ಉಡುಪಿ ಪ್ರಕರಣದಲ್ಲಿ ಬಿಜೆಪಿ ಇಷ್ಟೆಲ್ಲಾ ರಾದ್ಧಾಂತ ಮಾಡುತ್ತಿರುವುದೇಕೆ?

ಬಾಪು ಅಮ್ಮೆಂಬಳ

ಉಡುಪಿಯಲ್ಲಿ ಹಿಡನ್ ಕ್ಯಾಮೆರಾ ಕಂಡ ಬಿಜೆಪಿಗೆ ಧರ್ಮಸ್ಥಳದ ಸೌಜನ್ಯ ಮತ್ತು ವಿಟ್ಲದ ದಲಿತ ಹುಡುಗಿಯ ಅತ್ಯಾಚಾರ ಸುದ್ದಿ ತಲುಪಿಲ್ಲ ಯಾಕೆ?

ಕಳೆದ ನಾಲ್ಕು ವರ್ಷಗಳಿಂದ ರಾಜ್ಯವನ್ನು ಕೋಮು ಆಧಾರದಲ್ಲಿ ಒಡೆದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕರ್ನಾಕಟವನ್ನು ಕೋಮು ಗಲಭೆ ನಡೆಸಿ, ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯ ಹಾಗೂ ದಲಿತರ ಹೆಸರಿನಲ್ಲಿ ದ್ವೇಷ ಸೃಷ್ಟಿಸಿ ರಾಜ್ಯವನ್ನು ತೆಕ್ಕೆಗೆ ಪಡೆಯಬಹುದು ಎಂದು ಭಾವಿಸಿದ್ದ ಬಿಜೆಪಿಗೆ ರಾಜ್ಯದ ಜನತೆ ತೀವ್ರ ಹೊಡೆತವನ್ನೆ ನೀಡಿದ್ದಾರೆ. ಬಿಜೆಪಿಯ ಸ್ವಯಂ ಘೋಷಿತ ಫೈರ್‌ಬ್ರ್ಯಾಂಡ್‌ಗಳು ಸೋತು ಹೋಗಿದ್ದಾರೆ. ಸೋಲಬೇಕಿದ್ದ ಹಾಗೂ ಶಾಸಕರಾಗಲು ತೀರಾ ಯೋಗ್ಯರಲ್ಲದ ಇನ್ನೂ ಕೆಲವು ಬೆರಳೆಣಿಕೆಯ ಬಿಜೆಪಿ ನಾಯಕರಷ್ಟೆ ಜಯಗಳಿಸಿದ್ದಾರೆ.

ಇದಾಗಿಯೂ ರಾಜ್ಯ ಬಿಜೆಪಿ ತಮ್ಮ ಮತೀಯ ಅಜೆಂಡಾವನ್ನು ಜಾರಿಗೊಳಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲವು ಕೊಲೆಗಳನ್ನೂ ಮತೀಯ ಬಣ್ಣ ಬಳಿದು ಅದನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಲು ಪ್ರಯತ್ನಿಸಿತ್ತು. ಆದರೆ ಪ್ರಕರಣದಲ್ಲಿ ನೇರವಾಗಿ ಯಾವುದೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಸಮುದಾಯದ ಅಪರಾಧಿಗಳು ಕಾಣಸಿಗದೆ ಇದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಜಾರಿಕೊಂಡಿತ್ತು. ಒಟ್ಟಿನಲ್ಲಿ ಬಿಜೆಪಿಗೆ ಧಾರ್ಮಿಕ ದ್ವೇಷ, ಜನಾಂಗಿಯತೆ ಅಜೆಂಡಾ ಬಿಟ್ಟರೆ ಸಾಮಾನ್ಯ ಜನರ ಪರ ನಿಲ್ಲುವ ಯಾವುದೆ ರಾಜಕೀಯ ನಡೆ ಬಿಜೆಪಿಯದ್ದಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಇದನ್ನೂ ಓದಿ: ನನ್ನ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು – ಸೌಜನ್ಯ ತಾಯಿ

