ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?

ಪ್ರಬೀರ್ ಪುರಕಾಯಸ್ಥ

ವರ್ಷದ ಬಜೆಟ್ನಲ್ಲಿ ಕೋವಿಡ್-19 ಲಸಿಕೆಗಳಿಗಾಗಿ ಮೀಸಲಿಟ್ಟ ಹಣದ ಮೂರನೇ ಒಂದು ಭಾಗದಲ್ಲಿ ಎಲ್ಲರಿಗೂ ಲಸಿಕೆ ಹಾಕಬಹುದಿತ್ತು ಮತ್ತು ಭಾರತವು ವಿಶ್ವದ ಲಸಿಕೆ ಔಷಧಾಲಯ ಎಂಬ ಬಿರುದನ್ನು ಸಮರ್ಥಿಸಿಕೊಳ್ಳಬಹುದಿತ್ತು. ಬದಲಿಗೆ, ನಾವು ನಮ್ಮ ಜನರಿಗೆ ಮೋಸ ಮಾಡಿದ್ದೇವೆ ಮಾತ್ರವಲ್ಲ, ಈಗ 92 ದೇಶಗಳಿಗೆ ಲಸಿಕೆಗಳನ್ನು ಪೂರೈಸದ ಲೋಪಕ್ಕಾಗಿ ಕಟಕಟೆಯಲ್ಲಿ ನಿಂತಿದ್ದೇವೆ. ಮೋದಿ ಅವರ ಆತ್ಮನಿರ್ಭರ್ ಭಾರತ್ ತಂದಿಟ್ಟಿರುವ ಫಲವೆಂದರೆ: ನಮ್ಮ ಸ್ಥಳೀಯ ಸಾಮರ್ಥ್ಯದ ನಾಶ ಮತ್ತು ಕೈ ಹಿಡಿಯಬೇಕಾದ ಸಮಯದಲ್ಲಿ ಜನರನ್ನು ಕೈಬಿಟ್ಟಿರುವುದು.

ಸ್ವಾವಲಂಬನೆಯ ನಮ್ಮ ಮೊದಲ ಪರಿಕಲ್ಪನೆಯು ನಮ್ಮ ಸ್ವಾತಂತ್ರ್ಯ ಹೋರಾಟದಿಂದ ಮೂಡಿಬಂತು. ನಮ್ಮ ದಿನ ನಿತ್ಯದ ಅವಶ್ಯಕ ವಸ್ತುಗಳ ಪೂರೈಕೆಗಾಗಿ ವಸಾಹತುಶಾಹಿ ದೇಶಗಳ ಮೇಲಿನ ಅವಲಂಬನೆಯಿಂದ ಹೊರಬಂದು ಈ ಅವಶ್ಯಕತೆಗಳನ್ನು ನಾವೇ ತಯಾರಿಸಿಕೊಳ್ಳುವ ಸಲುವಾಗಿ, ನಮ್ಮ ಜನರು, ಸಂಸ್ಥೆಗಳು ಮತ್ತು ಸ್ಥಳೀಯ ಉದ್ಯಮಗಳು ತಮ್ಮ ತಮ್ಮ ಸಾಮರ್ಥ್ಯವನ್ನು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಿಕೊಳ್ಳುವ ಕ್ರಮವೇ ಸ್ವಾವಲಂಬನೆ. ಆದರೆ, ಎರಡನೇಯದು, ಅಂದರೆ  ಮೋದಿಯವರು ‘ಆತ್ಮನಿರ್ಭರ್ ಭಾರತ್’ ಎಂದು ಕರೆದ ಪರಿಕಲ್ಪನೆಯ ಅರ್ಥ ಸ್ಥಳೀಯ ಉತ್ಪಾದನೆ ಎಂದಷ್ಟೇ. ಸ್ವಾವಲಂಬನೆಯ ಇತರ ಅಂಶಗಳ ಸತ್ವವೇ ಇಲ್ಲದ ಕಾರಣದಿಂದ ಈ ಆತ್ಮನಿರ್ಭರ್ ಭಾರತವು ಇಂದು ನಮಗೆ ತುರ್ತಾಗಿ ಅಗತ್ಯವಿರುವ ಲಸಿಕೆಗಳನ್ನು ಸಹ ಉತ್ಪಾದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಈ ಹಿಂದಿನ ನಮ್ಮ ಸ್ವಾವಲಂಬನೆಯ ಛಲವು ಅಂದು ದೇಶದಲ್ಲಿ ಔಷಧಿಗಳ ತಯಾರಿಕೆಯಲ್ಲಿ ದೊಡ್ಡ ಬಹುರಾಷ್ಟ್ರೀಯ ಔಷಧಿ ಕಂಪನಿಗಳ ಏಕಸ್ವಾಮ್ಯವನ್ನು ಮುರಿದು ಭಾರತವನ್ನು ಬಡವರ ಜಾಗತಿಕ ಔಷಧಾಲಯವನ್ನಾಗಿ ಮಾಡಿತ್ತು. 1970ರ ಭಾರತದ ಪೇಟೆಂಟ್ ಕಾಯ್ದೆಯ ಬಲದಿಂದ ಮತ್ತು ಸಿಎಸ್‌ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ನೇತೃತ್ವದಲ್ಲಿ, ನಮ್ಮ ಪ್ರಯೋಗಾಲಯಗಳು, ಬಹುರಾಷ್ಟ್ರೀಯ ಔಷಧ ಕಂಪನಿಗಳು ಅನುಸರಿಸುತ್ತಿದ್ದ ವಿಧಾನವನ್ನು ತುಸು ಬದಲಾಯಿಸಿ ಅದೇ ಪರಿಣಾಮವುಳ್ಳ ಔಷಧಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದವು. ಈ ರೀತಿಯಲ್ಲಿ ಭಾರತದ ಸಾರ್ವಜನಿಕ ಔಷಧ ವಲಯ ಮತ್ತು ಸ್ಥಳೀಯ ಖಾಸಗಿ ತಯಾರಕರು ಜೊತೆಯಾಗಿ ತಮ್ಮ ಪರಿಶ್ರಮದ ಮೂಲಕ ವಿಶ್ವದ ಅತಿದೊಡ್ಡ ಪ್ರಮಾಣದ ಜೆನೆರಿಕ್ ಔಷಧಗಳು ಮತ್ತು ಲಸಿಕೆಗಳ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದರು. ದೇಶವು ವಿಶ್ವದ ಔಷಧಾಲಯ ಎಂಬ ಅಭಿದಾನಕ್ಕೆ ಪಾತ್ರವಾಯಿತು. ಆದರೆ, ಮೋದಿ ಅವರ “ಆತ್ಮನಿರ್ಭರ ಭಾರತ್” ಅದೆಲ್ಲವನ್ನೂ ಪೋಲು ಮಾಡಿದೆ.

