ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಮಾರಾಟಕ್ಕೆ ಇಟ್ಟಿದ್ದು ಯಾರು? ಬಿಜೆಪಿಗೆ ಎಚ್‌ಡಿಕೆ ಪ್ರಶ್ನೆ

  • ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳು
  • ಇಂತಹ ಬಲಿಷ್ಠ ಪಕ್ಷಗಳನ್ನು ಮುಗಿಸಲು ಬಿಜೆಪಿ ಏನೆಲ್ಲ ಅಡ್ಡದಾರಿ ಹಿಡಿಯಿತು ಎನ್ನುವುದು ಗುಟ್ಟೇನಲ್ಲ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನವನ್ನು ಕರ್ನಾಟಕದಲ್ಲಿ ಮಾರಾಟಕ್ಕೆ ಇಟ್ಟಿದ್ದು ಯಾರು? ಕುಟುಂಬ ರಾಜಕಾರಣದ ಪಕ್ಷವೋ? ಬಿಜೆಪಿಯೋ? ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘2,500 ಕೋಟಿ ರೂ. ಕೊಡಿ, ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದು ಕೇಳಿದ ಪಾರ್ಟಿ ಬಿಜೆಪಿ. ಇದನ್ನು ಹೇಳಿದ್ದು ನಾವಲ್ಲ,  ಸ್ವತಃ ಬಿಜೆಪಿ ಶಾಸಕರೇ!! ಆ ಶಾಸಕರ ಮೇಲೆ ಶಿಸ್ತುಕ್ರಮ ಇರಲಿ, ಒಂದು ನೊಟೀಸನ್ನೂ ಕೊಡಲಿಲ್ಲ’ ಎಂದು ಟೀಕಿಸಿದ್ದಾರೆ.

‘ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು. ಪ್ರಧಾನಿ ಮೋದಿಯವರ ಹೊಸ ಉಪದೇಶವಿದು. ವಾಸ್ತವ ಗುರುತಿಸಿ, ಬಿಜೆಪಿ ಬೆಳವಣಿಗೆಯ ಹಿನ್ನೆಲೆ ಅರಿತು ಅವರು ಭಾಷಣ ಮಾಡಬೇಕಿತ್ತು. ಕೇವಲ ಚುನಾವಣಾ ಪ್ರಚಾರ ಶೈಲಿಯ ಭಾಷಣ ಮಾಡಿದ್ದಾರಷ್ಟೇ’ ಎಂದು ಕುಟುಕಿದ್ದಾರೆ.

‘ಕುಟುಂಬ ಪಕ್ಷಗಳ ಟೀಕೆ ನೆಪವಷ್ಟೇ. ಪ್ರಧಾನಿಯವರ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ. ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳೇ. ಇಂಥ ಬಲಿಷ್ಠ ಪಕ್ಷಗಳನ್ನು ಮುಗಿಸಲು ಬಿಜೆಪಿ ಏನೆಲ್ಲ ಅಡ್ಡದಾರಿ ಹಿಡಿಯಿತು ಎನ್ನುವುದು ಗುಟ್ಟೇನಲ್ಲ. ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಹೋರಾಟದ ಫಲಗಳಲ್ಲಿ ಜನಸಂಘವೂ ಒಂದು. ತುರ್ತು ಪರಿಸ್ಥಿತಿ ಹೇರಿದಾಗ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನೂರಾರು ಸಣ್ಣಪುಟ್ಟ ಪಕ್ಷಗಳನ್ನು ಒಗ್ಗೂಡಿಸಿದ್ದು ಅವರೇ. ಇವೆಲ್ಲಾ ಒಟ್ಟಾಗಿ ‘ಜನತಾ ಪರಿವಾರʼ ಉದಯ ಆಯಿತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವೇ ನಿರ್ಣಾಯಕ: ಹೆಚ್‌ ಡಿ ಕುಮಾರಸ್ವಾಮಿ

‘ಈ ಪರಿವಾರ ಹಂತಹಂತವಾಗಿ ಬೆಳೆದು ಹೆಮ್ಮರವಾಗಿ, ಕ್ರಮೇಣ ಅನೇಕ ಟಿಸಿಲುಗಳೊಡೆದು ಬೇರೆ ಬೇರೆಯಾಯಿತು. ಬಿಜೆಪಿಯೂ ಈ ಪರಿವಾರದ ಒಂದು ತುಣುಕಷ್ಟೇ. ಜೆಡಿಎಸ್‌, ಜೆಡಿಯು, ಆರ್‍ಜೆಡಿ, ಬಿಜೆಡಿ, ಸಮಾಜವಾದಿ ಪಕ್ಷಗಳೆಲ್ಲ ಈ ಮಹಾವೃಕ್ಷದ ರೆಂಬೆ-ಕೊಂಬೆಗಳೇ. ಜನತಾ ಪರಿವಾರದ ಟಿಸಿಲುಗಳು ದೇಶದ ಉದ್ದಗಲಕ್ಕೂ ‌ಬೃಹತ್‌ ವೃಕ್ಷಗಳಾಗಿ ಬೆಳೆದು ನಿಂತಿವೆ. ಅವುಗಳ ಬೇರುಗಳು ಆಳಕ್ಕಿಳಿದು ಬಲಿಷ್ಠವಾಗಿವೆ; ಕೀಳುವುದು, ಅಲ್ಲಾಡಿಸುವುದು ಸುಲಭವಲ್ಲ. ಮೋದಿ ಅವರಿಗೆ ಈ ವಿಷಯವೂ ತಿಳಿಯದ್ದೇನಲ್ಲ’ ಎಂದು ಎಚ್‍ಡಿಕೆ ಟಾಂಗ್ ನೀಡಿದ್ದಾರೆ.

ಇತ್ತೀಚೆಗೆ ನಿತ್ಯವೂ ಕುಟುಂಬ ರಾಜಕಾರಣ-ಭ್ರಷ್ಟಾಚಾರದ ಬಗ್ಗೆ ಹೇಳುವ ಬಿಜೆಪಿ ಪಕ್ಷದಲ್ಲೇ ಇರುವ ‘ವಂಶವೃಕ್ಷದ ಘೋಂಡಾರಣ್ಯ & ಭ್ರಷ್ಟಾಚಾರʼ ಕೂಪದ ಬಗ್ಗೆ ಅವರೇಕೆ ದಿವ್ಯಮೌನ ವಹಿಸುತ್ತಾರೆ! ಕರ್ನಾಟಕದಿಂದ ಹಿಡಿದು, ವಿಂಧ್ಯ ಪರ್ವತದ ಆಚೆಗೂ ಬಿಜೆಪಿಗರ ಕುಟುಂಬಗಳ ಕುಲಕಸುಬು ರಾಜಕೀಯವೇ ಆಗಿ, ಭ್ರಷ್ಟಾಚಾರವು ಅವರ ನಿತ್ಯ ಆಚಾರ ಆಗಿದೆ. ದೇಶಕ್ಕೆ ಅಪಾಯ ಇರುವುದು ‘ಕುಟುಂಬವಾದಿ  ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ.ʼ ಭಾವನಾತ್ಮಕವಾಗಿ ಜನರನ್ನು ಜಗಳಕ್ಕಿಳಿಸಿ ಜಾಗ ಹಿಡಿಯುವ ಪರಿಪಾಠ ಪ್ರಜಾಪ್ರಭುತ್ವದ ನಿಜವಾದ ದೊಡ್ಡ ಶತ್ರು. ಸಂವಿಧಾನಕ್ಕೆ ಗಂಡಾಂತರಕಾರಿ. ಮೋದಿ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ನಾನು ಭಾವಿಸುವುದಿಲ್ಲ’ವೆಂದು ಕಿಡಿಕಾರಿದ್ದಾರೆ.

‘ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಆಹಾರ, ವ್ಯಾಪಾರ ಇತ್ಯಾದಿಗಳ ಮೂಲಕ ವಿವಿಧತೆಯಲ್ಲಿ ಏಕತೆ ಸಾಧಿಸಿದ್ದ ಭಾರತದ ಭಾವೈಕ್ಯತೆಯ ಬುಡಕ್ಕೆ ಕೊಡಲಿ ಹಾಕಿದವರು ಯಾರು? ಪ್ರಜಾಸತ್ತೆಯ ಅಖಂಡ ರಕ್ಷಕನಾದ ಸಂವಿಧಾನಕ್ಕೇ ಅಪಚಾರವೆಸಗಿ ‘ಆಪರೇಷನ್ ಕಮಲʼವೆಂಬ ಅನೈತಿಕ ರಾಜಕಾರಣ ಆರಂಭ ಮಾಡಿದ್ದು ಯಾರು? ಕರ್ನಾಟಕದಲ್ಲಿ ಎರಡು ಸಲ ಬಿಜೆಪಿ ಸರ್ಕಾರ ಬಂದಿದ್ದು ಹೇಗೆ? ರಾಜಮಾರ್ಗದಲ್ಲಿ ಬಂತಾ? ಇಲ್ಲ, ಶಾಸಕರನ್ನು ಸಂತೆಯಲ್ಲಿ ರಾಸುಗಳಂತೆ ನಿರ್ಲಜ್ಜವಾಗಿ ಖರೀದಿಸಿದ್ದರಿಂದಲೇ ಬಂದ ‘ಅಕ್ರಮ ಸರಕಾರʼವಿದು!! ಪ್ರಧಾನಿಯವರು ಇದನ್ನು ನಿರಾಕರಿಸುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *