ಸಂಪತ್ತಿನ ಕ್ರೋಢೀಕರಣ ಮತ್ತು ಬಡತನದ ಬೆಳವಣಿಗೆ ಒಟ್ಟೊಟ್ಟಿಗೇ ಏಕೆ?: ಸಂಪತ್ತು ಮತ್ತು ಬಡತನದ ತತ್ವ ಜಿಜ್ಞಾಸೆ

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ.ನಾಗರಾಜ್

ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎನಿಸಿಕೊಂಡಿರುವ ಯನ್ನು ಸ್ವೀಡನ್ನಿನ ರಿಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಅಂದರೆ ಪಡೆದ ಅರ್ಥಶಾಸ್ತಜ್ಞರು ಮಾತ್ರವಲ್ಲ, ಅವರ ಟೀಕಾಕಾರರು ಕೂಡ ಬೆಳವಣಿಗೆಯ ಬಗ್ಗೆ ಮತ್ತು ಅಭಿವೃದ್ಧಿಯಾಗದಿರುವ ಬಗ್ಗೆ ಹೊಂದಿರುವ ಗ್ರಹಿಕೆಯಲ್ಲೇ ಒಂದು ಮೂಲಭೂತ ಕೊರತೆ ಇದೆ. ಇವರು ಬಡತನವನ್ನು ಬಂಡವಾಳದ ಅಭಿವೃದ್ಧಿಯ ಜೊತೆಯಲ್ಲೇ ಬರುವ ಅದರ ಒಂದು ದ್ವಂದ್ವ ಎಂದು ನೋಡುವುದರ ಬದಲು, ಅದು ಅಭಿವೃದ್ಧಿಯ ಕೊರತೆಯಿಂದ ಉದ್ಭವಿಸುತ್ತದೆ ಎಂದು ಭಾವಿಸಿದ್ದಾರೆ.

ಅಭಿವೃದ್ಧಿ ಮತ್ತು ಹಿಂದುಳಿದಿರುವಿಕೆಯ ನಡುವೆ ಅಥವಾ ಬಡತನದ ಬೆಳವಣಿಗೆಯೊಂದಿಗೆ ಸಂಪತ್ತಿನ ಬೆಳವಣಿಗೆಯ ಮತ್ತು ಅದರ ಅಂತಾರಾಷ್ಟ್ರೀಯ ಪ್ರತಿರೂಪದ, ಅಂದರೆ, ಕೆಲವು ದೇಶಗಳ ಅಭಿವೃದ್ಧಿಯ ಜೊತೆಯಲ್ಲಿ ಇತರ ದೇಶಗಳು ಅಭಿವೃದ್ಧಿಯಾಗದಿರುವ ದ್ವಂದ್ವವನ್ನು ಈ ರಿ ರಿಕ್ಸ್ ಬ್ಯಾಂಕ್ ಪ್ರಶಸ್ತಿ ಪುರಸ್ಕೃತರು ಗುರುತಿಸುವುದೇ ಇಲ್ಲ. ಸಂಪತ್ತಿನ ಕ್ರೋಢೀಕರಣ ಮತ್ತು ಬಡತನದ ಕ್ರೋಢೀಕರಣ ಇವು ದ್ವಂದ್ವಾತ್ಮಕ ಸಂಬಂಧ ಹೊಂದಿವೆ ಎಂಬ ಸತ್ಯವನ್ನು ಬೂರ್ಜ್ವಾ ಅರ್ಥಶಾಸ್ತ್ರವು ಯಾವ ಸಂದರ್ಭದಲ್ಲೂ ಒಪ್ಪಿಕೊಳ್ಳುವುದಿಲ್ಲ.

ಈ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ದೇಶ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಅಥವಾ ಅಡ್ಡಿಪಡಿಸುವ ಸಂಗತಿಗಳ ಬಗ್ಗೆ ನಡೆಸಿದ ಸಂಶೋಧನೆಗಾಗಿ ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ನೀಡಲಾಗಿದೆ. ಚುನಾವಣಾ ಪ್ರಜಾಪ್ರಭುತ್ವದಂತೆ, ಕೆಲವು ಪಾಶ್ಚ್ಯಾತ್ಯ ಸಂಸ್ಥೆಗಳು ಆರ್ಥಿಕ ಬೆಳವಣಿಗೆಗೆ ಅನುಕೂಲಕರವಾಗಿವೆ ಮತ್ತು ಅವು ಆರ್ಥಿಕ ಬೆಳವಣಿಗೆಯಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ
ವಸಾಹತುಶಾಹಿಯು ತಾನು ನೆಲಸಿದ ವಸಾಹುಗಳಲ್ಲಿ ಉತ್ತೇಜಿಸಿದ ಒಳಗೊಳ್ಳುವ ಸಂಸ್ಥೆಗಳು ಅಲ್ಲಿ ಬೆಳವಣಿಗೆಯು ಪ್ರವರ್ಧಮಾನಕ್ಕೆ ಬರಲು ಕಾರಣವಾದವು. ಆದರೆ, ವಸಾಹತುಶಾಹಿ ಸಾಮ್ರಾಜ್ಯದ ಬೇರೆಡೆಗಳಲ್ಲಿ ಸ್ಥಾಪಿಸಿದ ಕಸಿಯುವ ಸಂಸ್ಥೆಗಳು ಬೆಳವಣಿಗೆಗೆ ಹಾನಿಕಾರಕವಾದವು.

