ಹೆಣ್ಣು ಮಕ್ಕಳು ಪೇಟೆ ಗಂಡನ್ನು ಹುಡುಕ್ತಾರೆ. ಹಳ್ಳಿಯವರನ್ನು ಮದುವೆ ಆಗುವುದೇ ಇಲ್ಲ. ಅತ್ತೆ ಮಾವಂದಿರು ಇರಲೇ ಬಾರದು. ಇದೆಲ್ಲಾ ಹಳ್ಳಿಯಲ್ಲಿರುವ ಗಂಡುಗಳು ಮತ್ತು ಅವರ ತಂದೆ ತಾಯಿಂದರು ಹೇಳುವ ಮಾತು. ಮೊದಲೊಂದು ಶ್ಲೋಕವಿತ್ತು.. ಹೆಣ್ಣು
-ಡಾ. ಎನ್.ಬಿ.ಶ್ರೀಧರ
ಕನ್ಯೆ ವರನಲ್ಲಿರುವ ರೂಪವನ್ನು ಸೌಂದರ್ಯವನ್ನು ಇಷ್ಟಪಡುತ್ತಾಳೆ, ತಾಯಿ ವರನ ಆಸ್ಥಿಯನ್ನು ನೋಡುತ್ತಾಳೆ, ತಂದೆ ವರನ ಕುಲವನ್ನು ನೋಡುತ್ತಾನೆ, ಬಾಂಧವರಾದ ನಾವೆಲ್ಲಾ ಭೋಜನ ಸವಿದು ಬರುತ್ತೇವೆ. ಈಗ ಹಾಗಿದೆಯೇ? ಕನ್ಯೆಯೇ ವರನ ಆಸ್ತಿ, ರೂಪ, ಗುಣ, ಕುಲ ಎಲ್ಲವನ್ನೂ ತೀರ್ಮಾನಿಸಿ ಮದುವೆಯ ತೀರ್ಮಾನಕ್ಕೆ ಬರುತ್ತಾಳೆ. ಆದರೆ ಪುರುಷರಿಗೆ ಕನ್ಯೆಯ ರೂಪ ಮಾತ್ರ ವಿಶೇಷವೇ ಹೊರತು ಉಳಿದ್ದೆಲ್ಲಾ ಗೌಣ. ಹೆಣ್ಣು
ಇದಕ್ಕೆ ರಾಮಾಯಣ ಕಾಲದ ಇತಿಹಾಸವಿದೆ. ಸೀತೆ ರಾಮನನ್ನು ವರಿಸಿದ್ದು ಆತ ಶಿವ ಧನಸ್ಸನ್ನು ಮುರಿದು ಬಲಶಾಲಿಯೆನಿಸಿಕೊಂಡ ಎಂಬ ಕಾರಣಕ್ಕೆ ಮಾತ್ರ. ರಾವಣ ಅಥವಾ ಇತರ ಯಾರು ಶಿವನ ಧನಸ್ಸನ್ನು ಮುರಿದರೂ ಆಕೆ ಅವನನ್ನು ಮದುವೆಯಾಗಲೇಬೇಕಿತ್ತು. ಇಲ್ಲಿ ರಾಮ ಕ್ಷತ್ರಿಯ, ರಾವಣ ಭ್ರಾಹ್ಮಣ. ಆ ಕಾಲದಲ್ಲಿ ಜಾತಿ ಪದ್ಧತಿ ಮದುವೆ ಮತ್ತು ಸಂತಾನ ಪಡೆಯಲು ಇರಲಿಲ್ಲವಾಗಿತ್ತು ಎಂಬುದು ಬಹಳ ಸ್ಪಷ್ಟ. ರಾಮಾಯಣದಲ್ಲಿ ಎಲ್ಲಿಯೂ ಇಂತಿಷ್ಟು ಸಂಪತ್ತು ಇರುವವರು ಶಿವಧನಸ್ಸನ್ನು ಮುರಿಯಲು ಬರಬೇಕೆಂಬ ಯಾವುದೇ ನಿಯಮ ಹಾಕಿರಲಿಲ್ಲ. ಆದರೆ ಮಹಾಭಾರತದ ಕಾಲಕ್ಕೆ ಇದು ಬದಲಾಗಿ ಹೋಯಿತು.
ಅತ್ಯಂತ ಸುಂದರ ಸ್ತ್ರೀಯಾದ ದ್ರೌಪದಿ ತನ್ನನ್ನು ವರಿಸಲು ಗರ ಗರ ಸುತ್ತುತ್ತಿರುವ ಮೀನೀನ ಕಣ್ಣಿಗೆ ಗುರಿಯಿಟ್ಟು ಬಾಣ ಯಾರು ಬಿಟ್ಟು ಕೆಡವುತ್ತಾರೋ ಅವರನ್ನು ವರಿಸುವುದಾಗಿ ಹೇಳುತ್ತಾಳೆ. ಸೀತೆಯ ಕಾಲದಲ್ಲಿ ಶಿವ ಧನಸ್ಸನ್ನು ಎತ್ತಿ ಮುರಿದರೆ ಸಾಕಿತ್ತು. ಆದರೆ ಇಲ್ಲಿ ಧನಸ್ಸನ್ನು ಹಿಡಿದು ಕೆಳಗಿರುವ ಎಣ್ಣೆಯ ಪ್ರತಿಬಿಂಬದಲ್ಲಿ ಮೇಲೆ ವೃತ್ತಾಕಾರದಲ್ಲಿ ಸುತ್ತುತ್ತಿರುವ ಮೀನಿನ ಕಣ್ಣಿಗೆ ಗುರಿಯಿಕ್ಕುವ ಚಾಕಚಕ್ಯತೆ ಹೊಂದಿರುವ ಬುದ್ಧಿವಂತನ ಆಯ್ಕೆ ಮಾಡುವ ಅವಶ್ಯಕತೆ ಇತ್ತು. ಅಂದರೆ ರಾಮಾಯಣದಲ್ಲಿ ಶಿವಧನಸ್ಸನ್ನು ಎತ್ತಲು ಶಕ್ತಿ ಬೇಕಾಗಿತ್ತೇ ಹೊರತು ಯುಕ್ತಿ ಬೇಕಿಲ್ಲವಾಗಿತ್ತು. ಮಹಾಭಾರತದಲ್ಲಿ ಅದು ಬದಲಾಗಿ ಬುದ್ಧಿವಂತರ ಆಯ್ಕೆ ಕಡೆ ತಿರುಗಿತು. ಅಂದರೆ ಕಾಲಕ್ಕೆ ತಕ್ಕ ಹಾಗೆ ಹೆಣ್ಣು ಮಕ್ಕಳ ಆಯ್ಕೆ ಬದಲಾಗುತ್ತಾ ಸಾಗಿದೆ. ಹೆಣ್ಣು
