ಬಿಲ್ಕಿಸ್ ಬಾನೊ ಪ್ರಕಾರಣದಲ್ಲಿ ಅಪರಾಧಿಗಳಿಗೆ ಗುಜರಾತ್ ಸರಕಾರದ ಕ್ಷಮಾದಾನದ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದವರಲ್ಲಿ ಒಬ್ಬರಾದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯೆ ಸುಭಾಷಣಿ ಅಲಿ ಈ ತೀರ್ಪನ್ನು ಸ್ವಾಗತಿಸುತ್ತ ಗುಜರಾತ್ ಸರಕಾರ ಏಕೆ ಅಪರಾಧಿಗಳಿಗೆ ಸಹಾಯ ಮಾಡುತ್ತ ಬಂದಿದೆ ಎಂದು ಪ್ರಶ್ನಿಸಿದ್ದಾರೆ. ಗುಜರಾತ್
ಬಿಲ್ಕಿಸ್ ಬಾನೊ ಎಂಟು ವರ್ಷಗಳ ಹೋರಾಟದ ನಂತರ ನ್ಯಾಯ ಪಡೆದಿದ್ದಳು. ಈ ಅವಧಿಯಲ್ಲಿ ಗುಜರಾತ್ ಸರಕಾರ ಪ್ರತಿ ತಿರುವಿನಲ್ಲೂ ಅಪರಾಧಿಗಳ ನೆರವಿಗೆ ನಿಂತಿತ್ತು. ಶಿಕ್ಷೆಯಾದ ಮೇಲೂ ಈ ಅಪರಾಧಿಗಳು ಮತ್ತೆ-ಮತ್ತೆ ಪೆರೋಲ್ ಪಡೆಯುತ್ತಿದ್ದರು. ಕಳೆದ ಆಗಸ್ಟ್ 15ರಂದು ಅತ್ತ ಕೆಂಪು ಕೋಟೆಯಲ್ಲಿ ಪ್ರಧಾನಿಗಳು ಮಹಿಳೆಯರ ರಕ್ಷಣೆ ಮತ್ತು ಉದ್ಧಾರದ ಬಗ್ಗೆ ಭಾವಪೂರ್ಣವಾಗಿ ಮಾತಾಡುತ್ತಿದ್ದಾಗ, ಈ ಸರಕಾರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿತ್ತು. ಇದರ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದೆವು. ಸ್ವತಃ ಬಿಲ್ಕಿಸ್ ಬಾನೊ ಅರ್ಜಿ ಸಲ್ಲಿಸಿದರು. ಈಗ ಈ ತೀರ್ಪು ಬಂದಿದೆ.
ಇಲ್ಲಿ ಏಳುವ ಒಂದು ದೊಡ್ಡ ಪ್ರಶ್ನೆ ಎಂದರೆ, ಗುಜರಾತ್ ಸರಕಾರ ಏಕೆ ಹೀಗೆ ಸದಾ ಈ ಅತ್ಯಾಚಾರಿಗಳ ಜತೆಗೆ ನಿಂತಿದೆ, ಅದು ಈ ಕೊಲೆಗಡುಕರ ಜತೆ ನಿಲ್ಲಬೇಕಾದ ಅನಿವಾರ್ಯತೆಯಾದರೂ ಏನು ಎಂದು ಸುಭಾಷಿಣಿ ಅಲಿ ಪ್ರಶ್ನೆ ಮಾಡಿದ್ದಾರೆ. ಈಗ ಒಂದು ಹೊಸ ನ್ಯಾಯ ವ್ಯವಸ್ಥೆ ಮೂಡಿ ಬಂದಿದೆ, ಬಿಜೆಪಿಯ ಪರವಾಗಿದ್ದರೆ, ಎಂತಹುದೇ ಜಘನ್ಯ ಅಪರಾಧ ಮಾಡಿದರೂ ಶಿಕ್ಷೆಯೇ ಆಗುವುದಿಲ್ಲ, ಕ್ಷಮೆ ಸಿಗುತ್ತದೆ. ಇದು ದೇಶದ ಮಹಿಳೆಯರಿಗೆ ಅಪಾಯಕಾರಿ, ನ್ಯಾಯ ಪ್ರಕ್ರಿಯೆಯನ್ನು ಉಳಿಸಿಕೊಳ್ಳಲು ಇದನ್ನು ಪ್ರತಿರೋಧಿಸಬೇಕಾಗುತ್ತದೆ ಎಂದಿರುವ ಸುಭಾಷಿಣಿ ಅಲಿ, ಗುಜರಾತ್ ಸರಕಾರ ಬಿಲ್ಕಿಸ್ ಬಾನೊ ಮತ್ತು ಆಕೆಯ ಪರಿವಾರದವರಿಗೆ ರಕ್ಷಣೆ ಒದಗಿಸಬೇಕು, ಅವರು ಶಾಂತಿಯಿಂದಿರಲು ಬಿಡಬೇಕು, ಅಪರಾಧಿಗಳನ್ನು ಜೈಲಿನಲ್ಲೇ ಇಡಬೇಕು ಎಂದು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ಸರಕಾರ ಗುಜರಾತ್ ಸರಕಾರ ಮಾಡಿದಂತೆ ಮಾಡಬಾರದು, ಹಾಗೇನಾದರೂ ಮಾಡಿದರೆ ದೇಶದ ಜನತೆ ಅವರನ್ನು ಕ್ಷಮಿಸುವುದಿಲ್ಲ ಎಂದೂ ಸುಭಾಷಿಣಿ ಅಲಿ ಹೇಳಿದ್ದಾರೆ.
“ ಡಬಲ್ ಇಂಜಿನ್ ಸರಕಾರಗಳಿಗೆ ಸುಪ್ರಿಂ ಕೋರ್ಟ್ ಚಾಟಿಯೇಟು”
ಹಿರಿಯ ಸಿಪಿಐ(ಎಂ) ಮುಖಂಡರಾದ ಬೃಂದಾ ಕಾರಟ್ ಕೂಡ , ಒಂದೂವರೆ ವರ್ಷದ ನಂತರವಾದರೂ ಸುಪ್ರಿಂ ಕೋರ್ಟ್ ಅತ್ಯಾಚಾರಿಗಳಿಗೆ ನೀಡಿದ ಕ್ಷಮಾದಾನವನ್ನು ರದ್ದು ಮಾಡಿರುವುದನ್ನು ಸ್ವಾಗತಿಸುತ್ತ ತೀರ್ಪಿನಲ್ಲಿ ಗುಜರಾತ್ ಸರಕಾರದ ಅರ್ಜಿ ವಂಚನೆಯಿಂದ ಕೂಡಿತ್ತು ಎಂದಿರುವುದು ಅದರ ಕೆನ್ನೆಗೆ ಬಾರಿಸಿದಂತಾಗಿದೆ. ಮತ್ತು ಗುಜರಾತ್ ಸರಕಾರ ಕೇಂದ್ರ ಗೃಹ ಮಂತ್ರಾಲಯದ ಒಪ್ಪಿಗೆಯ ನಂತರವೇ ಇದನ್ನು ಮಾಡಿದ್ದೇವೆ ಎಂದಿರುವುದು, ಈ‘ಡಬಲ್’ ಇಂಜಿನ್ ಸರಕಾರಗಳಿಗೆ ಕೊಟ್ಟ ಚಾಟಿಯೇಟು ಎಂದು ವರ್ಣಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಟ , ಈ ಅಪರಾಧಿಗಳು ಮತ್ತೆ ಜೈಲಿಗೆ ಹೋಗುವ ವರೆಗೂ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಧೈರ್ಯಕ್ಕೆ ಸಲಾಂ ಹೇಳಬೇಕು ಎಂದೂ ಅವರು ಹೇಳಿದ್ದಾರೆ. ಆಕೆ ಪೀಡಿತೆಯಾಗಿದ್ದವಳು, ಬದುಕುಳಿದವಳಾಗಿ, ನಂತರ ಒಬ್ಬ ಹೋರಾಟಗಾರ್ತಿಯಾಗಿ ಪರಿವರ್ತನೆ ಹೊಂದಿದ್ದಾರೆ. ಆಕೆ ಲೈಂಗಿಕ ಮತ್ತು ಕೋಮುವಾದಿ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗೆ ಒಂದು ಮಾದರಿಯಾಗಿದ್ದಾರೆ, ಅವರ ಹೋರಾಟದಲ್ಲಿ ನಾವು ಸದಾ ಅವರೊಂದಿಗಿದ್ದೇವೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ.
ಇದನ್ನು ಓದಿ : ರಾಮಮಂದಿರ ಉದ್ಘಾಟನೆ ಆಹ್ವಾನ ವಿಚಾರ | ಕೊನೆಗೂ ತೀರ್ಮಾನ ಕೈಗೊಂಡ ಕಾಂಗ್ರೆಸ್ ಹೇಳಿದ್ದೇನು?
“ಒಂದೂವರೆ ವರ್ಷದಲ್ಲಿ ಮೊದಲ ಬಾರಿಗೆ ನಗು, ನಿರಾಳತೆಯ ಅಳು”
“ಕಳೆದ ಒಂದೂವರೆ ವರ್ಷದಲ್ಲಿ ಮೊದಲ ಬಾರಿಗೆ ನಕ್ಕಿದ್ದೇನೆ, ನಿರಾಳತೆಯಿಂದ ಅತ್ತಿದ್ದೇನೆ”- ಇದು ಸುಪ್ರಿಂ ಕೋರ್ಟಿಗೆ ಈ ತೀರ್ಪಿಗಾಗಿ ಕೃತಜ್ಞತೆ ಸಲ್ಲಿಸುತ್ತ ಬಿಲ್ಕಿಸ್ ಬಾನೊ ಹೇಳಿರುವ ಮಾತು.
“ಇಂದು ನನಗೆ ನಿಜವಾಗಿಯೂ ಹೊಸ ವರ್ಷ. ನಿರಾಳತೆಯ ಕಣ್ಣೀರು ಸುರಿಸಿದ್ದೇನೆ. ಒಂದೂವರೆ ವರ್ಷದಿಂದ ಮೊದಲ ಬಾರಿಗೆ ನಗುತ್ತಿದ್ದೇನೆ. ನನ್ನ ಮಕ್ಕಳನ್ನು ಅಪ್ಪಿಕೊಂಡಿದ್ದೇನೆ” ಎಂದು ಬಿಲ್ಕಿಸ್ ಯಾಕುಬ್ ಬಾನೊ ತನ್ನ ವಕೀಲೆ ಶೋಭಾ ಗುಪ್ತ ಮೂಲಕ ಪ್ರಕಟಿಸಿರುವ ಪತ್ರದಲ್ಲಿ ಹೇಳಿದ್ದಾರೆ.ಗುಜರಾತ್
“ನನ್ನ ಎದೆಯ ಮೇಲಿಂದ ಬೆಟ್ಟದ ಗಾತ್ರದ ಒಂದು ಕಲ್ಲನ್ನು ಇಳಿಸಿದಂತಾಗಿದೆ. ನನಗೆ ಮತ್ತೆ ಉಸಿರಾಡಲು ಸಾಧ್ಯವಾಗಿದೆ. ನ್ಯಾಯ ಎಂದರೆ ಹೀಗೆ ಎಂದನಿಸುತ್ತಿದೆ” ಎನ್ನುತ್ತ “ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ನನಗೆ, ನನ್ನ ಮಕ್ಕಳಿಗೆ ಮತ್ತು ಎಲ್ಲೆಡೆಯ ಮಹಿಳೆಯರಿಗೆ ಸಮಾನ ನ್ಯಾಯದ ಭರವಸೆಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಮತ್ತು ಆಶಭಾವನೆ ಮೂಡಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಬಿಲ್ಕಿಸ್ ಬಾನೊ ಈ ಪತ್ರದಲ್ಲಿ ಹೇಳಿದ್ದಾರೆ. ಮುಂದುವರೆದು, ಸದಾ ತನ್ನ ಜತೆನಿಂತಿರುವ ಪತಿ ಮತ್ತು ಮಕ್ಕಳು ಹಾಗೂ ‘ಪ್ರತಿಯೊಂದು ತಿರುವಿನಲ್ಲೂ ಕೈಹಿಡಿದ” ಸ್ನೇಹಿತವೃಂದಕ್ಕೆ ಮತ್ತು “ನ್ಯಾಯದ ವಿಚಾರದಲ್ಲಿ ಎಂದೂ ನಂಬಿಕೆ ಕಳಕೊಳ್ಳದಂತೆ ಮಾಡಿರುವ” ತನ್ನ ವಕೀಲೆ ಶೋಭಾ ಗುಪ್ತರವರಿಗೆ ಧನ್ಯವಾದ ಅರ್ಪಿಸುತ್ತ ಆಕೆ “ಒಂದೂವರೆ ವರ್ಷದ ಹಿಂದೆ , ನನ್ನ ಕುಟುಂಬವನ್ನು ಧ್ವಂಸ ಮಾಡಿದವರಿಗೆ, ನನ್ನ ಅಸ್ತಿತ್ವನ್ನೇ ಭಯಭೀತಗೊಳಿಸಿದವರಿಗೆ ಬೇಗನೇ ಬಿಡುಗಡೆ ಕೊಟ್ಟಾಗ ನಾನು ಕುಸಿದೇ ಬಿಟ್ಟಿದ್ದೆ. ಲಕ್ಷಾಂತರ ಸೌಹಾರ್ದಗಳು ನನ್ನೆಡೆಗೆ ಬರುವ ವರೆಗೆ ನನ್ನ ಧೈರ್ಯದ ಸೆಲೆಯೇ ಬತ್ತಿ ಹೋದಂತಾಗಿತ್ತು” ಎಂದಿರುವ ಆಕೆ ಸುಪ್ರಿಂಕೋರ್ಟಿಗೆ ಸಾವಿರಾರು ಜನರ ಅರ್ಜಿಗಳು, ಮನವಿಗಳು, ಬಹಿರಂಗ ಪತ್ರಗಳು ಭಾರತದ ಪ್ರತಿಯೊಬ್ಬ ಮಹಿಳೆಗೂ “ ನ್ಯಾಯ ಎಂಬ ವಿಚಾರವನ್ನು ಕಾಪಾಡುವ ಇಚ್ಛಾಶಕ್ತಿಯನ್ನು ಕೊಟ್ಟಿವೆ ಎಂದು ಈ ಪತ್ರದಲ್ಲಿ ಹೇಳುತ್ತಾರೆ. ಗುಜರಾತ್
“ನನ್ನ ಸ್ವಂತದ ಮತ್ತು ನನ್ನ ಮಕ್ಕಳ ಬದುಕಿಗೆ ಈ ತೀರ್ಪಿನ ಪೂರ್ಣ ಅರ್ಥವನ್ನು ಅರಗಿಸಿಕೊಳ್ಳುತ್ತಿರುವಂತೆಯೇ ಇಂದು ನನ್ನ ಹೃದಯದಿಂದ ಹೊಮ್ಮುವ ಸರಳ ಪ್ರಾರ್ಥನೆಯೆಂದರೆ,ಎಲ್ಲಕ್ಕೂ ಮಿಗಿಲಾಗಿ ಕಾನೂನಿನ ಆಳ್ವಿಕೆ ಮತ್ತು ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆ” ಎಂದು ಬಿಕ್ಲಿಸ್ ಬಾನೊ ತನ್ನ ಪತ್ರದ ಕೊನೆಯಲ್ಲಿ ಹೇಳುತ್ತಾರೆ. ಗುಜರಾತಿ ಮತ್ತು ಹಿಂದಿಯಲ್ಲಿ ಈ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಗುಜರಾತ್
ಸುಪ್ರಿಂ ಕೋರ್ಟಿನ ಸ್ವಾಗತಾರ್ಹ ತೀರ್ಪು –ಸಿಪಿಐ(ಎಂ) ಪೊಲಿಟ್ಬ್ಯುರೊ
“ ಗುಜರಾತ್ ಸರಕಾರದೊಂದಿಗೆ ಕೇಂದ್ರ ಸರ್ಕಾರ ಕೂಡ ಈ `ದೋಷಿಗಳ ಜತೆಗೆ ಶಾಮೀಲಿ’ನಲ್ಲಿ ಶಾಮೀಲಾಗಿದೆ”
2002 ರ ಗುಜರಾತ್ ಕೋಮು ಹತ್ಯಾಕಾಂಡದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನೊ ಮತ್ತು ಆಕೆಯ ಕುಟುಂಬದ ಸದಸ್ಯರ ಸಾಮೂಹಿಕ ಅತ್ಯಾಚಾರದ ಹಾಗೂ ಅವರಲ್ಲಿ ಕನಿಷ್ಟ 14 ಜನರ ಸಾಮೂಹಿಕ ಹತ್ಯೆಯ ಆರೋಪಗಳ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಅಪರಾಧಿಗಳಿಗೆ ಗುಜರಾತ್ ಸರ್ಕಾರದ ಕ್ಷಮಾದಾನ ಕಾನೂನುಬಾಹಿರ ಕ್ರಮ ಎಂದು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸ್ವಾಗತಿಸಿದೆ. ಶಿಕ್ಷೆಗೆ ಗುರಿಯಾದವರು ಎರಡು ವಾರಗಳಲ್ಲಿ ಶರಣಾಗಿ ಮತ್ತೆ ಜೈಲಿಗೆ ಬರಬೇಕು ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ. ಗುಜರಾತ್
ಸುಪ್ರಿಂ ಕೋರ್ಟ್ ವಿಭಾಗೀಯ ಪೀಠವು, ಗುಜರಾತ್ ಸರ್ಕಾರ ಕ್ಷಮಾದಾನದ ಆದೇಶವನ್ನು ನೀಡಲು ತನ್ನ `ಅಧಿಕಾರಕ್ಷೇತ್ರ’ ವನ್ನು ಮೀರಿ ಹೋಗಿ, ವಾಸ್ತವವಾಗಿ ದೋಷಿಗಳೊಂದಿಗೆ `ಶಾಮೀಲಾಗಿ’ ಈ ಕೃತ್ಯ ಮಾಡಿದೆ ಎಂದು ಹೇಳಿದೆ. ಕ್ಷಮಾದಾನ ಆದೇಶವನ್ನು ಸಮರ್ಥಿಸಿಕೊಳ್ಳಲು ಗುಜರಾತ್ ಸರ್ಕಾರ ವಾಸ್ತವಾಂಶವನ್ನು ಪ್ರಸ್ತುತಪಡಿಸುವಲ್ಲಿ ವಂಚನೆ ಮಾಡಿದೆ ಎಂದೂ ಪೀಠವು ಹೇಳಿದೆ. ಶಿಕ್ಷೆಗೆ ಗುರಿಯಾದವರು “ತಮ್ಮ ಶಿಕ್ಷೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾದರೆ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯು ಒಂದು ಭೀಕರ ದುಸ್ವಪ್ನದ ಮಟ್ಟಕ್ಕೆ ಇಳಿಯುತ್ತದೆ” ಎಂದು ಈ ತೀರ್ಪು ಕಟುವಾಗಿ ಹೇಳಿದೆ. ಈ ನಿರ್ಧಾರವು ಕೇಂದ್ರ ಸರ್ಕಾರದ ಸಮ್ಮತಿಯನ್ನು ಆಧರಿಸಿದೆ ಎಂದು ಗುಜರಾತ್ ಸರ್ಕಾರವು ಒದಗಿಸಿರುವ ಮಾಹಿತಿಯು ಕೇಂದ್ರ ಸರ್ಕಾರ ಕೂಡ ಈ `ದೋಷಿಗಳ ಜತೆಗೆ ಶಾಮೀಲಿ’ನಲ್ಲಿ ಶಾಮೀಲಾಗಿದೆ ಎಂಬುದನ್ನು ತೋರಿಸುತ್ತದೆ ಎಂದಿರುವ ಪೊಲಿಟ್‍ಬ್ಯುರೊ, ಕ್ಷಮಾದಾನವು ಅಪರಾಧದ ಕ್ರೌರ್ಯ ಮತ್ತು ಸಮಾಜ ಹಾಗೂ ಕಾನೂನಿನ ಆಳ್ವಿಕೆಯ ಮೇಲೆ ಅದರ ಒಟ್ಟಾರೆ ಪರಿಣಾಮವನ್ನು ಗಮನಕ್ಕೆ ತಗೊಳ್ಳಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದೆ.
ಸರ್ಕಾರಗಳು ಸಾಂವಿಧಾನಿಕ ಸಂಸ್ಥೆಗಳು, ಅವು ತಮ್ಮ ಅಧಿಕಾರವ್ಯಾಪ್ತಿಯನ್ನು ಮತ್ತು ಕಾನೂನಿನ ಪರಿಗಣನೆಗಳನ್ನು ಉಲ್ಲಂಘಿಸುವುದಾದರೆ, ಅದು ಪ್ರಜಾಪ್ರಭುತ್ವವಾಗಿ ನಮ್ಮ ಅಸ್ತಿತ್ವವನ್ನೇ ಹಾಳುಗೆಡವುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಇದನ್ನು ನೋಡಿ : ನೇರ ಪ್ರಸಾರ | ಸೌಜನ್ಯ ಪ್ರಕರಣ : SIT ರಚಿಸಿ ಮರು ತನಿಖೆಗೆ ಆಗ್ರಹಿಸಿ ಚಲೋ ಬೆಳ್ತಂಗಡಿ ಮಹಾಧರಣಿ