ಉಸ್ತುವಾರಿ ಸಚಿವರು ತರಾಟೆಗೆ ತೆಗೆದುಕೊಂಡಿದ್ದು ಯಾರನ್ನು!!
ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ದಂಧೆಕೋರರ ಅಟ್ಟಹಾಸದಿಂದಾಗಿ ಮಂಗಳೂರಿನ ನದಿಗಳು ತನ್ನ ಸತ್ವ ಹಾಗೂ ನೀರಿಂಗಿಸುವ ಶಕ್ತಿ ಕಳೆದುಕೊಂಡಿವೆ. ಸೇತುವೆಗಳು, ಚೆಕ್ ಡ್ಯಾಂಗಳು ದುರ್ಬಲಗೊಳ್ಳುತ್ತಾ ಅಪಾಯಕ್ಕೀಡಾಗುತ್ತಿವೆ. ಮೂಲರಪಟ್ಣ, ಮಲವೂರು, ಅಡ್ಡೂರು, ಪೊಲಳಿ ಸೇತುವೆಗಳು ಕುಸಿದದ್ದು, ಬಿರುಕು ಬಿಟ್ಟದ್ದು ಸೇತುವೆಯ ಸುತ್ತ ಅನಿಯಂತ್ರಿತ ಮರಳುಗಾರಿಕೆಯ ಪರಿಣಾಮದಿಂದ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಸಚಿವರೂ ಇದೇ ಮಾತನ್ನು ಆಡಿದ್ದಾರೆ. ಉಸ್ತುವಾರಿ ಸಚಿವರು ಈ ಮರಳು ದಂದೆಗೆ ಯಾರನ್ನು ಹೊಣೆಯಾಗಿಸಿ ತರಾಟೆಗೆ ತಗೆದುಕೊಳ್ಳಬೇಕಿತ್ತೋ ಅದನ್ನು ಮಾಡದೆ. “ಗಣಿ ಮತ್ತು ಭೂ ವಿಜ್ಞಾನ ಇಲಾಖೆ”ಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡರು. ಮಂಗಳೂರಿನಲ್ಲಿ
-ಮುನೀರ್ ಕಾಟಿಪಳ್ಳ
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಪೂರ್ತಿಯಾಗಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ, ಮರಳು ಮಾಫಿಯಾದವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಪೊಲೀಸ್ ಕಮೀಷನರೇಟ್ ಮರಳು ದಂಧೆಕೋರರ ಜೊತೆಗೆ ನೇರವಾಗಿ ಗುರುತಿಸಿಕೊಂಡರೆ, ಜಿಲ್ಲಾಧಿಕಾರಿ ಕಚೇರಿ ಮೌನ ಶಾಮೀಲಾತಿ ಹೊಂದಿದೆ. ದೂರು ನೀಡಿದವರ ಮಾಹಿತಿಯನ್ನು ಪೂರ್ಣ ವಿಳಾಸದೊಂದಿಗೆ ಮರಳು ದಂಧೆಕೋರರಿಗೆ ತಿಳಿಸಿ, ಅವರನ್ನು ಅಪಾಯಕ್ಕೊಡ್ಡುವ ಕಾರ್ಯವೂ ಮಂಗಳೂರಿನಲ್ಲಿದೆ. ಮಂಗಳೂರಿನಲ್ಲಿ