ಇದನ್ನು ಓದಿ: “ಬದುಕಿನ ಹಕ್ಕು” ಆದ್ಯತೆಯಾಗಬೇಕು

ಕೊರೊನಾ ಜಾಢ್ಯವು ಮರುಕಳಿಸುವ ಎರಡನೆಯ ಅಲೆಯ ಸಾಧ್ಯತೆಯನ್ನು ಎಲ್ಲ ವೈಜ್ಞಾನಿಕ ಅಂದಾಜು ಮಾಹಿತಿಗಳೂ ಸೂಚಿಸಿದ್ದವು. ಹಾಗಾಗಿ, ಲಸಿಕೆಗಳ ಉತ್ಪಾದನೆಯನ್ನು ತಡಮಾಡದೆ ಹೆಚ್ಚಿಸುವ ಅಗತ್ಯ ಸ್ಪಷ್ಟವಾಗಿತ್ತು. ಈ ಎಲ್ಲವನ್ನೂ ನಿರ್ಲಕ್ಷಿಸಿದ ಮೋದಿ ಸರ್ಕಾರವು ಕೋವಿಡ್-19 ವಿರುದ್ಧದ ಯುದ್ಧವನ್ನು ಗೆದ್ದಿರುವುದಾಗಿ ಘೋಷಿಸಿತು. ಅದೇ ಹುಮ್ಮಸ್ಸಿನಲ್ಲಿ, ಬೇರೆ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಸೋಲಿಸಲು ಅಖಾಡಾಕ್ಕೆ ಇಳಿಯಿತು.

ಏನು ಮಾಡಬಹುದಿತ್ತು?

ಈ ಪರಿಸ್ಥಿತಿಯಲ್ಲಿ ಭಾರತವು ಏನಾದರೂ ಕಾರ್ಯಕ್ರಮ ಕೈಗೊಳ್ಳಬಹುದಿತ್ತೇ? ಹೌದು, ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯವಿತ್ತು ಮತ್ತು ಅವಕಾಶವೂ ಇತ್ತು. ದೇಶದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಇಳಿಮುಖವಾದ ಅಕ್ಟೋಬರ್ 2020ರ ನಂತರದ ಸುಮಾರು ಐದು ತಿಂಗಳುಗಳ ಸಮಯವನ್ನು ಆಸ್ಪತ್ರೆಗಳು, ಆಮ್ಲಜನಕ ಮತ್ತು ಇತರ ವೈದ್ಯಕೀಯ ಬೆಂಬಲದ ಉಪಕರಣಗಳು ಮುಂತಾದ ವ್ಯವಸ್ಥೆಗಳನ್ನು ಏರ್ಪಡಿಸಿಕೊಳ್ಳಲು ಮತ್ತು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬಹುದಿತ್ತು. ನಮ್ಮ ದೇಶದ ಸುಮಾರು 50 ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿವೆ. ಹಾಗಾಗಿ, ದೇಶದ ಜನರಿಗೆ ಅಗತ್ಯ ಪ್ರಮಾಣದ ಲಸಿಕೆಗಳನ್ನು ಒದಗಿಸುವುದರ ಜೊತೆಗೆ ಇತರ ದೇಶಗಳಿಗೂ ರಫ್ತು ಮಾಡುವಷ್ಟು ಲಸಿಕೆಗಳನ್ನು ಉತ್ಪಾದಿಸುವ ಯೋಜನೆಯನ್ನು ಸರ್ಕಾರವು ಹಮ್ಮಿಕೊಳ್ಳಬಹುದಿತ್ತು.