ಇದನ್ನೂ ಓದಿ: ಸರಕಾರ ವಿಶ್ವವಿದ್ಯಾಲಯವನ್ನು ಮುಚ್ಚುವ ಬದಲಾಗಿ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸಬೇಕು: ಎ. ಮುರಿಗೆಪ್ಪ
ಪ್ರಾಣಿ ಪ್ರಪಂಚಕ್ಕೆ ಬಂದರೆ ಇಲ್ಲಿ ಬಲಶಾಲಿಯದೇ ಸಂತಾನ ಸಾಗಬೇಕು. ಬಲಶಾಲಿಗೆ ಮಾತ್ರ ಇಲ್ಲಿ ಬದುಕಲು ಹಕ್ಕು. ಪ್ರಾಣಿಗಳಲ್ಲಿ ಹೆಣ್ಣು ಪ್ರಾಣಿಗಳ ಆಯ್ಕೆ ಬಲಶಾಲಿ ಹೋರಾಟಗಾರ ಮಾತ್ರ. ಪ್ರಾಣಿ ಪ್ರಪಂಚದಲ್ಲಿ ಹೆಚ್ಚಿನ ಸಾವು ಸಂಭವಿಸುವುದು ಹೆಣ್ಣನ್ನು ಕೂಡಿ ತನ್ನ ಸಂತಾನ ಮುಂದುವರೆಸಲು ಆಗುವ ಹೋರಾಟಕ್ಕಾಗಿಯೇ ಹೊರತು ಆಹಾರಕ್ಕಾಗಿ ಅಲ್ಲ. ಇದನ್ನು ನಮ್ಮ ರಾಜಕಾರಣಿಗಳು ಯಥಾವತ್ತಾಗಿ ಪಾಲಿಸುತ್ತಾರೆ. ಅವರ ವಂಶದ ಕುಡಿಯೇ ಸಂಸದ, ಶಾಸಕ, ಮಂತ್ರಿಯಾಗಬೇಕು. ಉಳಿದವರೆಲ್ಲಾ ಅವರ ಸೇವಕರು. ಇದು ರಾಜರ ಕಾಲದಲ್ಲಿಯೂ ಇತ್ತು. ಹೆಣ್ಣು
ಆಗ ಅದಕ್ಕೆ ಅಧೀಕೃತ ಮುದ್ರೆ ಇತ್ತು. ಈಗ ಇದಕ್ಕೆ ಇಟ್ಟ ಹೆಸರು “ಕುಟುಂಬ ರಾಜಕಾರಣ” ಎಂದು ಹೆಸರು. ಈಗ ರಾಜರಿಲ್ಲ. ಬದಲಾಗಿ ಹಿರಿಯ ರಾಜಕಾರಣಿಗಳ ಮಕ್ಕಳು, ಮರಿ ಮಕ್ಕಳು, ಹೆಂಡತಿ, ಸೊಸೆಯಂದಿರು ಇವರೇ ಇದ್ದಾರೆ. ನಮ್ಮ ಮತದಾರರು ರಾಜರನ್ನು ಆರಾಧಿಸುವ ಮನಸ್ಥಿತಿಯಲ್ಲಿಯೇ ಇರುವುದರಿಂದ ಮತ್ತು ಅಂತಹ ವಂಶಸ್ಥರಿಂದಲೇ ಆಳಿಸಿಕೊಳ್ಳಲು ಮತ್ತು ಅವರ ಸೇವೆ ಮಾಡಿಕೊಂಡೇ ಇರುವುದರಿಂದ ಕುಟುಂಬ ರಾಜಕಾರಣ ಇನ್ನೂ ಮುಂದುವರೆಯುವುದು ಬಹಳ ಸಾಮಾನ್ಯ. ಸಾಮಾನ್ಯ ಕಾರ್ಯಕರ್ತ ಎಂದೆಂದಿಗೂ ಸಾಮಾನ್ಯ ಕಾರ್ಯಕರ್ತನಾಗಿ ಸದಾ ಇವರ ಪರವಾಗಿ ಪ್ರಚಾರ ಮಾಡುತ್ತಾ, ವೋಟು ಹಾಕಿ ಗೆಲ್ಲಿಸುತ್ತಾ ಅವರು ಆಗಾಗ ಎಸೆಯುವ ಗ್ರಾಮಪಂಚಾಯತ್ ಸದಸ್ಯ, ಬೋರ್ಡ್ ಮೆಂಬರ್, ನಿಗಮ ಮಂಡಳಿಗಳ ಅಧ್ಯಕ್ಷ/ಸದಸ್ಯ ಇತ್ಯಾದಿ ಬಿಸ್ಕಟ್ಟುಗಳಿಗೆ ತೃಪ್ತಿಪಟ್ಟುಕೊಂಡಿರಬೇಕು ಅಷ್ಟೇ. ಅದಕ್ಕಿಂತ ಮೇಲೆ ಅವನನ್ನು ಬೆಳೆಯಲು ಆರ್ಥಿಕವಾಗಿ ಪ್ರಭಲರಾದ ಕುಟುಂಬಸ್ಥರು ಬಿಡಲಾರರು. ಹೆಣ್ಣು
ಇನ್ನು ಕೆಲವರಿಗೆ ಇದ್ದವರು ಹೆಣ್ಣುಮಕ್ಕಳು ಮಾತ್ರ. ಮದುವೆ ಮಾಡಿಯಾಗಿದೆ. ಆ ಅಳಿಯ – ಮಗಳು ವಾಪಸ್ ಕೃಷಿಗೆ ಬರಲಾರರು. ಇನ್ನು ಕೆಲವರಿಗೆ ಮದುವೆಯೇ ಆಗಿಲ್ಲ. ಆಜನ್ಮ ಬ್ರಹ್ಮಚಾರಿಗಳು. ವಯಸ್ಸಾಗಿದೆ. ಮುಂದೇನು ಗೊತ್ತಿಲ್ಲ. ಇಂಥ ಸಂದರ್ಭಗಳಲ್ಲಿ ಆ ಕುಟುಂಬದ ಕೃಷಿ ಮುಂದುವರೆಯಲಾರದು. ಕುಟುಂಬ ಯೋಜನೆ ಬಂದು ಜನಸಂಖ್ಯೆಯೇನೋ ಹಿಡಿತಕ್ಕೆ ಬಂತು. ಆದರೆ ಕೃಷಿ ಕಾರ್ಮಿಕರೂ ಇಲ್ಲವಾದರು. ರೋಜಗಾರ ಯೋಜನೆಯಲ್ಲಿ ವರ್ಷಕ್ಕೆ ಇಷ್ಟು ದಿನ ಅಂತ ಕೆಲಸ – ನಿಗದಿತ ಸಂಬಳ ಕೊಡಲಾಯಿತು. ಸರ್ಕಾರದ ಯೋಜನೆಗಳಲ್ಲಿ ಪುಕ್ಕಟೆ ಅಕ್ಕಿ, ಮನೆ ಇತ್ಯಾದಿ ಸಿಕ್ಕಿತು; ಬಡತನ ಕಡಿಮೆಯಾಯಿತು; ಒಳ್ಳೆಯದು, ಸಾಮಾಜಿಕ ನ್ಯಾಯ ಒದಗಿತು. ಹೆಣ್ಣು
