿದೆ ಎಂಬ ವಾಸ್ತವವನ್ನು ಸಹ ಅದು ಮರೆಮಾಡುತ್ತದೆ. ಟ್ರಂಪ್
ಹೊಸ ರೀತಿಯ ಬಲಪಂಥೀಯರು ಚುನಾವಣೆಗಳ ಮೂಲಕ ಮಾತ್ರವಲ್ಲದೆ ಸಂಸ್ಕೃತಿ, ಸಮಾಜ, ಸಿದ್ಧಾಂತ ಮತ್ತು ಆರ್ಥಿಕತೆಯ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಹೊರಹೊಮ್ಮಿದ್ದಾರೆ ಮತ್ತು ಈ ಹೊಸ ರೀತಿಯ ಬಲಪಂಥೀಯರು ಉದಾರ ಪ್ರಜಾಪ್ರಭುತ್ವದ ಕಟ್ಟುಪಾಡುಗಳನ್ನು ಕಿತ್ತೊಗೆಯುವ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.. ನಮ್ಮ ದಿವಂಗತ ಹಿರಿಯ ಸಹವರ್ತಿ ಐಜಾಜ್ ಅಹ್ಮದ್ ಅವರ ಬರಹಗಳನ್ನು ಅನುಸರಿಸಿ ನಾವು ಇದನ್ನು ‘ಉದಾರವಾದ ಮತ್ತು ಬಲಪಂಥೀಯರ ನಡುವಿನ ನಿಕಟ ಆಲಿಂಗನ’ ಎಂದು ಕರೆದಿದ್ದೇವೆ.
ಟ್ರಂಪ್
ನಾಲ್ಕು ಸೈದ್ಧಾಂತಿಕ ಅಂಶಗಳು
ಈ ‘ನಿಕಟ ಆಲಿಂಗನ’ ದ ಸೂತ್ರೀಕರಣವು, – ಉದಾರವಾದ ಮತ್ತು ಬಲಪಂಥೀಯರ ನಡುವೆ ಯಾವುದೇ ಅಗತ್ಯ ವಿರೋಧಾಭಾಸವಿಲ್ಲ; ಮತ್ತು ವಾಸ್ತವವಾಗಿ ಉದಾರವಾದವು ಬಲಪಂಥೀಯರ ವಿರುದ್ಧ ಗುರಾಣಿಯಾಗಿಲ್ಲ ಹಾಗೂ ಖಂಡಿತವಾಗಿಯೂ ಅದರ ವಿಷನಿವಾರಕವಲ್ಲ ಎಂದು ಅರ್ಥಮಾಡಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. ಈ ‘ನಿಕಟ ಆಲಿಂಗನ’ ಮತ್ತು ವಿಶೇಷ ಪ್ರಕಾರದ ಈ ಉಗ್ರ-ಬಲಪಂಥದ ಉಗಮ-ವಿಕಾಸ ಗಳನ್ನು ಅರ್ಥಮಾಡಿಕೊಳ್ಳಲು ನಾಲ್ಕು ಸೈದ್ಧಾಂತಿಕ ಅಂಶಗಳು ಪ್ರಮುಖವಾಗಿವೆ:
1. ಉದಾರವಾದಿ ಚುನಾವಣಾ ಸಂಸ್ಥೆಗಳನ್ನು ಹೊಂದಿರುವ ದೇಶಗಳಲ್ಲಿ, ಉದಾರ ಸಂವೇದನೆಗಳು ಅಸ್ತಿತ್ವದಲ್ಲಿರಲು ಅವಕಾಶ ಮಾಡಿಕೊಟ್ಟ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು, ನವ ಉದಾರವಾದಿ ಕಠಿಣ ನೀತಿಗಳು ಸೋಲಿಸಿದವು. ಇದರಿಂದಾಗಿ ಬಡವರನ್ನು ನೋಡಿಕೊಳ್ಳುವಲ್ಲಿ ಪ್ರಭುತ್ವದ ವೈಫಲ್ಯದ ಭಾವನೆಯ ಬದಲು, ಕ್ರಮೇಣ ಅವರತ್ತ ಕಠೋರತನವಾಗಿ ಮಾರ್ಪಟ್ಟಿತು. ಟ್ರಂಪ್
2. ಸಾಮಾಜಿಕ ಕಲ್ಯಾಣ ಮತ್ತು (ಸಂಪತ್ತಿನ) ಪುನರ್ವಿತರಣಾ ಯೋಜನೆಗಳಿಗೆ ಗಂಭೀರ ಬದ್ಧತೆಯಿಲ್ಲದೆ, ಉದಾರವಾದವು ಸ್ವತಃ ಬಲಪಂಥೀಯ ನೀತಿಗಳ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಯಿತು. ಸ್ವೀಕರಿಸುವವರು ತಮ್ಮನ್ನು ಮೂಲಭೂತ ಮಾನವ ಹಕ್ಕುಗಳನ್ನು ಬಿಟ್ಟುಕೊಡಲು ತಯಾರಿದ್ದರೆ ಮಾತ್ರ ವಿತರಿಸಲಾಗುವ (ಉದಾಹರಣೆಗೆ ‘ಕಡ್ಡಾಯವಾಗಿ ಜನನ ನಿಯಂತ್ರಣ’ ಒಪ್ಪುವ), ಸಾಮಾಜಿಕ ಸರಕುಗಳ ಹೆಚ್ಚುತ್ತಿರುವ ಜಿಪುಣ ವಿತರಣೆಯ ಜೊತೆಗೆ, ಕಾರ್ಮಿಕ-ವರ್ಗದ ಸಮುದಾಯಗಳನ್ನು ಮತ್ತು ಅಂತರರಾಷ್ಟ್ರೀಯ ಗಡಿಗಳ ಮೇಲೆ ಕಣ್ಣಿಡುವ ದಮನಕಾರಿ ಉಪಕರಣದ ಮೇಲಿನ ಹೆಚ್ಚಿದ ಖರ್ಚು – ಈ ಉಗ್ರ-ಬಲಪಂಥೀಯ ನೀತಿಗಳಲ್ಲಿ ಸೇರಿರುತ್ತವೆ. ಟ್ರಂಪ್
3. ಉದಾರವಾದದ ಪಕ್ಷಗಳು ವಿಶೇಷ ಪ್ರಕಾರದ ಬಲಪಂಥೀಯರು ಪ್ರತಿಪಾದಿಸಿದ ನೀತಿಗಳತ್ತ ಮುಖ ಮಾಡಿದಂತೆ, ತಮ್ಮನ್ನು ರಾಜಕೀಯ ಶಕ್ತಿಯಾಗಿ ಹೆಚ್ಚು ಹೆಚ್ಚಾಗಿ ಜನ ಅಂಗೀಕರಿಸುತ್ತಾರೆ ಎಂಬುದನ್ನು ಅವರು ಕಂಡುಕೊಂಡರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಉದಾರವಾದಿಗಳು ಬಲಪಂಥೀಯ ನೀತಿಗಳತ್ತ ಮುಖ ಮಾಡುವ ಈ ಪ್ರವೃತ್ತಿಯು, ಬಲಪಂಥೀಯರನ್ನು ಮುಖ್ಯವಾಹಿನಿಯಾಗಲು ಅವಕಾಶ ಮಾಡಿಕೊಟ್ಟಿತು. ಟ್ರಂಪ್
4. ಅಂತಿಮವಾಗಿ, ಪ್ರಜಾಸತ್ತಾತ್ಮಕ ಮತ್ತಿತರ ಸಂಸ್ಥೆಗಳ ಮೇಲಿನ ಎಡಪಂಥೀಯ ಹಿಡಿತವನ್ನು ಕಡಿಮೆ ಮಾಡಲು ಉದಾರವಾದದ ರಾಜಕೀಯ ಶಕ್ತಿಗಳು ಮತ್ತು ಉಗ್ರ-ಬಲಪಂಥೀಯರು ಹಲವು ರಂಗಗಳಲ್ಲಿ ಒಂದಾದರು. ಉಗ್ರ- ಬಲಪಂಥೀಯರು ಮತ್ತು ಉದಾರವಾದಿಗಳಿಗೆ, ವರ್ಗಕ್ಕೆ ಸಂಬಂಧಿಸಿದಂತೆ ಯಾವುದೇ ಮೂಲಭೂತ ಆರ್ಥಿಕ ಭೀನ್ನಾಭಿಪ್ರಾಯಗಳಿಲ್ಲ. ಸಾಮ್ರಾಜ್ಯಶಾಹಿ ರಾಷ್ಟ್ರಗಳಲ್ಲಿ, ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಪೂರ್ಣ ಪ್ರಮಾಣದ ಮಿಲಿಟರಿ ಬೆಂಬಲದಿಂದ ಕಂಡುಬರುವಂತೆ, ಜಾಗತಿಕ ದಕ್ಷಿಣದ ಬಗ್ಗೆ ಯು.ಎಸ್ ಪ್ರಾಬಲ್ಯ, ಹಗೆತನ ಮತ್ತು ತಿರಸ್ಕಾರ ಮತ್ತು ಹೆಚ್ಚಿದ ಉನ್ಮಾದಕರ ದೇಶಭಕ್ತಿಯನ್ನು ಕಾಪಾಡಿಕೊಳ್ಳುವ ದೃಷ್ಟಿಕೋನಗಳ ಬಗ್ಗೆ ಇವೆರಡರ ನಡುವೆ ಹೆಚ್ಚಿನ ಸಂಗಮವಿದೆ. ಟ್ರಂಪ್
1945 ರಲ್ಲಿ ಇಟಾಲಿಯನ್, ಜರ್ಮನ್ ಮತ್ತು ಜಪಾನೀಸ್ ಫ್ಯಾಸಿಸಂನ ಸೋಲಿನ ನಂತರ, ಪಶ್ಚಿಮದಲ್ಲಿ ವ್ಯಾಖ್ಯಾನಕಾರರು ತಮ್ಮ ಸಮಾಜಗಳಲ್ಲಿ ಉಗ್ರ ಬಲಪಂಥೀಯರ ಮರು ಉದಯದ ಬಗ್ಗೆ ಚಿಂತಿತರಾಗಿದ್ದರು. ಬಂಡವಾಳಶಾಹಿಯ ವೈರುಧ್ಯಗಳಿಂದಲೇ ಉಗ್ರ-ಬಲಪಂಥೀಯರು ಹೊರಹೊಮ್ಮಿದ್ದಾರೆ. ನಾಜಿ ಜರ್ಮನಿಯ ಕುಸಿತವು ಉಗ್ರ ಬಲಪಂಥೀಯರ ಇತಿಹಾಸದಲ್ಲಿ ಮತ್ತು ಬಂಡವಾಳಶಾಹಿಯ ಬೆಳವಣಿಗೆಯಲ್ಲಿ ಕೇವಲ ಒಂದು ಹಂತವಾಗಿತ್ತು: ಅದು ಬಹುಶಃ ವಿಭಿನ್ನ ಬಟ್ಟೆಗಳನ್ನು ಧರಿಸಿ ಮತ್ತೆ ಹೊರಹೊಮ್ಮುತ್ತದೆ, ಎಂದು ಹೆಚ್ಚಿನ ಮಾರ್ಕ್ಸ್ ವಾದಿಗಳು ಆಗಲೇ ಗುರುತಿಸಿದ್ದರು. ಟ್ರಂಪ್
ಕೇಡು ಮಾಡಲು ಬ್ಯಾಂಕುಗಳು ಇರುವಾಗ ಟ್ಯಾಂಕುಗಳು ಯಾಕೆ ಬೇಕು?
1964 ರಲ್ಲಿ, ಪೋಲಿಷ್ ಮಾರ್ಕ್ಸ್ ವಾದಿಗಳು ಮೈಕೆಲ್ ಕಲೆಕಿ ‘ನಮ್ಮ ಕಾಲದ ಫ್ಯಾಸಿಸಂ (‘Faszyzm naszych czasów’) ಎಂಬ ಪ್ರಭಾವಶಾಲಿ ಲೇಖನವನ್ನು ಬರೆದರು. ಆ ಪ್ರಬಂಧದಲ್ಲಿ, ಆ ಸಮಯದಲ್ಲಿ ಹೊರಹೊಮ್ಮುತ್ತಿದ್ದ ಹೊಸ ರೀತಿಯ ಫ್ಯಾಸಿಸ್ಟ್ ಗುಂಪುಗಳು “ಜನತೆಯ ವಿಶಾಲ ಜನಸಮೂಹಗಳ ಪ್ರತಿಗಾಮಿ ಶಕ್ತಿ” ಗಳನ್ನು ಆಕರ್ಷಿಸಿದವು ಮತ್ತು ದೈತ್ಯ ಉದ್ಯಮದ ಅತ್ಯಂತ ಪ್ರತಿಗಾಮಿ ಗುಂಪುಗಳಿಂದ ಉದಾರ ನೆರವು ಕುಮ್ಮಕ್ಕುಗಳನ್ನು ಪಡೆದವು ಎಂದು ಕಲೆಕಿ ಹೇಳಿದರು. ಆದಾಗ್ಯೂ, ಕಲೆಕಿ ಬರೆದರು, “ಒಟ್ಟಾರೆಯಾಗಿ ಆಳುವ ವರ್ಗಗಳು, ಫ್ಯಾಸಿಸ್ಟ್ ಗುಂಪುಗಳು ಅಧಿಕಾರವನ್ನು ವಶಪಡಿಸಿಕೊಳ್ಳುವುದನ್ನು ಇಷ್ಟ ಪಡದಿದ್ದರೂ, ಅವುಗಳನ್ನು ನಿಗ್ರಹಿಸಲು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ ಮತ್ತು ಅವುಗಳ ಉತ್ಸಾಹದ ಅತಿರೇಕಗಳನ್ನು ಬರಿಯ ಮಾತುಗಳಲ್ಲಿ ಖಂಡಿಸುವುದಕ್ಕೆ ತನ್ನನ್ನು ಸೀಮಿತಗೊಳಿಸುತ್ತದೆ”.
ಈ ಮನೋಭಾವವು ಇಂದಿಗೂ ಮುಂದುವರೆದಿದೆ: ಒಟ್ಟಾರೆಯಾಗಿ ಆಳುವ ವರ್ಗಗಳು, ಈ ಫ್ಯಾಸಿಸ್ಟ್ ಗುಂಪುಗಳ ಉದಯ- ವಿಕಾಸಕ್ಕೆ ಹೆದರುವುದಿಲ್ಲ, ಆದರೆ ಅವರ ‘ಅತಿರೇಕದ ’ ನಡವಳಿಕೆಗಳಿಗೆ ಮಾತ್ರ ಆಕ್ಷೇಪಿಸುತ್ತವೆ. ಆದರೆ ದೈತ್ಯ ಉದ್ಯಮಗಳ ಅತ್ಯಂತ ಪ್ರತಿಗಾಮಿ ವಿಭಾಗಗಳು ಈ ಗುಂಪುಗಳನ್ನು ಆರ್ಥಿಕವಾಗಿ ಬೆಂಬಲಿಸುತ್ತವೆ. ಒಂದೂವರೆ ದಶಕದ ನಂತರ, ರೊನಾಲ್ಡ್ ರೇಗನ್ ಯು.ಎಸ್ ಅಧ್ಯಕ್ಷರಾಗುವ ಹೊಸ್ತಿಲಲ್ಲಿರುವಂತೆ ತೋರಿದಾಗ, ಬರ್ಟ್ರಾಮ್ ಗ್ರಾಸ್ “Friendly Fascism: The New Face of Power in America” (1980) (ಸ್ನೇಹಿ ಫ್ಯಾಸಿಸಂ : ಅಮೆರಿಕದಲ್ಲಿ ಅಧಿಕಾರದ ಹೊಸ ಮುಖ) ಅನ್ನು ಪ್ರಕಟಿಸಿದರು. ಇದರಲ್ಲಿ ಅವರು The Power Elite (1956) by C. Wright Mills ಮತ್ತು Monopoly Capital: An Essay on the American Economic and Social Order (1966) by Paul A. Baran and Paul M. Sweezy – ಈ ಎರಡು ಕೃತಿಗಳಿಂದ ಹಲವು ಅಂಶಗಳನ್ನು ತೆಗೆದುಕೊಂಡರು. ಟ್ರಂಪ್
ದೊಡ್ಡ ಏಕಸ್ವಾಮ್ಯದ ಸಂಸ್ಥೆಗಳು ಯು.ಎಸ್ ನಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಕತ್ತು ಹಿಸುಕಿರುವುದರಿಂದ, ಬಲಪಂಥೀಯರಿಗೆ ‘ಜಾಕ್ ಬೂಟುಗಳು ಮತ್ತು ಸ್ವಸ್ತಿಕಗಳು’ ಅಗತ್ಯವಿಲ್ಲ; ಈ ದೃಷ್ಟಿಕೋನವು ಉದಾರ ಪ್ರಜಾಪ್ರಭುತ್ವದ ಸಂಸ್ಥೆಗಳ ಮೂಲಕ ಬರುತ್ತದೆ – ಎಂದು ಗ್ರಾಸ್ ವಾದಿಸಿದರು. ಕೇಡು ಮಾಡಲು ಬ್ಯಾಂಕುಗಳು ಇರುವಾಗ ಟ್ಯಾಂಕುಗಳು ಯಾಕೆ ಬೇಕು? ಟ್ರಂಪ್