ಲಸಿಕೆಯ ವಿಭಿನ್ನ ತಂತ್ರಜ್ಞಾನಗಳು

ಲಸಿಕೆ ತಂತ್ರಜ್ಞಾನಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಮೂಲಕ ವಿಷಯವನ್ನು ಪ್ರಾರಂಭಿಸೋಣ. ಲಸಿಕೆ ಉತ್ಪಾದಿಸುವ ಮೂರು ವಿಧಾನಗಳಿವೆ (ತಂತ್ರಜ್ಞಾನ). ಮೊದಲನೆಯದು, ವೈರಸ್ ನಿಷ್ಕ್ರಿಯಗೊಳಿಸಿದ ಲಸಿಕೆ ತಂತ್ರಜ್ಞಾನ. ಇದು ನೂರು ವರ್ಷಗಳಿಂದಲೂ ಬಳಕೆಯಲ್ಲಿದೆ. ಈಗಲೂ ಪರಿಣಾಮಕಾರಿಯಾಗಿಯೇ ಉಳಿದಿದೆ. ಭಾರತ್ ಬಯೋಟೆಕ್‌ ಕಂಪನಿಯ ಕೊವಾಕ್ಸಿನ್, ಸಿನೋವಾಕ್ ಕಂಪನಿಯ ಕೊರೊನಾವಾಕ್, ಸಿನೋಫಾರ್ಮ್‌ನ  ಬಿಬಿಐಬಿಪಿ-ಕಾರ್-ಇವೆಲ್ಲವೂ ನಿಷ್ಕ್ರಿಯ ವೈರಸ್ ಲಸಿಕೆಗಳು.

ಇದನ್ನು ಓದಿ: ಕೋವಿಡ್‌ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು

ಎರಡನೇ ತಂತ್ರಜ್ಞಾನದ ಲಸಿಕೆಯಲ್ಲಿ ಒಂದು ನಿರುಪದ್ರವಿ ವೈರಸ್ ವಾಹಕವನ್ನು (ಅಡೆನೊವೈರಸ್ ವೆಕ್ಟರ್) ಬಳಸಲಾಗುತ್ತದೆ. ಕೋವಿಶೀಲ್ಡ್ (ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ತಯಾರಿಕೆ), ಸ್ಪುಟ್ನಿಕ್ ವಿ (ಗಮಾಲೆಯಾ ಇನ್‌ಸ್ಟಿಟ್ಯೂಟ್) ಇವೆಲ್ಲವೂ ಅಡೆನೊವೈರಸ್ ವೆಕ್ಟರ್ ಲಸಿಕೆಗಳು.

ನಾವು ಮೂರನೇ ತಂತ್ರಜ್ಞಾನದ ಬಗ್ಗೆ – ಎಂಆರ್‌ಎನ್‌ಎ ಅಥವಾ ಪ್ರೋಟೀನ್ ತಂತ್ರಜ್ಞಾನಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ. ಇವು ಹೊಸವು. ಆದ್ದರಿಂದ, ಇವುಗಳ ಬಗ್ಗೆ ನಿಖರವಾಗಿ ಹೇಳಲಾಗದು. ಆದರೆ, ನಿಷ್ಕ್ರಿಯ ವೈರಸ್ ಮತ್ತು ಅಡೆನೊವೈರಸ್ ವೆಕ್ಟರ್ ಲಸಿಕೆಗಳ ಉತ್ಪಾದನೆ ಸುಲಭದ್ದು. ಈ ತಂತ್ರಜ್ಞಾನಗಳ ಬಗ್ಗೆ ವಿಜ್ಞಾನಿಗಳ ನಡುವೆ ಭಿನ್ನಾಭಿಪ್ರಾಯವಿಲ್ಲ. ನಮ್ಮ ದೇಶದಲ್ಲಿ ಈ ತಂತ್ರಜ್ಞಾನಗಳ ಲಸಿಕೆಗಳ ಉತ್ಪಾದನಾ ಸಾಮರ್ಥ್ಯವು ಉನ್ನತವಾಗಿದೆ.