ಆದರೆ ಮತ್ತೆ ಕೃಷಿಕರು – ಕೃಷಿ ಕಾರ್ಮಿಕರ ಕೊರತೆ ಮಿತಿ ಮೀರಿತು. ಹಳ್ಳಿಯ ಬಡವರೂ ಕಾಲೇಜಿನ ಮೆಟ್ಟಿಲೇರಿದರು. ಹೆಚ್ಚು ಕಲಿತವ ಕೃಷಿಕ – ಕೃಷಿ ಕಾರ್ಮಿಕ ಆಗಲಾರ. ಅವನಿಗೆ ಬಿಳಿ ಕಾಲರ್ ಕೆಲಸವೇ ಬೇಕು. ಕಲಿತ ಹೆಣ್ಣುಮಕ್ಕಳು ಪೇಟೆಯ ಹುಡುಗನನ್ನೇ ಹುಡುಕಿ ಮದುವೆಯಾದರು. ಹಳ್ಳಿಯಲ್ಲಿದ್ದವರು ಬ್ರಹ್ಮಚಾರಿಗಳಾದರು. ಕಲಿತ, ಕೆಲಸದಲ್ಲಿರುವ ಹೆಣ್ಮಕ್ಕಳು ಎರಡು ಮಕ್ಕಳನ್ನು ಹೆರಲೂ ಸಿದ್ಧರಿಲ್ಲ, ಸಮಯವಿಲ್ಲ! ಸರಿಯೊ – ತಪ್ಪೋ. ಆದರಿದು ವಾಸ್ತವ.
ಹಳ್ಳಿಗೆ ಹೆಣ್ಣು ಮಕ್ಕಳು ಬರದಿರಲು ಇನ್ನೊಂದು ದೊಡ್ದ ಕಾರಣವಿದೆ. ಹಳ್ಳಿಯ ಹುಡುಗನ ಮನೆಯ ಜಮೀನು – ಸೊಸೈಟಿ ಖಾತೆ ಎಲ್ಲ ಅಪ್ಪನ ಹೆಸರಲ್ಲಿ. ಹಾಗಾಗಿ ಅಪ್ಪನ ಒಪ್ಪಿಗೆಯಿಲ್ಲದೇ ಹುಲ್ಲುಕಡ್ಡಿ ಕೂಡ ಅಲ್ಲಾಡದು. ಒಂದು ಸಣ್ಣ ಕಡ್ಡಿ ಕೊಳ್ಳಲೂ ಅವಳ ಗಂಡನು ಮನೆಯ ಹಿರಿಯನ ಅನುಮತಿ ಕೇಳಬೇಕು. ದುಡಿಯಲು ಶಕ್ತಿ ಇರುವವ ಯೌವನದ ಮಗ. ಆದರೆ ಅಪ್ಪನೆದುರು ಆತ ಮಗನೇ. ಅವನೆದುರು ಮಂಡಿಯೂರಿ ದೇಹ ಬಾಗಿಸಿ ವಿದೇಯತೆಯಿಂದ ಭಿಕ್ಷೆಯಂತೆ ಸಂಕೋಚದ ಮುದ್ದೆಯಾಗಿ ಕೇಳಬೇಕು. ಯಾಕಂತೆ ಅವ್ಳಿಗೆ? ಏನು ಚೈನಿ ಮಾಡ್ತಾಳಂತೋ? ಎಂಬೆಲ್ಲಾ ಮಾತು ಕೇಳಿಸಿಕೊಳ್ಳಬೇಕು. ’ನಾನು ಎಲ್ಲವನ್ನೂ ಮಾಡಿದ್ದು ಮಕ್ಕಳ ಒಳಿತಗಾಗಿ’ ಎನ್ನುವುದು ಹಳೆಯ ಕಾಲದ ಅಪ್ಪನ ಅಂಬೋಣವಾದರೆ, ಇರುವುದೊಂದೇ ಜನ್ಮ, ಎಲ್ಲಾ ಈ ಜನ್ಮದಲ್ಲೇ ಮಾಡಿ ಓಡಾಡಿ ಮುಗಿಸಬೇಕು ಎನ್ನುವುದು ಯೌವನದ ಸೊಸೆಯ ವಾದ. ಎಷ್ಟೇ ಅಲವೊತ್ತುಕೊಂಡರೂ ಪ್ರಯೋಜನವಿಲ್ಲ. ಹೆಣ್ಣು
ಅಪ್ಪನ ಸ್ವಪ್ರತಿಷ್ಠೆ ಕೆಲವೊಮ್ಮೆ ಅತ್ತೆಯಂದಿರೂ ಈರ್ಷ್ಯೆಗೆ ಬಿದ್ದು ಸೊಸೆಯೊಂದಿಗೆ ಪೈಪೋಟಿಗಿಳಿಯುತ್ತಾರೆ. ಮಗ ಹೇಂಡ್ತಿ ಮಾತು ಕೇಳ್ತಾನೆ, ನಾನು ಲೆಕ್ಕಕ್ಕಿಲ್ಲ ಎಂಬ ಮಾತು ಬೇರೆ. ಮಗ ಚಿಕ್ಕವನಾಗಿದ್ದಾಗಿನಿಂದ ಸಾಕಿ ಸಲಹಿದ್ದೇನೆ. ಹೆಂಡ್ತಿ ಬಂದ ಮೇಲೆ ಅವಳ ಹಿಂದೇ ಸುತ್ತುತ್ತಾನೆ ಎಂಬ ಕುಹಕ ಬೇರೆ? ಆತ ಏನು ಮಾಡಬೇಕು. ಅವನನ್ನೇ ನಂಬಿ ಬಂದ ಹೆಂಡತಿಯ ಮಾತು ಕೇಳಬೇಕೋ ಅಥವಾ ಜನ್ಮ ಕೊಟ್ಟ ತಾಯಿಯ ಮಾತು ಕೇಳಬೇಕೋ? ಇಬ್ಬರ ಮಧ್ಯೆ ಆತ ಚಟ್ನಿ. ಕ್ರಮೇಣ ಆತ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡು ವಿವಿಧ ಚಟಗಳ ದಾಸನಾಗಬಹುದು.
ಅನೇಕ ವರ್ಷಗಳ ನಂತರ ಆತನ ಕೈಗೆ ಮನೆಯ ಕೀಲಿ ಕೈ ಬಂದರೂ ಆತ ಹೊಸದನ್ನು ಮಾಡುವ ಹುಮ್ಮಸನ್ನೇ ಕಳೆದುಕೊಂಡಿರುತ್ತಾನೆ. ಪೇಟೆಯಲ್ಲಿ ಸ್ವಂತವಾಗಿ ದುಡಿದು ಕೊಂಡಿರುವವರಾದರೆ ಅವರ ಅಪ್ಪ ಅಮ್ಮ ಜೊತೆಗಿದ್ದರೂ ಇಷ್ಟೊಂದು ಕಿರಿಕಿರಿಯಾಗದು. ಅವರು ಆಧುನಿಕತೆಗೆ ಹೊಂದಿಕೊಂಡಿರುತ್ತಾರೆ ಕಾರಣ ಅಪ್ಪ ಅಮ್ಮ ಇಲ್ಲದಿದ್ದರೆ ಒಳ್ಳೆಯದು, ಆದರೆ ಪೇಟೆಯಲ್ಲಿ ಕೆಲಸದಲ್ಲಿ ಇರುವ ಹುಡುಗನಾದರೆ ಒಳ್ಳೆಯದು ಎಂಬುದು ನಾನು ಮಾತಾನಾಡಿಸಿದ ಬಹುತೇಕ ಕನ್ಯೆಯರ ಅಂಬೋಣ. ಇದನ್ನು ವರ ಪಿತ್ರರೂ ಸಹ ಅರ್ಥ ಮಾಡಿಕೊಳ್ಳಬೇಕು.
ರೈತ ಬೇಡವೆನ್ನಲು ಕಾರಣಗಳಿರಬೇಕು ತಾನೆ? ಕೃಷಿ ಅಂದರೆ ಗ್ರಾಮೀಣ ಪ್ರದೇಶ. ಕೊನೇ ಪಕ್ಷ ತಂದೆ-ತಾಯಿ, ಅಜ್ಜ-ಅಜ್ಜಿ ಇರುವ ಕುಟುಂಬ. ಆಗಾಗ ಬರುವ ನೆಂಟರು. ಮದುವೆ-ಮುಂಜಿ-ಊರ ಜಾತ್ರೆ. ಹಾಗಾಗಿ ಆಗಾಗ ಮನೆಯಲ್ಲೂ ಸಣ್ಣ ಜಾತ್ರೆ. ಹೊಟೆಲ್ಲು – ಸ್ವಿಗ್ಗಿ – ಝೊಮ್ಯಾಟೊ ಇಲ್ಲ. ಮೂರು ಹೊತ್ತು ಸ್ವಂತ ಅಡಿಗೆ ಮಾಡಬೇಕು. ರಂಗೋಲಿ ಹಾಕಬೇಕು, ತುಳಸಿ ಪೂಜೆ ಮಾಡಬೇಕು. ಹಿರಿಯರಿಗೆ ತಗ್ಗಿಬಗ್ಗಿ ನಡೆಯಬೇಕು. ಕೂಡು ಕುಟುಂಬದಲ್ಲಿ ಗಂಡನಿಗೂ ಆವಾಜ್ ಹಾಕುವಂತಿಲ್ಲ. ನೌಕರಿ ಅಥವಾ ಸ್ವಂತ ದುಡಿಮೆಗೆ ಅವಕಾಶ ಕಡಿಮೆ. ಆರ್ಥಿಕ ಸ್ವಾತಂತ್ರ್ಯವಿಲ್ಲ. ಹೆಚ್ಚಿನ ಕೃಷಿ ಕುಟುಂಬಗಳಲ್ಲಿ ವಯಸ್ಸಾದರೂ ಮಾವನೇ ಯಜಮಾನ – ಅತ್ತೆಯೇ ಯಜಮಾನಿ. ಗಂಡನಿಗೂ ಆರ್ಥಿಕ ಸ್ವಾತಂತ್ರ್ಯವಿಲ್ಲ. 100 ರೂಪಾಯಿಗೂ ಮಾವನನ್ನೇ ಕೇಳಬೇಕು. ಎರಡು ಸೀರೆ ಒಮ್ಮೆಗೇ ಬೇಕೆಂದರೆ ಯಾಕೆ ಎಂಬ ಪ್ರಶ್ನೆ. ಇನ್ನು ಸಾಲ ಮಾಡಿ ಏನಾದರೂ ಉದ್ಯೋಗ ಮಾಡೋಣವೆಂದರೆ ಎಲ್ಲ ಆಸ್ತಿ ಹಿರಿಯರ ಹೆಸರಿನಲ್ಲಿ.
ಕೆಲ ಕುಟುಂಬಗಳಲ್ಲಂತೂ ಇಂದಿಗೂ ವಯಸ್ಸಿಗೆ ತಕ್ಕ ಫ್ಯಾಶನ್ ಕೂಡ ಮಾಡುವಂತಿಲ್ಲ. ಮನೆಯಲ್ಲಿ ಚೂಡಿದಾರ, ನೈಟಿ, ಮ್ಯಾಕ್ಸಿ, ಮಿಡಿ ಹಾಕಿದರೆ ಸಿಡಿಮಿಡಿಗೊಳ್ಳುವ ಅತ್ತೆಮಾವಂದಿರು ಇಂದಿಗೂ ಕಾಣಸಿಗುತ್ತಾರೆ. ಲಿಪ್ಸ್ಟಿಕ್ – ಐಬ್ರೋ – ಮೋಟು ಜಡೆ – ಬಾಯ್ ಕಟ್ ದೂರದ ಮಾತು. ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೇ ಸೇರಿಸಬೇಕು. ಖಾಸಗೀ ಇಂಗ್ಲಿಷ್ ಶಾಲೆ ದೂರ. ಸರಿಯೋ ತಪ್ಪೋ, ಇಂಥ ಪಂಜರದ ಜೀವನ ಓದಿಕೊಂಡ ಇಂದಿನ ಹುಡುಗಿಯರಿಗೆ ಆಗಿಬರದು. ಹೆಚ್ಚು ಓದಿದ್ದರೂ ಹಳ್ಳಿಯಲ್ಲಿ ಉಪಯೋಗಕ್ಕೆ ಇಲ್ಲ. ಹಾಗಾಗೇ ನಪಾಸಾದ, ಅಷ್ಟು ಚುರುಕಾಗಿರದ ಅಥವಾ ಇನ್ನೇನೋ ಸಮಸ್ಯೆಗೆ ಸಿಲುಕಿದ ಹೆಣ್ಮಕ್ಕಳು ಮಾತ್ರ ಹಳ್ಳಿ ಹುಡುಗ – ಪೂಜಾರಿಗಳನ್ನು ಮದುವೆಯಾಗುತ್ತಾರೆ. ಆ ಹುಡುಗರೂ ಪಾಪ, ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸುತ್ತಾರೆ. ’ತಿರ’ ಅಂದರೆ ಹೆಣ್ಣಿನ ಮನೆಯವರಿಗೆ ಹಣಕೊಟ್ಟು, ಕೆಲವೊಮ್ಮೆ ಅವರ ಸಾಲ ತೀರಿಸಿ, ಮನೆ ಕಟ್ಟಿಸಿಕೊಟ್ಟು ಮದುವೆಯಗುವುದು ಸಾಮಾನ್ಯವಾಗಿದೆ. ಅಷ್ಟೇ ಏಕೆ, ಮಡಿವಂತ ಬ್ರಾಹ್ಮಣರ ಮನೆಗೂ ಅಂತರ ಜಾತಿಯ ಅಥವಾ ವಿಧವೆ ಹೆಣ್ಮಕ್ಕಳು ಸೊಸೆಯಾಗಿ ಬರುತ್ತಿದ್ದಾರೆ. ಒಂದು ರೀತಿಯ ಮಾನಸಿಕ – ಸಾಮಾಜಿಕ ಪರಿವರ್ತನೆಗೆ ಪರಿಸ್ಥಿತಿ ಕಾರಣವಾಗುತ್ತಿದೆ.