ಆದರೆ ಈ ನಡುವೆ ಬಿಜೆಪಿ ಪಕ್ಷಕ್ಕೆ ಸಿಕ್ಕ ವಿಚಾರವೆ ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣ ಎಂಬ ತಿರುಚಲ್ಪಟ್ಟ ಪ್ರಕರಣ. ಈ ಪ್ರಕರಣವನ್ನು ಇಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ಐಟಿ ಸೆಲ್ಲುಗಳು ಕೆಲಸ ಮಾಡಿದವು. ಕಾಲೇಜಿನಲ್ಲೆ ಮುಗಿದ ವಿಚಾರವನ್ನು ಮತ್ತೆ ಕೆದಕಿದ ಬಿಜೆಪಿಯ ಐಟಿ ಸೈನ್ಯದ ಮಹಿಳೆಯೊಬ್ಬರು ಘಟನೆಗೆ ಮತೀಯ ಬಣ್ಣ ಬಳಿದು ಇಲ್ಲಸಲ್ಲದ ಆರೋಪವನ್ನು ಮಾಡಿದ್ದರು. ಆ ಘಟನೆ ಅಂತರಾಷ್ಟ್ರೀಯ ಮಟ್ಟದ ಸಂಘಟಿತ ಪಿತೂರಿ ಎಂಬಂತೆ ಗುಲ್ಲೆಬ್ಬಿಸಿದರು. ಆದರೆ ಪೊಲೀಸರು ಇಂತಹ ಘಟನೆಯೆ ನಡೆದಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಫೇಕ್ ಎಂದರೂ ಕೇಳದೆ ಮತ್ತೆ ಮತ್ತೆ ಸುಳ್ಳನ್ನು ಹರಡಲಾಯಿತು. ಇವರ ಈ ಸುಳ್ಳಿನ ಪ್ರಚಾರಕ್ಕೆ ಉಡುಪಿ ಪೊಲೀಸರು ಬೆದರಿ ಸ್ವಯಂಪ್ರೇರಿತ ದೂರನ್ನೂ ದಾಖಲಿಸಿದರು.

ಮತೀಯ ದ್ವೇಷ ಮತ್ತು ಸುಳ್ಳು ಹರಡುವ ಕೃತ್ಯವನ್ನು ಎಲ್ಲಿವರೆಗೆ ಮಾಡಿತು ಎಂದರೆ ಬಿಜೆಪಿ ನಾಯಕಿಯಾಗಿದ್ದ, ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಎಂದು ಹೆಸರು ಬದಲಿಸಿಕೊಂಡ ಖುಷ್ಬೂ ಸುಂದರ್ ಅವರು ಉಡುಪಿಗೆ ತೆರಳಿ, “ಈ ರೀತಿಯ ಘಟನೆ ಆಗಿಲ್ಲ. ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಊಹಾಪೋಹಗಳನ್ನು ಹರಡಬೇಡಿ” ಎಂದು ಹೇಳುವಂತಾಯಿತು. ಆದರೆ ಇದೇ ಬಿಜೆಪಿ ಪಕ್ಷದ ಸರ್ಕಾರ ಆಡಳಿತ ನಡೆಸುವ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅದರ ವಿಡಿಯೊ ಸುಮಾರು ಎರಡು ತಿಂಗಳ ನಂತರ ಹೊರ ಬಂದಾಗಲೂ ಪಕ್ಷವೂ ಇನ್ನೂ ತನ್ನನ್ನು ಸಮರ್ಥನೆ ಮಾಡುತ್ತಿದೆ.