ಇದನ್ನೂ ಓದಿ: ಪೊಕ್ಸೊ ಪ್ರಕರಣ: ಅತ್ಯಾಚಾರಕ್ಕೆ ತುತ್ತಾಗಿದ್ದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

ಅವರ ಈ ಅಭಿಪ್ರಾಯ ಬಹಳ ಟೀಕೆಗಳೀಗೆ ಒಳಗಾಗಿದೆ. ಅವರ ಈ ವಾದದಲ್ಲಿ ಹುರುಳಿಲ್ಲ ಎಂದು ಕೆಲವರು ವಾದಿಸಿದ್ದಾರೆ: ಪಾಶ್ಚ್ಯಾತ್ಯ-ಶೈಲಿಯ ಪ್ರಜಾಪ್ರಭುತ್ವವನ್ನು ಹೊಂದಿರದ ಮತ್ತು ಕೆಲವು ಭ್ರಷ್ಟಾಚಾರ-ಮುಕ್ತ ಪೂರ್ವ ಏಷ್ಯಾದ ದೇಶಗಳಲ್ಲೂ ಆರ್ಥಿಕ ಬೆಳವಣಿಗೆಯು ಯಶಸ್ವಿಯಾಗಿದೆ. ಹಾಗೆ ನೋಡಿದರೆ ಪಾಶ್ಚ್ಯಾತ್ಯ ದೇಶಗಳು ಕಂಡ ಅಧಿಕ ಬೆಳವಣಿಗೆಯ ಕಾಲಾವಧಿಯು ಭ್ರಷ್ಟಾಚಾರದಿಂದ ಗುರುತಿಸಲ್ಪಟ್ಟಿದೆ. ಪಾಶ್ಚಾತ್ಯರು ನೆಲೆ ನಿಂತ ವಸಾಹತುಗಳು ಮತ್ತು ಬೇರೆ ವಸಾಹತುಗಳ ನಡುವೆ ಕಂಡು ಬರುವ ವ್ಯತ್ಯಾಸವು, ನೆಲೆ ನಿಂತ ವಸಾಹತುಗಳಲ್ಲಿ ಪಾಶ್ಚ್ಯಾತ್ಯರು ತಮ್ಮ ಬಂಧುಬಳಗದವರನ್ನು ವಲಸಿಗರಾಗಿ ಸ್ವೀಕರಿಸಿದ ಕಾರಣದಿಂದ ಉಂಟಾಗಿದೆ ಎಂದು ಕೆಲವರು ವಾದಿಸಿದ್ದಾರೆ. ಇನ್ನೂ ಕೆಲವರು, ಈ ಅರ್ಥಶಾಸ್ತ್ರಜ್ಞರು ಪಾಶ್ಚ್ಯಾತ್ಯ ಸಂಸ್ಥೆಗಳನ್ನು ಪರಮ ದೈವವೋ ಎಂಬಂತೆ ವೈಭವೀಕರಿಸಿ ನೋಡಿರುವ ಕ್ರಮವನ್ನು ಮತ್ತು ವಸಾಹತುಶಾಹಿಯು ನಡೆಸಿದ ಮಿತಿ ಮೀರಿದ ದಬ್ಬಾಳಿಕೆಯ ಬಗ್ಗೆ ವಹಿಸಿದ ಮೌನವನ್ನು ಕಟುವಾಗಿ ಟೀಕಿಸಿದ್ದಾರೆ.

ಈ ಅರ್ಥಶಾಸ್ತ್ರಜ್ಞರ ವಾದಗಳನ್ನು ಚರ್ಚಿಸುವುದು ಇಲ್ಲಿ ನಮ್ಮ ಉದ್ದೇಶವಲ್ಲ. ಆದರೆ, ಬೆಳವಣಿಗೆಯ ಬಗ್ಗೆ ಮತ್ತು ಅಭಿವೃದ್ಧಿಯಾಗದಿರುವ ಬಗ್ಗೆ ಅವರು ಹೊಂದಿರುವ ಗ್ರಹಿಕೆಯಲ್ಲೇ ಒಂದು ಮೂಲಭೂತ ಕೊರತೆ ಇದೆ ಎಂಬುದನ್ನು ಒತ್ತಿಹೇಳುವುದೇ ನಮ್ಮ ಉದ್ದೇಶ. ಈ ಕೊರತೆಯು ಈ ಅರ್ಥಶಾಸ್ತ್ರಜ್ಞರ ಟೀಕಾಕಾರರ ಗ್ರಹಿಕೆಯಲ್ಲೂ ಇದೆ, ಅವರ ಟೀಕೆಗಳು ಎಷ್ಟೇ ಸರಿ ಇದ್ದರೂ ಸಹ. ಈ ಕೊರತೆಯು ಬಡತನವನ್ನು ಅಭಿವೃದ್ಧಿ ಜೊತೆಯಲ್ಲೇ ಬರುವ ಅದರ ಒಂದು ದ್ವಂದ್ವ ಎಂದು
ನೋಡುವುದರ ಬದಲು ಅದು ಅಭಿವೃದ್ಧಿಯ ಕೊರತೆಯಿಂದ ಉದ್ಭವಿಸುತ್ತದೆ ಎಂದು ನೋಡುವ ಕ್ರಮಕ್ಕೆ ಸಂಬಂಧಿಸಿದೆ.

ಉತ್ತಮ (ಒಳಗೊಳ್ಳುವ) ಸಂಸ್ಥೆಗಳನ್ನು ಹೊಂದಿದ ಕೆಲವು ದೇಶಗಳು ಮುಂದೆ ಹೋದರೆ ಕೆಟ್ಟ (ಕಸಿಯುವ) ಸಂಸ್ಥೆಗಳನ್ನು ಹೊಂದಿದ ದೇಶಗಳು ಹಿಂದೆ ಉಳಿದವು ಎಂಬುದನ್ನು ಒಂದು ಜನಾಂಗದ ಚಿತ್ರವಾಗಿ ಅವರು ಸೂಚ್ಯವಾಗಿ ಪರಿಭಾವಿಸುತ್ತಾರೆ. ಈ ಚಿತ್ರದಲ್ಲಿ ಕಾಣೆಯಾದ ಸಂಗತಿಯೆಂದರೆ, ಕೆಲವರು ಮುಂದೆ ಹೋದುದರಿಂದ ಇತರರು ಹಿಂದೆ ಉಳಿದರು ಎಂಬುದು ಮತ್ತು ಬಂಡವಾಳಶಾಹಿ ಬೆಳವಣಿಗೆಯು ಬಡತನವನ್ನು ಉಂಟುಮಾಡುತ್ತದೆ ಎಂಬುದು. ಈ ವಿದ್ಯಮಾನವನ್ನು ವಿವರಿಸಲು ದಿವಂಗತ ಆಂಡ್ರೆ ಗುಂಡರ್ ಫ್ರಾಂಕ್ ಎಂಬುವರು ಹಿಂದುಳಿಯುವ ಅಭಿವೃದ್ಧಿ/ಅಭಿವೃದ್ಧಿಯಾಗದ ಅಭಿವೃದ್ಧಿ ಎಂಬ ಒಂದು ಪದಗುಚ್ಛವನ್ನು ರಚಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಸಾಹಿತಿ ಬಂಜಗೆರೆ, ಪ್ರಾಧ್ಯಾಪಕ ಡಾ.ಡಿ.ಡೊಮಿನಿಕ್, ಲೇಖಕ ಪ್ರೊ. ಆರ್.ಕೆ. ಹುಡಗಿ ಸೇರಿ 15 ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಅಭಿವೃದ್ಧಿಯಾಗದ ಅಭಿವೃದ್ಧಿ ಎಂದರೆ, ಅಲ್ಲಿ ಅಭಿವೃದ್ಧಿ ಇಲ್ಲವೇ ಇಲ್ಲ ಎಂದಲ್ಲ; ಆದರೆ, ನಾವು ಯಾವುದನ್ನು ಸಾಮಾನ್ಯವಾಗಿ ಅಭಿವೃದ್ಧಿ ಎಂದು ಗುರುತಿಸುತ್ತೇವೆಯೋ ಅದೇ ಅಭಿವೃದ್ಧಿಯ ಒಂದು ನಿರ್ದಿಷ್ಟ ರೂಪವೇ ಈ ಅಭಿವೃದ್ಧಿಯಾಗದ ಅಭಿವೃದ್ಧಿ. ಅಭಿವೃದ್ಧಿ ಮತ್ತು ಹಿಂದುಳಿದಿರುವಿಕೆಯ ನಡುವೆ ಅಥವಾ ಒಂದು ಧ್ರುವದಲ್ಲಿ ಸಂಪತ್ತಿನ ಬೆಳವಣಿಗೆ ಮತ್ತು ಇನ್ನೊಂದು ಧ್ರುವದಲ್ಲಿ ಬಡತನದ ಬೆಳವಣಿಗೆಯ ನಡುವಿನ ಈ ದ್ವಂದ್ವವನ್ನು ಈ ರಿಕ್ಸ್ ಬ್ಯಾಂಕ್ ಪ್ರಶಸ್ತಿ
ಪುರಸ್ಕೃತರು ಗುರುತಿಸುವುದೇ ಇಲ್ಲ.

ಸ್ವೀಡನ್ನಿನ ರಿಕ್ಸ್ ಬ್ಯಾಂಕ್ ಅಲ್ಫೆç**ಡ್ ನೋಬೆಲ್ ಸ್ನರಣೆಯಲ್ಲಿ ಅರ್ಥಶಾಸ್ತಕ್ಕೆ ಕೊಡುವ ಪ್ರಶಸ್ತಿಯ ಈ ಬಾರಿಯ ವಿಜೇತರು: ಅಮೆರಿಕಾದ ಮ್ಯೆಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯ ಡೆರೊನ್ ಎಸ್ಮೊಗ್ಲು ಮತ್ತು ಸೈಮನ್ ಜಾನ್ಸನ್ ಹಾಗೂ ಚಿಕಾಗೊ ವಿ.ವಿ.ದ ಜೇಮ್ಸ್ ರಾಬಿನ್ಸ್.

ದ್ವಂದ್ವದ ಮೂಲ ಕಾರಣ

ಬಡತನದ ಬೆಳವಣಿಗೆಯೊಂದಿಗೆ ಸಂಪತ್ತಿನ ಬೆಳವಣಿಗೆಯ ಈ ದ್ವಂದ್ವದ ಮೂಲ ಕಾರಣ, ಮತ್ತು ಅದರ ಅಂತಾರಾಷ್ಟ್ರೀಯ ಪ್ರತಿರೂಪದ, ಅಂದರೆ, ಕೆಲವು ದೇಶಗಳ ಅಭಿವೃದ್ಧಿಯ ಜೊತೆಯಲ್ಲಿ ಇತರ ದೇಶಗಳು ಅಭಿವೃದ್ಧಿಯಾಗದಿರುವ ಕಾರಣ ಹೀಗಿದೆ: ಬಂಡವಾಳಶಾಹಿ ಬೆಳವಣಿಗೆಯು ಬಂಡವಾಳದ ಆದಿಮ ಶೇಖರಣೆಯನ್ನು ಅನಿವಾರ್ಯವಾಗಿ ಒಳಗೊಂಡಿರುತ್ತದೆ.

ಈ ಪ್ರಕ್ರಿಯೆಯಲ್ಲಿ, ಕಿರು-ಉತ್ಪಾದಕ ಸಮೂಹವನ್ನು ಬಡತನಕ್ಕೆ ಒಳಪಡಿಸಿ ಅವರ ಆಸ್ತಿ-ಪಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಹೀಗೆ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಬಡವರಾದವರ ಪೈಕಿ ಒಂದು ಸಣ್ಣ ಸಂಖ್ಯೆಯ ವ್ಯಕ್ತಿಗಳನ್ನು ಮಾತ್ರ ಬಂಡವಾಳಶಾಹಿ ವಲಯದಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳಲಾಗುತ್ತದೆ. ಬಂಡವಾಳ ಆದಿಮ ಶೇಖರಣೆಯ ಪ್ರಕ್ರಿಯೆಯ ಬಲಿಪಶುಗಳ ಒಟ್ಟು ಸಂಖ್ಯೆಯು ಬಂಡವಾಳದ ಶೇಖರಣೆಯು ಮುಂದುವರೆಯುತ್ತಾ ಹೋದಂತೆ ಹೆಚ್ಚುತ್ತಾ ಹೋಗುತ್ತದೆ. ಅಥವಾ, ಒಂದು ವೇಳೆ ಈ ಬಲಿಪಶುಗಳ ಒಟ್ಟು ಸಂಖ್ಯೆಯು ಹೆಚ್ಚದಿದ್ದರೆ, ಬದಲಿಗೆ ಇಳಿಕೆಯುತ್ತಿದ್ದರೆ, ಅಥವಾ ಸ್ಥಿರವಾಗಿ ಉಳಿದಿದ್ದರೆ, ನಂತರ ಅವರ ಬಡತನದ ಮಟ್ಟವು ಏರಿಕೆಯಾಗುತ್ತದೆ ಮತ್ತು ಅವರು ವ್ಯವಸ್ಥೆಯ ಹೊರಗೆ ಉಳಿಯುತ್ತಾರೆ.

ಬಂಡವಾಳದ ಆದಿಮ ಶೇಖರಣೆಯು ಒಂದು ನಿರಂತರ ಪ್ರಕ್ರಿಯೆಯಾಗಿರುವ ಕಾರಣದಿಂದಾಗಿ ವ್ಯವಸ್ಥೆಯಿಂದಾಗಿ ಬಡತನಕ್ಕೆ ಒಳಗಾಗಿ ಅದರಿಂದ ಹೊರಗುಳಿದವರ ಸಂಖ್ಯೆಯೂ ಇಳಿಯುವುದಿಲ್ಲ ಮತ್ತು ಅಂತಹ ವ್ಯಕ್ತಿಗಳ ಬಡತನದ ಮಟ್ಟವೂ ಇಳಿಯುವುದಿಲ್ಲ. ನಈ ವಿದ್ಯಮಾನವು ಒಂದು ಧ್ರುವದಲ್ಲಿ ಸಂಪತ್ತಿನ ಕ್ರೋಢೀಕರಣ ಮತ್ತೊಂದು ಧ್ರುವದಲ್ಲಿ ಬಡತನದ ಬೆಳವಣಿಗೆ ಇವು ಒಟ್ಟೊಟ್ಟಿಗೇ ಏಕೆ ಇರುತ್ತವೆ ಎಂಬುದನ್ನು ವಿವರಿಸುತ್ತದೆ. ಈ ವಿದ್ಯಮಾನದ ಗ್ರಹಿಕೆಯು ಶೇಖರಣೆಯ ಒಟ್ಟಾರೆ ಪ್ರಕ್ರಿಯೆಯ ಬಗ್ಗೆ ಒಂದು ಸಮಗ್ರ ದೃಷ್ಟಿಯನ್ನು ಹೊಂದಿರದ ಕಾರಣದಿಂದಾಗಿ ಮಬ್ಬುಗೊಂಡಿರುತ್ತದೆ.

ಇದನ್ನೂ ಓದಿ: ಉಡುಪಿ| ಕೆನರಾ ಬ್ಯಾಂಕ್‌ನಲ್ಲಿ 5 ಖೋಟಾ ನೋಟು ಪತ್ತೆ

ಗಮನವನ್ನು ಈ ಪ್ರಕ್ರಿಯೆಯ ಒಂದು ನಿರ್ದಿಷ್ಟ ಭಾಗದ ಮೇಲೆ ಮಾತ್ರ ಕೇಂದ್ರೀಕರಿಸುವುದರಿಂದಾಗಿ ಅದರಿಂದೊಂದು ತಪ್ಪಾದ ಭಾವನೆಯನ್ನು ಮೂಡಿಸುತ್ತದೆ.
ಬಂಡವಾಳಶಾಹಿಯ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದ ಮೊದಲನೆಯ ಮಹಾಯುದ್ಧದ ವೇಳೆಗೆ ಒಂದು ಜಾಗತಿಕ ವ್ಯವಸ್ಥೆಯಾಗಿ ತನ್ನನ್ನು ತಾನು ಬಲಪಡಿಸಿಕೊಂಡ ತನ್ನ ಉತ್ಕರ್ಷದ ಸುದೀರ್ಘ ಅವಧಿಯಲ್ಲಿ, ಸಂಪತ್ತು ಮತ್ತು ಬಡತನದ ಈ ದ್ವಂದ್ವವು ಈ ರೀತಿಯಲ್ಲಿತ್ತು: ಬ್ರಿಟನ್‌ನಿಂದ ಹಿಡಿದು ಇಡೀ ಯುರೋಪ್ ಖಂಡದಲ್ಲಿ ಮತ್ತು ಕೆನಡಾ, ಯು.ಎಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಯುರೋಪಿಯನ್ ವಸಾಹತುಗಳ ಸಮಶೀತೋಷ್ಣ ಪ್ರದೇಶಗಳಿಗೆ ಬಂಡವಾಳಶಾಹಿಯು ಹರಡಿತು. ವಸಾಹತುಶಾಹಿಯು ನೆಲೆ ನಿಂತ ಈ ಪ್ರದೇಶಗಳಿಗೆ ಉದ್ಯಮಗಳ ಪ್ರಸರಣ ಸಂಭವಿಸಿತು.

ಉದ್ಯಮಗಳ ಪ್ರಸರಣಕ್ಕಾಗಿ ಬ್ರಿಟನ್ ತನ್ನ ಸ್ವಂತ ಮಾರುಕಟ್ಟೆಯನ್ನು ಈ ಪ್ರದೇಶಗಳ ಆಮದುಗಳಿಗೆ ಮುಕ್ತವಾಗಿರಿಸಿತ್ತು ಮಾತ್ರವಲ್ಲ, ಬ್ರಿಟನ್ನಿಂದ ಮತ್ತು ಯುರೋಪಿನ ಇತರ ಭಾಗಗಳಿಂದ ಈ ಪ್ರದೇಶಗಳಿಗೆ ಸಂಭವಿಸಿದ ಬೃಹತ್ ಪ್ರಮಾಣದ ವಲಸೆಯೊಂದಿಗೆ ಅಧಿಕವಾಗಿ ಬಂಡವಾಳವನ್ನೂ ಬ್ರಿಟನ್ ರಫ್ತು ಮಾಡಿತು.
ನೆಪೋಲಿಯನ್ (ಫ್ರಾನ್ಸಿನೊಂದಿಗೆ) ಯುದ್ಧದ ಅಂತ್ಯ ಮತ್ತು ಮೊದಲ ವಿಶ್ವ ಯುದ್ಧದ ನಡುವಿನ ಅವಧಿಯಲ್ಲಿ ಯುರೋಪಿನಿಂದ ಸಂಭವಿಸಿದ ವಲಸೆಯ ಪ್ರಮಾಣವು ಕನಿಷ್ಠ 5 ಕೋಟಿ ಎಂದು ಅಂದಾಜಿಸಲಾಗಿದೆ.

ವಲಸೆ ಬಂದವರು ಬಲ ಪ್ರಯೋಗದ ಮೂಲಕ ಭೂಮಿಯನ್ನು ಸ್ಥಳೀಯರಿಂದ ಕಸಿದುಕೊಂಡರು. ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ವಲಸಿಗರೊಂದಿಗೆ ಹೋರಾಡಿ ಬದುಕುಳಿದ ಸ್ಥಳೀಯರನ್ನು ಮತ್ತು ಹೊಸ ಹೊಸ ರೋಗಗಳಿಗೆ ತೆರೆದುಕೊಂಡು ಸಾಯದೆ ಉಳಿದ ಸ್ಥಳೀಯರನ್ನು ಮೀಸಲಿಟ್ಟ ಸ್ಥಳ ಗಳಲ್ಲಿ ಕೂಡಿಹಾಕಲಾಯಿತು. ಬ್ರಿಟನ್ ಒಂದರಿಂದಲೇ ಈ ಹೊಸ ಪ್ರಪಂಚಕ್ಕೆ ಧಾವಿಸಿದ ಈ ವಲಸೆಯ ಗಾತ್ರವು ಅದೆಷ್ಟು ದೊಡ್ಡದಿತ್ತು ಎಂದರೆ, ಈ ಅವಧಿಯಲ್ಲಿ ಪ್ರತಿ ವರ್ಷವೂ ಬ್ರಿಟನ್‌ನಲ್ಲಿ ಜನಿಸಿದವರ ಅರ್ಧದಷ್ಟು ಎಂದು ಅಂದಾಜಿಸಲಾಗಿದೆ.

ಬ್ರಿಟಿಷ್ ಮಾರುಕಟ್ಟೆಯು ಹೊಸದಾಗಿ-ಕೈಗಾರಿಕೀಕರಣಗೊಳ್ಳುತ್ತಿದ್ದ ಈ ವಸಾಹತು ದೇಶಗಳಿಂದ ಪ್ರಾಥಮಿಕ ವಲಯದ ರಫ್ತುಗಳಿಗೆ ಮತ್ತು ಕೈಗಾರಿಕಾ ರಫ್ತುಗಳಿಗೆ ಈ ಎರಡಕ್ಕೂ ಮುಕ್ತವಾದುದರಿಂದ ಮತ್ತು ಬ್ರಿಟನ್ ಕೂಡ ಇದೇ ದೇಶಗಳಿಗೆ ಬಂಡವಾಳವನ್ನು ರಫ್ತು ಮಾಡಿದ್ದರಿಂದ, ಈ ವಸಾಹತು ದೇಶಗಳೊಂದಿಗೆ ಒಂದು ದೊಡ್ಡ ಮೊತ್ತದ ಪಾವತಿ ಶೇಷದ ಕೊರತೆಯನ್ನು ಬ್ರಿಟನ್ ಅನುಭವಿಸಿತು. ಜೊತೆಗೆ, ಈ ಪ್ರದೇಶಗಳಿಂದ ಬ್ರಿಟನ್ ಮಾಡಿಕೊಳ್ಳುತ್ತಿದ್ದ ಆಮದು ಆಧಿಕ್ಯವು ಬ್ರಿಟಿಷ್
ಅರ್ಥವ್ಯವಸ್ಥೆಯಲ್ಲಿ ನಿರುದ್ಯೋಗವನ್ನು ಸಾಮಾನ್ಯವಾಗಿ ಸೃಷ್ಟಿಸುವ ಅಲ್ಪ ಮಟ್ಟದ ಅಪ-ಕೈಗಾರಿಕೀಕರಣವನ್ನು ಉಂಟುಮಾಡುತ್ತಿತ್ತು ಮತ್ತು ಆಮದು ಮಾಡಿಕೊಂಡ ಸರಕುಗಳ ವಿರುದ್ಧ ಬ್ರಿಟಿಷ್ ಮಾರುಕಟ್ಟೆಯನ್ನು ರಕ್ಷಿಸುವ ಒತ್ತಡವನ್ನು ಸೃಷ್ಟಿಸುತ್ತಿತ್ತು.

ಈ ಅಪ-ಕೈಗಾರಿಕೀಕರಣವನ್ನು ಮತ್ತು ಮಾರುಕಟ್ಟೆಯನ್ನು ರಕ್ಷಿಸುವ ಒತ್ತಡವನ್ನು, ಕೈಗಾರಿಕಾ ಕ್ರಾಂತಿಯ ನೇತೃತ್ವ ವಹಿಸಿದ ಹತ್ತಿ ಜವಳಿಯನ್ನು ಒಳಗೊಂಡಂತೆ ಮತ್ತು ತನ್ನದೇ ದೇಶೀಯ ಮಾರುಕಟ್ಟೆಯ ಅಗತ್ಯಗಳಿಗಿಂತ ಅಧಿಕವಾಗಿ ಉತ್ಪಾದನೆಯಾಗುತ್ತಿದ್ದ ಬ್ರಿಟಿಷ್ ಸರಕುಗಳನ್ನು ಅದರ ಉಷ್ಣವಲಯದ ವಸಾಹತುಗಳಿಗೆ ರಫ್ತು ಮಾಡಿ, ತಪ್ಪಿಸಲಾಯಿತು. ತನ್ನ ದೇಶದಲ್ಲಿ ಮಾರಲಾಗದ ಬ್ರಿಟನ್, ಉಷ್ಣವಲಯದ ವಸಾಹತುಗಳಲ್ಲಿ ಹೆಚ್ಚು ಮಾರಾಟ ಮಾಡಿದುದನ್ನು ವಸಾಹತುಗಳಿಗೆ ಹಾರಾಟ ಎಂದು ಎರಿಕ್ ಹಾಬ್ಸ್ ಬೌಮ್ ಉಲ್ಲೇಖಿಸುತ್ತಾರೆ. ಇಂತಹ ರಫ್ತುಗಳು ವಸಾಹತುಗಳಲ್ಲಿ ಅಪ-ಕೈಗಾರಿಕೀಕರಣವನ್ನು ಉಂಟುಮಾಡಿದವು. ತಮ್ಮ ಉದ್ಯೋಗಗಳನ್ನು ಕಳೆದುಕೊಂಡ ಸಾಂಪ್ರದಾಯಿಕ ಕೈಕಸಬುಗಾರರು ಮತ್ತು ಕುಶಲಕರ್ಮಿಗಳು, ಎಲ್ಲಕ್ಕಿಂತ ಹೆಚ್ಚಾಗಿ ನೂಲುವವರು ಮತ್ತು ನೇಕಾರರು,
ಭೂಮಿಯ ಆಸರೆಗೆ ಎಸೆಯಲ್ಪಟ್ಟರು. ಅದರಿಂದಾಗಿ ಗೇಣಿಗಳು ಏರಿದವು, ವೇತನಗಳು ಕುಸಿದವು ಮತ್ತು ಸಮೂಹ ಬಡತನವು ಏರಿತು.

ಮಿಗುತಾಯ ಗಳಿಕೆಯ ಕಬಳಿಕೆ

ಆ ಅವಧಿಯಲ್ಲಿ (1815-1915)ಹೊಸದಾಗಿ ಕೈಗಾರಿಕೀಕರಣಗೊಳ್ಳುತ್ತಿದ್ದ ದೇಶಗಳೊಂದಿಗೆ ಬ್ರಿಟನ್ ಹೊಂದಿದ್ದ ಪಾವತಿ ಶೇಷದ ಕೊರತೆಗಳನ್ನು ಉಷ್ಣವಲಯದ ವಸಾಹತುಗಳಿಂದ ಗಳಿಸಿದ ಎರಡು ಬಾಬತುಗಳ ಮೂಲಕ ಸರಿದೂಗಿಸಿಕೊಂಡಿತು: ಒಂದು, ಮೇಲೆ ಉಲ್ಲೇಖಿಸಲಾದ ಉಷ್ಣವಲಯದ ಈ ವಸಾಹತುಗಳಿಗೆ ಅಪ-ಕೈಗಾರಿಕೀಕರಣಗೊಳಿಸುವ ರಫ್ತುಗಳನ್ನು ಮಾಡುವುದು. ಇನ್ನೊಂದು ಸಂಪತ್ತಿನ ಹರಿವು, ಅಂದರೆ, ಈ ವಸಾಹತುಗಳಿಂದ ಬ್ರಿಟನ್‌ಗೆ ಹರಿದ ಸಂಪತ್ತಿನ ಏಕಮುಖ
ವರ್ಗಾವಣೆ: ಭಾರತದಂತಹ ದೇಶಗಳ ಇಡೀ ವಾರ್ಷಿಕ ರಫ್ತುಗಳಿಂದ ಒದಗುವ ಮಿಗುತಾಯ ಗಳಿಕೆಯನ್ನು ಬ್ರಿಟನ್ ಯಾವ ಪ್ರತಿಫಲವನ್ನೂ ಕೊಡದೆ ಪುಕ್ಕಟೆಯಾಗಿ ಕಬಳಿಸಿತು ಮತ್ತು ಇದು ಬ್ರಿಟನ್ ವಸಾಹತುಗಳೊಂದಿಗೆ ಮತ್ತು ಇತರ ಹೊಸ ಕೈಗಾರಿಕಾ ದೇಶಗಳೊಂದಿಗೆ ಹೊಂದಿದ್ದ ತನ್ನ ಪಾವತಿ ಶೇಷದ ಕೊರತೆಗಳನ್ನು ಪಾವತಿಸಲು ಸಹಾಯ ಮಾಡಿತು.

ಈ ವ್ಯವಸ್ಥೆಯು ಫಲಕಾರಿಯಾಗಿತ್ತು ಏಕೆಂದರೆ ಉಷ್ಣವಲಯದ ಈ ವಸಾಹತುಗಳು ಯುರೋಪ್ ಖಂಡದೊಂದಿಗೆ, ಹೊಸ ಜಗತ್ತಿನೊಂದಿಗೆ ಮತ್ತು ಜಪಾನಿನೊಂದಿಗೆ ಹೋಲಿಸಿದರೆ, ಅಧಿಕ ರಫ್ತು ವಾಣಿಜ್ಯ ಸರಕುಗಳನ್ನು ಹೊಂದಿದ್ದವು. ಈ ದೇಶಗಳೊಂದಿಗೆ ಭಾರತದ ವಾಣಿಜ್ಯ ಸರಕುಗಳ ಬೃಹತ್ ರಫ್ತುಗಳು, ಇವು ಹಲವು ದಶಕಗಳ ಕಾಲ ವಿಶ್ವದ ಎರಡನೇಸ್ಥಾನದಲ್ಲಿದ್ದವು, ಹೊಸ ಜಗತ್ತಿನ ದೇಶಗಳ ಕೈಗಾರಿಕೀಕರಣಕ್ಕೆ ಅಗತ್ಯವಿರುವ ಪ್ರಾಥಮಿಕ ಸರಕುಗಳನ್ನು ಪೂರೈಸುವ ಸಾಮರ್ಥ್ಯದಿಂದ ಹುಟ್ಟಿಕೊಂಡವು. ಬ್ರಿಟನ್, ಹೊಸ ಜಗತ್ತಿನೊಂದಿಗೆ ಹೊಂದಿದ್ದ ತನ್ನ ಸ್ವಂತ ಪಾವತಿ ಶೇಷದ ಕೊರತೆಗಳನ್ನು ಪಾವತಿಸಲು ಈ ಬೃಹತ್ ರಫ್ತುಗಳ ಮಿಗುತಾಯದ ಗಳಿಕೆಗಳನ್ನು ಇಡಿಯಾಗಿ ಮತ್ತು ಪುಕ್ಕಟೆಯಾಗಿ ಸ್ವಾಧೀನಪಡಿಸಿಕೊಂಡಿತು.

ಇದು ಪುಕ್ಕಟೆ ಏಕೆಂದರೆ ಬ್ರಿಟನ್ ರೈತರ ರಫ್ತು ಸರಕುಗಳಿಗೆ ಸ್ವತಃ ಅವರು ಕೊಟ್ಟ ತೆರಿಗೆಯ ಹಣದಿಂದಲೇ ಪಾವತಿಮಾಡಿತು. ಬಹುಶಃ ಇದು ಉಷ್ಣವಲಯದ ವಸಾಹತುಗಳಲ್ಲಿ ಬಡತನವನ್ನು ಉಂಟುಮಾಡಿದ ಅತ್ಯಂತ ಪ್ರಮುಖ ಮೂಲವಾಗಿದೆ. ಯಾವುದನ್ನು ದೀರ್ಘ ಹತ್ತೊಂಬತ್ತನೇ ಶತಮಾನ" (ಮೊದಲನೆಯ ಮಹಾಯುದ್ಧದವರೆಗೆ) ಎಂದು ಹಾಬ್ಸ್ ಬೌಮ್ ಕರೆದರೋ ಆ ಸಮಯದಲ್ಲಿ ವಸಾಹತುಗಾರರು ನೆಲೆ ನಿಂತ ವಸಾಹತುಗಳಲ್ಲಿ ಮತ್ತು ಇತರೆಡೆಗಳಲ್ಲಿ ಸಂಪತ್ತಿನ
ಬೆಳವಣಿಗೆಯಾಗುತ್ತಿತ್ತು ಮತ್ತು ಅದರ ಪ್ರತಿರೂಪವಾಗಿ ಉಷ್ಣವಲಯದ ಗೆದ್ದುಕೊಂಡ ವಸಾಹತುಗಳಲ್ಲಿ (ನೆಲೆ ನಿಂತ ವಸಾಹತುಗಳಿಗಿಂತ ಭಿನ್ನವಾಗಿ), ಆಗಾಗ ತಲೆದೋರುತ್ತಿದ್ದ ಕ್ಷಾಮಗಳ ಕಾರಣವನ್ನೂ ಒಳಗೊಂಡು, ಬಡತನದ ಬೆಳವಣಿಗೆಯಾಗುತ್ತಿತ್ತು.

ಸ್ವಾತಂತ್ರ‍್ಯ ಬಂದ ಸಮಯದಲ್ಲಿದ್ದ ಹಾಗೆ ಭಾರತದಂತಹ ದೇಶಗಳು ಸದಾ ಕಾಲವೂ ಬಡತನದಲ್ಲಿದ್ದವು ಎಂದು ಭಾವಿಸಲಾಗದು. ಆರ್ಥಿಕ ಇತಿಹಾಸಕಾರ್ತಿ ಶಿರೀನ್ ಮೂಸ್ವಿ ಯವರ ಅಂದಾಜನ್ನು ಇಲ್ಲಿ ಉಲ್ಲೇಖಿಸುವುದು ಯೋಗ್ಯವಾಗಿದೆ. ಅಬುಲ್ ಫಜಲ್ ಎಂಬುವರು ನೀಡಿದ ಮೊಘಲ್ ಭಾರತದ 1575ರ ಆದಾಯದ
ಅಂಕಿಅಂಶಗಳಿಂದ ಅವರು ತಲಾ ಆದಾಯವನ್ನು ಅಂದಾಜಿಸಿದ್ದಾರೆ ಮತ್ತು ಅದನ್ನು ಎಸ್ ಸುಬ್ರಮಣಿಯನ್ ಒದಗಿಸಿದ 1910 ವರ್ಷದ ಇಡೀ ಭಾರತದ ತಲಾ ಆದಾಯದ ಅಂಕಿ ಅಂಶದೊಂದಿಗೆ ಹೋಲಿಕೆ ಮಾಡಿದ ನಂತರ ಅವರು ಕಂಡ ಫಲಿತಾಂಶವೆಂದರೆ, ಬ್ರಿಟಿಷ್ ಭಾರತದಲ್ಲಿ ತಲಾ ಆದಾಯವು ಮೊಘಲ್ ಭಾರತದಲ್ಲಿ ಇದ್ದುದಕ್ಕಿಂತಲೂ, ನಿಜ ಮೌಲ್ಯದ ಪರಿಭಾಷೆಯಲ್ಲಿ, ಕೆಳಗಿತ್ತು.

ಉಷ್ಣವಲಯದ ವಸಾಹತುಗಳಿಂದ ಮಿಗುತಾಯದ ಒಂದು ಭಾಗವನ್ನು ಹೀರುವ ಮೂಲಕ ಕೈಗಾರಿಕಾ ಬಂಡವಾಳಶಾಹಿಯು ದೀರ್ಘ ಹತ್ತೊಂಬತ್ತನೇ ಶತಮಾನದಲ್ಲಿ ವಿಸ್ತಾರವಾಗಿ ಹರಡುವುದು ಸಾಧ್ಯವಾಯಿತು. ಹೊಸ ಕೈಗಾರಿಕಾ ದೇಶಗಳಿಗೆ ಬ್ರಿಟನ್ ಮಾರುಕಟ್ಟೆ ಪ್ರವೇಶವನ್ನು ಒದಗಿಸಿದುದರ ಪ್ರತಿರೂಪವಾಗಿ ತನ್ನ ಉಷ್ಣವಲಯದ ವಸಾಹತುಗಳ ಮಾರುಕಟ್ಟೆಗಳನ್ನು ಅತಿಕ್ರಮಿಸಿಕೊಂಡಿತು. ಮಿಗುತಾಯವನ್ನು ಹೀರುವ ಮತ್ತು ಮಾರುಕಟ್ಟೆಗಳನ್ನು ಅತಿಕ್ರಮಿಸಿಕೊಳ್ಳುವ ಈ ಎರಡೂ ಕ್ರಮಗಳೂ ವಸಾಹತುಗಳಲ್ಲಿ ಆಧುನಿಕ ಸಮೂಹ ಬಡತನವನ್ನು ಉಂಟುಮಾಡಿದ ಬಂಡವಾಳದ ಆದಿಮ ಶೇಖರಣೆಯ ಪ್ರಕ್ರಿಯೆಯ
ಭಾಗವಾಗಿದ್ದವು.

ಆದರೆ, ಬಂಡವಾಳದ ಈ ಆದಿಮ ಕ್ರೋಢೀಕರಣದ ಫಲಾನುಭವಿಗಳು ಯುರೋಪಿಯನ್ನರು ನೆಲೆ ನಿಂತ ಸಮಶೀತೋಷ್ಣ ಪ್ರದೇಶಗಳ ವಸಾಹತುಗಳಾಗಿದ್ದವು. ಆದ್ದರಿಂದ, ಅವರ ಸಂಪತ್ತು ಅಗಾಧವಾಗಿ ವೃದ್ಧಿಸಿತು. ಸಂಪತ್ತಿನ ಕ್ರೋಢೀಕರಣ ಮತ್ತು ಬಡತನದ ಕ್ರೋಢೀಕರಣ ಇವು ದ್ವಂದ್ವಾತ್ಮಕ ಸಂಬಂಧ ಹೊಂದಿವೆ. ಆದರೆ, ಈ ಸತ್ಯವನ್ನು ಬೂರ್ಜ್ವಾ ಅರ್ಥಶಾಸ್ತ್ರವು ಯಾವ ಸಂದರ್ಭದಲ್ಲೂ ಒಪ್ಪಿಕೊಳ್ಳುವುದಿಲ್ಲ.

ಇದನ್ನೂ ನೋಡಿ: ಮರಕುಂಬಿ ಪ್ರಕರಣದ ತೀರ್ಪು :ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದೆ – ಆರ್‌ ಕೆ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *