ನವದೆಹಲಿ: ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಸಹ ಬರೆದಿದ್ದಾರೆ.
‘ಲಖಿಂಪುರ ಖೇರಿ ಘಟನೆ ಭಯಾನಕವಾದದ್ದು. ಮೋದಿ ಜೀ, ನೀವೇಕೆ ಮೌನವಾಗಿದ್ದೀರಿ? ನಿಮ್ಮಿಂದ ಕೇವಲ ಒಂದು ಅನುಕಂಪದ ಮಾತನ್ನು ನಾವು ನಿರೀಕ್ಷಿಸುತ್ತೇವೆ. ಅದು ಕಷ್ಟವಾಗಬಾರದು’ ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಲಖಿಂಪುರ್ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಸೇರಿ ಇತರರ ವಿರುದ್ಧ ಎಫ್ಐಆರ್
ಅಲ್ಲದೆ, “ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನೀವು ವಿರೋಧ ಪಕ್ಷದಲ್ಲಿ ಇದ್ದರೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತಿದ್ದಿರಿ ದಯವಿಟ್ಟು ನಮಗೆ ತಿಳಿಸಿ” ಎಂದು ಕೇಳಿರುವ ಕಪಿಲ್ ಸಿಬಲ್ ಕೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 03ರಂದು ರೈತರ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರು ರೈತರು ಆಗಿದ್ದಾರೆ. ಕೇಂದ್ರ ಸಚಿವರುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿದ ವಾಹನ ಹಾಗೂ ಇತರೆ ವಾಹನಗಳು ವೇಗವಾಗಿ ಬಂದಿದ್ದು, ರೈತರ ಮೇಲೆ ಹರಿದು ಹೋಗಿದೆ.
ಇದನ್ನು ಓದಿ: ರೈತರ ಮೇಲೆ ಕಾರು ಹರಿಸಿದ ಭಯಾನಕ ದೃಶ್ಯ ಮೊಬೈಲ್ ಸೆರೆ: ಧಾಳಿ ಮಾಡಲೆಂದೇ ಕಾರು ನುಗ್ಗಿಸಿದ್ದು
ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಿರುವ ರೈತರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ವಿರೋಧಿಸಿ ಲಖಿಂಪುರ ಖೇರಿಯಲ್ಲಿ ಅಂದು ಪ್ರತಿಭಟನೆಗೆ ಮುಂದಾಗಿದ್ದರು.
ವಿಚಾರಣೆಗೆ ಹಾಜರಾಗದ ಆಶೀಶ್ ಮಿಶ್ರಾ
ಈ ಹಿನ್ನೆಲೆ ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಲವ್‌ಕುಶ್ ಹಾಗೂ ಆಶೀಶ್ ಪಾಂಡೆ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಅಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಕೂಡಾ ಇದ್ದರು ಎಂದು ರೈತರು ಹೇಳಿದ್ದು, ಈವರೆಗೂ ಆಶೀಶ್ ಮಿಶ್ರಾರವನ್ನು ಬಂಧನ ಮಾಡಿಲ್ಲ. ಇನ್ನು ಆಶೀಶ್ ಮಿಶ್ರಾಗೆ ಶುಕ್ರವಾರ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದ್ದರೂ ಸಹ ಇಂದು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.