ನವ-ಉದಾರವಾದ ಸೃಷ್ಟಿಸಿರುವ ಬಂಡವಾಳಶಾಹಿಯ ಆರ್ಥಿಕ ಬಿಕ್ಕಟ್ಟಿನ ಸಮಯಯಲ್ಲಿ ದೊಡ್ಡ ಬಂಡವಾಳದ ಪ್ರಾಬಲ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಜನಗಳ ಗಮನವನ್ನು ಅವರನ್ನು ಬಾಧಿಸುವ ಜ್ವಲಂತ ಪ್ರಶ್ನೆಗಳಿಂದ ಬೇರೆಡೆಗೆ ತಿರುಗಿಸುವ ಕಥನವನ್ನು ಸೃಷ್ಟಿಸಲಾಗುತ್ತಿದೆ. ನವ-ಫ್ಯಾಸಿಸ್ಟ್ ಪಕ್ಷಗಳು ಇದಕ್ಕೆ ದೇಶದ ಒಳಗಿನ ಯಾವುದೋ ಒಂದು ಜನಾಂಗೀಯ ಅಥವ ಧಾರ್ಮಿಕ ಗುಂಪಿನ ಅನುಯಾಯಿಗಳನ್ನು “ಅನ್ಯ”ರೆಂದು ಗುರುತಿಸಿ ಅವರ ವಿರುದ್ಧ ದ್ವೇಷವನ್ನು ಹುಟ್ಟುಹಾಕಿದರೆ, ಈ ನವ-ಉದಾರವಾದವನ್ನು ಸ್ವತಃ ಜಾರಿಗೆ ತಂದಿರುವ ಮಧ್ಯಮ-ಮಾರ್ಗೀ ರಾಜಕೀಯ ಪಕ್ಷಗಳು ಒಂದು ಬಾಹ್ಯ “ಶತ್ರು”ವಿನ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಮೂಲಕ ಪ್ರಯತ್ನಿಸುತ್ತವೆ. ಯುರೋಪಿನ ಈ ರಾಜಕೀಯ ನಾಯಕರುಗಳಿಗೆ ರಷ್ಯಾವೇ ಈ ಬಾಹ್ಯ “ಶತ್ರು”. ರಷ್ಯಾದಿಂದ ಬೆದರಿಕೆ ಇದೆ ಎಂದು ತೋರಿಸಿ ಒಂದೆಡೆಯಲ್ಲಿ ಶಸ್ತ್ರಾಸ್ತ್ರಗಳ ಮೇಲಿನ ವೆಚ್ಚವನ್ನು ಹೆಚ್ಚಿಸಿಕೊಳ್ಳಬಹುದು, ಇನ್ನೊಂದೆಡೆಯಲ್ಲಿ, ಯುರೋಪಿನಲ್ಲಿ ಇನ್ನೂ ಸ್ವಲ್ಪ ಮಟ್ಟಿಗೆ ಉಳಿದುಕೊಂಡಿರುವ ಎರಡನೇ ಮಹಾಯುದ್ಧಾನಂತರದ ಕಲ್ಯಾಣ ಪ್ರಭುತ್ವದ ಅಂಶಗಳನ್ನು ಹೆಚ್ಚಿನ ಪ್ರತಿರೋಧಗಳಿಲ್ಲದೆ ಕಳಚಿ ಹಾಕಬಹುದು ಎಂದು ಯುರೋಪಿನ ಆಳುವ ವಲಯಗಳು ಭಾವಿಸಿದಂತಿದೆ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ.ನಾಗರಾಜ್
ರಷ್ಯಾದ ವಿರುದ್ಧ ಯುರೋಪ್ ಇಂದಿನ ದಿನಗಳಲ್ಲಿ ತೋರುತ್ತಿರುವ ಯುದ್ಧೋನ್ಮಾದವು ವಿಶ್ವ ಬಂಡವಾಳಶಾಹಿಯ ಗೊಂದಲಮಯ ವಿದ್ಯಮಾನಗಳಲ್ಲಿ ಒಂದು. ಯುರೋಪಿನ ದೇಶಗಳತ್ತ ರಷ್ಯಾವು ಸಾಮ್ರಾಜ್ಯಶಾಹಿ ಹವಣಿಕೆಯನ್ನು ಹೊಂದಿದೆ ಎಂದು ಯುರೋಪಿನ ಆಳುವ ವಲಯಗಳು ಪದೇ ಪದೇ ಹೇಳುತ್ತಿವೆ. ಇದೊಂದು ಅಸಂಬದ್ಧ ಹೇಳಿಕೆಯೇ ಸರಿ. ಹಾಗೆ ನೋಡಿದರೆ, ನ್ಯಾಟೋವನ್ನು (ಉತ್ತರ ಅಟ್ಲಾಂಟಿಕ್ ದೇಶಗಳ ಮಿಲಿಟರಿ ಕೂಟವನ್ನು) ರಷ್ಯಾದ ದಿಕ್ಕಿನಲ್ಲಿ ಒಂದಿಂಚಿನಷ್ಟೂ ವಿಸ್ತರಿಸುವುದಿಲ್ಲ ಎಂಬುದಾಗಿ ಈ ಕೂಟದ ಅಧಿನಾಯಕ ಅಮೆರಿಕವು ರಷ್ಯಾದ ಅಂದಿನ ಅಧ್ಯಕ್ಷ ಗೊರ್ಬಚೆವ್‌ಗೆ ಕೊಟ್ಟಿದ್ದ ಭರವಸೆಯನ್ನು ಮುರಿಯಲಾಗಿದೆ ಮತ್ತು ರಷ್ಯಾವನ್ನು ಕೆರಳಿಸುವ ಉದ್ದೇಶದಿಂದಲೇ ನ್ಯಾಟೋವನ್ನು ರಷ್ಯಾದ ಗಡಿಯವರೆಗೂ ವಿಸ್ತರಿಸಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧವನ್ನು ತಡೆಯಬಹುದಾಗಿದ್ದ ಮಿನ್ಸ್ಕ್ ಒಪ್ಪಂದವನ್ನು(2014ರಲ್ಲಿ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಮಾಡಿಕೊಂಡ ಒಪ್ಪಂದವನ್ನು) ಇಂಗ್ಲೆಂಡ್ ಮತ್ತು ಅಮೆರಿಕ ತಲೆಕೆಳಗು ಮಾಡಿದವು. ಬೋರಿಸ್ ಯೆಲ್ಟ್ಸಿನ್ ರಷ್ಯಾದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಸ್ವಲ್ಪ ಕಾಲ ಆ ದೇಶದೊಂದಿಗೆ ಬೆಳೆಸಿಕೊಂಡಿದ್ದ ಸಂಬಂಧವನ್ನು ಮರುನಿರ್ಮಿಸಿಕೊಂಡು ರಷ್ಯಾವನ್ನು ಕಬ್ಜಾ ಮಾಡಿಕೊಳ್ಳುವುದು ಮತ್ತು ಅದರ ವಿಪುಲ ನೈಸರ್ಗಿಕ ಸಂಪನ್ಮೂಲಗಳನ್ನು ನಿಯಂತ್ರಿಸುವುದೇ ನ್ಯಾಟೋದ ಉದ್ದೇಶವಾಗಿತ್ತು. ಸೋವಿಯತ್ ಒಕ್ಕೂಟವು ಯುರೋಪನ್ನು ಅಡಿಯಾಳಾಗಿಸಲು ಬಯಸಿತ್ತು ಎಂಬ ಹಿಂದಿನ ಶೀತಲ ಸಮರದ ಆಪಾದನೆಯ ರೀತಿಯಲ್ಲೇ, ಯುರೋಪನ್ನು ಅತಿಕ್ರಮಿಸಲು ರಷ್ಯಾ ಬಯಸುತ್ತಿದೆ ಎಂಬ ಈಗಿನ ದಾವೆ ಅದೆಷ್ಟು ಅಸಂಬದ್ಧವಾಗಿದೆ ಎಂದರೆ, ಬಹುತೇಕ ಅದು ಬಾಲಿಶವೇ ಸರಿ.
ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅಮೆರಿಕವು ನಿರ್ಧರಿಸಿದ ನಂತರ ಮತ್ತು ಆ ಮೂಲಕ ರಷ್ಯಾವು ಈ ಯುದ್ಧದಲ್ಲಿ ಆಕ್ರಮಣಕಾರಿಯಾಗಿ ತೊಡಗಲಿಲ್ಲ ಎಂಬುದನ್ನು ಸೂಚ್ಯವಾಗಿ ಒಪ್ಪಿಕೊಂಡ ನಂತರವೂ, ಅದೇ ಹಳೆಯ ಮಿಥ್ಯೆಯನ್ನೇ ಇನ್ನೂ ಏಕೆ ಯುರೋಪ್ ಪ್ರಚಾರ ಮಾಡುತ್ತಿದೆ? ಇದೊಂದು ಯಕ್ಷ ಪ್ರಶ್ನೆಯೇ. ಜರ್ಮನಿಯ ಸಂದರ್ಭದಲ್ಲಿ ಈ ಪ್ರಶ್ನೆಯು ಹೆಚ್ಚು ಪ್ರಸ್ತುತವಾಗಿದೆ. ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಹೇರಿದ ಪರಿಣಾಮವಾಗಿ ಜರ್ಮನಿಯು ಅಪಾರ ನಷ್ಟಗಳನ್ನು ಅನುಭವಿಸಿದೆ. ರಷ್ಯಾದಿಂದ ಮಾಡಿಕೊಳ್ಳುತ್ತಿದ್ದ ಅಗ್ಗದ ಅನಿಲ ಆಮದಿನ ಬದಲಿಗೆ ದುಬಾರಿ ಬೆಲೆಯ ಅನಿಲವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುವಂತೆ ಒತ್ತಾಯಕ್ಕೆ ಒಳಗಾದ ಕಾರಣದಿಂದಾಗಿ ಜರ್ಮನಿಯ ಖರ್ಚು ವೆಚ್ಚಗಳು ಬಹಳವಾಗಿ ಹೆಚ್ಚಿವೆ. ಜೀವನ ನಿರ್ವಹಣೆಯ ವೆಚ್ಚಗಳು ಹೆಚ್ಚಿವೆ.
ಕಾರ್ಮಿಕರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮಾತ್ರವಲ್ಲ, ಇಂಧನ ವೆಚ್ಚಗಳ ಅತಿಯಾದ ಏರಿಕೆಯಿಂದಾಗಿ ಅಲ್ಲಿನ ಕೈಗಾರಿಕೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಮತ್ತು ಆ ಮೂಲಕ ಜರ್ಮನಿಯ ಅಪ-ಕೈಗಾರಿಕೀಕರಣ ಪ್ರಕ್ರಿಯೆಗೆ ಪ್ರೋತ್ಸಾಹ ಕೊಟ್ಟಂತಾಗಿದೆ. ಹಾಗಾಗಿ, ಉಕ್ರೇನ್ ಯುದ್ಧದ ಅಂತ್ಯವನ್ನು ಸ್ವಾಗತಿಸುವುದು ಜರ್ಮನಿಗೆ ಸಹಜವಾದ ಒಂದು ಕೆಲಸವಾಗಬೇಕಿತ್ತು ಮತ್ತು ಆ ಮೂಲಕ ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಿತ್ತು. ಆದರೆ, ಜರ್ಮನಿಯು ತನ್ನ ಯುದ್ಧಕೋರತನವನ್ನು ಇನ್ನೂ ಮುಂದುವರಿಸುತ್ತಿದೆ, ಏಕೆ?
ಯುರೋಪ್ ಮತ್ತು ಯುಎಸ್ ನಡುವಿನ ಈ ಭಿನ್ನಾಭಿಪ್ರಾಯವನ್ನು ಅಂತರ-ಸಾಮ್ರಾಜ್ಯಶಾಹಿ ಪೈಪೋಟಿಯ ಮರುಹುಟ್ಟು ಎಂದು ಹೇಳಲಾಗದು. ಈ ಭಿನ್ನಾಭಿಪ್ರಾಯವು ರಷ್ಯಾದ ವಿರುದ್ಧ ಸಾಮ್ರಾಜ್ಯಶಾಹಿಯ ರಣತಂತ್ರದಲ್ಲಿ ವಿಭಿನ್ನತೆ ಇದೆ ಎಂಬುದಕ್ಕೆ ಸಂಬಂಧಿಸಿದೆ. ಈ ವಿಭಿನ್ನತೆ ಹಾಗೂ ಪ್ರತಿಸ್ಪರ್ಧಿ ಹಣಕಾಸು ಕೂಟಗಳ ನಡುವಿನ ವೈರುಧ್ಯದಿಂದ ಉತ್ತೇಜಿತವಾದ ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿ, ಇವೆರಡೂ ಒಂದೇ ಅಲ್ಲ. ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಜಗತ್ತಿನಲ್ಲಿ, ಯಾವುದನ್ನು ಲೆನಿನ್ “ಆರ್ಥಿಕ ಪ್ರದೇಶ” ಎಂದು ಕರೆದಿದ್ದರೋ ಅದರ ಮೇಲಿನ ಪೈಪೋಟಿಯು ಇನ್ನೂ ತಣ್ಣಗಾಗಿಯೇ ಇದೆ. ಜೊತೆಗೆ, ನಾವು ಈಗಷ್ಟೇ ಕಂಡಂತೆ, ಜರ್ಮನಿ ಮತ್ತು ಯುರೋಪಿನ ಹಿತಾಸಕ್ತಿಗಳು ಸಾಮಾನ್ಯವಾಗಿ ರಷ್ಯಾದೊಂದಿಗೆ ಮುಖಾಮುಖಿಯಾಗುವ ಬದಲು ಶಾಂತಿಯನ್ನು ಬಯಸಬೇಕಿತ್ತು, ವಿಶೇಷವಾಗಿ, ಯುದ್ಧದಲ್ಲಿ ರಷ್ಯಾವನ್ನು ಉಕ್ರೇನ್ ಸೋಲಿಸಲಾಗದು (“ಸೋಲು” ಎಂಬ ಪದ ಹೊಂದಿರುವ ಯಾವುದೇ ಅರ್ಥದಲ್ಲಿ) ಎನ್ನುವ ಪರಿಸ್ಥಿತಿಯಲ್ಲಿ.
‘ರಷ್ಯಾ_ಭೀತಿ’ಯ ನೆಪ
ಸಾಮ್ರಾಜ್ಯ ಶಾಹಿಗಳ ನಡುವೆ ಯಾವುದೇ ಪೈಪೋಟಿಯೂ ತೀವ್ರಗೊಳ್ಳದೇ ಇದ್ದರೂ, ಈವರೆಗೂ ಅಮೆರಿಕ ಒದಗಿಸಿದ “ಭದ್ರತೆ”ಯ ರಕ್ಷಣೆಯನ್ನು ಹಿಂತೆಗೆದುಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಯುರೋಪಿಯನ್ ದೇಶಗಳು ತಾವು “ಹಿಂದೆ ಬೀಳುವಂತಿಲ್ಲ” ಎನ್ನುವ ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವ ಸಲುವಾಗಿ ತಮ್ಮ ವೆಚ್ಚವನ್ನು ಹೆಚ್ಚಿಸಿಕೊಳ್ಳಲು ಉತ್ಸುಕವಾಗಿವೆ ಎಂದು ಹೇಳಬಹುದು. ಈ ಉದ್ದೇಶಕ್ಕಾಗಿ ಬೇಕಾಗುವ ಹಣವನ್ನು ಭಾಗಶಃ ಹೆಚ್ಚು ವಿತ್ತೀಯ ಕೊರತೆಯ ಮೂಲಕ ಮತ್ತು ಭಾಗಶಃ ಯುದ್ಧಾನಂತರದ ಅವಧಿಯಲ್ಲಿ ಯುರೋಪ್ ಮಾಡುತ್ತಿದ್ದ ಜನ ಕಲ್ಯಾಣ ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ಹೊಂದಿಸಿಕೊಳ್ಳಬಹುದು ಮತ್ತು ರಷ್ಯಾದ ಬೆದರಿಕೆಯಿದೆ ಎಂದು ಹೇಳುವ ಮೂಲಕ ಈ ಎರಡೂ ವಿಧಾನಗಳನ್ನು ಬಳಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಅವು ಭಾವಿಸಿದಂತಿದೆ.
ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಸರ್ಕಾರಗಳು ಬೃಹತ್ ವಿತ್ತೀಯ ಕೊರತೆಗಳನ್ನು ಹೊಂದುವುದನ್ನು ವಿರೋಧಿಸುತ್ತದೆ. ಏಕೆಂದರೆ, ಇಂಥಹ ಕೊರತೆಗಳ ಮೂಲಕ ಹೊಂದಿಸಿಕೊಂಡ ಹಣವನ್ನು ಸರ್ಕಾರವು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಲು ಮತ್ತು ಉದ್ಯೋಗ ಸೃಷಿಗಾಗಿ ಬಳಸಿಕೊಂಡಾಗ ಬಂಡವಾಳಶಾಹಿ ನಗಣ್ಯಗೊಳ್ಳುತ್ತದೆ. ಆದರೆ, ಇದೇ ಹಣವನ್ನು ಒಂದು ಬಾಹ್ಯ ಬೆದರಿಕೆಯನ್ನು ಎದುರಿಸುವ ಕಾರಣದ ಮೇಲೆ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಬಳಸಿದಾಗ ಹಾಗಾಗುವುದಿಲ್ಲ ಎಂದು ನಂಬಲಾಗಿದೆ. ಆಗಲೂ ಅದನ್ನು ಸರಕಾರದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಬಳಸಿಕೊಳ್ಳಬಹುದು ಎಂಬುದು ಬೇರೆ ಮಾತು.
ಬೇರೆ ರೀತಿಯಲ್ಲಿ ಹೇಳುವುದಾದರೆ, ಬೃಹತ್ ವಿತ್ತೀಯ ಕೊರತೆಗೆ ಎದುರಾಗುವ ವಿರೋಧವನ್ನು ರಷ್ಯಾದ ಬೆದರಿಕೆಯನ್ನು ತೋರುವ ಮೂಲಕ ತಗ್ಗಿಸಬಹುದು. ಒಂದು ಬೃಹತ್ ಮೊತ್ತದ ಸಾಲವನ್ನು ಎತ್ತಲು ಅನುವಾಗುವಂತೆ ಜರ್ಮನಿಯ ಸರ್ಕಾರವು ಇತ್ತೀಚಿಗೆ ಮಾಡಿದ ಒಂದು ಸಾಂವಿಧಾನಿಕ ತಿದ್ದುಪಡಿಯು ಈ ಆಶಯವನ್ನು ಹೊಂದಿದೆ. ಅದೇ ರೀತಿಯಲ್ಲಿ, ರಷ್ಯಾದ ಬೆದರಿಕೆ ನಿಜಕ್ಕೂ ಗಂಭೀರ ಎಂದು ಜನತೆ ನಂಬಿದರೆ, ಜನ ಕಲ್ಯಾಣ ವೆಚ್ಚಗಳನ್ನು ಕಡಿತಗೊಳಿಸುವ ಮತ್ತು ಎರಡನೇ ಮಹಾಯುದ್ಧಾನಂತರದ ಕಲ್ಯಾಣ-ಪ್ರಭುತ್ವದ ಪರಿಕಲ್ಪನೆಯ ಅಳಿದುಳಿದ ಅಂಶಗಳನ್ನು ಕಳಚಿ ಹಾಕುವ ಕ್ರಮಗಳಿಗೆ ಎದುರಾಗುವ ವಿರೋಧವು ಬಹಳಷ್ಟು ತಗ್ಗುತ್ತದೆ ಎಂದೂ ನಿರೀಕ್ಷಿಸಬಹುದು. ಅಂದರೆ, ಹೊಸ ಪರಿಸ್ಥಿತಿಯಲ್ಲಿ ಯುರೋಪಿನ ಆಳುವ ವಲಯಗಳು ಶಸ್ತ್ರಾಸ್ತ್ರಗಳ ವೆಚ್ಚವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಯಸುತ್ತಿದ್ದು, ಅದನ್ನು ಸಮರ್ಥಿಸಿಕೊಳ್ಳುವದಕ್ಕಾಗಿ ರಷ್ಯಾದಿಂದ ಬೆದರಿಕೆಯಿದೆಯೆಂದು ಅವು ತೋರಿಸಬೇಕಾಗಿದೆ.