ಉಡುಪಿ ಪೊಲೀಸ್ ವರಿಷ್ಟಾಧಿಕಾರಿ, ಜಿಲ್ಲಾಧಿಕಾರಿಗಳು ನಿರ್ಬಂಧಿತ ಪ್ರದೇಶಗಳಲ್ಲಿ ಒಂದು ಹಿಡಿ ಮರಳು ತೆಗೆಯಲೂ ಅವಕಾಶ ಒದಗಿಸದಿರುವುದು, ಮಂಗಳೂರಿನ ಮರಳು ದಂಧೆಕೋರರ ಪಾಲಿಗೆ ವರದಾನವಾಗಿದೆ. ಪ್ರತಿದಿನ ನೂರಾರು ಟಿಪ್ಪರ್ ಗಳು ಮಂಗಳೂರಿನ ನದಿಗಳಿಂದ ಅಕ್ರಮ ಮರಳು ಸಂಗ್ರಹಿಸಿ ಉಡುಪಿಗೆ ಸಾಗಾಟ ಮಾಡುತ್ತಿವೆ. ಬಂಪರ್ ಲಾಭಗಳಿಸುತ್ತಿವೆ. ಈ ಅಕ್ರಮದ ಪಾಲು ಮಂಗಳೂರು ಪೊಲೀಸ್ ಇಲಾಖೆಗೆ, ಜಿಲ್ಲಾಡಳಿತಕ್ಕೆ, ಸಲ್ಲ ಬೇಕಾದವರಿಗೆ ದೊಡ್ಡ ಗಂಟಾಗಿ ಸಲ್ಲಲ್ಪಡುತ್ತಿದೆ. ಮಂಗಳೂರಿನಲ್ಲಿ
ಹೊಸ ಸೇತುವೆಗಳು ನಿರ್ಮಾಣ ಆಗುತ್ತಿರುವ ಪಲ್ಗುಣಿ ನದಿಯ ಕೂಳೂರು, ಪೊಳಲಿ – ಅಡ್ಡೂರುಗಳಲ್ಲಿ, ಹೊಸ ಸೇತುವೆ ನಿರ್ಮಾಣಗೊಂಡಿರುವ ಮರವೂರು, ಗುರುಪುರಗಳಲ್ಲಿ ಸೇತುವೆಯ ಸುತ್ತ ನೂರಾರು ದೋಣಿಗಳು ಸಾಂಪ್ರದಾಯಿಕ ಮೀನುಗಾರಿಕೆಯಷ್ಟೆ ನಿರಾಳವಾಗಿ ಮರಳು ತೆಗೆಯುತ್ತಿದ್ದಾರೆ. ಇದರಿಂದ ಹೊಸ ಸೇತುವೆಗಳ ಬಾಳಿಕೆ, ಭವಿಷ್ಯದ ಕುರಿತು ಈಗಾಗಲೆ ಆತಂಕ ಶುರುವಾಗಿದೆ. ಈ ಸೇತುವೆಗಳಲ್ಲದೆ, ನೇತ್ರಾವತಿಯ ಹರೇಕಳ ಹೊಸ ಡ್ಯಾಂ ನ ಸಮೀಪವೂ ಮರಳು ದಂಧೆ ಜೋರಾಗಿದೆ. ಸ್ಥಳೀಯ ಕೊಣಾಜೆ ಪೊಲೀಸರು ಶಾಸಕರಿಗೆ ಹೊಡೆದಷ್ಟೆ ಭಯ ಭಕ್ತಿ, ಗೌರವದಿಂದ ಈ ಮರಳು ಸಾಗಾಟದ ಖದೀಮರಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಮಂಗಳೂರಿನಲ್ಲಿ
ಇದನ್ನೂ ಓದಿ: ಕನ್ನಡೇತರರಿಗೆ ಉಚಿತ ಕನ್ನಡ ಕಲಿಕಾ ತರಗತಿಗಳು ಪ್ರಾರಂಭ
ಹಾಗೆಯೆ, ಮೂಲ್ಕಿ ಕ್ಷೇತ್ರದ ಚೇಳಾಯೂರು ಚೆಕ್ ಡ್ಯಾಂ ನಲ್ಲಿ ಮರಳು ತೆಗೆಯುವ ರಭಸಕ್ಕೆ ಬಿರುಕುಗಳು ಕಾಣಿಸಿಕೊಂಡಿರುವುದು ವರದಿಯಾಗಿದೆ. ಮೂಲ್ಕಿ ತಾಲೂಕಿನ ಶಾಂಭವಿ, ನಂದಿನಿ ನದಿಗಳು ಅಕ್ರಮ ಮರಳು ದಂಧೆಯವರಿಗೆ ಪೂರ್ಣವಾಗಿ ಬಿಟ್ಟು ಕೊಡಲಾಗಿದೆ. ಮಂಗಳೂರು ಉತ್ತರದ ಕೂಳೂರು, ಅದ್ಯಪಾಡಿ, ಮಳಲಿ ಗಳಲ್ಲಿ ಮರಳು ದಂಧೆಕೋರರದ್ದೆ ಸಾಮ್ರಾಜ್ಯವಾಗಿದೆ. ಇಲ್ಲಿ ಫಲ್ಗುಣಿ ನದಿ ಭವಿಷ್ಯದಲ್ಲಿ ನಿರ್ಜೀವಗೊಂಡರೂ ಅಚ್ಚರಿ ಇಲ್ಲ.
ಫಲ್ಗುಣಿ ನದಿಯ ಅಡ್ಡೂರು -ಪೊಳಲಿ ಸೇತುವೆ ಮರಳು ದಂಧೆಯಿಂದ ಬಿರುಕು ಬಿಟ್ಟು ಸಂಚಾರ ನಿರ್ಬಂಧಿಸಲ್ಪಟ್ಟಿದೆ. ಈಗ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಇದೇ ಸ್ಥಳಕ್ಕೆ ಇತ್ತಿಚೆಗಷ್ಟೆ ಉಸ್ತುವಾರಿ ಸಚಿವರು ಭೇಟಿ ನೀಡಿ, ಸೇತುವೆಯ 500 ಮೀ ಸುತ್ತಲು ಮರಳುಗಾರಿಕೆ ನಡೆಸಿದರೆ ಪಿಲ್ಲರ್ ಗಳು ದುರ್ಬಲ ಆಗುತ್ತದೆ, ಸೇತುವೆ ಸುತ್ತ ಅಕ್ರಮ ಮರಳುಗಾರಿಕೆ ತಡೆಯಿರಿ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ತಾಕೀತು ಮಾಡಿದ್ದರು. ಅದರೆ, ಉಸ್ತುವಾರಿ ಸಚಿವರ ಮಾತಿಗೆ ಮಂಗಳೂರಿನಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅವರು ಅತ್ತ ಹೋಗುತ್ತಲೆ, ಇತ್ತ ಅಡ್ಡೂರು ಸೇರಿದಂತೆ ಮಂಗಳೂರಿನ ಎಲ್ಲಾ ಸೇತುವೆಗಳ ಸುತ್ತಲೂ, ಸಂತೆಯಲ್ಲಿ ವ್ಯಾಪಾರಿಗಳು ನೆರೆದಂತೆ ದೋಣಿಗಳಲ್ಲಿ ದಂಧೆಕೋರರು ನೆರೆದಿದ್ದಾರೆ. ಹಗಲೂ ರಾತ್ರಿ ಅಕ್ರಮವಾಗಿ ಮರಳು ಎತ್ತುತ್ತಿದ್ದಾರೆ.
ಇದಕ್ಕೆ ಯಾರನ್ನು ಹೊಣೆ ಮಾಡಬೇಕು?
ಆದರೆ, ಈ ಮರಳು ದಂದೆಗೆ ಯಾರನ್ನು ಹೊಣೆಯಾಗಿಸಿ ತರಾಟೆಗೆ ತಗೆದುಕೊಳ್ಳಬೇಕಿತ್ತೋ ಅದನ್ನು ಸಚಿವರು ಮಾಡಲಿಲ್ಲ. ಮಂಗಳೂರಿನಲ್ಲಿ ಉತ್ತುಂಗ ತಲುಪಿರುವ ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆಯ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಚಿವರು “ಗಣಿ ಮತ್ತು ಭೂ ವಿಜ್ಞಾನ ಇಲಾಖೆ”ಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡರು. ಇದು ನಿಜಕ್ಕೂ ಅಚ್ಚರಿಯ ಸಂಗತಿ. ಸಚಿವರು ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವಾಗ ಮಂಗಳೂರು ನಗರ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಚಿವರಿಗೆ ಸಾಥ್ ನೀಡಿ ತಾವೂ ಒಂದಿಷ್ಟು ಆರೋಪಗಳನ್ನು ಹೊರಿಸಿದರು. ಒಟ್ಟು ಅನಿಷ್ಟಕ್ಕೆಲ್ಲ ಶನೀಶ್ವರನೆ ಕಾರಣ ಎಂಬಂತೆ ಎಲ್ಲರೂ ಸೇರಿ, ಗಣಿ ಇಲಾಖೆಯ ಅಧಿಕಾರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತಮ್ಮ ಕರ್ತವ್ಯ ಲೋಪವನ್ನು ಮರೆಮಾಚಲು ಯತ್ನಿಸಿದರು.