ಭಾರತದ ಲಸಿಕೆ ಇತಿಹಾಸ

ಭಾರತದಲ್ಲಿ ನಿಷ್ಕ್ರಿಯ ವೈರಸ್ ತಂತ್ರಜ್ಞಾನವು ಮುಂಬೈನ ಹಾಫ್ಕಿನ್ ಸಂಸ್ಥೆಯಲ್ಲಿ ಪ್ರಾರಂಭವಾಯಿತು. 1893ರಲ್ಲಿ, ಲಸಿಕೆಗಳ ಜನಕ ಲೂಯಿಸ್ ಪಾಶ್ಚರ್ ಅವರ ವಿದ್ಯಾರ್ಥಿಯಾದ ವಾಲ್ಡೆಮರ್ ಹಾಫ್ಕಿನ್ ಭಾರತದಲ್ಲಿ ಕಾಲರಾ ಸಮಸ್ಯೆಯನ್ನು ನಿಭಾಯಿಸುವ ಧ್ಯೇಯದೊಂದಿಗೆ ಭಾರತಕ್ಕೆ ಬಂದರು. ಒಂದು ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಅವರನ್ನು ಕೋರಲಾಯಿತು. ಆಗ ಅವರು ಸ್ಥಾಪಿಸಿದ ಸಂಶೋಧನಾ ಸಂಸ್ಥೆಯನ್ನು 1925ರಲ್ಲಿ ಹಾಫ್ಕಿನ್ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು. 1932ರಲ್ಲಿ ಸಾಹಿಬ್ ಸಿಂಗ್ ಸೊಖೆ ಈ ಸಂಸ್ಥೆಯ ಮೊದಲ ಭಾರತೀಯ ನಿರ್ದೇಶಕರಾದರು. ಅವರು ಇದನ್ನು ಒಂದು ಮುಂದುವರೆದ ಜೈವಿಕ ಔಷಧಿ ಕೇಂದ್ರವಾಗಿ ಮತ್ತು ಲಸಿಕೆ ತಯಾರಿಕಾ ಕೇಂದ್ರವಾಗಿ ಬೆಳೆಸಿದರು. ಈ ಸಂಸ್ಥೆಯ ನೆರವಿನಿಂದ 1975ರಲ್ಲಿ, ಜೀವ ಉಳಿಸುವ ಔಷಧಗಳು ಮತ್ತು ಲಸಿಕೆಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಹಾಫ್ಕಿನ್ ಬಯೋ ಫಾರ್ಮಾಸ್ಯೂಟಿಕಲ್ ಕಾರ್ಪೊರೇಷನ್ ಎಂಬ ಕಂಪನಿಯನ್ನು ಆರಂಭಿಸಿ ಔಷಧಿಗಳು ಮತ್ತು ಲಸಿಕೆಗಳ ಉತ್ಪಾದನೆಯ ಕಾರ್ಯವನ್ನು ವಹಿಸಿತು. ಜಾಗತಿಕವಾಗಿ ಲಸಿಕೆಗಳ ಅತಿದೊಡ್ಡ ಪೂರೈಕೆದಾರರಲ್ಲಿ ಈ ಸಂಸ್ಥೆಯೂ ಒಂದು. ಲಸಿಕೆಯ ಈ ನೆಲೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಳಸಿಕೊಂಡಿದೆ. ಉಂಡೂ ಹೋದ ಕೊಂಡೂ ಹೋದ ಎಂಬಂತೆ, ಹ್ಯಾಫ್ಕಿನ್ ಇನ್‌ಸ್ಟಿಟ್ಯೂಟ್ ನಿಂದ ತಜ್ಞ-ವೈಜ್ಞಾನಿಕ ಸಿಬ್ಬಂದಿಯನ್ನೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕದ್ದೊಯ್ದಿದೆ. ಅವರಲ್ಲಿ ಮೂವರು ಅದರ ಆಡಳಿತ ಮಂಡಳಿಯ ಸದಸ್ಯ ಹುದ್ದೆಗೆ ನೇಮಕಗೊಂಡಿದ್ದಾರೆ.