ಈ ವಿವರಣೆ ಸ್ವಲ್ಪವಾದರೂ ತರ್ಕಸಮ್ಮತವಾಗಿದೆ ಎಂದು ಗುರುತಿಸಿದರೂ, ಅದು ಅಸಮರ್ಪಕವೇ ಎಂದು ಹೇಳಬಹುದು. ಮೊದಲಿಗೆ, ಯುರೋಪಿನ ರಷ್ಯ-ವಿರೋಧಿ ಯುದ್ಧಕೋರತನ ಇಂದು ನಿನ್ನೆಯದಲ್ಲ, ಅದು ಟ್ರಂಪ್ ಅಧಿಕಾರಕ್ಕೆ ಬರುವ ಎಷ್ಟೋ ಮೊದಲಿಂದಲೂ ಇದ್ದು, ಆ ಕಾರಣಕ್ಕಾಗಿಯೇ ಯುರೋಪಿನ ಆಳುವ ವಲಯಗಳು ಮರು-ಶಸ್ತ್ರೀಕರಣ ಅಗತ್ಯ ಎಂದು ಭಾವಿಸಿಕೊಂಡು ಬಂದಿವೆ. ಜೊತೆಗೆ, ರಷ್ಯಾ-ವಿರೋಧಿ ಅಬ್ಬರ ಉಗ್ರ ಬಲಪಂಥೀಯ, ನವ-ಫ್ಯಾಸಿಸ್ಟ್ ಪಕ್ಷಗಳಿಗಿಂತಲೂ ಹೆಚ್ಚಾಗಿ, ಮಧ್ಯಮ ಮಾರ್ಗದ ಉದಾರ-ಬೂರ್ಜ್ವಾ ರಾಜಕೀಯ ವಲಯಗಳಲ್ಲೇ ಪ್ರಬಲವಾಗಿದೆ, ಮಧ್ಯ-ಎಡಪಂಥೀಯರು ಮತ್ತು ಮಧ್ಯ-ಬಲಪಂಥೀಯರೂ ಕೂಡ ಇದರಲ್ಲಿ ಸೇರಿದ್ದಾರೆ.
ಉದಾಹರಣೆಗೆ, ಉಕ್ರೇನ್ ಯುದ್ಧದ ಬಗ್ಗೆ ಜರ್ಮನಿಯ ಸೋಶಲ್ ಡೆಮಾಕ್ರೇಟರು, ಫ್ರೀ ಡೆಮಾಕ್ರೇಟರು ಮತ್ತು ಗ್ರೀನ್ಸ್ ಅಥವಾ ಹೊಸದಾಗಿ ಚುನಾಯಿತವಾಗಿರುವ ಕ್ರಿಶ್ಚಿಯನ್ ಡೆಮೋಕ್ರಾಟ್- ಕ್ರಿಶ್ಚಿಯನ್ ಸೋಶಿಯಲ್ ಯೂನಿಯನ್‌ನ ಮಧ್ಯ-ಬಲಪಂಥೀಯ ಆಳುವ ಮೈತ್ರಿಕೂಟದ ಕಟು ನಿಲುವಿಗೆ ಹೋಲಿಸಿದರೆ, ತೀವ್ರ ಬಲಪಂಥೀಯ ಜರ್ಮನ್ ಎಎಫ್‌ಡಿ ಪಕ್ಷವು ಜರ್ಮನಿಯ ಮರು-ಶಸ್ತ್ರೀಕರಣದ ಪರವಾಗಿದ್ದರೂ ಸಹ, ಅದು ಪರಮಾಣು ಅಸ್ತ್ರಗಳನ್ನು ಹೊಂದುವುದನ್ನೂ ಸಹ ಬೆಂಬಲಿಸಿದರೂ ಕೂಡ, ಅದಕ್ಕಿಂತ ಮೃದು ಎನ್ನಬಹುದಾದ ಧೋರಣೆಯನ್ನು ಹೊಂದಿದೆ. ಅದೇ ರೀತಿಯಲ್ಲಿ, ಇಟಲಿಯ ಮೆಲೋನಿ ಅಥವಾ ಹಂಗೇರಿಯ ಒರ್ಬನ್ ಅವರುಗಳನ್ನು ತೀವ್ರ ಬಲಪಂಥೀಯ ಅಥವಾ ನವ-ಫ್ಯಾಸಿಸ್ಟ್ ಎಂದು ದೃಢವಾಗಿ ವರ್ಗೀಕರಿಸಬಹುದಾದರೂ, ಅವರುಗಳು ರಷ್ಯಾ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಯುದ್ಧಕೋರ ಯುರೋಪಿಯನ್ ನಾಯಕರ ನಡುವೆ ಗುರುತಿಸಿಕೊಂಡಿರುವುದು ಕಂಡುಬಂದಿಲ್ಲ.
‘ಶತ್ರು’ : ಆಂತರಿಕ ಮತ್ತು ಬಾಹ್ಯ
ಈ ಎಲ್ಲ ವಿವರಗಳಿಂದ ಈ ಒಂದು ನಮೂನೆಯನ್ನು ಗ್ರಹಿಸಬಹುದು: ನವ-ಫ್ಯಾಸಿಸ್ಟ್ ಪಕ್ಷಗಳು ಸಂಕಥನವನ್ನು ನಿರುದ್ಯೋಗದ ಸಮಸ್ಯೆಯಿಂದ ಮತ್ತು ಜೀವನ ಪರಿಸ್ಥಿತಿಗಳ ಸಮಸ್ಯೆಗಳಿಂದ ದೂರ ಸರಿಸಿ, ಆರ್ಥಿಕ ಬಿಕ್ಕಟ್ಟಿನ ಸಮಯಯಲ್ಲಿ ದೊಡ್ಡ ಬಂಡವಾಳದ ಪ್ರಾಬಲ್ಯವನ್ನು ಬಲಪಡಿಸುವ ಸಲುವಾಗಿ, ದೇಶದ ಒಳಗಿನ ಯಾವುದೋ ಒಂದು ದುರದೃಷ್ಟಕರ ಜನಾಂಗೀಯ ಗುಂಪನ್ನು ಅಥವಾ ಯಾವುದೋ ಒಂದು ಧಾರ್ಮಿಕ ಗುಂಪಿನ ಅನುಯಾಯಿಗಳನ್ನು “ಅನ್ಯ”ರೆಂದು ಗುರುತಿಸಿ ಅವರ ವಿರುದ್ಧ ದ್ವೇಷವನ್ನು ಹುಟ್ಟುಹಾಕಿದರೆ, ಮಧ್ಯಮ-ಮಾರ್ಗೀ ರಾಜಕೀಯ ಪಕ್ಷಗಳು ಒಂದು ಬಾಹ್ಯ “ಶತ್ರು”ವಿನ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಮೂಲಕ ದೊಡ್ಡ ಬಂಡವಾಳದ ಪ್ರಾಬಲ್ಯವನ್ನು ಬಲಪಡಿಸಲು ಪ್ರಯತ್ನಿಸುತ್ತವೆ. ಯುರೋಪಿನ ಸಂದರ್ಭದಲ್ಲಿ ಈ ಬಾಹ್ಯ “ಶತ್ರು”ವನ್ನು ರಷ್ಯಾ ಎಂದು ಗುರುತಿಸಲಾಗಿದೆ.
ಇದೊಂದು ಹೊಸ ವಿದ್ಯಮಾನವೇ ಎನ್ನಬಹುದಾದರೂ. ಮಧ್ಯಮ-ಮಾರ್ಗೀ ರಾಜಕೀಯ ಪಕ್ಷಗಳು ಕೀನ್ಸ್ ಪ್ರತಿಪಾದಿಸಿದ ಬೇಡಿಕೆ ಉತ್ತೇಜನೆಯ ಪ್ರಮಾಣಿತ ವಿಧಾನಗಳ ಮೂಲಕ ಯುರೋಪಿನ ಅರ್ಥವ್ಯವಸ್ಥೆಗಳನ್ನು ಬಿಕ್ಕಟ್ಟಿನಿಂದ ಹೊರತರುವಲ್ಲಿ ಅಸಮರ್ಥವಾಗಿರುವ ಕಾರಣದಿಂದ ಈ ನವ-ಫ್ಯಾಸಿಸಂ ವಿದ್ಯಮಾನವು ಹೊರಹೊಮ್ಮಿದೆ. ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಬಹುದಾದ ಸರ್ಕಾರದ ಬೃಹತ್ ವೆಚ್ಚಗಳಿಗಾಗಿ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಮೂಲಕ ಅಥವಾ ಬೃಹತ್ ವಿತ್ತೀಯ ಕೊರತೆಯ ಮೂಲಕ ಹಣ ಒದಗಿಸಿಕೊಳ್ಳುವ ಈ ಎರಡೂ ವಿಧಾನಗಳಿಗೂ ಜಾಗತೀಕರಣಗೊಂಡಿರುವ ಹಣಕಾಸು ಬಂಡವಾಳದ ಆಕ್ಷೇಪಣೆಯಿಂದಾಗಿ ಈ ರಾಜಕೀಯ ಪಕ್ಷಗಳು ತೊಂದರೆಗೊಳಗಾಗಿವೆ.
ದಶಕಗಳಿಂದಲೂ ಯುರೋಪಿನಲ್ಲಿ ಅಧಿಕಾರದಲ್ಲಿರುವ ಈ ಮಧ್ಯಮ-ಮಾರ್ಗೀ ರಾಜಕೀಯ ಪಕ್ಷಗಳೇ ಜನರಿಗೆ ಹೆಚ್ಚಿನ ಸಂಕಷ್ಟವನ್ನು ತಂದಿರುವ ಈ ನವ ಉದಾರವಾದಿ ಆಳ್ವಿಕೆಯನ್ನು ಪರಿಚಯಿಸಿದ ಕಾರಣದಿಂದ ಮತ್ತು ಈ ಆಳ್ವಿಕೆಯು ಅನಿವಾರ್ಯವಾಗಿಯೇ ಹೆಚ್ಚಿನ ಬಿಕ್ಕಟ್ಟಿಗೆ ಒಳಗಾಗಿ, ಅದರಿಂದಾಗಿ ಇನ್ನೂ ಹೆಚ್ಚಿನ ಸಂಕಷ್ಟವನ್ನು ತರುತ್ತಿದ್ದು, ಅದನ್ನು ನಿವಾರಿಸಲು ಸಾಧ್ಯವಾಗದ ಕಾರಣದಿಂದ ರಾಜಕೀಯ ನೆಲೆಯನ್ನು ಕಳೆದುಕೊಳ್ಳುತ್ತಿವೆ. ಚುನಾವಣೆಗಳಲ್ಲಿ ಬೆಂಬಲವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ಅವು ಶಾಂತವಾಗಿ ಕೈಕಟ್ಟಿ ಕುಳಿತುಕೊಳ್ಳಲಾರವು, ಹೇಗಾದರೂ ಸರಿಯೇ, ಜನ ಬೆಂಬಲವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅವು ತೊಡಗುತ್ತವೆ. ಅದಕ್ಕಾಗಿ ಬಾಹ್ಯ “ಶತ್ರು” ರಷ್ಯಾದ ವಿರುದ್ಧ ತಾವೇ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತವೆ. ಈ ರೀತಿಯಲ್ಲಿ, ದೇಶೀಯ ಚುನಾವಣಾ ಒತ್ತಡಗಳಿಂದಾಗಿ ಯುರೋಪಿನ ಮಧ್ಯಮ-ಮಾರ್ಗೀ ರಾಜಕೀಯ ಪಕ್ಷಗಳು ನವ-ಉದಾರವಾದದ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ರಷ್ಯಾದ ವಿರುದ್ಧ ಒಂದು ರೀತಿಯ ಭಯ ಭೀತಿಯನ್ನು ಸೃಷ್ಟಿಸುವಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತವೆ.
ಇದರ ಜೊತೆಗೆ ಶಸ್ತ್ರಾಸ್ತ್ರ ತಯಾರಕರ ಲಾಬಿಯ ಒತ್ತಡವೂ ಕೆಲಸಮಾಡುತ್ತದೆ. ಉಕ್ರೇನ್ ಯುದ್ಧವು ಅವರಿಗೆ ಗಣನೀಯ ಪ್ರಮಾಣದ ಶಸ್ತ್ರಾಸ್ತ್ರಗಳ ಸರಬರಾಜು ಕೋರಿಕೆಯನ್ನು ಮತ್ತು ಆ ಮೂಲಕ ಅಪಾರ ಲಾಭವನ್ನೂ ತಂದಿದೆ. ಯುದ್ಧದ ಮುಂದುವರಿಕೆಯು ಈ ಲಾಭದ ಮುಂದುವರಿಕೆಯೂ ಆಗುತ್ತದೆ. ಉದಾಹರಣೆಗೆ, ಪ್ರಮುಖ ಜರ್ಮನ್ ಶಸ್ತ್ರಾಸ್ತ್ರ ಉತ್ಪಾದನಾ ಕಂಪನಿ ರೈನ್‌ಮೆಟಾಲ್, ಸಾಕಷ್ಟು ಸಮಯದವರೆಗೆ ಶಸ್ತ್ರಗಳ ಸರಬರಾಜು ಕೋರಿಕೆಯನ್ನು ಪಡೆದಿತ್ತು. ಶಸ್ತ್ರಾಸ್ತ್ರಗಳ ಮೇಲೆ ಹೆಚ್ಚು ವೆಚ್ಚಗಳನ್ನು ಕೈಗೊಳ್ಳಲು ಅನುವಾಗುವಂತೆ ಸಂವಿಧಾನವನ್ನು ಇತ್ತೀಚೆಗೆ ತಿದ್ದುಪಡಿ ಮಾಡಿದ ಜರ್ಮನಿಯ ನಿರ್ಧಾರವು, ರೈನ್‌ಮೆಟಾಲ್‌ನ ಉತ್ಪಾದನಾ ಸಾಮರ್ಥ್ಯದ ಹೆಚ್ಚಿನ ಬಳಕೆಗೆ ಕಾರಣವಾಗದಿದ್ದರೂ, ಅದರ “ಸಂತಸ”ದ ಸನ್ನಿವೇಶವಂತೂ ಮುಂದುವರಿಯುತ್ತದೆ. ಉಕ್ರೇನ್ ಯುದ್ಧ ಅಂತ್ಯಗೊಂಡರೆ ಅದರ ಈ ‘ಸಂತಸ’ ಕೊನೆಗೊಳ್ಳಬಹುದು. ಆದರೆ, ರಷ್ಯಾ-ಭೀತಿಯ ನಗಾರಿ ಬಾರಿಸುವುದು ಈ ಸಂತಸದ ಮುಂದುವರಿಕೆಯ ಸಮರ್ಥನೆಗೆ ಒಂದು ದಾರಿಯಾಗುತ್ತದೆ.
ವಿಪರ್ಯಾಸ
ಇಲ್ಲೊಂದು ವಿಪರ್ಯಾಸವಿದೆ. ಎರಡನೇ ಮಹಾಯುದ್ಧಾನಂತರದ ಬಂಡವಾಳಶಾಹಿಯು ತನ್ನನ್ನು ಒಂದು “ಕೃಪಾಳು” ವ್ಯವಸ್ಥೆಯಾಗಿ ಮರು-ರೂಪಿಸಿಕೊಂಡಿರುವುದಾಗಿ ಹೆಮ್ಮೆಪಡುತ್ತಿತ್ತು; ತನ್ನ ಇಡೀ ಪ್ರಭಾವ-ವಲಯದಲ್ಲಿ ಸಾರ್ವತ್ರಿಕ ವಯಸ್ಕ ಮತದಾನವನ್ನು (ಬ್ರಿಟನ್‌ನಲ್ಲಿ ಇದನ್ನು ಸ್ವಲ್ಪ ಮುಂಚಿತವಾಗಿ, 1928ರಲ್ಲಿ, ಮಹಿಳೆಯರಿಗೆ ಮತ ಚಲಾವಣೆ ದೊರೆತಾಗ ಸಾಧಿಸಲಾಗಿತ್ತು) ಪರಿಚಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉತ್ತೇಜಿಸಿರುವುದಾಗಿ ಅದು ಹೇಳಿಕೊಂಡಿತ್ತು; ಅರ್ಥವ್ಯವಸ್ಥೆಗಳನ್ನು ಹತ್ತಿರ ಹತ್ತಿರ ಪೂರ್ಣ ಉದ್ಯೋಗದ ಸ್ಥಿತಿಯಲ್ಲಿಡಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಗಣನೀಯ ಪ್ರಮಾಣದ ಕಲ್ಯಾಣ ವೆಚ್ಚವನ್ನು ಕೈಗೊಂಡಿತ್ತು, ವಿಶೇಷವಾಗಿ ಯುರೋಪಿನಲ್ಲಿ. ಮತ್ತು, ವಸಾಹತುಶಾಹಿ ಶೋಷಣೆಯ ಭಯಾನಕತೆಯ ಆರೋಪವನ್ನು ಇನ್ನು ಮುಂದೆ ಹೊರದಂತೆ ಅದು ವಸಾಹತುಶಾಹಿಯನ್ನು ಕೊನೆಗೊಳಿಸುವ ಕ್ರಮವನ್ನೂ ಕೈಗೊಂಡಿತ್ತು. ಇವುಗಳ ಆಧಾರದ ಮೇಲೆ, ಬಂಡವಾಳಶಾಹಿಯು “ಬದಲಾಗಿದೆ” ಎಂದು ಹೇಳಿಕೊಳ್ಳಲಾಯಿತು.
ಆದರೆ, ಸಮಕಾಲೀನ ಬಂಡವಾಳಶಾಹಿಯು ಈ ಪ್ರತಿಯೊಂದರಲ್ಲೂ ಹಿನ್ನಡೆಯ ವಿದ್ಯಮಾನವನ್ನು ಕಾಣುತ್ತಿದೆ. ಬಂಡವಾಳಶಾಹಿಯು ತನ್ನ ಭಯಾನಕವಾದ ಮತ್ತು ಭೂತಕಾಲದ ಅಸಲಿ ರೂಪಕ್ಕೆ ಮರಳಿದೆ. ಈ ಹಿನ್ನಡೆಯಲ್ಲಿ ಸೋಶಿಯಲ್ ಡೆಮಾಕ್ರಸಿಯೂ ಸಕ್ರಿಯವಾಗಿ ಶಾಮೀಲಾಗಿದೆ. ಬಂಡವಾಳಶಾಹಿ ಜಗತ್ತಿನ ಬಹುಭಾಗದಲ್ಲಿ ಈಗ ನವ-ಫ್ಯಾಸಿಸಂ ಹರಿಯಬಿಟ್ಟಿರುವ ದಮನವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಯುರೋಪಿನ ಹೃದಯಭಾಗದಲ್ಲೇ ಜನ ಕಲ್ಯಾಣ ವೆಚ್ಚಗಳನ್ನು ಕಡಿತಗೊಳಿಸಿ ಶಸ್ತ್ರಾಸ್ತ್ರಗಳ ಖರ್ಚುಗಳನ್ನು ಹೆಚ್ಚಿಸುವ ಕ್ರಮವು ಕಲ್ಯಾಣ ಪ್ರಭುತ್ವದ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತಿದೆ. ನವ-ಉದಾರವಾದಿ ಬಂಡವಾಳಶಾಹಿಯ ಆಳ್ವಿಕೆಯಡಿಯಲ್ಲಿ ಜಾಗತಿಕ ದಕ್ಷಿಣದ ಬಹುತೇಕ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮುಂದುವರೆದ ಬಂಡವಾಳಶಾಹೀ ದೇಶಗಳ ನಿಯಂತ್ರಣವನ್ನು ಮತ್ತೆ ಸಾಧಿಸಲಾಗಿದೆ. ಈಗ ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಡೊನಾಲ್ಡ್ ಟ್ರಂಪ್‌ರ ಗ್ರೀನ್‌ಲ್ಯಾಂಡ್ ಮತ್ತು ಉಕ್ರೇನಿನ ಖನಿಜ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಗಾಜಾವನ್ನು ರಿಯಲ್ ಎಸ್ಟೇಟ್ ಉದ್ದೇಶಗಳಿಗಾಗಿ ಮತ್ತು ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಪಡಿಸುವ ಭಂಡ ಯೋಜನೆ- ಇವೆಲ್ಲವೂ ಈ ಹಿಮ್ಮುಖ ಚಲನೆಯ ಸೂಚನೆಗಳೇ. ಹೀಗಿರುವಾಗ, ಬಂಡವಾಳಶಾಹಿಯು ತನ್ನ “ಕೃಪಾಳು” ಅವತಾರಕ್ಕೆ ಮರಳಬಹುದು ಎಂದು ನಂಬುವುದು ಒಂದು ಭ್ರಾಂತಿ.
ಇದನ್ನೂ ನೋಡಿ: ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು – ಅಶ್ವಿನಿ ಒಬುಳೇಶ್ Janashakthi Media