ಉಸ್ತುವಾರಿ ಸಚಿವರು ನಿಜಕ್ಕೂ, ಅಕ್ರಮ ಮರಳುಗಾರಿಕೆ ದಂಧೆಕೋರರ ಅಟ್ಟಹಾಸದಿಂದ ಆಕ್ರೋಶಿತರಾಗಿದ್ದರೆ, ಸಭೆಯಲ್ಲಿ ತನ್ನ ಜೊತೆಗೆ ವೇದಿಕೆಯ ಮೇಲಿದ್ದ ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಹೊಣೆಯಾಗಿಸಿ ಪ್ರಶ್ನಿಸಬೇಕಿತ್ತೆ ಹೊರತು, ಅವರೊಂದಿಗೆ ಸೇರಿ ವೇದಿಕೆಯ ಕೆಳಗಿದ್ದ ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನಲ್ಲ. ಮಹಿಳಾ ಅಧಿಕಾರಿ ನೀಡಿದ ಸಮಜಾಯಿಷಿಯು ಸರಿ ಇತ್ತು. “ಪೊಲೀಸ್ ಇಲಾಖೆಯ ಸಹಕಾರ ಸಿಗುತ್ತಿಲ್ಲ, ತಮ್ಮಲ್ಲಿ ಸಿಬ್ದಂದಿ ಕೊರತೆ ಇದೆ, ನಾವು ಅಕ್ರಮ ಮರಳುಗಾರಿಕೆಯ ಸ್ಥಳಕ್ಕೆ ತೆರಳಿ ಗಂಟೆಗಳ ಕಾಲವಾದರೂ, ಪೊಲೀಸರು ಸ್ಥಳಕ್ಕೆ ಬರುವುದಿಲ್ಲ…” ಎಂಬ ಅವರ ಆರೋಪ ನೂರಕ್ಕೆ ನೂರು ಸರಿ ಇದೆ ಎಂಬುದು ಅಕ್ರಮ ಮರಳು ದಂಧೆಯ ವಿರುಧ್ದ ದ್ವನಿ ಎತ್ತುತ್ತಿರುವ ಎಲ್ಲರ ಅನುಭವ. ಈ ಕುರಿತು ತಮ್ಮ ಪಕ್ಕದಲ್ಲಿ ಕೂತಿದ್ದ ಪೊಲೀಸ್ ಕಮೀಷನರ್ ಅವರನ್ನು ಸಚಿವರು ಯಾಕೆ ತರಾಟೆಗೆ ತೆಗೆದುಕೊಳ್ಳಲಿಲ್ಲ?
ಉಡುಪಿಯಲ್ಲಿ ಸಾಧ್ಯವಾದರೆ, ಮಂಗಳೂರಿನಲ್ಲೇಕೆ ಸಾಧ್ಯವಿಲ್ಲ?
ದುರಂತ ಅಂದರೆ, ಈ ಎಲ್ಲಾ ಮರಳು ಗಾರಿಕೆಗಳೂ ನಿರ್ಬಂಧಿತ ಪ್ರದೇಶಗಳಲ್ಲೆ ನಡೆಯುತ್ತದೆ. ಮೊದಲೆಲ್ಲ ರಾತ್ರಿಯ ಕತ್ತಲಲ್ಲಿ ನಡೆಯುತ್ತಿದ್ದರೆ, ಈಗಿನ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಹಗಲು ಹೊತ್ತಿನಲ್ಲೆ ಅಕ್ರಮ ಮರಳುಗಾರಿಕೆಯ ದೋಣಿಗಳ ನೂರಾರು ಸಂಖ್ಯೆಯಲ್ಲಿ ನಿರ್ಬೀತಿಯಿಂದ ನದಿಗೆ ಇಳಿಯುತ್ತಿವೆ, ನಿರಾತಂಕವಾಗಿ ಮರಳು ಎತ್ತುತ್ತಿವೆ.
ಉಡುಪಿ ಜಿಲ್ಲೆಯ ಎಸ್ ಪಿ ಅಕ್ರಮ ಮರಳು ಸಾಗಾಟಕ್ಕೆ ಸಹಕರಿಸಿದ ಆರೋಪದಲ್ಲಿ ಹತ್ತಾರು ಸಂಖ್ಯೆಯ ಪೊಲೀಸರನ್ನು ಅಮಾನತು ಮಾಡಿ ಮನೆಗೆ ಕಳುಹಿಸಿದ್ದಾರೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ಪೊಲೀಸರನ್ನು ಅಕ್ರಮ ಮರಳು ಸಾಗಾಟದ ಟಿಪ್ಪರ್ ಗಳಿಗೆ ಬೆಂಗಾವಲು ಒದಗಿಸಲು ನಿಯೋಜಿಸಿದ ರೀತಿಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಕುರಿತು ಧ್ವನಿ ಎತ್ತುವವರು ದೂರು ನೀಡಿ, ನೀಡಿ ಸುಸ್ತಾಗಿದ್ದಾರೆ, ಜನಪರ ಪತ್ರಕರ್ತರು ವರದಿ ಮಾಡಿ ಮಾಡಿ ಸುಸ್ತಾಗಿದ್ದಾರೆ.
ಪೊಲೀಸ್ ಇಲಾಖೆ ತೀರ್ಮಾನಿಸಿದರೆ, ಅಕ್ರಮ ಮರಳುಗಾರಿಕೆಯ ಒಂದು ದೋಣಿಯಾದರೂ ಮಂಗಳೂರಿನ ನದಿಗೆ ಇಳಿಯುವ ಧೈರ್ಯ ತೋರಿಸಲು ಸಾಧ್ಯವೆ, ಅಕ್ರಮ ಮರಳು ಸಾಗಾಟದ ಒಂದೇ ಒಂದು ಟಿಪ್ಪರ್ ಆದರೂ ರಸ್ತೆಗೆ ಇಳಿಯಲು ಸಾಧ್ಯವೆ? ಉಡುಪಿ ಜಿಲ್ಲೆಯಲ್ಲಿ ಯಾಕೆ ಅಕ್ರಮ ಮರಳುಗಾರಿಕೆ ಪೂರ್ತಿ ಸ್ಥಗಿತಗೊಂಡಿದೆ! ಅಲ್ಲಿನ ನಿರ್ಬಂಧಿತ ಪ್ರದೇಶದಲ್ಲಿ ಒಂದು ಹಿಡಿ ಮರಳನ್ನು ತೆಗೆಯುವ ಧೈರ್ಯ ಮರಳು ಮಾಫಿಯಾಗೆ ಯಾಕೆ ಇಲ್ಲ? ಉಡುಪಿ ಪೊಲೀಸ್ ವರಿಷ್ಟಾಧಿಕಾರಿ “ಗಣಿ ಇಲಾಖೆ ನೋಡಿಕೊಳ್ಳಲಿ” ಎಂದು ತಮ್ಮ ಜವಾಬ್ದಾರಿ ಮರೆತು ಕೂತಿದ್ದಾರೆಯೆ? ಆಥವಾ ಇಡೀ ಪೊಲೀಸ್ ಇಲಾಖೆಯನ್ನು ಅಕ್ರಮ ಮರಳು ದಂಧೆಯ ವಿರುದ್ಧ ಸನ್ನದ್ದ ಸ್ಥಿತಿಯಲ್ಲಿ ಇರಿಸಿದ್ದಾರೆಯೆ? ಉಡುಪಿಯ ಪೊಲೀಸ್ ವರಿಷ್ಟಾಧಿಕಾರಿಗೆ ಸಾಧ್ಯವಾಗಿದ್ದು, ಮಂಗಳೂರಿನ ಪೊಲೀಸ್ ಕಮೀಷನರ್ ಗೆ ಯಾಕೆ ಸಾಧ್ಯವಾಗುತ್ತಿಲ್ಲ? ಇದು ಮಿಲಿಯನ್ ಡಾಲರ್ ಪ್ರಶ್ನೆ ಏನಲ್ಲವಲ್ಲ!