ಹತ್ತು ಪ್ರಮೇಯಗಳು
ಉದಾರವಾದ ಮತ್ತು ಉಗ್ರ ಬಲಪಂಥೀಯರ ನಡುವಿನ ಅನ್ಯೋನ್ಯತೆಯು ಹೊಸ ವಿದ್ಯಮಾನವಲ್ಲ, ಅದು ಉದಾರವಾದದ ಬಂಡವಾಳಶಾಹಿ ಮೂಲದ ಆಳದಿಂದ ಹೊರಹೊಮ್ಮುತ್ತದೆ ಎಂದು ಕಾಲೆಕಿ ಮತ್ತು ಗ್ರಾಸ್ ಅವರ ಎಚ್ಚರಿಕೆಗಳು ನಮಗೆ ನೆನಪಿಸುತ್ತವೆ. ಬಂಡವಾಳಶಾಹಿಯ ಸಾಮಾನ್ಯ ಕ್ರೌರ್ಯದ ಸ್ನೇಹಪರ ಮುಖ ಬಿಟ್ಟರೆ, ಉದಾರವಾದವು ಎಂದಿಗೂ ಬೇರೇ ಏನೂ ಆಗಿರಲಿಲ್ಲ. ಉದಾರವಾದಿಗಳು ಬಲಪಂಥೀಯರಿಂದ ತಮ್ಮ ದೂರ ಸ್ಥಾಪಿಸಲು ‘ಫ್ಯಾಸಿಸಂ’ ಎಂಬ ಪದವನ್ನು ಬಳಸುತ್ತಿದ್ದಾರೆ. ಈ ಪದದ ಬಳಕೆಯು ನಿಖರಕ್ಕಿಂತ ಹೆಚ್ಚು ನೈತಿಕವಾಗಿದೆ. ಏಕೆಂದರೆ ಇದು ಉದಾರವಾದಿಗಳು ಮತ್ತು ಉಗ್ರ ಬಲಪಂಥೀಯರ ನಡುವಿನ ಅನ್ಯೋನ್ಯತೆಯನ್ನು ನಿರಾಕರಿಸುತ್ತದೆ. ಆ ನಿಟ್ಟಿನಲ್ಲಿ, ನಾವು ವಿಶೇಷ ಪ್ರಕಾರದ ಈ ಉಗ್ರ ಬಲಪಂಥೀಯತೆಯ ಕುರಿತು ಹತ್ತು ಪ್ರಮೇಯಗಳನ್ನು ರೂಪಿಸಿದ್ದೇವೆ, ಇದು ವಾಗ್ವಾದ ಮತ್ತು ಚರ್ಚೆಯನ್ನು ಪ್ರಚೋದಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಸಂವಾದಕ್ಕೆ ಆಹ್ವಾನ ಕೊಡುವ ಒಂದು ತಾತ್ಕಾಲಿಕ ಹೇಳಿಕೆಯಾಗಿದೆಯಷ್ಟೇ. ಟ್ರಂಪ್
ಪ್ರಮೇಯ ಒಂದು: ವಿಶೇಷ ಪ್ರಕಾರದ ಬಲಪಂಥೀಯರು ಸಾಧ್ಯವಾದಷ್ಟು ಪ್ರಜಾಪ್ರಭುತ್ವ ಸಾಧನಗಳನ್ನು ಬಳಸುತ್ತಾರೆ. ಇದು “ಸಂಸ್ಥೆಗಳ ಮೂಲಕ ದೀರ್ಘ ಪಯಣ (ಲಾಂಗ್ ಮಾರ್ಚ್)” ಎಂದು ಕರೆಯಲ್ಪಡುವ ಪ್ರಕ್ರಿಯೆಯನ್ನು ನಂಬುತ್ತದೆ. ಅದರ ಮೂಲಕ ಅದು ತಾಳ್ಮೆಯಿಂದ ರಾಜಕೀಯ ಶಕ್ತಿಯನ್ನು ಕಟ್ಟಿಕೊಳ್ಳುತ್ತದೆ ಮತ್ತು ತನ್ನ ಕಾರ್ಯಕರ್ತರನ್ನು ಉದಾರ ಪ್ರಜಾಪ್ರಭುತ್ವದ ಶಾಶ್ವತ ಸಂಸ್ಥೆಗಳಲ್ಲಿ ಸಿಬ್ಬಂದಿಯಾಗಿ ಮಾಡುತ್ತದೆ. ನಂತರ ಅವರು ತಮ್ಮ ಅಭಿಪ್ರಾಯಗಳನ್ನು ಮುಖ್ಯವಾಹಿನಿಯ ಚಿಂತನೆಗೆ ತಳ್ಳುತ್ತಾರೆ. ತಮ್ಮ ದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ನಿರ್ಧರಿಸುವುದರಿಂದ ಶಿಕ್ಷಣ ಸಂಸ್ಥೆಗಳಿಗೆ, ವಿಶೇಷ ಪ್ರಕಾರದ ಬಲಪಂಥ ಪ್ರಾಮುಖ್ಯತೆ ನೀಡುತ್ತದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಪ್ರಭುತ್ವದ ಮೇಲೆ ಮಾತ್ರವಲ್ಲದೆ ಸಮಾಜದ ಮೇಲೆ ಅಧಿಕಾರದ ಹಾದಿಯನ್ನು ಒದಗಿಸುವವರೆಗೆ, ವಿಶೇಷ ರೀತಿಯ ಈ ಬಲಪಂಥೀಯರಿಗೆ ಇವನ್ನು ಬದಿಗೊತ್ತುವ ಅಗತ್ಯವಿಲ್ಲ.