ಸಮುದ್ರದ ನೆಂಟಸ್ತನಉಪ್ಪಿಗೆ ಬಡತನ

ಭಾರತದಲ್ಲಿ ಲಸಿಕೆ ತಯಾರಿಕೆಗೆ ಸುಮಾರು 100 ವರ್ಷಗಳ ಇತಿಹಾಸವಿದೆ. ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದಕ್ಕಿಂತ ಮೊದಲು, ವಿಶ್ವದಲ್ಲಿ ಮಾರಾಟವಾಗುತ್ತಿದ್ದ ಲಸಿಕೆಗಳಲ್ಲಿ ಶೇಕಡಾ 60ರಷ್ಟನ್ನು ಭಾರತ ಉತ್ಪಾದಿಸುತ್ತಿತ್ತು. 21 ಲಸಿಕೆ ತಯಾರಕರನ್ನು ಹೊಂದಿರುವ ಭಾರತದಲ್ಲಿ ಪರವಾನಗಿ ಪಡೆದ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ ಸುಮಾರು ಎಂಟು ನೂರು ಕೋಟಿ (8 ಬಿಲಿಯನ್) ಡೋಸ್‌ಗಳಷ್ಟಿದೆ. ಲಸಿಕೆ ತಯಾರಿಕೆಯಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಭಾರತದ ದುರಂತವೆಂದರೆ, ಸಾರ್ವಜನಿಕ ವಲಯದ ಅಡಿಪಾಯದ ಮೇಲೆ ಬೆಳೆದು ನಿಂತ ಔಷಧ-ಲಸಿಕೆ ವಲಯವು, ಖಾಸಗಿ ವಲಯವು ಸರ್ಕಾರದ ಒಲವಿಗೆ ಒಳಗಾದ ನಂತರ, ಸಾರ್ವಜನಿಕ ಔಷದ-ಲಸಿಕೆ ವಲಯವನ್ನು ವ್ಯವಸ್ಥಿತವಾಗಿ ನಾಶಪಡಿಸಿತು. ಹಾಗಾಗಿ, ಭಾರತದಲ್ಲಿ ಔಷಧ-ಲಸಿಕೆ ತಯಾರಿಸುವ ಏಳು ಸಾರ್ವಜನಿಕ ವಲಯದ ಘಟಕಗಳಿದ್ದರೂ ಸಹ, ನಮ್ಮ ಸಾರ್ವಜನಿಕ ಆರೋಗ್ಯಕ್ಕಾಗಿ ಲಸಿಕೆಗಳನ್ನು ಖಾಸಗಿ ವಲಯದಿಂದ ಖರೀದಿಸಲಾಗುತ್ತಿದೆ.

ಅತಿದೊಡ್ಡ ಪ್ರಮಾದ

ವಾರ್ಷಿಕ ಸುಮಾರು ಎಂಟು ನೂರು ಕೋಟಿ ಡೋಸ್ ಲಸಿಕೆಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಭಾರತವು ತಿಂಗಳಿಗೆ ಕೇವಲ 60-70 ದಶಲಕ್ಷ ಡೋಸ್‌ಗಳನ್ನು ಮಾತ್ರ ಉತ್ಪಾದಿಸುತ್ತಿದೆ, ಏಕೆ? ಮೋದಿ ಸರ್ಕಾರವು ಮಾಡಿದ ಅತಿ ದೊಡ್ಡ ತಪ್ಪು ಗ್ರಹಿಕೆಯೇ ಉತ್ಪಾದನೆಯ ಈ ಇಳಿಕೆಗೆ ಕಾರಣ. ಕೊರೊನಾ ಸಾಂಕ್ರಾಮಿಕವನ್ನು ಸೋಲಿಸಿದ ಭ್ರಮೆಯಲ್ಲಿದ್ದ ಮೋದಿ ಸರ್ಕಾರವು ಜನರಿಗೆ ಲಸಿಕೆ ಹಾಕಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಭಾವಿಸಿತ್ತು. ಸೀರಮ್ ಇನ್‌ಸ್ಟಿಟ್ಯೂಟ್ ತಿಂಗಳಿಗೆ ಉತ್ಪಾದಿಸುವ 70-100 ಮಿಲಿಯನ್ ಡೋಸ್‌ಗಳು ಮತ್ತು ಭಾರತ್ ಬಯೋಟೆಕ್ ಉತ್ಪಾದಿಸುವ ಮತ್ತಷ್ಟು 12.5 ಮಿಲಿಯನ್ ಡೋಸ್‌ಗಳು ಸಾಕಾಗುತ್ತವೆ ಎಂದು ಅದು ನಂಬಿತ್ತು.

ಇದನ್ನು ಓದಿ: ಕೋವಿಡ್ ಲಸಿಕೆಯ ಪೂರೈಕೆಯಲ್ಲೂ ‘ಉದಾರೀಕರಣ’ದ ಗೀಳು!!

ಬಾಯಂದಾಜಿನ ಲೆಕ್ಕಾಚಾರದ ಪ್ರಕಾರ, ಈಗ ಲಸಿಕೆ ಹಾಕುತ್ತಿರುವ ಪ್ರಮಾಣದಲ್ಲಿ ಭಾರತವು ಉದ್ದೇಶಿತ ಜನರಿಗೆ ಲಸಿಕೆ ಹಾಕಲು ಅಗತ್ಯವಿರುವ ಎರಡು ನೂರು ಕೋಟಿ ಡೋಸ್‌ಗಳನ್ನು ಉತ್ಪಾದಿಸಲು ಸುಮಾರು ಎರಡೂವರೆ ವರ್ಷಗಳು ಬೇಕಾಗುತ್ತದೆ. ಈ ಆಮೆ ವೇಗದ ಲಸಿಕೆ ಕಾರ್ಯಕ್ರಮದಿಂದಾಗಿ ಭಾರತವು ಮೂರನೇ ಅಲೆಗೆ ಒಡ್ಡಿಕೊಳ್ಳುವುದು ಮಾತ್ರವಲ್ಲದೆ, ಜಾಗತಿಕ ಲಸಿಕೆ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ.

ಲಸಿಕೆ ಉತ್ಪಾದನೆಯನ್ನು ಭಾರತವು ತ್ವರಿತವಾಗಿ ಹೆಚ್ಚಿಸಲು ಬಯಸಿದರೆ, ಬೇರೆ ಏನು ಮಾಡಬಹುದಿತ್ತು? ಚೀನಾ ಮತ್ತು ಅಮೇರಿಕಾ ದೇಶಗಳು ಕೈಗೊಂಡ ಕ್ರಮಗಳನ್ನು ಅನುಸರಿಸಬಹುದಿತ್ತು. ಅಮೇರಿಕಾ ಎಂಆರ್‌ಎನ್‌ಎ ಅಥವಾ ಪ್ರೋಟೀನ್ ತಂತ್ರಜ್ಞಾನದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಚೀನಾ ಇನ್ನೊಂದು ಮಾರ್ಗವನ್ನು ಆಯ್ಕೆ ಮಾಡಿತು. ಕೊರೊನಾ ಸಾಂಕ್ರಾಮಿಕ ಹರಡುವ ಮೊದಲು ಚೀನಾದ ಲಸಿಕೆ ಉತ್ಪಾದನಾ ಸಾಮರ್ಥ್ಯವು ಭಾರತಕ್ಕಿಂತ ಕೆಳಗಿತ್ತು. ತನ್ನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ ಎರಡು ನಿಷ್ಕ್ರಿಯ ವೈರಸ್ ಲಸಿಕೆಗಳನ್ನು ಚೀನಾ ಅಭಿವೃದ್ಧಿಪಡಿಸಿತು. ಅಸ್ತಿತ್ವದಲ್ಲಿದ್ದ ಉತ್ಪಾದನಾ ಸೌಲಭ್ಯಗಳನ್ನು ಹೆಚ್ಚಿಸಿತು ಮತ್ತು ಹೊಸ ಘಟಕಗಳನ್ನು ಸ್ಥಾಪಿಸಿತು. ಈ ಎರಡೂ ತಂತ್ರಜ್ಞಾನದ ಲಸಿಕೆಗಳನ್ನು ಉತ್ಪಾದಿಸಲು ಹಲವಾರು ಘಟಕಗಳಿಗೆ ಪರವಾನಗಿ ನೀಡಿತು. ಜೊತೆಗೆ, ಸಿನೋಫಾರ್ಮ್ ಮತ್ತು ಸಿನೋವಾಕ್ ಕಂಪೆನಿಗಳು ತಮ್ಮ ಲಸಿಕೆಗಳನ್ನು ಉತ್ಪಾದಿಸಲು ವಿಶ್ವದಾದ್ಯಂತ ಅನೇಕ ತಯಾರಕರಿಗೂ ಪರವಾನಗಿ ನೀಡಿದವು.

ತಪ್ಪು ಲೆಕ್ಕಾಚಾರ

ಮೋದಿ ಸರ್ಕಾರವು ಸಾಂಕ್ರಾಮಿಕ ರೋಗವನ್ನು ಸೋಲಿಸಿದ್ದಾಗಿ ನಂಬಿತು. ಆದ್ದರಿಂದ, ಲಸಿಕೆ ಕಾರ್ಯಕ್ರಮವು ನಿಧಾನಗೊಂಡರೆ ಸಮಸ್ಯೆಯಾಗುವುದಿಲ್ಲ ಎಂದು ಬಗೆಯಿತು. ಲಸಿಕೆಗಳ ದೇಶೀಯ ಉತ್ಪಾದನಾ ಸಾಮರ್ಥ್ಯ ಹೊಂದಿದ ದೇಶಗಳು ತೆಗೆದುಕೊಂಡ ಕ್ರಮಗಳನ್ನು ಅದು ಏಕೆ ತೆಗೆದುಕೊಳ್ಳಲಿಲ್ಲ ಎಂಬುದಕ್ಕೆ ಬೇರೆ ವಿವರಣೆ ಬೇಕಿಲ್ಲ: ಅ) ಇಂತಿಷ್ಟು ಲಸಿಕೆಗಳು ಬೇಕೆಂಬ ಕೋರಿಕೆಯನ್ನು ಮುಂಚಿತವಾಗಿ ಸಲ್ಲಿಸಲಿಲ್ಲ, ಆ) ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯವಾಗುವಂತೆ ಲಸಿಕೆ ತಯಾರಕರಿಗೆ ಬ್ಯಾಂಕ್ ಸಾಲ ಕೊಡಿಸಲಿಲ್ಲ, ಇ) ಅಸ್ತಿತ್ವದಲ್ಲಿರುವ ಸಾರ್ವಜನಿಕ ವಲಯದ ಔಷಧಿ-ಲಸಿಕೆ ತಯಾರಿಸುವ ಘಟಕಗಳಲ್ಲಿ ಬೊಕ್ಕಸದಿಂದ ಹಣ ಹೂಡಿಕೆ ಮಾಡಲಿಲ್ಲ, ಈ)ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ತಂತ್ರಜ್ಞಾನವನ್ನು ಇತರ ಲಸಿಕೆ ತಯಾರಕರೊಂದಿಗೆ ಹಂಚಿಕೊಂಡು ಉತ್ಪಾದನೆಯನ್ನು ಹೆಚ್ಚಿಸಬಹುದಿತ್ತು. ಬದಲಾಗಿ, ಸರ್ಕಾರವು ಜನವರಿಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್‌ನೊಂದಿಗೆ ಕೇವಲ 11 ಮಿಲಿಯನ್ ಡೋಸ್‌ಗಳಿಗೆ ಆರ್ಡರ್ ಮಾಡಿತು. ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ಎರಡನೇ ಅಲೆ ಅಪ್ಪಳಿಸಲು ಆರಂಭವಾದಾಗ ಮತ್ತು ರೋಗಿಗಳ ಸಂಖ್ಯೆ ವೇಗವಾಗಿ ಏರುತ್ತಿದ್ದಾಗ ಹೆಚ್ಚುವರಿ 120 ಮಿಲಿಯನ್ ಡೋಸ್‌ಗಳು ಲಭ್ಯವಾದವು. ಸಾರ್ವಜನಿಕ ಕಟು ಟೀಕೆಯ ನಂತರ, ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪೆನಿಗಳಿಗೆ ಮತ್ತಷ್ಟು ಲಸಿಕೆಗಳನ್ನು ಒದಗಿಸುವಂತೆ ಕೋರಿಕೆ ಸಲ್ಲಿಸಿರುವುದರ ಜೊತೆಗೆ ಅವುಗಳಿಗೆ ತಮ್ಮ ಉತ್ಪಾದನೆಯನ್ನು ವಿಸ್ತರಿಸಲು ಸ್ವಲ್ಪ ಹಣವನ್ನೂ ಸರ್ಕಾರ ಕೊಟ್ಟಿದೆ.