ಲಂಚದ ಆರೋಪಗಳ ಕುರಿತು ತನಿಖೆ ನಡೆಸಲಿ
ಮಂಗಳೂರಿನ ನದಿಗಳು, ಅದರ ಮೇಲಿನ ಸೇತುವೆಗಳು, ಅಡ್ಡಲಾಗಿರುವ ಡ್ಯಾಂ ಗಳ ಕುರಿತು ಉಸ್ತುವಾರಿ ಸಚಿವರು ಕಾಳಜಿ ಹೊಂದಿದ್ದರೆ, ಅಕ್ರಮ ಮರಳುಗಾರಿಕೆಯ ಕುರಿತು ಆಕ್ರೋಶಿತರಾಗಿರುವುದು ನಿಜವೇ ಆಗಿದ್ದರೆ, ಅಕ್ರಮ ಮರಳುಗಾರಿಕೆಗೆ ನದಿಗೆ ಇಳಿಯುವ ಪ್ರತಿಯೊಂದು ದೋಣಿಗಳು, ಅಕ್ರಮ ಮರಳು ಸಾಗಾಟ ಮಾಡುವ ಪ್ರತಿಯೊಂದು ಟಿಪ್ಪರ್ ಗಳು ಸಂಬಂಧಪಟ್ಟವರಿಗೆ (ಪ್ರಧಾನವಾಗಿ ಪೊಲೀಸ್ ಠಾಣೆಗಳಿಗೆ, ಟಿಪ್ಪರ್, ದೋಣಿ ಲೆಕ್ಕದಲ್ಲಿ) ಲಂಚ ನೀಡುತ್ತಿವೆ ಎಂಬ ಸಾರ್ವಜನಿಕ ವಲಯದ ಆರೋಪಗಳ ಕುರಿತು ತನಿಖೆ ನಡೆಸಲಿ. ಆಗ ಎಲ್ಲರ ಅಸಲಿಯತ್ತು ಬಹಿರಂಗಗೊಳ್ಳುತ್ತದೆ.
ಅದಕ್ಕಿಂತಲೂ ಮೊದಲು, ಗ್ಯಾಂಬ್ಲಿಂಗು, ಅಕ್ರಮ ಮರಳುಗಾರಿಕೆ ಸೇರಿದಂತೆ ದಂಧೆಗಳ ಕುರಿತು ಮೃದುವಾಗಿದ್ದಾರೆ ಎಂಬ ವ್ಯಾಪಕ ಆರೋಪ ಹೊತ್ತಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುರಿತು ಒಂದು ನಿಲುವಿಗೆ ಬರಲಿ. ಅದು ಬಿಟ್ಟು ಎಲ್ಲದ್ದಕ್ಕೂ ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು ಬಿಟ್ಟರೆ ನದಿಗಳೂ ಉಳಿಯುವುದಿಲ್ಲ, ಸೇತುವೆಗಳೂ ಉಳಿಯುವುದಿಲ್ಲ. ವೇದಿಕೆಯಲ್ಲಿ ತಮ್ಮ ಎಡ ಬಲದಲ್ಲಿ ಕುಳಿತಿದ್ದ ಐಪಿಎಸ್, ಐಎಎಸ್ ಮೇಲೆ ಮೊದಲು ಕಣ್ಣಿಡಿ, ಅಥವಾ ಯೋಗ್ಯರನ್ನು ಎಡ ಬಲದಲ್ಲಿ ಇಟ್ಟುಕೊಳ್ಳಿ.
ಇದನ್ನೂ ನೋಡಿ: ಉಕ್ಕಿನ ಕಾರ್ಖಾನೆ ಸ್ಥಾಪನೆ ಬೇಡ : ಕೊಪ್ಪಳದ ಜನರ ಆಕ್ರೋಶ Janashakthi Media