-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಶೇಖ್ ಹಸೀನಾ ಅವರ ಆಡಳಿತವನ್ನು ದುರ್ಬಲಗೊಳಿಸಿದ ಬಾಂಗ್ಲಾದೇಶದ ಹದಗೆಟ್ಟ ಆರ್ಥಿಕ ಸನ್ನಿವೇಶಕ್ಕೆ ಅವರ ಆಡಳಿತವು ತಳೆದ ಸ್ವಜನ ಪಕ್ಷಪಾತವೇ ಕಾರಣವೆಂದೂ ಮತ್ತು ಸ್ವಾತಂತ್ರ‍್ಯ-ಹೋರಾಟಗಾರರ ವಂಶಸ್ಥರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವ ನೀತಿಯ ವಿರೋಧವನ್ನು ಸಾಮಾನ್ಯವಾಗಿ ಆಡಳಿತದ ಸ್ವಜನ ಪಕ್ಷಪಾತ ನೀತಿಯ ವಿರೋಧವೆಂದು ವ್ಯಾಖ್ಯಾನಿಸಲಾಗಿದೆ. ಆದರೆ ಅದು ಸಮಸ್ಯೆಯ ಮೂಲವಲ್ಲ. ನಿಜ ಸಮಸ್ಯೆಯೆಂದರೆ, ಅಲ್ಲಿನ ಆರ್ಥಿಕ ಬಿಕ್ಕಟ್ಟಿನ ಮೂಲದಲ್ಲಿರುವ ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯ- ತಂತ್ರವೇ. ಇದು ಒಮ್ಮೆ ವಿಜಯಶಾಲಿಎನಿಸಿದ ಮೂರನೆಯ ಜಗತ್ತಿನ ದೇಶವೊಂದು ಅಚಾನಕ್ಕಾಗಿ ನೆಲ ಕಚ್ಚುವಂತೆ ಮಾಡಿದೆ, ಯಶಸ್ಸಿನ ಅವಧಿಯಲ್ಲಿ ಕಂಡ ಮಹತ್ಸಾಧನೆಗಳನ್ನು ಮಣ್ಣುಪಾಲು ಮಾಡುವ ರೀತಿಯ ಬಿಕ್ಕಟ್ಟಿಗೆ ತಳ್ಳಿದೆ.
ನಿಜ, ಇದರ ಬದಲು ಆಂತರಿಕ ಮಾರುಕಟ್ಟೆ-ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ಅನುಸರಿಸುವ ಪ್ರಯತ್ನವು ಸುಲಭವಲ್ಲ, ಆದರೆ, ಈಗ ವಿಶ್ವ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸುತ್ತಿರುವ ಮೂರನೇ ಜಗತ್ತಿಗೆ ಬೇರೆ ಪರ್ಯಾಯವಿಲ್ಲ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಸಂಭವಿಸಿದ ರಾಜಕೀಯ ವಿಪ್ಲವ ಕುರಿತ ಬಹಳಷ್ಟು ವಿಶ್ಲೇಷಣೆಗಳು ಶೇಖ್ ಹಸೀನಾ ಅವರ ಸರ್ಕಾರದ ಸೊಕ್ಕಿನ ವರ್ತನೆ ಮತ್ತು ಸರ್ವಾಧಿಕಾರಿ ಧೋರಣೆಯ ಅಂಶಗಳ ಮೇಲೆ ಮಾತ್ರವೇ ಗಮನಹರಿಸಿವೆ.
ಆ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾದ ಬದಲಾವಣೆಯನ್ನು ಅವು ಸಂಪೂರ್ಣವಾಗಿ ತಗ್ಗಿಸಿ ಹೇಳಿವೆ ಅಥವಾ ಅದರ ಬಗ್ಗೆ ಗಮನವನ್ನೇ ಹರಿಸಿಲ್ಲ. ವಿಷಯವೆಂದರೆ, ಕೆಲವೇ ಕೆಲವು ತಿಂಗಳುಗಳ ಹಿಂದೆ ಒಂದು ಆರ್ಥಿಕ ಪವಾಡ ಎಂದು ಶ್ಲಾಘಿಸಲ್ಪಡುತ್ತಿದ್ದ ದೇಶವು ಈಗ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿ ಹೋಗಿದೆ. ಈ ಬಿಕ್ಕಟ್ಟು ಅಪಾರ ಸಂಖ್ಯೆಯ ಜನರ ಸ್ಥಿತಿ-ಗತಿಗಳನ್ನು ಬಹಳ ಬೇಗನೆ ಹದಗೆಡಿಸಿತು. ಸಂಕಷ್ಟದಲ್ಲಿದ್ದವರ ನೆರವಿಗೆ ಬಾರದ ಸರ್ಕಾರದ ಮೇಲೆ ಜನರಿಗೆ ಆಕ್ರೋಶ ಉಂಟಾಯಿತು. ಜನರ ಕೋಪವು ಬೀದಿ ಬೀದಿಗಳಲ್ಲಿ ಪ್ರತಿಭಟನೆಗಳ ಮೂಲಕ ವ್ಯಕ್ತವಾಯಿತು. ಶೇಖ್ ಹಸೀನಾ ಸರ್ಕಾರದ ಜನಪ್ರಿಯತೆ ಕುಸಿದು ಬಿತ್ತು ಮತ್ತು ಅವರು ದೇಶದಿಂದ ಪರಾರಿಯಾದರು.
ಇದನ್ನೂ ಓದಿ: ಹೊಸ ಸ್ಕ್ಯಾಮ್ ಬಗ್ಗೆ ಎಚ್ಚರಿಕೆ! ತಿರುಪತಿಯಲ್ಲಿ ತಂಗಲು ಅದ್ದೂರಿ ವ್ಯವಸ್ಥೆ ಮಾಡುವುದಾಗಿ ವಂಚನೆ
2021ರ ವರೆಗೆ ಬಾಂಗ್ಲಾದೇಶವನ್ನು, ನವ ಉದಾರವಾದಿ ಅರ್ಥವ್ಯವಸ್ಥೆಯಡಿಯಲ್ಲಿ, ರಫ್ತು-ಪ್ರಧಾನ ಬೆಳವಣಿಗೆಯ ಒಂದು ಯಶೋಗಾಥೆ ಎಂದು ಪರಿಗಣಿಸಲಾಗಿತ್ತು. ಅದರ ರಫ್ತಿನ ಸುಮಾರು ಶೇ. 80ರಷ್ಟು ಭಾಗವು ಸಿದ್ಧ-ಉಡುಪುಗಳಿಂದ ಕೂಡಿತ್ತು. ಉಡುಪುಗಳ ಈ ರಫ್ತು ಬೆಳವಣಿಗೆಯು ಅದೆಷ್ಟು ಬಿರುಸಾಗಿತ್ತು ಎಂದರೆ, ಮುಂದಿನ ಕೆಲವು ವರ್ಷಗಳಲ್ಲಿ ಬಾಂಗ್ಲಾದೇಶವು ವಿಶ್ವ ಉಡುಪುಗಳ ಬೇಡಿಕೆಯ ಶೇ. 10ರಷ್ಟನ್ನು ಪೂರೈಸುವ ಮಟ್ಟವನ್ನು ತಲುಪಲಿದೆ ಎಂದು ಹೇಳಲಾಗಿತ್ತು.
ಕೋಟಿ ಕೋಟಿ ಜನರನ್ನು ಬಾಂಗ್ಲಾದೇಶವು ಬಡತನದಿಂದ ಹೊರಗೆ ತಂದಿದೆ ಎಂಬುದಾಗಿ ಅದನ್ನು ಬ್ರೆಟನ್ ವುಡ್ಸ್ ಸಂಸ್ಥೆಗಳು(ಐಎಎಫ್ ಮತ್ತು ವಿಶ್ವ ಬ್ಯಾಂಕ್) ಹಾಡಿ ಹೊಗಳಿದ್ದವು. ಏಪ್ರಿಲ್ 2, 2024ರಷ್ಟು ಇತ್ತೀಚೆಗೆ ವಿಶ್ವ ಬ್ಯಾಂಕ್, ಆರ್ಥಿಕ ವರ್ಷ 2024-25ರಲ್ಲಿ ಬಾಂಗ್ಲಾದೇಶದ ಜಿಡಿಪಿಯು ಶೇ. 5.6ರ ಮಟ್ಟದಲ್ಲಿ ಬೆಳೆಯಲಿದೆ ಎಂಬ ಮುನ್ಸೂಚನೆಯನ್ನು ಕೊಟ್ಟಿತ್ತು. ಯಾವ ದೃಷ್ಟಿಯಲ್ಲಿ ನೋಡಿದರೂ ಈ ಮಟ್ಟದ ಬೆಳವಣಿಗೆಯು ಗೌರವಾರ್ಹವಾಗಿಯೇ ತೋರುತ್ತಿತ್ತು.
ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಬಾಂಗ್ಲಾದೇಶದ ಸಿದ್ಧ-ಉಡುಪುಗಳ ರಫ್ತುಗಳು ಹೊಡೆತ ತಿಂದವು. ಪರಿಣಾಮವಾಗಿ ಅರ್ಥವ್ಯವಸ್ಥೆಯು ಬಲಗುಂದಿತು. ಇದು ಒಂದು ಆಕಸ್ಮಿಕ ಮತ್ತು ತಾತ್ಕಾಲಿಕ ಸ್ಥಿತಿ ಎಂದು ಭಾವಿಸಲಾಗಿತ್ತು (ಈ ನಿರೀಕ್ಷೆಯಿಂದಾಗಿಯೇ 2024-25ರ ಆಶಾವಾದಿ ಮುನ್ಸೂಚನೆಯನ್ನು ವಿಶ್ವಬ್ಯಾಂಕ್ ಕೊಟ್ಟಿತ್ತು). ಈಗ ನೋಡಿದರೆ, ಆರ್ಥಿಕ ಸಂಕಷ್ಟಗಳು ವರ್ಷಗಳ ಕಾಲ ಬಾಂಗ್ಲಾದೇಶವನ್ನು ಕಾಡಲಿವೆ ಎಂದು ತೋರುತ್ತದೆ. ಬಹಳ ದಿನಗಳಿಂದಲೇ ವಿಶ್ವ ಅರ್ಥವ್ಯವಸ್ಥೆಯು ಸ್ಥಗಿತತೆಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ, ಬಾಂಗ್ಲಾದೇಶದಲ್ಲಿ ಆರ್ಥಿಕ ಸಮಸ್ಯೆಗಳು ಬಿಗಡಾಯಿಸಿರುವುದು ಒಂದು ಆಶ್ಚರ್ಯದ ವಿಷಯವಲ್ಲ. ಇದೇ ಅವಧಿಯಲ್ಲಿ, ಇದೇ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ, ಆ ದೇಶದ ವಿದೇಶಿ ವಿನಿಮಯದ ಮತ್ತೊಂದು ಪ್ರಮುಖ ಮೂಲವಾದ ಸಾಗರೋತ್ತರ ಬಾಂಗ್ಲಾದೇಶೀಯರ ಹಣ ರವಾನೆಯೂ ಸಹ ಹೊಡೆತ ತಿಂದಿತ್ತು.
ಅದರ ಜೊತೆಗೆ, ಬಾಂಗ್ಲಾದೇಶವು ವಿದ್ಯುತ್ ಉತ್ಪಾದನೆಗೂ ಸಹ ಇಂಧನವನ್ನೇ ಅವಲಂಬಿಸಿರುವುದರಿAದ, ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ಬಾಂಗ್ಲಾದೇಶವು ಆಮದು ಮಾಡಿಕೊಂಡ ಇಂಧನ ಬೆಲೆಗಳ ಹೆಚ್ಚಳವು ಅದರ ವಿದೇಶಿ ವಿನಿಮಯದ ಗಂಭೀರ ಕೊರತೆಗೆ ಕಾರಣವಾಗಿದೆ, ವಿದ್ಯುತ್ ಸರಬರಾಜಿನ ಕಡಿತಕ್ಕೆ ಮತ್ತು ವಿದ್ಯುತ್-ದರ ಏರಿಕೆಗೆ ಕಾರಣವಾಗಿದೆ ಮತ್ತು ಒಟ್ಟಾರೆಯಾಗಿ ಅರ್ಥವ್ಯವಸ್ಥೆಯ ಮೇಲೆ ವೆಚ್ಚ-ತಳ್ಳುವ ಪರಿಣಾಮ ಬೀರಿದೆ.
ಹಣದುಬ್ಬರ ಮತ್ತು ನಿರುದ್ಯೋಗದ ಹೆಚ್ಚಳ
ಈ ವರ್ಷದ ಆಗಸ್ಟ್ನಲ್ಲಿ ಹಣದುಬ್ಬರವು (ಬೆಲೆ ಏರಿಕೆಯು) ಶೇ. 9.52ರ ಮಟ್ಟವನ್ನು ತಲುಪಿದೆ. ಕಳೆದ ಒಂದು ದಶಕದಲ್ಲೇ ಇದು ಅತಿ ಹೆಚ್ಚಿನ ಮಟ್ಟದ ಏರಿಕೆಯಾಗಿದೆ (ಈ ಏರಿಕೆಯನ್ನು ಕೀಳಂದಾಜು ಮಾಡಲಾಗಿದೆ ಎಂದು ಅನೇಕರು ಹೇಳುತ್ತಾರೆ). ಹಣದುಬ್ಬರವು ಈ
ರೀತಿಯಲ್ಲಿ ಏರಿಕೆಯಾಗುವಲ್ಲಿ ಎರಡು ಅಂಶಗಳು ಕಾರಣವಾಗಿವೆ: ಮೊದಲನೆಯದು, ಡಾಲರ್ ಎದುರು ಬಾಂಗ್ಲಾ ಕರೆನ್ಸಿಯ (ವಿನಿಮಯ ದರದ) ಅಪಮೌಲ್ಯ. ಈ ಅಪಮೌಲ್ಯವು, ಯುಎಸ್‌ನಲ್ಲಿ ಹಣದುಬ್ಬರ-ವಿರೋಧಿ ಕ್ರಮಗಳ ಭಾಗವಾಗಿ ಬಡ್ಡಿ ದರ ಏರಿಕೆಯ ಕಾರಣದಿಂದ ಮತ್ತು ಬಾಂಗ್ಲಾದೇಶವು ಎದುರಿಸುತ್ತಿರುವ ವಿದೇಶಿ ವಿನಿಮಯ ಕೊರತೆಯ ಸಮಸ್ಯೆಗಳಿಂದಾಗಿ ಡಾಲರ್ ಮೌಲ್ಯವು ಬಲಗೊಂಡ ಕಾರಣದಿಂದ ಉಂಟಾಗಿದೆ.
ಎರಡನೆಯದು, ವಿತ್ತೀಯವಾಗಿ ಜನರ ಹಿಂಡುವಿಕೆಯ ಹೆಚ್ಚಳ. ಅರ್ಥವ್ಯವಸ್ಥೆಯ ನಿಧಾನಗತಿಯ ಕಾರಣದಿಂದಾಗಿ, ನವ ಉದಾರವಾದಿ ವ್ಯವಸ್ಥೆಯಲ್ಲಿ, ಈ ಹಿಂಡುವಿಕೆಯನ್ನು ಜಾರಿಗೊಳಿಸುವ ಒತ್ತಾಯಕ್ಕೆ ಸರ್ಕಾರವು ಒಳಗಾಗುತ್ತದೆ. ಹಾಗಾಗಿ, ಹಣದುಬ್ಬರವು ಉಂಟುಮಾಡುವ ಪರಿಣಾಮಗಳಿಂದ ಜನರನ್ನು ರಕ್ಷಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ, ಯಾವ ಕ್ರಮ ಕೈಗೊಂಡರೂ ಸರ್ಕಾರವು ಹೆಚ್ಚು ಹಣ ಖರ್ಚುಮಾಡಬೇಕಾಗುತ್ತದೆ ಅಥವಾ ಸಬ್ಸಿಡಿಯ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ. ಗುಣಕ ಪರಿಣಾಮಗಳನ್ನು ಹೊಂದಿರುವ ರಫ್ತುಗಳ ಇಳಿಕೆ ಮತ್ತು ಸಾಗರೋತ್ತರ ಬಾಂಗ್ಲಾದೇಶೀಯರ ಹಣ ರವಾನೆಯ ಇಳಿಕೆ, ಇವೆರಡೂ
ಬಾಂಗ್ಲಾದೇಶವನ್ನು ಪ್ರಸ್ತುತ ಬಾಧಿಸುತ್ತಿರುವ ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾಗಿವೆ. ಅದೇ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಹಣದುಬ್ಬರವು ವೇಗವಾಗಿ ಏರಲು, ತೈಲದ ಜಾಗತಿಕ ಬೆಲೆಗಳ ಏರಿಕೆಯ ವೆಚ್ಚ-ತಳ್ಳು ಪರಿಣಾಮ ಮತ್ತು ಬಾಂಗ್ಲಾ ಕರೆನ್ಸಿಯ ಅಪಮೌಲ್ಯ, ಇವುಗಳು ಕಾರಣವಾಗಿವೆ.
ಹಣದುಬ್ಬರವನ್ನು ಸರಿದೂಗಿಸುವ ಸಾಧನವಾಗಿ ಕಾರ್ಮಿಕರಿಗೆ ಕೊಡುವ ವೇತನದಲ್ಲಿ ಕನಿಷ್ಠ ಏರಿಕೆ ಮಾಡುವುದೂ ಸಹ ನವ ಉದಾರವಾದಿ ವ್ಯವಸ್ಥೆಯಲ್ಲಿ ಸಾಧ್ಯವಾಗುವುದಿಲ್ಲ. ಏಕೆಂದರೆ, ಕೈಯಲ್ಲಿರುವ ರಫ್ತು ಮಾರುಕಟ್ಟೆಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟಕರವಾಗುತ್ತದೆ. ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಹಣದುಬ್ಬರದ ಏರಿಕೆಯನ್ನು ತಡೆಗಟ್ಟುವ ಸಲುವಾಗಿ ಒಂದು ವೇಳೆ ವೇತನದ ಇಂತಹ ಕನಿಷ್ಠ ಏರಿಕೆಯೊಂದಿಗೆ ಕರೆನ್ಸಿಯು (ವಿನಿಮಯ ದರದ) ಮತ್ತಷ್ಟು ಅಪಮೌಲ್ಯಗೊಂಡರೆ, ಆಗ ಆಮದು ಮಾಡಿಕೊಂಡ ಇಂಧನದ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ. ಅದು ಸಮಸ್ಯೆಯನ್ನು
ಮತ್ತಷ್ಟು ಸಂಕೀರ್ಣಗೊಳಿಸುತ್ತದೆ ಮತ್ತು ಹಣದುಬ್ಬರವನ್ನು ಮತ್ತಷ್ಟು ವ್ಯಾಪಕಗೊಳಿಸುತ್ತದೆ.
ಈ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶವು ಸಾಲಕ್ಕಾಗಿ ಐಎಂಎಫ್ ಮತ್ತು ಇತರ ಅಂತರರಾಷ್ಟ್ರೀಯ ಸಾಲದಾತರನ್ನು ಸಂಪರ್ಕಿಸಿತು. ಅದು ಪಡೆದುಕೊಂಡ ಈ ಸಾಲಗಳು ಹಳೆಯ ಸಾಲಗಳ ಬಾಕಿಯನ್ನು ಚುಕ್ತಾ ಮಾಡುವ ಷರತ್ತನ್ನು ಒಳಗೊಂಡ ಕಾರಣದಿಂದಾಗಿ ಪಾವತಿ ಶೇಷ (ವಿದೇಶಗಳೊಂದಿಗಿನ ವ್ಯಾಪಾರದ ಶಿಲ್ಕು) ಸಮಸ್ಯೆಯು ಮತ್ತಷ್ಟು ಜಟಿಲಗೊಂಡಿತು. ಬಾಂಗ್ಲಾದೇಶದ ನೀತಿಗಳ ಮೇಲ್ವಿಚಾರಣೆಯನ್ನು ಐಎಂಎಫ್ ಮಾಡುತ್ತಿರುವುದರಿಂದ, ಸರ್ಕಾರವು ಈ ವರೆಗೆ ನೀತಿ, ನಿರ್ವಹಣೆಗಳಲ್ಲಿ ಬಳಕೆ ಮಾಡುತ್ತಿದ್ದ ಅಲ್ಪ-ಸ್ವಲ್ಪ ಚಾತುರ್ಯದ ಅವಕಾಶವನ್ನೂ ಸಹ ಕಳೆದುಕೊಂಡಿತು. ಜೊತೆಗೆ, ಐಎಂಎಫ್ ಹೇರಿದ ಮಿತವ್ಯಯ ಪಾಲನೆಯ ಷರತ್ತು ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸಿತು.
ಶೇಖ್ ಹಸೀನಾ ಅವರ ಆಡಳಿತವನ್ನು ದುರ್ಬಲಗೊಳಿಸುವಲ್ಲಿ ಮತ್ತು ರಾಜಕೀಯ ಬದಲಾವಣೆಗಾಗಿ ಅಗತ್ಯವಿರುವ ಪರಿಸ್ಥಿತಿಗಳನ್ನು ಸೃಷ್ಟಿಸುವಲ್ಲಿ ಆರ್ಥಿಕ ಬಿಕ್ಕಟ್ಟಿನ ಪ್ರಾಮುಖ್ಯತೆಯನ್ನು ಗುರುತಿಸುವವರೂ ಸಹ, ಈ ಹದಗೆಡುತ್ತಿರುವ ಆರ್ಥಿಕ ಸನ್ನಿವೇಶವನ್ನು ಅವರ ಆಡಳಿತವು ತಳೆದಸ್ವಜನ ಪಕ್ಷಪಾತವೇ ಕಾರಣವೆಂದು ಹೇಳುತ್ತಾರೆ. ಅಂತೆಯೇ, ಸ್ವಾತಂತ್ರ‍್ಯ-ಹೋರಾಟಗಾರರ ವಂಶಸ್ಥರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವ ನೀತಿಯ ವಿರೋಧವನ್ನು ಸಾಮಾನ್ಯವಾಗಿ ಆಡಳಿತದ ಸ್ವಜನ ಪಕ್ಷಪಾತನೀತಿಯ ವಿರೋಧವೆಂದು ವ್ಯಾಖ್ಯಾನಿಸಲಾಗಿದೆ. ಆದರೆ ಈ ತರ್ಕವು ನಿಜ ಸಮಸ್ಯೆಯನ್ನು ಗುರುತಿಸುವಲ್ಲಿ ಜಾರಿಕೊಂಡಿದೆ.
ನಿಜ ಸಮಸ್ಯೆ ಎಂದರೆ, ಬಾಂಗ್ಲಾದೇಶದ ನಿರುದ್ಯೋಗ ಬಿಕ್ಕಟ್ಟಿನ ಅಗಾಧತೆಯಿಂದಾಗಿ ಮೀಸಲಾತಿ ವಿರೋಧವು ಒಂದು ತೀವ್ರತೆ ಪಡೆಯಿತು ಎಂಬುದು. ಅದರ ಮೂಲವು ಅರ್ಥವ್ಯವಸ್ಥೆಗೆ ತಗುಲಿದ ಬಿಕ್ಕಟ್ಟು ನವ ಉದಾರವಾದಿ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆ ಪಡೆದಿರುವ ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯ-ತಂತ್ರದಲ್ಲಿ ನೆಲೆಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ವಜನ ಪಕ್ಷಪಾತವು ಸಮರ್ಥನೀಯವಲ್ಲ; ಆದರೆ ಅದು ಸಮಸ್ಯೆಯ ಮೂಲವಲ್ಲ. ನಿಜ ಸಮಸ್ಯೆ, ಆರ್ಥಿಕ ಬಿಕ್ಕಟ್ಟಿನ ಮೂಲದಲ್ಲಿರುವ ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯ-ತಂತ್ರವೇ.
ಎರಡು ಪಾಟಗಳು
ರಫ್ತು-ಪ್ರಧಾನ ಬೆಳವಣಿಗೆಯ ಈ ಕಾರ್ಯ-ತಂತ್ರವು ಸ್ವಲ್ಪ ಸಮಯ ನಂಬಲಾಗದಷ್ಟು ಯಶಸ್ವಿ ಫಲಿತಾಂಶಗಳನ್ನು ತರುತ್ತದೆಯಾದರೂ, ರಫ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ವಿಶ್ವ ಅರ್ಥವ್ಯವಸ್ಥೆಯ ನಿಧಾನಗತಿ ಅಥವಾ ದೇಶದ ಹೊರಗೆ ಸಂಭವಿಸುವ ಕೆಲವು ಪ್ರತಿಕೂಲ ವಿದ್ಯಮಾನಗಳು ದೇಶದ ಅರ್ಥವ್ಯವಸ್ಥೆಯನ್ನು ಅದು ಯಶಸ್ಸಿನ ಅವಧಿಯಲ್ಲಿ ಕಂಡ ಮಹತ್ಸಾಧನೆಗಳನ್ನು ಮಣ್ಣುಪಾಲು ಮಾಡುವ ರೀತಿಯ ಬಿಕ್ಕಟ್ಟಿಗೆ ತಳ್ಳುತ್ತದೆ. ಬಾಂಗ್ಲಾದೇಶದ ಅಭಿವೃದ್ಧಿಯಿಂದ ಕಲಿಯಬೇಕಾದ ಎರಡು ಮಹೋನ್ನತ ಪಾಠಗಳೆಂದರೆ: ಮೊದಲನೆಯದು, ಒಮ್ಮೆ ವಿಜಯಶಾಲಿ ಎನಿಸಿದ ಮೂರನೆಯ ಜಗತ್ತಿನ ದೇಶವೊಂದು ಅಚಾನಕ್ಕಾಗಿ ನೆಲ ಕಚ್ಚಬಹುದು ಮತ್ತು ಎರಡನೆಯದಾಗಿ, ಒಂದರ ಮೇಲೊಂದು ಎರಗುವ ತೊಂದರೆಗಳು, ಅಥವಾ ಆರಂಭದಲ್ಲಿ ದೇಶದ ಒಂದು ವಲಯದಲ್ಲಿ ಕಾಣಿಸಿಕೊಳ್ಳುವ ತೊಂದರೆಗಳು ಇತರ ವಲಯಗಳಲ್ಲಿ ಹಲವಾರು ತೊಂದರೆಗಳಿಗೆ ಕಾರಣವಾಗಬಹುದು. ಬಾಂಗ್ಲಾದೇಶವು ತನ್ನ ಎಲ್ಲಾ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಇಟ್ಟಿದ್ದುದೇ ಸಮಸ್ಯೆಯಾಯಿತು, ಅಂದರೆ, ವೈವಿಧ್ಯಮಯ ರಫ್ತುಗಳನ್ನು ಹೊಂದುವ ಬದಲು ಅದು ಕೇವಲ ಸಿದ್ಧ-ಉಡುಪುಗಳ ರಫ್ತಿನ ಮೇಲೆ ಅವಲಂಬಿತವಾಗಿದ್ದುದೇ ಸಮಸ್ಯೆಯಾಯಿತು ಎಂದು ಕೆಲವರು ಹೇಳುತ್ತಾರೆ.
ಇನ್ನೂ ಕೆಲವರು, ಬಾಂಗ್ಲಾದೇಶವು ತನ್ನ ಸಿದ್ಧ-ಉಡುಪುಗಳ ರಫ್ತುಗಳ ಮೂಲಕ ಸಂಪಾದಿಸಿದ ಯಶಸ್ಸನ್ನು ಬಳಸಿಕೊಂಡು ತನ್ನ ಆಂತರಿಕ ಮಾರುಕಟ್ಟೆಯ ಅಗತ್ಯವನ್ನು ಪೂರೈಸುವ ಸಂಪೂರ್ಣ ಶ್ರೇಣಿಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ತನ್ನ ಅರ್ಥವ್ಯವಸ್ಥೆಯನ್ನು ವೈವಿಧ್ಯಗೊಳಿಸಿಕೊಳ್ಳಬೇಕಿತ್ತು ಎಂದು ಹೇಳುತ್ತಾರೆ. ಒಂದು ಪ್ರಮುಖ ಅಂಶವನ್ನು ಗಮನಿಸದೇ ಇರುವುದರಿಂದ ಈ ಟೀಕೆಗಳು ಅರ್ಥ ಕಳೆದುಕೊಳ್ಳುತ್ತವೆ: ಒಂದು ನವ ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ಪ್ರಭುತ್ವವು ಮಧ್ಯಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.
ದೇಶೀಯ ಮಾರುಕಟ್ಟೆಗೆ ಸ್ವಲ್ಪ ಮಟ್ಟಿನ ರಕ್ಷಣೆ ಒದಗಿಸದ ಹೊರತು ಆಂತರಿಕ (ದೇಶೀಯ) ಕೈಗಾರಿಕೀಕರಣವನ್ನು ಉತ್ತೇಜಿಸುವುದು ಸಾಧ್ಯವಿಲ್ಲ. ಆದರೆ, ಅಂತಹ ರಕ್ಷಣೆ ಒದಗಿಸುವ ಕ್ರಮವನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ವಿರೋಧಿಸುತ್ತದೆ. ರಫ್ತುಗಳನ್ನು ಯಶಸ್ವಿಗೊಳಿಸಲು ಹಣಕಾಸು ಬಂಡವಾಳದ ಬೆಂಬಲ ಅಗತ್ಯವಾಗುತ್ತದೆ. ಅದೇ ರೀತಿಯಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವ ನಿರ್ದಿಷ್ಟ ರಫ್ತು ಯಶಸ್ವಿಯಾಗುತ್ತದೆ ಎಂಬುದನ್ನು ಅಂತಾರಾಷ್ಟ್ರೀಯ ಬಂಡವಾಳ ನಿರ್ಧರಿಸುತ್ತದೆ. ಅಂದರೆ, ರಫ್ತು ಯಶಸ್ಸನ್ನು ನಿರ್ಧರಿಸುವುದು ದೇಶದ ಸ್ಥಿತಿ-ಗತಿಗಳಲ್ಲ. ಹಾಗಾಗಿ, ನವ ಉದಾರವಾದದ ಅಡಿಯಲ್ಲಿ ರಫ್ತು-ಪ್ರಧಾನ ಬೆಳವಣಿಗೆಯ ಅಪಾಯಗಳಿಗೆ ಪ್ರಭುತ್ವವನ್ನು ದೂಷಿಸುವುದು ಸಂಪೂರ್ಣವಾಗಿ ಅನಪೇಕ್ಷಿತ.
ಮೂರನೇ ಜಗತ್ತಿಗೆ ಬೇರೆ ಪರ್ಯಾಯವಿಲ್ಲ
ಮುಹಮ್ಮದ್ ಯೂನಸ್ ಮತ್ತು ವಿದ್ಯಾರ್ಥಿಗಳು ಹೊಂದಿರುವ ಆಶಯಗಳು ಏನೇ ಇರಲಿ, ಮುಂದೆ ನಡೆಯಲಿರುವ ಚುನಾವಣೆಗಳಲ್ಲಿ ಅವಾಮಿ ಲೀಗ್ ಸ್ಪರ್ಧಿಸಲು ಒಂದು ವೇಳೆ ಅವಕಾಶ ನೀಡದಿದ್ದರೆ, ಆಗ, ಬಲಪಂಥೀಯ ಪಕ್ಷಗಳು ಈ ರಾಜಕೀಯ ಕ್ಷಿಪ್ರಕ್ರಾಂತಿಯ ಮುಖ್ಯ ಫಲಾನುಭವಿಗಳಾಗಿ ಹೊರಹೊಮ್ಮುತ್ತವೆ. ಬಾಂಗ್ಲಾದೇಶವು ಬಲ ಪಂಥದತ್ತ ತಳ್ಳಲ್ಪಡುತ್ತದೆ. ಸಾಮ್ರಾಜ್ಯಶಾಹಿ ಮತ್ತು ದೇಶೀಯ ಬೆರಳೆಣಿಕೆಯ ಕಾರ್ಪೊರೇಟ್ ಕೂಟಾಧಿಪತ್ಯ (oligarchy) ಹಿರಿ ಹಿರಿ ಹಿಗ್ಗುತ್ತವೆ. ಈ ವಿದ್ಯಮಾನವು ವಿಶ್ವಾದ್ಯಂತ ಅನಾವರಣಗೊಳ್ಳುತ್ತಿರುವ ಹೊಸ ಸನ್ನಿವೇಶದ ವಾಸ್ತವ ವಿವರಣೆಯಾಗುತ್ತದೆ. ವಿಶ್ವ ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿ, ನವ ಉದಾರೀಕರಣ ನೀತಿಗಳನ್ನು ಅನುಸರಿಸುತ್ತಿರುವ ಮೂರನೆಯ ಜಗತ್ತಿನ ಅನೇಕ ದೇಶಗಳು ಆರ್ಥಿಕ ಸ್ಥಗಿತತೆ, ಭೀಕರ ನಿರುದ್ಯೋಗ ಮತ್ತು ವೃದ್ಧಿಸುತ್ತಿರುವ ಬಾಹ್ಯ ಸಾಲಕ್ಕೆ ತಳ್ಳಲ್ಪಡುತ್ತವೆ.
ಇದು ಸಾಮ್ರಾಜ್ಯಶಾಹಿಯ ವಿರುದ್ಧ ಒಂದು ಸ್ವಾಯತ್ತ ಅಂತರವನ್ನು ಕಾಯ್ದುಕೊಳ್ಳುವ ಮತ್ತು ಅಧಿಕಾರದಲ್ಲಿರುವ ನಡು-ಪಂಥೀಯ ಆಳ್ವಿಕೆಗಳ ಜನಪ್ರಿಯತೆಯನ್ನು ಕುಂದಿಸುತ್ತದೆ. ಮತ್ತು, ಸಾಮ್ರಾಜ್ಯಶಾಹಿಯಿಂದ ಬೆಂಬಲಿತವಾದ ಬಲಪಂಥೀಯ ಆಳ್ವಿಕೆಗಳಿಗೆ ಈ ನಡು-ಪಂಥೀಯ ಆಳ್ವಿಕೆಗಳನ್ನು ಉರುಳಿಸಲು ಮತ್ತು ಅಧಿಕಾರಕ್ಕೆ ಬರಲು ಸಹಾಯಕವಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈ ಹೊಸ ಆಳ್ವಿಕೆಗಳು ಅವರು ಬದಲಿಸಿದ ಆಳ್ವಿಕೆಗಳಿಗಿಂತ
ಕಡಿಮೆ ನಿರಂಕುಶಾಧಿಕಾರಿಗಳಲ್ಲ. ಆದರೆ ನವ ಉದಾರವಾದ ನೀತಿಗಳನ್ನು ಅನುಸರಿಸುವಾಗ ಮತ್ತು ಸಾಮ್ರಾಜ್ಯಶಾಹಿ ನಿಲುಮೆಯನ್ನು ಅನುಸರಿಸುವಾಗ, ಅವರು ‘ಧಾರ್ಮಿಕತೆ’ಯ ಮೂಲಕ ಅಥವಾ ಕೆಲವು ದುರದೃಷ್ಟಕರ ಅಲ್ಪಸಂಖ್ಯಾತ ಗುಂಪುಗಳನ್ನು ಅನ್ಯರನ್ನಾಗಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಇದು ಸಾಮ್ರಾಜ್ಯಶಾಹಿಯ ಹೇಗಾದರೂ ಸರಿಯೇ, ಗೆಲ್ಲುವುದು ನಾನೇಎಂಬ ಕಾರ್ಯತಂತ್ರವನ್ನು ನಿರೂಪಿಸುತ್ತದೆ. ಇದು ನವ ಉದಾರವಾದದ ಬಿಕ್ಕಟ್ಟಿನಿಂದ ನರಳುತ್ತಿರುವ ಜನರು ನವ ಉದಾರವಾದವನ್ನು ಮೀರದಂತೆ ನೋಡಿಕೊಳ್ಳುತ್ತದೆ ಮತ್ತು ಬಲಪಂಥೀಯ ಅಥವಾ ನವ-ಫ್ಯಾಸಿಸ್ಟ್ ಆಳ್ವಿಕೆಯ ಅಡಿಯಲ್ಲಿ ನವ ಉದಾರವಾದದ ಬಲವರ್ಧನೆಯನ್ನು ಖಚಿತಪಡಿಸುತ್ತದೆ.
ಹಾಗಾಗಿ, ನವ ಉದಾರವಾದದ ದುಸ್ವಪ್ನದ ದಬ್ಬಾಳಿಕೆಯು ಸ್ಪಷ್ಟವಾಗಿ ಗೋಚರಿಸುತ್ತಿದ್ದಾಗಲೂ ಅದನ್ನು ಹೊರಗೆಸೆಯುವುದು ಕಷ್ಟವಾಗುತ್ತದೆ. ನವ ಉದಾರವಾದವನ್ನು ಮೀರಿ ಹೋಗಲು ಒಂದು ಪರ್ಯಾಯ ಆರ್ಥಿಕ ಕಾರ್ಯತಂತ್ರದ ಸುತ್ತ ಜನರನ್ನು ಸಜ್ಜುಗೊಳಿಸುವುದು ಅಗತ್ಯವಾಗುತ್ತದೆ. ಈ ಪರ್ಯಾಯದಲ್ಲಿ ಪ್ರಭುತ್ವವು ವಹಿಸುವ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಅದು ಆಂತರಿಕ ಮಾರುಕಟ್ಟೆಯಮೇಲೆ ಗಮನಹರಿಸುತ್ತದೆ ಮತ್ತು ಖನಿಜ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ರಾಷ್ಟ್ರೀಯ ನಿಯಂತ್ರಣವನ್ನು ಹೊಂದಿರುತ್ತದೆ. ನವ ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರವನ್ನು ಅನುಸರಿಸುವಂತೆ ಒತ್ತಡ ಹೇರಲು ಬಾಂಗ್ಲಾದೇಶವು ಒಂದು ಸಣ್ಣ ದೇಶವಲ್ಲ. 170 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ದೇಶವನ್ನು ಯಾವುದೇ ಕಾರಣಕ್ಕೂ ಸಣ್ಣದು ಎಂದು ಹೇಳಲಾಗದು. ಖಚಿತವಾಗಿ ಹೇಳುವುದಾದರೆ, ಆಂತರಿಕ ಮಾರುಕಟ್ಟೆ-ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ಅನುಸರಿಸುವ ಪ್ರಯತ್ನವು ಸುಲಭವಲ್ಲ, ನಿಜ. ಆದರೆ, ಈಗ ವಿಶ್ವ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸುತ್ತಿರುವ
ಮೂರನೇ ಜಗತ್ತಿಗೆ ಬೇರೆ ಪರ್ಯಾಯವಿಲ್ಲ.
ಇದನ್ನೂ ನೋಡಿ: ಬಾಕಿ ವೇತನ ಕೇಳಿದ ಹಾಸ್ಟೆಲ್ ನೌಕರರ ಬಂಧನ Janashakthi Media