ಪ್ರಮೇಯ ಎರಡು: ವಿಶೇಷ ಪ್ರಕಾರದ ಉಗ್ರ ಬಲಪಂಥೀಯರು ಪ್ರಭುತ್ವವನ್ನು ದುರ್ಬಲಗೊಳಿಸುತ್ತಾ ಮತ್ತು ಅದರ ಕಾರ್ಯಭಾರಗಳನ್ನು ಖಾಸಗಿ ವಲಯಕ್ಕೆ ವರ್ಗಾಯಿಸುತ್ತಿದ್ದಾರೆ. ಯು.ಎಸ್ ನಲ್ಲಿ, ಉದಾಹರಣೆಗೆ, ವಿದೇಶಾಂಗ ನೀತಿ ನಿರ್ವಹಣೆಯ ವಿಭಾಗದಂತಹ ವಿಭಾಗದಲ್ಲೂ ಮಿತವ್ಯಯಕ್ಕೆ ಅದರ ಒಲವು, ಈ ಪ್ರಮುಖ ಪ್ರಭುತ್ವದ ಕಾರ್ಯಭಾರಗಳಲ್ಲಿ ಸಿಬ್ಬಂದಿಯ ಪ್ರಮಾಣ ಮತ್ತು ಗುಣಮಟ್ಟವನ್ನು ನಾಶ ಮಾಡುತ್ತಿದೆ. ಅಂತಹ ಸಂಸ್ಥೆಗಳ ಅನೇಕ ಕಾರ್ಯಭಾರಗಳು, ಈಗ ಖಾಸಗೀಕರಣಗೊಂಡಿವೆ, ಮತ್ತು ಹೊಸದಾಗಿ ಹೊರಹೊಮ್ಮುತ್ತಿರುವ ಶತಕೋಟ್ಯಾಧೀಶ ಬಂಡವಾಳಶಾಹಿಗಳಾದ ಚಾರ್ಲ್ಸ್ ಕೋಚ್, ಜಾರ್ಜ್ ಸೊರೊಸ್, ಪಿಯರೆ ಒಮಿಡಿಯಾರ್ ಮತ್ತು ಬಿಲ್ ಗೇಟ್ಸ್ ನೇತೃತ್ವದ ಸರ್ಕಾರೇತರ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತವೆ.
ಪ್ರಮೇಯ ಮೂರು: ವಿಶೇಷ ಪ್ರಕಾರದ ಉಗ್ರ ಬಲಪಂಥೀಯರು ರಾಜ್ಯದ ದಮನಕಾರಿ ಉಪಕರಣವನ್ನು ಕಾನೂನು ಅನುಮತಿಸುವಷ್ಟು ಮಟ್ಟಿಗೆ, ಅದರ ವಿಮರ್ಶಕರ ಟೀಕಾಕಾರರ ಬಾಯಿ ಮುಚ್ಚಿಸಲು ಮತ್ತು ಆರ್ಥಿಕ ಮತ್ತು ರಾಜಕೀಯ ವಿರೋಧದ ಚಳುವಳಿಗಳನ್ನು ಅಣಿ ನೆರೆಸದಂತೆ ಮಾಡಲು ಬಳಸುತ್ತಾರೆ. ಲಿಬರಲ್ ಸಂವಿಧಾನಗಳು ಈ ರೀತಿಯ ಬಳಕೆಗೆ ವ್ಯಾಪಕ ಸಾಧ್ಯತೆಗಳನ್ನು ಒದಗಿಸುತ್ತವೆ. ಕಾರ್ಮಿಕ ವರ್ಗ, ರೈತರು ಮತ್ತು ಎಡಪಂಥೀಯರಿಂದ ಯಾವುದೇ ಪ್ರತಿರೋಧವನ್ನು ನಿಗ್ರಹಿಸಲು, ದೀರ್ಘ ಸಮಯದಿಂದಲೂ ಉದಾರವಾದಿ ರಾಜಕೀಯ ಶಕ್ತಿಗಳು ಈ ಸಾಧ್ಯತೆಗಳ ಲಾಭವನ್ನು ಪಡೆದುಕೊಂಡಿವೆ.
ಪ್ರಮೇಯ ನಾಲ್ಕು: ವಿಶೇಷ ಪ್ರಕಾರದ ಬಲಪಂಥೀಯರು ಅದರ ರಾಜಕೀಯ ಒಕ್ಕೂಟದೊಳಗಿನ ಹೆಚ್ಚು ಫ್ಯಾಸಿಸ್ಟ್ ಭಾಗಗಳಿಂದ ಸಮಾಜದಲ್ಲಿ ಭಯವನ್ನು ಸೃಷ್ಟಿಸುವಷ್ಟು, ಆದರೆ ತನ್ನ ವಿರುದ್ಧ ಜನರು ತಿರುಗಿ ಬೀಳದಷ್ಟು ಪ್ರಮಾಣಕ್ಕೆ ಅದನ್ನು ಮಿತಗೊಳಿಸುವಷ್ಟು, ಮೈಕ್ರೋ ಪ್ರಮಾಣದ ಹಿಂಸಾಚಾರವನ್ನು ಪ್ರಚೋದಿಸುತ್ತಾರೆ. ಪ್ರಪಂಚದಾದ್ಯಂತದ ಹೆಚ್ಚಿನ ಮಧ್ಯಮ- ವರ್ಗದ ಜನರು ಎಲ್ಲ ರೀತಿಯ ಅನುಕೂಲಗಳನ್ನು ಬಯಸುತ್ತಾರೆ ಮತ್ತು ತಮಗೆ ಆಗುವ ಅನಾನುಕೂಲತೆಗಳು (ಉದಾಹರಣೆಗೆ ಗಲಭೆಗಳು, ಇತ್ಯಾದಿ) ಅವರನ್ನು ಗಲಿಬಿಲಿಗೊಳಿಸುತ್ತವೆ. ಆದರೆ, ಕೆಲವು ಸಂದರ್ಭಗಳಲ್ಲಿ, ‘ದೂರದ’ ಕಾರ್ಮಿಕ ನಾಯಕನ ಹತ್ಯೆ ಅಥವಾ ‘ದೂರದ’ ಪತ್ರಕರ್ತರಿಗೆ ಮಾಡಿದ ಬೆದರಿಕೆಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿ ವಿಶೇಷ ಪ್ರಕಾರದ ಬಲಪಂಥೀಯರನ್ನು ದೂಷಿಸುವುದಿಲ್ಲ. ಮಾತ್ರವಲ್ಲ, ಇದನ್ನು ತಾವೇ ಮಾಡಿದ್ದು ಎಂದು ಹೇಳಿಕೊಂಡ ‘ಅಂಚಿನ’ ಫ್ಯಾಸಿಸ್ಟ್ ಗುಂಪುಗಳೊಂದಿಗೆ (ಇವು ಉಗ್ರ ಬಲಪಂಥೀಯರಿಗೆ ಸಾವಯವವಾಗಿ ಸಂಬಂಧಿಸಿದ್ದರೂ) ಯಾವುದೇ ನೇರ ಸಂಬಂಧವನ್ನು ಅದು ತರಾತುರಿಯಲ್ಲಿ ನಿರಾಕರಿಸುತ್ತವೆ.
ಪ್ರಮೇಯ ಐದು: ವಿಶೇಷ ಪ್ರಕಾರದ ಬಲಪಂಥ ಮುಂದುವರಿದ ಬಂಡವಾಳಶಾಹಿ ಸಮಾಜದ ನೇಯ್ಗೆಯ ಅವಿಭಾಜ್ಯ ಭಾಗವಾದ ಒಂಟಿತನಕ್ಕೆ ಭಾಗಶಃ ಉತ್ತರವನ್ನು ಒದಗಿಸುತ್ತದೆ. ಈ ಒಂಟಿತನವು ಅನಿಶ್ಚಿತ ಮತ್ತು ದೀರ್ಘ ಗಂಟೆಗಳ ಕೆಲಸದ ಪರಿಸ್ಥಿತಿಗಳ ಪರಕೀಯ ಭಾವನೆಯಿಂದ ಉಂಟಾಗುತ್ತದೆ. ಇದು ಹುರುಪಿನ ಸಾಮುದಾಯಿಕ ಮತ್ತು ಸಾಮಾಜಿಕ ಜೀವನವನ್ನು ನಿರ್ಮಿಸುವ ಸಾಧ್ಯತೆಯನ್ನು ನಾಶಪಡಿಸುತ್ತದೆ. ಧಾರ್ಮಿಕ ಸಮುದಾಯಗಳೊಂದಿಗೆ ಅದರ ಪರಾವಲಂಬಿ ಸಂಬಂಧಕ್ಕೆ ಒಳಪಟ್ಟಾಗ ಹೊರತುಪಡಿಸಿ, ಈ ಬಲಪಂಥೀಯರು ನಿಜವಾದ ಸಮುದಾಯವನ್ನು ಕಟ್ಟುವುದಿಲ್ಲ. ಬದಲಿಗೆ, – ಇಂಟರ್ನೆಟ್ ಮೂಲಕ ,ಅಥವಾ ವ್ಯಕ್ತಿಗಳನ್ನು ಸಾಮೂಹಿಕವಾಗಿ ಸಜ್ಜುಗೊಳಿಸುವ ಮೂಲಕ, ಅಥವಾ ಹಂಚಿಕೆಯ ಚಿಹ್ನೆಗಳು ಮತ್ತು ಸನ್ನೆಗಳ ಮೂಲಕ – ಸಮುದಾಯದ ಕಲ್ಪನೆಯನ್ನು ಅಭಿವೃದ್ಧಿಪಡಿಸುತ್ತದೆ. ಸಮುದಾಯದ ಭಾಗವಾಗಿರಲು ಇರುವ ಅಪಾರ ಹಸಿವನ್ನು ಉಗ್ರ ಬಲಪಂಥೀಯರು ಸ್ಪಷ್ಟವಾಗಿ ಪರಿಹರಿಸುತ್ತಾರೆ, ಆದರೆ ಒಂಟಿತನದ ಸಾರವು ಪ್ರೀತಿಗಿಂತ ಹೆಚ್ಚಾಗಿ ಕೋಪವಾಗಿ ಹರಿಯುತ್ತದೆ.ಟ್ರಂಪ್
ಪ್ರಮೇಯ ಆರು: ವಿಶೇಷ ಪ್ರಕಾರದ ಬಲಪಂಥೀಯರು ಅದರ ಸಂಕಥನವನ್ನು ಸಾಮಾನ್ಯಗೊಳಿಸಲು, ತಾವು ಸಾಮೀಪ್ಯ ಹೊಂದಿರುವ ಖಾಸಗಿ ಮಾಧ್ಯಮ ಸಂಸ್ಥೆಗಳನ್ನು ಬಳಸುತ್ತಾರೆ. ಮತ್ತು ಅದರ ಚಿಂತನೆಗಳ ಸಾಮಾಜಿಕ ಸ್ವೀಕಾರವನ್ನು ಹೆಚ್ಚಿಸಲು ಅದರ ಸಾಮೀಪ್ಯ ಇರುವ ಸಾಮಾಜಿಕ ಮಾಧ್ಯಮದ ಮಾಲೀಕರನ್ನು ಬಳಸುತ್ತಾರೆ. ಈ ಹೆಚ್ಚು ಪ್ರಕ್ಷೋಭನಕಾರಿ ಸಂಕಥನವು ಉನ್ಮಾದವನ್ನು ಸೃಷ್ಟಿಸುತ್ತದೆ, ಜನವಿಭಾಗಗಳನ್ನು ಆನ್-ಲೈನ್ ಅಥವಾ ಬೀದಿಗಳಲ್ಲಿ ರ್ಯಾಲಿಗಳಲ್ಲಿಭಾಗವಹಿಸಲು ಸಜ್ಜುಗೊಳಿಸುತ್ತದೆ. ಆದರೂ ಅಲ್ಲಿ ಅವರು ಸಾಮೂಹಿಕ ಸದಸ್ಯರಿಗಿಂತ ಹೆಚ್ಚಾಗಿ ವ್ಯಕ್ತಿಗಳಾಗಿ ಉಳಿಯುತ್ತಾರೆ. ಬಂಡವಾಳಶಾಹಿ ಪರಕೀಯತೆಯಿಂದ ಉಂಟಾಗುವ ಒಂಟಿತನದ ಭಾವನೆಯು ಒಂದು ಕ್ಷಣ ಮಂದವಾಗುತ್ತದೆ, ಆದರೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ.
ಪ್ರಮೇಯ ಏಳು: ವಿಶೇಷ ಪ್ರಕಾರದ ಬಲಪಂಥವು ಅಕ್ಟೋಪಸ್ ನಂತೆ ಹಲವು ಕೈಕಾಲುಗಳಿರುವ ಸಂಸ್ಥೆಯಾಗಿದ್ದು, ಅದರ ಬೇರುಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹರಡಿವೆ. ಕ್ರೀಡಾ ಕ್ಲಬ್ ಗಳು ಅಥವಾ ದಾನ-ದತ್ತಿ ಸಂಸ್ಥೆಗಳಲ್ಲಿ ಹೀಗೆ ಜನರು ಸೇರುವಲ್ಲೆಲ್ಲಾ ಇದು ಕಾರ್ಯನಿರ್ವಹಿಸುತ್ತದೆ. ಒಂದು ನಿರ್ದಿಷ್ಟ ಸ್ಥಳದಲ್ಲಿ (ಜನಾಂಗ, ಧರ್ಮ ಅಥವಾ ರಾಷ್ಟ್ರೀಯ ಅಸ್ತಿತ್ವದ ಪ್ರಜ್ಞೆ) ಬಹುಸಂಖ್ಯಾತ ಗುರುತಿನ ಆಧಾರದಲ್ಲಿ ಮತ್ತು ಯಾವುದೇ ಅಲ್ಪಸಂಖ್ಯಾತರನ್ನು ಕಡೆಗಣಿಸುವ ಮತ್ತು ರಾಕ್ಷಸೀಕರಿಸುವ ಮೂಲಕ ಬೇರೂರುತ್ತಾ, ಸಮಾಜದಲ್ಲಿ ಸಾಮೂಹಿಕ ನೆಲೆಯನ್ನು ನಿರ್ಮಿಸುವ ಗುರಿಯನ್ನು ಇದು ಹೊಂದಿದೆ. ಅನೇಕ ದೇಶಗಳಲ್ಲಿ, ಸಮಾಜ ಮತ್ತು ಕುಟುಂಬದ ಸಂಪ್ರದಾಯವಾದಿ ದೃಷ್ಟಿಕೋನವನ್ನು ಹೆಚ್ಚು ಆಳವಾಗಿ ಒಳಗೆ ಕೂರಿಸಲು ಈ ಬಲಪಂಥೀಯರು ಧಾರ್ಮಿಕ ರಚನೆಗಳು ಮತ್ತು ಜಾಲಗಳ ಮೇಲೆ ಅವಲಂಬಿತರಾಗುತ್ತಾರೆ.
ಪ್ರಮೇಯ ಎಂಟು: ವಿಶೇಷ ಪ್ರಕಾರದ ಬಲಪಂಥೀಯರು ಅದರ ಸಾಮಾಜಿಕ-ರಾಜಕೀಯ ತಳಹದಿಯ ಅಡಿಪಾಯವಾಗಿರುವ ಅಧಿಕಾರದ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಾರೆ. ಇದು ಸಮಾಜದಲ್ಲಿ ಮಿತಜನ-ಸರ್ವಾಧಿಕಾರದಿಂದ (ಒಲಿಗಾರ್ಕಿ) ಆಳುವ ಭಾರೀ ಶ್ರೀಮಂತರ ಜೇಬಿನಲ್ಲಿ ಇರುವಾಗಲೇ, ತಾನು ಪ್ರತಿಷ್ಟಿತರ ಬದಲು ಸಾಮಾನ್ಯರ ಪರ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ. ಇದು ಅತಿ-ರಾಷ್ಟ್ರೀಯತೆಯ ಅತ್ಯಂತ ಪುರುಷಾಹಂಕಾರದ ರೂಪವನ್ನು ಅಭಿವೃದ್ಧಿಪಡಿಸುವ ಮೂಲಕ ಸಾಮಾನ್ಯರ ಭ್ರಮೆಯನ್ನು ಸೃಷ್ಟಿಸುತ್ತದೆ. ಅದರ ಅವನತಿಯು ಅದರ ಕೊಳಕು ವಾಕ್ಚಾತುರ್ಯದಲ್ಲಿ ತೊಟ್ಟಿಕ್ಕುತ್ತದೆ. ಈ ಉಗ್ರ ಬಲಪಂಥೀಯರು ಒಂದು ಕಡೆ ಈ ಅತಿ-ರಾಷ್ಟ್ರೀಯತೆಯ ‘ವೀರ್ಯವಂತಿಕೆ’ಯ ಶಕ್ತಿಯನ್ನು ಹರಡುತ್ತಾರೆ ಮತ್ತು ಇನ್ನೊಂದು ಕಡೆ ತಾನು ಅಧಿಕಾರದ ಬಡ ಬಲಿಪಶು ಎಂಬ ನಾಟಕ ಆಡುತ್ತಾರೆ.