ಇನ್ನು ಕೃಷಿಯಲ್ಲಿರುವ ಅನೇಕ ಯುವಕರು ಕಡಿಮೆ ಓದಿಕೊಂಡವರು ಅಥವಾ ನಪಾಸಾದವರು. ಹೆಚ್ಚು ಓದಿದ ಅಣ್ಣ-ತಮ್ಮ ಪೇಟೆ ಸೇರಿದ್ದಾರೆ. ಊರಲ್ಲಿದ್ದವರಿಗೆ ಕೀಳರಿಮೆ ಅಥವಾ ಆತ್ಮವಿಶ್ವಾಸದ ಕೊರತೆ. ಒಂಥರ ನಾಟಿ ಅಥವಾ ಜವಾರಿ.ಅವರ ಭಾಷೆಯೂ ಸಹ ಒರಟು. ಹೊರ ಪ್ರಪಂಚಕ್ಕೆ ಬಂದಾಗ ವ್ಯವಹಾರಕ್ಕೆ ಮತ್ತು ನಗರದವರೊಂದಿಗೆ ಸೇರಲು ಹಿಂಜರಿಯುತ್ತಾರೆ. ವೇಷಭೂಷಣದಲ್ಲೂ ಹೆಚ್ಚು ಬದಲಾಗುವುದಿಲ್ಲ. ನೋಡಿದಾಕ್ಷಣ ಹಳ್ಳಿಯ ಕೃಷಿಕರು ಎಂದು ಗುರುತಿಸಬಹುದು. ಇಂವ ನನ್ನ ಗಂಡ ಎಂದು ಹೇಳಿಕೊಳ್ಳಲು ಈಗಿನ ಹೆಣ್ಮಕ್ಕಳಿಗೆ ಮುಜುಗರ. ಶ್ರೀಮಂತರೇ ಆಗಿದ್ದರೂ ಬಹುತೇಕರು ಜುಗ್ಗರು. ಹೆಂಡತಿ ಕೂಡ ಖರ್ಚಿಗೆ ಹಣ ಎತ್ತಲು ಕಷ್ಟಪಡಬೇಕು. ಪ್ರತಿಯೊಂದಕ್ಕೂ ಅದ್ಯಾಕೆ ಎಂಬ ಪ್ರಶ್ನೆ. ವಾರಾಂತ್ಯದ ಪ್ರವಾಸ, ಫಾರಿನ್ ಟೂರು ಕನಸಿನ ಮಾತು. ಇವೆಲ್ಲವನ್ನು ನಗರದ ಜೀವನಕ್ಕೆ ಹೋಲಿಸಿ ಹೇಳಲಾಗಿದೆ ಮತ್ತು ಈ ಎಲ್ಲ ಅಂಶಗಳು ಸಾರ್ವತ್ರಿಕವಾಗಿ ಅನ್ವಯವಾಗಬೇಕೆಂದಿಲ್ಲ. ಎಲ್ಲದರಲ್ಲೂ ಅಪವಾದಗಳು ಇದ್ದೇ ಇರುತ್ತವೆ. ಮೂರ್ನಾಲ್ಕು ಗಂಡುಮಕ್ಕಳಲ್ಲಿ ಒಬ್ಬ ಮಾತ್ರ ಕೃಷಿಯಲ್ಲಿದ್ದು ಉಳಿದವರು ನೌಕರಿ, ವ್ಯವಹಾರ ಮಾಡುತ್ತ ನಗರದಲ್ಲಿರುತ್ತಾರೆ.
ಅವರು ಊರಿಗೆ ಬಂದಾಗ ಮನೆಯಲ್ಲಿರುವ ಸೊಸೆ ಅವರು ಇರುವಷ್ಟು ದಿನ ಸ್ವಾಭಾವಿಕವಾಗಿ ಊಟೋಪಚಾರ ನೋಡಿಕೊಳ್ಳಬೇಕು. ಅವರ ಕಡೆಯ ನೆಂಟರು ಬಂದಾಗ ಕೂಡ ಏನೂ ಚ್ಯುತಿಯಾಗಬಾರದು. ಆದರೆ ಈ ಎಲ್ಲ ಸೇವೆ-ಸಹಕಾರ ಲೆಕ್ಕಕ್ಕಿಲ್ಲ. ಮುಂದೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭ ಬಂದಾಗ ಎಲ್ಲರಿಗೂ ಸಮಪಾಲು. ಅಪ್ಪ-ಅಮ್ಮರಿಗೂ ಹೊರಗಿದ್ದವರ ಮೇಲೇ ಪ್ರೀತಿ ಹೆಚ್ಚು. ಮನೆಗೆ ಸುಣ್ಣ-ಬಣ್ಣ ಮಾಡುವುದಾದರೂ ಪೇಟೆಯಲ್ಲಿರುವ ಮಗ-ಸೊಸೆ ಕೇಳಿಯೇ ಬಣ್ಣದ ಅಯ್ಕೆ. ಇನ್ನು ಪೇಟೆಯ ಸೊಸೆ ಊರಿಗೆ ಅಪರೂಪಕ್ಕೆ ಬಂದಾಗ ಅಪ್ಪಿತಪ್ಪಿ ಅಡುಗೆ-ಪಾಲಕ್ ಪನ್ನೀರ್-ಗೋಬಿ ಮಂಚೂರಿ ಮಾಡಿಬಿಟ್ಟರೆ ಅದೊಂದು ಬಹುದಿನ ಬಿತ್ತರವಾಗುವ ಬ್ರೇಕಿಂಗ್ ನ್ಯೂಸ್.
ಊರಲ್ಲಿರುವ ಸೊಸೆ ವರ್ಷಕ್ಕೆ ಅನೇಕ ಸಾರಿ ಒಬ್ಬಟ್ಟು-ಕಡುಬು-ಕಜ್ಜಾಯ ಮಾಡಿ ಬಡಿಸಿದ್ದು ಲೆಕ್ಕಕ್ಕಿಲ್ಲ. ಇಂಥ ಸಂಗತಿಗೆಲ್ಲ ತಕರಾರು ತೆಗೆದರೆ ಮನೆ ಪಾಲಾಗುತ್ತದೆ. ಮನೆಯಲ್ಲಿರುವ ಸೊಸೆಗೆ ಕೆಟ್ಟ ಹೆಸರು. ಅವಳ ಅಭಿಪ್ರಾಯಕ್ಕೆ ಯಾವಾಗಲೂ ಬೆಲೆ ಕಡಿಮೆ. ಈ ಎಲ್ಲ ಅಂಶಗಳು ಎಲ್ಲರ ಮನೆಯಲ್ಲೂ ಹೀಗೆನೇ ಎನ್ನಲಾಗದು. ಇನ್ನು ಹಳ್ಳಿಮನೆ, ಕೃಷಿ ಎಂದಾದಮೇಲೆ ಆಳು-ಕಾಳುಗಳಿಗೆ ಊಟ, ಚಹಾ ಸೇವೆ ಅನಿವಾರ್ಯ. ಹಾಲು-ಮೊಸರು ಬೇಕೆಂದಾದರೆ ಮನೆ ಸೊಸೆ ಕೊಟ್ಟಿಗೆ ಕೆಲಸ ಮಾಡಲೇಬೇಕು. ಇಷ್ಟೆಲ್ಲ ಶ್ರಮಪಟ್ಟರೂ ಹಲವು ಕುಟುಂಬಗಳಲ್ಲಿ ಬಡತನ. ಕೈಬಿಚ್ಚಿ ಖರ್ಚು ಮಾಡಲು ಹಣವಿಲ್ಲ. ಸ್ವತಂತ್ರ ದುಡಿಮೆಗೆ ಅವಕಾಶ ಕಡಿಮೆ. ಇದರ ಬಗ್ಗೆ ಹಳ್ಳಿಮನೆ ಸೊಸೆಯಾದವರನ್ನು ಕೇಳಿ ನೋಡಿ. ಅವರಿಗೆ ಹಳ್ಳಿ ಬದುಕು-ಜಂಜಾಟ ಸಾಕಾಗಿಹೋಗಿದೆ. ತನ್ನ ಮಗಳನ್ನು ಹಳ್ಳಿ ಹುಡುಗರಿಗೆ ಕನಸಿನಲ್ಲಿ ಕೂಡ ಕೊಡಲಾರರು. ಇವೆಲ್ಲದರ ಒಟ್ಟೂ ಮೊತ್ತವೇ ನಮ್ಮ ಗ್ರಾಮೀಣ ಯುವಕರನ್ನು ಒತ್ತಾಯಪೂರ್ವಕ ಬ್ರಹ್ಮಚರ್ಯಕ್ಕೆ ದೂಡುತ್ತಿದೆ.
ಆದರೆ ಪೇಟೆಯಲ್ಲಿ ಇರುವ ಎಲ್ಲರೂ ಸುಖವಾಗಿರುತ್ತಾರೆ ಎಂಬುದು ಮಹಾ ಸುಳ್ಳು. ಕಡಿಮೆ ಮೆರಿಟ್ಟಿನ ಅನೇಕರು ಹುಡುಗರು ಸಣ್ಣ ಪುಟ್ಟ ಕಂಪನಿಗಳಲ್ಲಿ ಅದೆಂಥದೋ ಕೆಲಸ ಮಾಡಿಕೊಂಡಿರುತ್ತಾರೆ. ಕಂಪನಿ ಕೆಲಸದಿಂದ ತೆಗೆದು ಹಾಕಿದರೆ ಮುಂದೇನು ಎಂಬುದೇ ಅವರಿಗೆ ತಿಳಿದಿರುವುದಿಲ್ಲ. ಕೆಲಸವಿರುವ ಅನೇಕರು ಸಿಕ್ಕಾಪಟ್ಟೆ ಜಾಸ್ತಿ ಕೆಲಸದೊತ್ತಡದಿಂದ ಚಿಕ್ಕ ವಯಸ್ಸಿಗೆ ಅನೇಕ ಕಾಯಿಲೆಗಳ ಗೂಡಾಗಿರುತ್ತಾರೆ. ಯಾವಾಗ ಕೆಲಸದಿಂದ ತೆಗೆಯುತ್ತಾರೋ ಎಂಬ ಅನಿಶ್ಚಿತತೆ ಸದಾ ಇರುವುದರಿಂದ ಕೆಲವೊಮ್ಮೆ ಖಿನ್ನತೆಗೊಳಗಾಗಬಹುದು. ಜೀವಿಸಬೇಕಾದ ಅನಿವಾರ್ಯತೆಗೂಳಗಾಗಿ ಹೇಗೋ ಮನೆ ಬಾಡಿಗೆಗೆ, ಅನ್ನ ಸಾಂಬಾರಿಗೆ ಆಗುವಷ್ಟು ಗಳಿಕೆ ಮಾಡಿಕೊಂಡಿರುತ್ತಾರೆ. ಇನ್ನು ಕೆಲವ್ ಹುಡುಗರು ಹುಡುಗಿಯರನ್ನು ಹಾಸ್ಟೆಲ್ಲಿನ ಹತ್ತಿರ ಸುಳಿದಾಡಿ ಬಿಟ್ಟರೆ ಪಟಾಯಿಸಬಹುದು ಅಂದುಕೊಳ್ಳುತ್ತಾರೆ. ಇದು ಶುದ್ಧ ಸುಳ್ಳು ವ್ಯರ್ಥ ಕಸರತ್ತು ಮತ್ತು ಪುಷ್ಪಾದಂತ ಸಿನಿಮಾದಲ್ಲಿ ಮಾತ್ರ ನಡೆಯುವ ಭ್ರಮೆ.
ಹಿಂದಿನ ಕಾಲದ ಹಾಗೆ “ಪ್ರೀತಿ ಪ್ರೇಮ, ಪ್ರಣಯ ಎಲ್ಲಾ ಪುಸ್ತಕದ ಬದನೆಕಾಯಿ” ವಯಸ್ಸಿಗೆ ಯೌವನ ಕಾಲಕ್ಕೆ ತಕ್ಕ ಹಾಗೆ ಆಗುವ ಈಸ್ಟ್ರೋಜನ್ ಟೆಸ್ಟೊಸ್ಟಿರಾನ್ ಹಾರ್ಮೋನುಗಳ ಬದಲಾವಣೆಯಿಂದ ಆಗುವ ತಾತ್ಕಾಲಿಕ ಕ್ರಷ್ ಅಷ್ಟೆ. ಇದೇ ಜೀವನ ಅಲ್ಲ ಎಂದು ಹುಡುಗಿಯರಿಗೆ ಗೊತ್ತಾಗಿ ಬಹಳ ಕಾಲವೇ ಆಗಿದೆ. ಗೊತ್ತಾಗದ ಹುಡುಗರು ಈ ಕಾಲಕ್ಕೆ ಅವಶ್ಯವಿರುವ ಉತ್ತಮ ನೌಕರಿ ಗಿಟ್ಟಿಸಿ ಹಣ ಗಳಿಸಿ ಆರ್ಥಿಕವಾಗಿ ಸದೃಢನಾದರೆ ಮುಂದೆ ಉತ್ತಮ ಉತ್ತಮ ಆಯ್ಕೆಗಳಿವೆ ಎಂಬುದು ತಿಳಿಯದೇ ಸಿಕ್ಕ ಸಿಕ್ಕವರಿಗೆಲ್ಲಾ ಲೈನು ಹೊಡೆಯುತ್ತಾ ಹುಡುಗಿಯರ ಹಾಸ್ಟೆಲ್ಲುಗಳ ಸುತ್ತ ಗಿರಕಿ ಹಾಕುತ್ತಾ ಬಕ್ರಾ ಆಗಿ ಪರಿತಪಿಸುತ್ತಾರೆ.
ಹುಡುಗರು ಬಯಸುವುದು ಹುಡುಗಿಯ ರೂಪ ಮಾತ್ರ. ಇದು ಅವರ ಸ್ವಭಾವಗುಣ ಮತ್ತು ಅವರ ರಕ್ತದಲ್ಲಿ ಹರಿಯುತ್ತಿರುವ ಟೆಸ್ಟೋಸ್ಟಿರೋನ್ ಹಾರ್ಮೋನು ಪ್ರಭಾವ.ತಾವು ಸುಟ್ಟ ಬದನೆ ಕಾಯಿಯಂತಿದ್ದರೂ ಸಹ ತನಗೆ ಸಿಗುವ ಕನ್ಯೆ ಶ್ರೀದೇವಿ, ಹೇಮಾಮಾಲಿನಿಯ ತಂಗಿಯಂತಿರಬೇಕು ಎಂಬುದು ಅವರ ಅಭಿಮತ. ಸಹಜ ಬಯಕೆ. ಒಳ್ಳೆಯ ಗುಣ, ಸಾದು ಸ್ವಭಾವ ಇತ್ಯಾದಿಗಳು ಹೆಚ್ಚುವರಿ ಬಯಕೆಗಳು. ಇದಕ್ಕೆ ಅನೇಕ ಅಪವಾದಗಳಿರಬಹುದು. ಆದರೂ ಕೆಲವೊಮ್ಮೆ ಸಂಗಾತಿ ಕೆಲಸ ಮಾಡುತ್ತಿದ್ದರೆ ಕಾರು, ಮನೆ ಇತ್ಯಾದಿ ಬಯಕೆಗಳನ್ನು ಬೇಗ ಪೂರೈಸಬಹುದಲ್ಲ ಎಂಬ ಹಂಬಲ. ಕೆಲವರು ಮಾವ ಮಸ್ತಾಗಿ ಶ್ರೀಮಂತನಾಗಿದ್ದರೆ ಒಳ್ಳೆಯದು ಕೆಲಸಕ್ಕೆ ಬರುತ್ತಾನೆ ಅಂದುಕೊಳ್ಳುತ್ತಾರೆ.
ಅನೇಕ ಜಾತಿಗಳಲ್ಲಿ ಈವತ್ತಿಗೂ ಸಹ ಉತ್ತಮ ವರನಾಗಿದ್ದರೆ ಎಂಥಾ ಪಿಡುಗೆಂದರೂ ಸಹ ವರದಕ್ಷಿಣೆ ಇದ್ದೇ ಇದೆ. ಸಮಾಜದಲ್ಲೂ ಅಷ್ಟೆ. ಸುಂದರ ರೂಪ ಹೊಂದಿರುವವರ ಕೆಲಸ ಬೇಗ ಆಗುತ್ತದೆ. ಅವರು ಕಚೇರಿಯಲ್ಲಿರುವುದೇ ಎಷ್ಟೋ ಬಾಸುಗಳಿಗೆ ಒಂದು ರೀತಿಯ ಆಹ್ಲಾದಕರ. ಇಂತಹ “ಜೊಲ್ಲು ಪಾರ್ಟಿ” ಗಳು ಎಲ್ಲೆಲ್ಲೂ ತುಂಬಿಹೋಗಿದ್ದಾರೆ. ಕೆಲವೊಂದು ಕಚೇರಿಗಳಲ್ಲಿ ಇವರದೇ ದರ್ಬಾರು. ಬಾಸು ಯಾರ ಮಾತು ಕೇಳದಿದ್ದರೂ “ಸುಂದರ”ವಾಗಿರುವವರು ಹೇಳಿದರೆ ಮೆತ್ತಗಾಗಿ ಬೇಗ ಫೈಲಿಗೆ ಸಹಿ ಹಾಕುತ್ತಾನೆ ಎಂಬುದು ಪುರುಷ ಪ್ರಧಾನ ಸಮಾಜದಲ್ಲಿರುವ ಎಲ್ಲರಿಗೂ ಗೊತ್ತಿರುತ್ತದೆ. ಇಂತಹವರಿಂದ ಕಿರುಕುಳ ಅನುಭವಿಸಿದ ಲಕ್ಷಾಂತರ ಹೆಣ್ಣು ಮಕ್ಕಳು ಇದ್ದೇ ಇರುತ್ತಾರೆ. ಇಂತಹವರ ದೌರ್ಬಲ್ಯಗಳನ್ನು ಬಳಸಿಕೊಂಡ ಅನೇಕ ಜನ ಹೆಣ್ಣುಮಕ್ಕಳೂ ಇರುವುದೂ ಸಹ ಅಷ್ಟೇ ಸತ್ಯ.
ನಾನು ಮಾತನಾಡಿಸಿದವರಲ್ಲಿ ಅನೇಕರು “ಪ್ರೇಮ ವಿವಾಹದಲ್ಲಿ, ನಾವು ಮೊದಲು ಪ್ರೀತಿಸುತ್ತೇವೆ ಮತ್ತು ನಂತರ ಮದುವೆಯಾಗುತ್ತೇವೆ, ಆದರೆ ಅರೇಂಜ್ಡ್ ಮ್ಯಾರೇಜ್‌ನಲ್ಲಿ ನಾವು ಮದುವೆಯಾಗುತ್ತೇವೆ ಮತ್ತು ನಂತರ ಪ್ರೀತಿಯಲ್ಲಿ ಬೀಳುತ್ತೇವೆ. ಯಾವಾಗಲೂ ಅಲ್ಲ, ಆದರೆ ಹೆಚ್ಚಾಗಿ ಇದು ನಿಜ ಮತ್ತು ಅನಿವಾರ್ಯ ಸಹಾ.” ಎಂದು.
ಪರಿಹಾರವೇನು?
ಸದ್ಯಕ್ಕೆ ಇದು ಹಾಗೆಯೇ. ಭಾರತದಲ್ಲಿ ಬದಲಾವಣೆಗಳಾಗಲು ಅನೇಕ ಶತಮಾನಗಳೇ ಬೇಕು. ಕಾಲಚಕ್ರ ತಿರುಗಬೇಕು. ಇಲ್ಲ. ಈ ಗಂಭೀರ ಸಮಸ್ಯೆಗೆ ಯಾರಲ್ಲೂ ಸುಲಭದ ಪರಿಹಾರವಿಲ್ಲ. ನೈಸರ್ಗಿಕವಾಗಿಯೇ ಹೆಣ್ಮಕ್ಕಳ ಸಂಖ್ಯೆ ಸರಿಸಮ ಅಥವಾ ಹೆಚ್ಚು ಆಗಬೇಕು. ಮುಂದೊಮ್ಮೆ ಆಗೇ ಆಗುತ್ತದೆ. ಇದೂ ಕೂಡ ನಮ್ಮ ಅರ್ಥಶಾಸ್ತ್ರದ ’ಡಿಮ್ಯಾಂಡ್ & ಸಪ್ಲೈ’ ಲೆಕ್ಕಾಚಾರವೇ. ಆಗ ಎಲ್ಲ ಹಳ್ಳಿ ಹುಡುಗರಿಗೂ ಮದುವೆಯಾಗುತ್ತದೆ. ಅಲ್ಲಿಯವರೆಗೂ ಹಳ್ಳಿಯ ಪರಿಸರ ಸ್ವಚ್ಛ, ಪೇಟೆಯಲ್ಲಿ ಧೂಳು ಹೀಗೆ ಏನೇ ಕಥೆ ಹೇಳಿದರೂ ಹೆಣ್ಮಕ್ಕಳು ಹಳ್ಳಿಗೆ ಬರಲಾರರು. ಕ-ಪಿಗಳು ಕೊಡಲೊಪ್ಪರು. ತಪ್ಪು ಎಂದು ಹೇಳಲಾಗದು. ಅವರ ಜೀವನದ ಕನಸು ಮತ್ತು ದೃಷ್ಟಿಕೋನದಲ್ಲಿ ಅದು ಸರಿಯೇ.
ಇನ್ನು ನಮ್ಮ ಹಳ್ಳಿಯ ಯುವಕರು ಕೂಡ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಹೊಲ-ತೋಟಗಳಲ್ಲಿ ದುಡಿಯುವುದಾದರೂ ಮೊದಲಿಗೆ ಸಾಧ್ಯವಾದಷ್ಟು ಶಿಕ್ಷಣ-ಜ್ಞಾನ ಸಂಪಾದಿಸಬೇಕು. ಕಷ್ಟಪಟ್ಟು ದುಡಿದರೂ ಕೈಬಿಚ್ಚಿ ಖರ್ಚುಮಾಡುವ, ಈಗಿನ ಯುವ ಸಮುದಾಯಕ್ಕೆ ಸರಿಸಾಟಿಯಾದ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮಾತು-ಭಾಷೆ-ಶೈಲಿ-ಜೀವನ ಕ್ರಮಗಳಲ್ಲಿ ಪೇಟೆ ಸೇರಿರುವ ಹುಡುಗರನ್ನು ಮೀರಿಸುವಂತಿರಬೇಕು. ಈ ನಿಟ್ಟಿನಲ್ಲಿ ಇತ್ತೀಚೆಗೆ ಕರೋನಾ ಕಾಲದಲ್ಲಿ ಪೇಟೆ ಬಿಟ್ಟು ಹಳ್ಳಿ ಸೇರಿರುವ ಕೃಷಿ ಮಕ್ಕಳು ಮಾದರಿಯಾಗುತ್ತಾರೆ.
ಅವರು ಹಳ್ಳಿಯಲ್ಲಿದ್ದರೂ ಮಾನಸಿಕವಾಗಿ–ವ್ಯಾವಹಾರಿಕವಾಗಿ ಪೇಟೆಯವರಂತೆ ಬದುಕುತ್ತಿದ್ದಾರೆ. ಈಗ ಹಳ್ಳಿಯಲ್ಲೂ ವಿದ್ಯುತ್ತು, ಮೊಬೈಲು, ಇಂಟರ್ನೆಟ್ಟು, ಟಿವಿ, ಕಾರು ಹೀಗೆ ಎಲ್ಲ ಆಧುನಿಕ ಸೌಲಭ್ಯಗಳಿವೆ. ಪೇಟೆಗಿಂತ ಉತ್ತಮ – ಸ್ವಚ್ಛ ನೀರು-ಗಾಳಿ-ಪರಿಸರ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳಿವೆ. ಚೆಂದದ ಸ್ವಾವಲಂಬಿ ಜೀವನ ಸಾಧ್ಯವಿದೆ. ಆದರೆ ಇವೆಲ್ಲ ಮದುವೆ ವಯಸ್ಸಿಗೆ ಬಂದ ಕೆಲವು 25ರ ಯುವತಿಯರಿಗೆ ಅರ್ಥವಾಗುವುದಿಲ್ಲ. ಇಂಥ ತಿಳುವಳಿಕೆ–ಪ್ರಬುದ್ಧತೆ ಬರುವ ಹೊತ್ತಿಗೆ 35 ಕಳೆದಿರುತ್ತದೆ. ಕಾಲ ಮಿಂಚಿರುತ್ತದೆ. ಹಳ್ಳಿಯಲ್ಲಿರುವ ರೈತರೇ ಪ್ರಗತಿಪರ ರೈತ ಯುವಕನಿಗೆ ಹೆಣ್ಣುಮಕ್ಕಳನ್ನು ಕೊಟ್ಟು ಮದುವೆ ಮಾಡುವುದಿಲ್ಲ. ಇನ್ನು ಪಟ್ಟಣದವರು ಕೊಟ್ಟಾರೆಯೇ?
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ | “Wh” ಪ್ರಶ್ನೆಗಳ ರಚನೆ ಹೇಗೆ? | ತೇಜಸ್ವಿನಿ |#whquestions| Spokenenglish |Janashakthi