ಅದಾಗಿಯೂ ದೆಹಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಘಟನೆಯನ್ನು ವಿರೋಧಿಸಿ ಮಣಿಪುರ ಭೇಟಿಗೆ ಹೋದಾಗಲು ಅದನ್ನು ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಅವರು ಅದನ್ನು ಮೀರಿ ಅಲ್ಲಿಗೆ ತೆರಳಿದ್ದು ಇತಿಹಾಸ. ಆದರೆ ಉಡುಪಿ ವಿಚಾರಕ್ಕೆ ವಿಮಾನದಲ್ಲಿ ಹಾರಿ ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖಷ್ಬೂ ಸುಂದರ್‌ ಮಣಿಪುರಕ್ಕೆ ಯಾವಾಗ ಹೋಗುತ್ತೀರಿ ಎಂದು ಯಾರು ಕೇಳುವಂತಿಲ್ಲ. ಯಾಕೆಂದರೆ ಅಲ್ಲಿರುವುದು ಬಿಜೆಪಿ ಸರ್ಕಾರ. ಅದಾಗಿಯೂ ಖುಷ್ಭು ಭೇಟಿಯ ವರದಿ ಬಿಜೆಪಿಗೆ ತೃಪ್ತಿ ನೀಡಿಲ್ಲ ಎಂದು ಕಾಣುತ್ತಿದೆ. ಇದರ ನಂತರ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು. ಸಾಮಾನ್ಯವಾಗಿ ಹೆಣ ಕಂಡರೆ ಬರುವ ರಣಹದ್ದು ಶೋಭಾ ಕೂಡಾ ಮತೀಯ ವಿಚಾರಗಳಿಗೆ ಅಷ್ಟೆ ಉಡುಪಿಗೆ ಭೇಟಿ ನೀಡುತ್ತಾರೆ ಎಂಬ ಪ್ರತೀತಿಯಿದೆ. ಇದೇನೂ ಉತ್ಪ್ರೇಕ್ಷೆಯ ಮಾತು ಕೂಡಾ ಅಲ್ಲ. ಅವರು ತಮ್ಮ ಕ್ಷೇತ್ರದ ವಿಚಾರವಾಗಿ, ಜನರ ನಿಜವಾದ ಸಮಸ್ಯೆಗಳ ಕುರಿತಾರಿ ಉಡುಪಿಗೆ ಭೇಟಿ ನೀಡಿದ್ದು ತೀರಾ ಅಪರೂಪ ಅಥವಾ ಇಲ್ಲವೇ ಇಲ್ಲ ಎನ್ನಬಹುದು.

ಇದನ್ನೂ ಓದಿ: ಸೌಜನ್ಯ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಿ : ಮುಖ್ಯಮಂತ್ರಿಗೆ ನಿಯೋಗ ಮನವಿ

ಈ ನಡುವೆ ಉಡುಪಿಗೆ ಹತ್ತಿರವೇ ಇರುವ ದಕ್ಷಿಣ ಕನ್ನಡದ ಜಿಲ್ಲೆಯ ವಿಟ್ಲದಲ್ಲಿ ದಲಿತ ಹೆಣ್ಣು ಮಗಳನ್ನು ಐವರು ಸಂಘ ಪರಿವಾರದ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದಾರೆ.ಈ ಬಗ್ಗೆ ಸಂಘ ಪರಿವಾರ ಮಾತನಾಡುವುದೆ ಇಲ್ಲ. ಅದು ಬಿಡಿ ಕಳೆದ 11 ವರ್ಷಗಳಿಂದ ನ್ಯಾಯಕ್ಕಾಗಿ ರಾಜ್ಯದಾದ್ಯಂತ ಓಡಾಡುತ್ತಿರುವ ಧರ್ಮಸ್ಥಳದ ಕುಮಾರಿ ಸೌಜನ್ಯ ಅವರ ಕುಟುಂಬಿಕರ ಧ್ವನಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ತಲುಪಲೆ ಇಲ್ಲ. ಅವರಿಗೆ ಏನಿದ್ದರೂ ಆರೋಪಿಗಳು ಮುಸ್ಲಿಂ ಇದ್ದು, ಸಂತ್ರಸ್ಥರು ಹಿಂದೂಗಳು ಇದ್ದರಷ್ಟೆ ಅದರಲ್ಲಿ ಧರ್ಮ ಎಳೆದು ತಂದು ಜನರಲ್ಲಿ ವಿ‍ಷ ಹರಡುವ ಕೆಲಸನ್ನಷ್ಟೆ ಮಾಡುತ್ತಾರೆ.

ಒಂದು ವೇಳೆ ಉಡುಪಿ ಕಾಲೇಜಿನಲ್ಲಿ ಯುವತಿಯರು ತಮ್ಮ ಸಹಪಾಠಿಯ ವಿಡಿಯೊ ರೆಕಾರ್ಡ್‌ ಮಾಡಿದ್ದರೆ ಅದು ತಪ್ಪು. ಅವರನ್ನು ಸಮರ್ಥಿಸುವ ಯಾವುದೆ ಪ್ರಯತ್ನ ಮಾಡುವುದು ಕೂಡಾ ತಪ್ಪೆ. ಆದರೆ ಶಾಲಾ ಕಾಲೇಜಿನಲ್ಲಿ ನಡೆಯುವ ವಿದ್ಯಾರ್ಥಿಗಳ ಗಲಾಟೆಗಳಿಗೆ ಮತೀಯ ಬಣ್ಣ ಬಳಿದು ಅದನ್ನು ದೇಶಕ್ಕೆ ಹಬ್ಬಿಸುವುದು ಬಿಜೆಪಿಯ ಚಾಳಿ. ಅದನ್ನು ಬಿಜೆಪಿ ಹಿಂದೆಯು ಮಾಡಿತ್ತು, ಮುಂದೆಯು ಮಾಡಲಿದೆ. ಆದರೆ ಉಡುಪಿ ಪ್ರಕರಣದಲ್ಲಿ ಎಲ್ಲವೂ ಮುಗಿದಿದೆ ಎಂದು ಹೇಳಿದ ನಂತರ ಅವನ್ನು ಮತ್ತಷ್ಟು ಹಿಗ್ಗಿಸುವ ವಿಚಾರವೇನಿದೆ? ಅದರಲ್ಲಿ ದುರುದ್ಧೇಶ ಇರಲಿಲ್ಲ ಎನ್ನುವುದನ್ನು ಕಾಲೇಜು ಮಂಡಳಿಯೆ ಹೇಳಿದೆ. ಇಷ್ಟಾಗಿಯು ಬಿಜೆಪಿ ಈ ವಿಚಾರವನ್ನು ಇಷ್ಟೆಲ್ಲಾ ಎಳೆದಾಡುತ್ತಿರುವುದಕ್ಕೆ ಕಾರಣ, ವಿಧಾನಸಭಾ ಚುನಾವಣೆಯ ಸೋಲು ಮತ್ತು ಮುಂಬರುವ ಲೋಕಸಭಾ ಚುನಾವಣೆ ಅಷ್ಟೆ ಕಾರಣ.

ಚುನಾವಣೆ ವೇಳೆ ಮತರಾರರ ಜೊತೆಗೆ ಹೇಳಿಕೊಳ್ಳಲು ಅವರಿಗೆ ಯಾವುದೆ ವಿಚಾರ ಇಲ್ಲದೆ ಇರುವುದಕ್ಕೆ ಎಲ್ಲಾ ವಿಚಾರಗಳಿಗೂ ಮತೀಯ ಬಣ್ಣ ಹಚ್ಚಿ ಅದನ್ನು ತಮ್ಮ ವಾಟ್ಸಪ್ ಯುನಿರ್ವಸಿಟಿ ವಿದ್ಯಾರ್ಥಿಗಳ ತಲೆಗೆ ತುರುಕುತ್ತಿದ್ದಾರೆ. ಆದರೆ ನಾವು ಎಚ್ಚರದಿಂದ ಇರಬೇಕಷ್ಟೆ.

ವಿಡಿಯೊ ನೋಡಿ: ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ – ವಿಶ್ಲೇಷಣೆ : ಅರುಣ್ ಜೋಳದ ಕೂಡ್ಲಿಗಿ Janashakthi Media

Donate Janashakthi Media

Leave a Reply

Your email address will not be published. Required fields are marked *