ಪ್ರಮೇಯ ಒಂಬತ್ತು: ವಿಶೇಷ ಪ್ರಕಾರದ ಬಲಪಂಥವು ಅಂತರರಾಷ್ಟ್ರೀಯ ವ್ಯೂಹವಾಗಿದ್ದು, ಸ್ಟೀವ್ ಬ್ಯಾನನ್ ಅವರ ‘ದಿ ಮೂವ್ಮೆಂಟ್’ (ಬ್ರಸೆಲ್ಸ್ ಮೂಲದ), ವೋಕ್ಸ್ ಪಕ್ಷದ “ಮ್ಯಾಡ್ರಿಡ್ ಫೋರಮ್ “ (ಸ್ಪೇನ್ ನಲ್ಲಿ ನೆಲೆಗೊಂಡಿದೆ) ಮತ್ತು ತೃತೀಯ- ಲಿಂಗಿ (LGBTQ+)-ವಿರೋಧಿ “ಫೆಲೋಶಿಪ್ ಫೌಂಡೇಶನ್” (ಸಿಯಾಟಲ್, ವಾಷಿಂಗ್ಟನ್ ನಲ್ಲಿ ನೆಲೆಗೊಂಡಿದೆ) ನಂತಹ ವಿವಿಧ ವೇದಿಕೆಗಳ ಮೂಲಕ ಸಂಘಟಿಸಲ್ಪಟ್ಟಿದೆ. ಈ ಗುಂಪುಗಳು ಅಟ್ಲಾಂಟಿಕ್ ಜಗತ್ತಿನಲ್ಲಿ ರಾಜಕೀಯ ಯೋಜನೆಯಲ್ಲಿ ಬೇರೂರಿದ್ದು, ಅದು ಜಾಗತಿಕ ದಕ್ಷಿಣದಲ್ಲಿ ಬಲಪಂಥೀಯ ಪಾತ್ರವನ್ನು ಹೆಚ್ಚಿಸುತ್ತದೆ. ಕಡಿಮೆ ಫಲವತ್ತಾದ ಮಣ್ಣನ್ನು ಹೊಂದಿರುವ ಜಾಗತಿಕ ದಕ್ಷಿಣದಲ್ಲಿ ಬಲಪಂಥೀಯ ಕಲ್ಪನೆಗಳನ್ನು ಆಳಗೊಳಿಸಲು ಹಣವನ್ನು ಒದಗಿಸುತ್ತದೆ. ಮೊದಲು ಈ ಪ್ರಮಾಣದಲ್ಲಿ ಅಸ್ತಿತ್ವದಲ್ಲಿಲ್ಲದ ಸ್ಥಳಗಳಲ್ಲಿ ಅವರು ‘ಹೊಸ’ (ಉದಾಹರಣೆಗೆ ಪೂರ್ವ ಆಫ್ರಿಕಾದಲ್ಲಿ ಲೈಂಗಿಕತೆಯ ಕುರಿತು) ‘ಸಮಸ್ಯೆಗಳನ್ನು’ ಸೃಷ್ಟಿಸುತ್ತಾರೆ). ಈ ಹೊಸ ‘ಸಮಸ್ಯೆಗಳು’ ಜನರ ಚಳುವಳಿಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಸಮಾಜದ ಮೇಲೆ ಬಲಪಂಥದ ಹಿಡಿತವನ್ನು ಬಿಗಿಗೊಳಿಸುತ್ತವೆ.
ಪ್ರಮೇಯ ಹತ್ತು: ವಿಶೇಷ ಪ್ರಕಾರದ ಬಲಪಂಥ ಜಾಗತಿಕ ವಿದ್ಯಮಾನವಾಗಿ ಕಾಣಿಸಿಕೊಳ್ಳಬಹುದಾದರೂ, ಜಾಗತಿಕ ದಕ್ಷಿಣದ ಮತ್ತು ಪ್ರಮುಖ ಸಾಮ್ರಾಜ್ಯಶಾಹಿ ರಾಷ್ಟ್ರಗಳಲ್ಲಿ ಅದು ಹೇಗೆ ಪ್ರಕಟವಾಗುತ್ತದೆ ಎಂಬುದರ ನಡುವೆ ವ್ಯತ್ಯಾಸಗಳಿವೆ. ಜಾಗತಿಕ ಉತ್ತರದಲ್ಲಿ, ಉದಾರವಾದಿಗಳು ಮತ್ತು ಉಗ್ರ ಬಲಪಂಥೀಯರು ಇಬ್ಬರೂ, ಕಳೆದ ಐದು ನೂರು ವರ್ಷಗಳಲ್ಲಿ ಲೂಟಿಯ ಮೂಲಕ ಗಳಿಸಿದ ಸವಲತ್ತುಗಳನ್ನು ತಮ್ಮ ಮಿಲಿಟರಿ ಮತ್ತು ಇತರ ವಿಧಾನಗಳ ಮೂಲಕ ಬಲವಾಗಿ ರಕ್ಷಿಸುತ್ತಾರೆ. ಆದರೆ ಜಾಗತಿಕ ದಕ್ಷಿಣದಲ್ಲಿ ಸಾರ್ವಭೌಮತ್ವವನ್ನು ಸ್ಥಾಪಿಸುವುದು, ಎಲ್ಲಾ ರಾಜಕೀಯ ಶಕ್ತಿಗಳ ನಡುವಿನ ಸಾಮಾನ್ಯ ಪ್ರವೃತ್ತಿಯಾಗಿರುತ್ತದೆ.
ಮೂಲ ಲೇಖನ ಈ ಕೊಂಡಿಯಲ್ಲಿ ಲಭ್ಯವಿದೆ. ಜತೆಗಿರುವ ಚಿತ್ರಗಳೂ ಅಲ್ಲಿಯವು
https://thetricontinental.org/newsletterissue/ten-theses-on-the-far-right-of-a-special-type/
ಇದನ್ನೂ ನೋಡಿ: ಮಾತಿಗೂ ಕ್ರಿಯೆಗೂ ಅಂತರವಿರುವ ಪ್ರಧಾನಿಯವರಿಂದ ಅಮೃತಕಾಲ ಸಾಧ್ಯವೆ?