ಎಷ್ಟು ಹಣ ಬೇಕು

ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲು ಮೋದಿ ಸರ್ಕಾರಕ್ಕೆ ಎಷ್ಟು ಹಣ ಖರ್ಚಾಗುತ್ತಿತ್ತು? ಸುಮಾರು 3,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ, ಭಾರತವು ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ನೂರು ಕೋಟಿ ಅಧಿಕ ಡೋಸ್‌ಗಳಿಗೆ ಹೆಚ್ಚಿಸಬಹುದಿತ್ತು. 6,000 ಕೋಟಿ ರೂ.ಗಳೊಂದಿಗೆ, ಎರಡು ನೂರು ಕೋಟಿ ಅಧಿಕ ಡೋಸ್‌ಗಳಿಗೆ ಹೆಚ್ಚಿಸಬಹುದಿತ್ತು. 9,000 ಕೋಟಿ ರೂ.ಗಳೊಂದಿಗೆ, ಮೂರು ನೂರು ಕೋಟಿ ಅಧಿಕ ಡೋಸ್‌ಗಳಿಗೆ ಹೆಚ್ಚಿಸಬಹುದಿತ್ತು. ಆಗ, ನಾವು ನಮ್ಮ ದೇಶದ ಎಲ್ಲರಿಗೂ 12 ತಿಂಗಳಲ್ಲಿ ಲಸಿಕೆ ಹಾಕುತ್ತಿದ್ದೆವು. ಅಷ್ಟೇ ಅಲ್ಲ, ಪ್ರಮುಖ ಜಾಗತಿಕ ಲಸಿಕೆ ಪೂರೈಕೆದಾರರೂ ಆಗುತ್ತಿದ್ದೆವು. ಲಸಿಕೆ ಪೂರೈಸುವುದಾಗಿ ಮುಂಗಡ ಹಣ ಪಡೆದು, ಒಪ್ಪಂದಗಳನ್ನು ಮುರಿದು ಮರ್ಯಾದೆ ಕಳೆದುಕೊಳ್ಳುವ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳಬಹುದಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಕೋವಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಲಸಿಕೆಗಳ ಪೂರೈಕೆಯ ಗುತ್ತಿಗೆ ಕೊಟ್ಟ 92 ದೇಶಗಳಿಗೆ ನಾವು ಮಾಡಿರುವುದು ಇದನ್ನೇ.

ಇದನ್ನು ಓದಿ: ಉದ್ಧಟ ವ್ಯಾಕ್ಸೀನ್ ಅಫಾಡವಿಟ್

ವಚನ ಭಂಗ

ಲಸಿಕೆಗಳ ಪೂರೈಕೆಗಾಗಿ ಹೊರ ದೇಶಗಳಿಂದ ಗುತ್ತಿಗೆ ಹಿಡಿಯುವುದು ಸರಿಯೇ. ಆದರೆ, ಹಿಡಿದ ಗುತ್ತಿಗೆಯನ್ನು ನಿಭಾಯಿಸುವಷ್ಟು ಲಸಿಕೆ ತಯಾರಕರು ನಮ್ಮಲ್ಲಿ ಇದ್ದಾರೆಯೇ? ಜಾಗತಿಕ ಉತ್ಪಾದನಾ ಕಂಪನಿಗಳೊಂದಿಗೆ ಸಹಯೋಗದ ಒಪ್ಪಂದ ಮಾಡಿಕೊಂಡಿರುವ ನಮ್ಮ ಹಾಲೀ ಕಂಪನಿಗಳ ಪಟ್ಟಿಯು ನಮ್ಮ ಸ್ಥಳೀಯ ಸಾಮರ್ಥ್ಯವು ಬಲವಾಗಿಯೇ ಇದೆ ಎಂಬುದನ್ನು ತೋರಿಸುತ್ತದೆ. ಈ ಎಲ್ಲಾ ಒಪ್ಪಂದಗಳೂ ಹೆಚ್ಚು ಸಂಕೀರ್ಣವಾದ ಅಡೆನೊವೈರಸ್ ವೆಕ್ಟರ್ ಲಸಿಕೆ ಮಾರ್ಗದ ಉತ್ಪಾದನೆಗೆ ಸಂಬಂಧಿಸುತ್ತವೆ. ನಮ್ಮ ಐಸಿಎಂಆರ್-ಎನ್‌ಐವಿ ಅಭಿವೃದ್ಧಿಪಡಿಸಿದ ನಿಷ್ಕ್ರಿಯ ವೈರಸ್ ಲಸಿಕೆಗಳನ್ನು ಸುಲಭವಾಗಿ ತಯಾರಿಸಬಲ್ಲ ಅನೇಕ ಕಂಪನಿಗಳಿವೆ. ಅವುಗಳನ್ನು ಬಳಸಿಕೊಳ್ಳುವ ಯೋಜನೆ ಮತ್ತು ಅವರಿಗೆ ಆರ್ಥಿಕ ಬೆಂಬಲ ಕೊಡುವ ಅಗತ್ಯವಿತ್ತು.

ಹಾಗೆ ಸುಮ್ಮನೇ ಒಂದು ಲೆಕ್ಕ: ಎರಡು ರಫೇಲ್ ವಿಮಾನಗಳನ್ನು ಕೊಳ್ಳುವ ಹಣವು ಸುಮಾರು ಒಂದು ನೂರು ಕೋಟಿ ಡೋಸ್ ಲಸಿಕೆಗಳಿಗೆ ಸಮ; ನಾಲ್ಕು ರಫೇಲ್ ವಿಮಾನಗಳು ಇನ್ನೂರು ಕೋಟಿ ಡೋಸ್ ಲಸಿಕೆಗಳಿಗೆ ಸಮ; ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಎರಡು ವರ್ಷಗಳ ಕಾಲ ಮುಂದೂಡಿದರೆ ತಕ್ಷಣ ಒದಗುತ್ತಿದ್ದ 10,000 ಕೋಟಿ ರೂ ಹಣವು ಮುನ್ನೂರು ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ನೀಡುತ್ತಿತ್ತು! ರಫೇಲ್ ವಿಮಾನ ಖರೀದಿ ಅಥವಾ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಮುಂದೂಡುವ ಅಗತ್ಯವೇ ಇಲ್ಲ. ಈ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವರು ಕೋವಿಡ್-19 ಲಸಿಕೆಗಳಿಗಾಗಿ 35,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಈ ಮೀಸಲಿಟ್ಟ ಹಣದ ಮೂರನೇ ಒಂದು ಭಾಗದಲ್ಲಿ ಎಲ್ಲರಿಗೂ ಲಸಿಕೆ ಹಾಕಬಹುದಿತ್ತು ಮತ್ತು ಭಾರತವು ವಿಶ್ವದ ಲಸಿಕೆ ಔಷಧಾಲಯ ಎಂಬ ಬಿರುದನ್ನು ಸಮರ್ಥಿಸಿಕೊಳ್ಳಬಹುದಿತ್ತು. ಬದಲಿಗೆ, ನಾವು ನಮ್ಮ ಜನರಿಗೆ ಮೋಸ ಮಾಡಿದ್ದೇವೆ ಮಾತ್ರವಲ್ಲ, ಈಗ 92 ದೇಶಗಳಿಗೆ ಲಸಿಕೆಗಳನ್ನು ಪೂರೈಸದ ಲೋಪಕ್ಕಾಗಿ ಕಟಕಟೆಯಲ್ಲಿ ನಿಂತಿದ್ದೇವೆ. ಮೋದಿ ಅವರ ಆತ್ಮನಿರ್ಭರ್ ಭಾರತ್ ತಂದಿಟ್ಟಿರುವ ಫಲವೆಂದರೆ: ನಮ್ಮ ಸ್ಥಳೀಯ ಸಾಮರ್ಥ್ಯದ ನಾಶ ಮತ್ತು ಕೈ ಹಿಡಿಯಬೇಕಾದ ಸಮಯದಲ್ಲಿ ಜನರನ್ನು ಕೈಬಿಟ್ಟಿರುವುದು.

ಅನುವಾದ: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *